More

    ಮರುಚಾಲನೆ ಪಡೆದ ಹೆದ್ದಾರಿ ಕಾಮಗಾರಿ

    ಉಪ್ಪಿನಂಗಡಿ: ನಾಲ್ಕು ವರ್ಷಗಳಿಂದ ನಿಂತು ಹೋಗಿದ್ದ ಮಂಗಳೂರು- ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75ರಲ್ಲಿನ ಶಿರಾಡಿ ಗ್ರಾಮದ ಅಡ್ಡಹೊಳೆಯಿಂದ ಬಿ.ಸಿ.ರೋಡು ತನಕದ ಚತುಷ್ಪಥ ಹೆದ್ದಾರಿ ಕಾಮಗಾರಿ ಕೊನೆಗೂ ಮರುಚಾಲನೆ ಪಡೆಯುವ ಲಕ್ಷಣ ಗೋಚರಿಸುತ್ತಿದೆ.

    ಅಡ್ಡಹೊಳೆಯಿಂದ ಬಿ.ಸಿ.ರೋಡು ತನಕ 64 ಕಿ.ಲೋ ಮೀಟರ್ ಉದ್ದ ರಸ್ತೆ ನಾಲ್ಕು ಪಥಗಳ ರಸ್ತೆಯಾಗಿ ಮಾರ್ಪಾಡು ಆಗುವ ಕಾಮಗಾರಿ, ಕೇಂದ್ರ ಸರ್ಕಾರದ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರದಡಿ ನಡೆಯಲಿದ್ದು, ಕಾಮಗಾರಿ ಪೂರ್ಣಗೊಳಿಸಲು 2 ಹಂತದಲ್ಲಿ ಯೋಜನೆ ಸಿದ್ಧಗೊಂಡು ಕಾಮಗಾರಿಗೆ ಸಂಬಂಧಿಸಿ ಟೆಂಡರು ಪ್ರಕ್ರಿಯೆ ಪೂರ್ಣಗೊಂಡಿದೆ. 2 ಹಂತದ ಕಾಮಗಾರಿ ಪ್ರತ್ಯೇಕ 2 ಕಂಪನಿಗಳಿಗೆ ಕಾಮಗಾರಿ ಗುತ್ತಿಗೆ ನಿರ್ವಹಣೆ ಮಂಜೂರಾಗಿರುವುದಾಗಿ ತಿಳಿದು ಬಂದಿದೆ.

    ಮೊದಲ ಹಂತದ ಕಾಮಗಾರಿ: ಅಡ್ಡಹೊಳೆಯಿಂದ ಪೆರಿಯಶಾಂತಿ ತನಕ 15 ಕಿಲೋ ಮೀಟರ್ ಉದ್ದದ ರಸ್ತೆ ಮೊದಲ ಹಂತದ ಕಾಮಗಾರಿಗೆ 317 ಕೋಟಿ ರೂ. ಅನುದಾನದಲ್ಲಿ ಮಹಾರಾಷ್ಟ್ರ ಪುಣೆ ಮೂಲದ ಎಸ್.ಎಂ.ಔತಾಡೆ ಪ್ರೈವೆಟ್ ಕಂಪನಿಗೆ ಕಾಮಗಾರಿ ನಿರ್ವಹಣೆ ಟೆಂಡರ್ ಮಂಜೂರಾಗಿದ್ದು, ಈ ಸಂಸ್ಥೆ ಈಗಾಗಲೇ ಶಿರಾಡಿ ಗ್ರಾಮದ ಉದನೆಯಲ್ಲಿ ಜಾಗ ಗುರುತಿಸಿಕೊಂಡು ಯಂತ್ರಗಳ ಅನುಷ್ಠಾನಕ್ಕೆ ಸಿದ್ಧತೆ ನಡೆಸುತ್ತಿದೆ. ಈ ಭಾಗದಲ್ಲಿ ರಸ್ತೆಯ ಇಕ್ಕಲೆಯಲ್ಲಿ ರಕ್ಷಿತಾರಣ್ಯ ಇದೆ. ಪೆರಿಯಶಾಂತಿ ಪ್ರದೇಶ ಆನೆ ಸೇರಿದಂತೆ ಇತರೆ ಕಾಡು ಪ್ರಾಣಿಗಳ ದಾಟು ಪ್ರದೇಶವಾಗಿದ್ದು, ವಿಶೇಷ ವಲಯವಾಗಿ ಗುರುತಿಸಲಾಗಿದೆ. ಇಲ್ಲಿ ಆನೆ ಕಾರಿಡಾರ್, ಪ್ರಾಣಿಗಳ ದಾಟು ಸೇತುವೆ ನಿರ್ಮಾಣ ಆಗಲಿದೆ.

    2ನೇ ಹಂತದಲ್ಲಿ ಪೆರಿಯಶಾಂತಿಯಿಂದ ಬಿ.ಸಿ. ರೋಡ್ ತನಕ 49 ಕಿ.ಮೀ. ರಸ್ತೆ ಕಾಮಗಾರಿಗೆ ಸುಮಾರು 1600 ಕೋಟಿ ರೂಪಾಯಿ ಅಂದಾಜು ಪಟ್ಟಿ ಸಿದ್ಧಪಡಿಸಲಾಗಿತ್ತು. ಇದರ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದ್ದು, ಹೈದರಾಬಾದ್ ಮೂಲದ ಕೆ.ಎನ್.ಆರ್. ಸಂಸ್ಥೆಗೆ ಕಾಮಗಾರಿ ಗುತ್ತಿಗೆ ನಿರ್ವಹಣೆ ಮಂಜೂರಾಗಿರುವುದಾಗಿ ತಿಳಿದು ಬಂದಿದೆ. ಈ ಮಧ್ಯೆ ಕಲ್ಲಡ್ಕ ಪೇಟೆಯಲ್ಲಿ ಮೇಲ್ಸೇತುವೆ ನಿರ್ಮಾಣ ಆಗಲಿದೆ. ಉಳಿದಂತೆ ಉಪ್ಪಿನಂಗಡಿ ಮತ್ತು ನೆಲ್ಯಾಡಿ ಸೇರಿದಂತೆ 10 ಕಡೆಯಲ್ಲಿ ಸರ್ವೀಸ್ ರಸ್ತೆ, ಅಂಡರ್ ಪಾಸ್ ರಸ್ತೆ ನಿರ್ಮಾಣ ಆಗಲಿದೆ. ಅದಾಗ್ಯೂ ಪೆರಿಯಶಾಂತಿಯಲ್ಲಿ ಧರ್ಮಸ್ಥಳ ಕಡೆಗೆ ಹೋಗುವ ರಸ್ತೆ ತಿರುವಿನಲ್ಲಿ ಓವರ್ ಪಾಸ್ ರಸ್ತೆ ನಿರ್ಮಾಣ ಆಗಲಿದೆ.

    ಈ ಹಿಂದೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಸೂಚಿಸಿದ ರಸ್ತೆ ನಿರ್ಮಾಣದ ವ್ಯವಸ್ಥೆಯಲ್ಲಿ ಆನೆ ಕಾರಿಡಾರ್ ಸೇತುವೆ ನಿರ್ಮಾಣ ವ್ಯವಸ್ಥೆ ಅವೈಜ್ಞಾನಿಕವಾಗಿತ್ತು. ಹಾಗಾಗಿ ಅರಣ್ಯ ಇಲಾಖೆ ಆಕ್ಷೇಪ ಸಲ್ಲಿಸಿತ್ತು. ಈಗ ಅರಣ್ಯ ಇಲಾಖೆಯ ಪ್ರಸ್ತಾವನೆಯಂತೆ ಕೇಂದ್ರ ಸರ್ಕಾರದ ಅರಣ್ಯ ಮತ್ತು ಪರಿಸರ ಖಾತೆ ಇಲಾಖೆ ಶಿರಾಡಿ ಗ್ರಾಮದ ಕೊಡ್ಯಕಲ್ಲು ಎಂಬಲ್ಲಿ 75 ಮೀಟರ್ ಅಗಲ ಮತ್ತು 6 ಮೀಟರ್ ಎತ್ತರದ ಆನೆ ಕಾರಿಡಾರ್ ಮತ್ತು ರಸ್ತೆಯ ಇಕ್ಕೆಲದಲ್ಲಿ 500 ಮೀಟರ್ ಆನೆ ಸಂಚಾರ ಪಥ ನಿರ್ಮಿಸುವಂತೆ ಮಾರ್ಗಸೂಚಿ ನೀಡಿದ್ದು, ಅದಕ್ಕೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಸಮ್ಮತಿಸಿದೆ. ಆ ರೀತಿಯಲ್ಲಿ ನಡೆಯುವ ಕಾಮಗಾರಿಗೆ ಅರಣ್ಯ ಇಲಾಖೆಯ ಸಹಕಾರ ಇರುತ್ತದೆ.
    -ಮಧುಸೂಧನ್, ವಲಯ ಅರಣ್ಯಾಧಿಕಾರಿ, ಉಪ್ಪಿನಂಗಡಿ ವಲಯ ಅರಣ್ಯ ಇಲಾಖೆ

    ಅಡ್ಡಹೊಳೆಯಿಂದ ಪೆರಿಯಶಾಂತಿ ತನಕ ರಸ್ತೆ ಕಾಂಕ್ರೀಟ್ ಕಾಮಗಾರಿಗೆ ಸಂಬಂಧಿಸಿ ಶಿರಾಡಿ ಗ್ರಾಮದ ಉದನೆಯಲ್ಲಿ ಪ್ಲಾಂಟ್ ನಿರ್ಮಾಣಕ್ಕೆ ಜಾಗ ಗುರುತಿಸಿದ್ದು, ಈಗಾಗಲೇ ಯಂತ್ರಗಳನ್ನು ಅಳವಡಿಸುವ ಕೆಲಸ ಆರಂಭವಾಗಿದೆ. ಮಳೆ ಕಡಿಮೆ ಆದ ತಕ್ಷಣ ರಸ್ತೆ ಕಾಮಗಾರಿ ಆರಂಭಿಸಲಾಗುವುದು, ಒಟ್ಟು 2 ವರ್ಷದ ಅವಧಿಯಲ್ಲಿ ಕಾಮಗಾರಿ ಪೂರ್ಣಗೊಳಿಸಲಾಗುವುದು.
    -ಮಹೇಶ್ವರ ರೆಡ್ಡಿ, ಪ್ರಾಜೆಕ್ಟ್ ಮ್ಯಾನೇಜರ್ಶ್ರೀ, .ಎಸ್.ಎಂ.ಔತಾಡೆ ಪ್ರೈವೆಟ್ ಲಿ. ಪುಣೆ, ಮಹಾರಾಷ್ಟ್ರ.

    ರಾಷ್ಟ್ರೀಯ ಹೆದ್ದಾರಿಯೊಂದು ಈ ಮಟ್ಟದ ದುಸ್ಥಿತಿಯಲ್ಲಿ ಮೂರ್ನಾಲ್ಕು ವರ್ಷ ಕಳೆದಿರುವುದು ಅಭಿವೃದ್ಧಿಯ ಬಗ್ಗೆ ಜನಪ್ರತಿನಿಧಿಗಳಿರುವ ಕಾಳಜಿಯನ್ನು ಅನಾವರಣಗೊಳಿಸಿದೆ. ವಿಳಂಬವಾಗಿಯಾದರೂ ಈಗ ಹೆದ್ದಾರಿ ಕಾಮಗಾರಿ ನಡೆಯುತ್ತಿರುವುದು ಸಂತಸ ತಂದಿದೆ. ನಡೆಯುವ ಕಾಮಗಾರಿ ಗುಣಮಟ್ಟದಲ್ಲಿರಲಿ ಎನ್ನುವುದೇ ನಮ್ಮ ವಿನಂತಿ.
    -ಕಿಶೋರ್ ಶಿರಾಡಿ, ಸಾಮಾಜಿಕ ಕಾರ್ಯಕರ್ತ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts