More

    ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ದೇಶಾದ್ಯಂತ 75 ಲಕ್ಷ ಗಿಡ ನೆಡುವ ಗುರಿ

    ಚಿತ್ರದುರ್ಗ: ಭಾರತ ಸ್ವಾತಂತ್ರೋತ್ಸವ ಆಜಾದಿ ಕಾ ಅಮೃತ್ ಮಹೋತ್ಸವ ಅಂಗವಾಗಿ ಆ.15ರವರೆಗೆ ದೇಶಾದ್ಯಂತ 75 ಲಕ್ಷ ಗಿಡಗಳನ್ನು ನೆಡಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಗುರಿ ಹಾಕಿಕೊಂಡಿದೆ ಎಂದು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಪ್ರಾದೇಶಿಕ ಅಧಿಕಾರಿ ಎಂ.ಕೆ.ವಠೋರೆ ತಿಳಿಸಿದರು.

    ನಗರದ ಎನ್‌ಎಚ್-48ರ ಮಲ್ಲಾಪುರ ಗ್ರಾಮದ ಹೊಸ ಬೈಪಾಸ್‌ನಲ್ಲಿ ಭಾನುವಾರ ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಚಿತ್ರದುರ್ಗ ಮತ್ತು ದಾವಣಗೆರೆ ಎನ್‌ಎಚ್-48ರಲ್ಲಿ 2000 ಗಿಡಗಳು, ಹೊಸಪೇಟೆ ಮತ್ತು ಚಿತ್ರದುರ್ಗ ಹೆದ್ದಾರಿ-50ರಲ್ಲಿ 1000 ಹಾಗೂ ಬೈರಾಪುರ-ಚಳ್ಳಕೆರೆಯಲ್ಲಿ 500, ತುಮಕೂರು-ಚಿತ್ರದುರ್ಗ ಹೆದ್ದಾರಿಯಲ್ಲಿ 500 ಗಿಡಗಳನ್ನು ನೆಡಲಾಗಿದೆ ಎಂದು ಹೇಳಿದರು.

    ಪ್ರಕೃತಿ ಮಾನವನಿಗೆ ಸಾಕಷ್ಟು ಕೊಡುಗೆ ನೀಡಿದೆ. ಮಾನವ ಕೂಡ ಪ್ರಕೃತಿಗೆ ತನ್ನದೇ ಕೊಡುಗೆ ನೀಡಬೇಕು. ಪ್ರತಿಯೊಬ್ಬರೂ ಸಸಿಗಳನ್ನು ನೆಡುವುದರ ಮೂಲಕ ಪ್ರಕೃತಿಯ ಋಣ ತೀರಿಸಬೇಕು ಎಂದು ಮನವಿ ಮಾಡಿದರು.

    ಆಯಾ ಪ್ರದೇಶಕ್ಕೆ ಹೊಂದಿಕೊಳ್ಳುವಂತಹ ಸಸಿಗಳನ್ನೇ ಹೆದ್ದಾರಿಯಲ್ಲಿ ನೆಡಲಾಗುತ್ತಿದೆ. ಈ ಭಾಗದಲ್ಲಿ ಬೇವಿನ ಗಿಡಗಳನ್ನು ನೆಡಲಾಗುತ್ತಿದೆ. ಈ ಅಭಿಯಾನದಲ್ಲಿ ಹೆದ್ದಾರಿ ಪ್ರಾಧಿಕಾರದ ಜತೆ ಸ್ಥಳೀಯ ಜನಪ್ರತಿನಿಧಿಗಳು, ರೋಟರಿ ಕ್ಲಬ್, ಕಾಲೇಜು ವಿದ್ಯಾರ್ಥಿಗಳು ಸಹಕಾರ ನೀಡಿದ್ದಾರೆ ಎಂದು ಹೇಳಿದರು.

    ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ವಿಶೇಷ ಭೂಸ್ವಾಧೀನ ಅಧಿಕಾರಿ ವೆಂಕಟೇಶ್ ಮಾತನಾಡಿ, ಭಾರತದ ಆರ್ಥಿಕತೆ ಬೆಳವಣಿಗೆಗೆ ರಸ್ತೆ, ರೈಲಿನಂತೆ ಪರಿಸರವೂ ಮುಖ್ಯವಾಗಿದೆ. ಕರೊನಾ ವೇಳೆ ಆಕ್ಸಿಜನ್ ಸಮಸ್ಯೆ ತುಂಬಾ ಎದುರಾಗಿತ್ತು. ಇದನ್ನು ಮನಗಂಡು ನಾವೆಲ್ಲ ಪರಿಸರ ಸಂರಕ್ಷಣೆಗೆ ಮುಂದಾಗಬೇಕಿದೆ ಎಂದು ಸಲಹೆ ನೀಡಿದರು.

    ಕಾರ್ಯಕ್ರಮದಲ್ಲಿ ಯುಆರ್‌ಎಸ್ ಟೀಂ ಲೀಡರ್ ಜಿ.ಎಸ್.ಪ್ರಕಾಶ್, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಡೆಪ್ಯೂಟಿ ಮ್ಯಾನೇಜರ್ ರವಿತೇಜ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಪ್ಲಾಂಟೇಶನ್ ಅಧಿಕಾರಿ ವಿ.ಗಣೇಶ್, ಚಿನ್ಮೂಲಾದ್ರಿ ರೋಟರಿ ಕ್ಲಬ್, ಅಖಿಲ ಭಾರತ ವೀರಶೈವ ಮಹಾಸಭಾ ಮತ್ತು ಇನ್ನರ್ ವ್ಹೀಲ್ ಕ್ಲಬ್ ಅಧ್ಯಕ್ಷರು ಹಾಗೂ ಸದಸ್ಯರು ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts