More

    ರಾಷ್ಟ್ರೀಯ ಹೆದ್ದಾರಿ ತಡೆ ಪ್ರತಿಭಟನೆ 27ರಂದು

    ಶಿಗ್ಗಾಂವಿ: ಬರಪೀಡಿತ ತಾಲೂಕು ಘೋಷಣೆ ಮತ್ತು ರೈತರಿಗೆ ಮಧ್ಯಂತರ ವಿಮೆ ಪರಿಹಾರ ಘೋಷಣೆ ಸೇರಿದಂತೆ ವಿವಿಧ ಬೇಡಿಕೆ ಈಡೇರಿಸಲು ಆಗ್ರಹಿಸಿ ವಿವಿಧ ರೈತ ಸಂಘಗಳ ಸಾಮೂಹಿಕ ನಾಯಕತ್ವದಲ್ಲಿ ಸೆ. 27ರಂದು ರಾಷ್ಟ್ರೀಯ ಹೆದ್ದಾರಿ ತಡೆದು ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಬಳ್ಳಾರಿ ಹೇಳಿದರು.

    ಪಟ್ಟಣದ ಎಪಿಎಂಸಿ ಸಭಾಭವನದಲ್ಲಿ ಗುರುವಾರ ಆಯೋಜಿಸಿದ್ದ ಜಿಲ್ಲೆಯ ವಿವಿಧ ರೈತ ಸಂಘಗಳ ಮುಖಂಡರೊಂದಿಗಿನ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಅಂದು ಪಕ್ಷಾತೀತವಾಗಿ ಹೋರಾಟ ಹಮ್ಮಿಕೊಂಡಿದೆ. ರಾಜ್ಯ ಸರ್ಕಾರಕ್ಕೆ ರೈತರ ಕೂಗು ಕೇಳಿಸದಾಗಿದೆ. ಮನವಿ ಪತ್ರ ನೀಡಿ ಸಾಕಾಗಿದೆ. ಜಿಲ್ಲೆಯಲ್ಲಿ ಮೂರು ತಾಲೂಕುಗಳನ್ನು ಮಾತ್ರ ಬರಪೀಡಿತ ಎಂದು ಘೋಷಿಸಿರುವ ಕ್ರಮ ಖಂಡನೀಯ ಎಂದರು.

    ಕ್ಷೇತ್ರಗಳ ಶಾಸಕರು ರೈತರ ಬಗ್ಗೆ ಕಾಳಜಿ ತೋರಿಸುತ್ತಿಲ್ಲ. ಈಗಾಗಲೇ ಬ್ಯಾಡಗಿ ಶಾಸಕರಿಗೆ ಸರ್ಕಾರಿ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವಿಕೆಗೆ ಬಹಿಷ್ಕರಿಸಲಾಗಿದೆ. ಇಲ್ಲಿನ ಶಾಸಕರಿಗೂ ಬಹಿಷ್ಕಾರದ ಬಿಸಿ ಮುಟ್ಟಿಸಬೇಕು ಎಂದರು.

    ಜಿಲ್ಲೆಯ ಶಿಗ್ಗಾಂವಿ, ಹಾನಗಲ್ಲ ಹಾಗೂ ಬ್ಯಾಡಗಿ ತಾಲೂಕುಗಳನ್ನು ಬರಪೀಡಿತವೆಂದು ಘೋಷಣೆ ಮಾಡದೇ ಮಲತಾಯಿ ಧೋರಣೆ ಅನುಸರಿಸಿದ ರಾಜ್ಯ ಸರ್ಕಾರಕ್ಕೆ ಬಿಸಿ ಮುಟ್ಟಿಸುವುದು ಹೋರಾಟದ ಉದ್ದೇಶವಾಗಿದೆ. ಹೋರಾಟಕ್ಕೆ ಜಿಲ್ಲೆಯ ರೈತರು ಸಂಪೂರ್ಣ ಬೆಂಬಲ ನೀಡಬೇಕು ಎಂದರು.
    ರೈತ ಮುಖಂಡರಾದ ಈಶ್ವರಗೌಡ ಪಾಟೀಲ, ಚನ್ನಪ್ಪ ಮರಡೂರ, ಮುತ್ತಪ್ಪ ಗುಡಗೇರಿ ಮಾತನಾಡಿದರು.

    ರೈತ ಮುಖಂಡರಾದ ಶಂಕರಗೌಡ ಪಾಟೀಲ, ಗಂಗಣ್ಣ ಎಲಿ, ಸುರೇಶ ಚಲವಾದಿ, ಮಾಲತೇಶ ಪೂಜಾರ, ರಾಜೇಸಾಬ್ ತರ್ಲಘಟ್ಟ, ಬಸವರಾಜ ಹಾವೇರಿ, ರಮೇಶ ಧರ್ಮಣ್ಣವರ, ತಾಲೂಕಿನ ರೈತ ಸಂಘದ ಅದ್ಯಕ್ಷರು, ಪದಾಧಿಕಾರಿಗಳು ಹಾಗೂ ರೈತರು ಭಾಗಿಯಾಗಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts