More

    ಇಂದು ರಾಷ್ಟ್ರೀಯ ವಾಯುಮಾಲಿನ್ಯ ನಿಯಂತ್ರಣ ದಿನ; ಮಾಲಿನ್ಯ ನಿರ್ಲಕ್ಷಿಸಿದರೆ ಅಪಾಯ!

    ಹರೀಶ್ ಬೇಲೂರು

    ಬೆಂಗಳೂರು: ವರ್ಷದಿಂದ ವರ್ಷಕ್ಕೆ ಮಾಲಿನ್ಯ ಪ್ರಮಾಣ ಹೆಚ್ಚಾಗುತ್ತಿದೆ. ಗಾಳಿಯಲ್ಲಿ ವಿಷಾನಿಲಗಳ ಸೇರ್ಪಡೆಯಾಗಿ ವಾಯು ಮಾಲಿನ್ಯ ಏರುತ್ತಿದೆ. ಜಲಮೂಲಗಳ ನಾಶದಿಂದಾಗಿ ಕುಡಿಯುವ ನೀರು ಮಲೀನವಾಗುತ್ತಿದೆ. ಅತಿ ಹೆಚ್ಚು ರಾಸಾಯನಿಕಗಳ ಬಳಕೆಯಿಂದಾಗಿ ಫಲವತ್ತಾದ ಮಣ್ಣು ಕಲುಷಿತವಾಗುತ್ತಿದೆ. ಕರ್ಕಶವಾದ ಶಬ್ದಗಳಿಂದ ಶಬ್ದ ಮಾಲಿನ್ಯ ಉಂಟಾಗುತ್ತಿದೆ. ಮಾನವನ ಎಡವಟ್ಟುಗಳಿಂದಾಗಿಯೇ ಪ್ರಕೃತಿ ವಿವಿಧ ರೀತಿಯಲ್ಲಿ ಮಾಲಿನ್ಯಗೊಳ್ಳುತ್ತಿದ್ದು, ಮನುಷ್ಯನಿಗೆ ಮಾರಕವಾಗುವ ಪರಿಸ್ಥಿತಿ ನಿರ್ವಣವಾಗುತ್ತಿದೆ.

    ದೆಹಲಿಗೆ ಹೋಲಿಕೆ ಮಾಡಿದರೆ ಸದ್ಯ ಕರ್ನಾಟಕ ಸೇರಿ ದಕ್ಷಿಣ ಭಾರತದ ನಗರಗಳಲ್ಲಿ ಕಡಿಮೆ ವಾಯು ಮಾಲಿನ್ಯವಿದೆ. ಆದರೆ, ಈಗಲೇ ಎಚ್ಚೆತ್ತುಕೊಳ್ಳದಿದ್ದರೆ ಭವಿಷ್ಯದಲ್ಲಿ ವಿವಿಧ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಂಡು ಸಂಕಷ್ಟ ಎದುರಿಸಬೇಕಾಗುತ್ತದೆ.

    ಇತ್ತೀಚಿನ ವರ್ಷಗಳಲ್ಲಿ ಪ್ರಕೃತಿ ಮೇಲಿನ ಶೋಷಣೆ ಹೆಚ್ಚುತ್ತಿದೆ. ಪ್ರತಿ 10 ಲಕ್ಷ ಜನರಲ್ಲಿ 25 ಸಾವಿರ ಮಂದಿ ವಾಯು ಮಾಲಿನ್ಯದಿಂದ ಉಂಟಾಗುವ ವಿವಿಧ ರೋಗ ಮತ್ತು ತೊಂದರೆಗೆ ಸಿಲುಕುತ್ತಿದ್ದಾರೆ. ಮಾಲಿನ್ಯದಿಂದ ಕೋಟ್ಯಂತರ ರೂ. ಆರ್ಥಿಕ ನಷ್ಟವಾಗುತ್ತಿದೆ. ಮಾಲಿನ್ಯ ನಿಯಂತ್ರಣದಲ್ಲಿದ್ದರೆ ಸಾವಿರಾರು ಜನರು ಜೀವವನ್ನು ಉಳಿಸಬಹುದು. ಕೈಗಾರಿಕೆಗಳಿಂದ, ವಾಹನಗಳಿಂದ ಬರುವ ಹೊಗೆ, ಬೆಳೆಯ ಕಳೆ ಮತ್ತು ಕಸ ಸುಡುವುದರಿಂದ ವಾಯು ಮಾಲಿನ್ಯ ಉಂಟಾಗುತ್ತಿದೆ. ವಾಹನ ಸಂಚಾರ ಮತ್ತು ರಸ್ತೆ ಧೂಳಿನಿಂದಾಗಿ ಗಾಳಿಯಲ್ಲಿ ಧೂಳಿನ ಕಣಗಳು ಹೆಚ್ಚಳವಾಗುತ್ತಿದೆ.

    ಮೂಗು, ಬಾಯಿ, ಗಂಟಲು ಮತ್ತು ಶ್ವಾಸಕೋಶದಲ್ಲಿ ಸಿಕ್ಕಿಕೊಂಡು ತೊಂದರೆ ನೀಡುವ ಧೂಳಿನ ಕಣಗಳ ಪ್ರಮಾಣವೂ ಹೆಚ್ಚಾಗುತ್ತಿದೆ. ದಿನದಿಂದ ದಿನಕ್ಕೆ ವಾಹನಗಳ ಸಂಖ್ಯೆ ಹೆಚ್ಚಳದಿಂದ ನಗರಗಳು ಮಲೀನವಾಗುತ್ತಿವೆ. ಪ್ರತಿನಿತ್ಯ ಕಾರ್ಬನ್ ಡೈಯಾಕ್ಸೈಡ್, ಹೈಡ್ರೋಕಾರ್ಬನ್, ನೈಟ್ರಿಕ್ ಆಕ್ಸಿಡ್ ಹಾಗೂ ಕಾರ್ಬನ್ ಮೋನಾಕ್ಸೈಡ್ ಉತ್ಪತ್ತಿಯಿಂದಲೂ ಮಲೀನವಾಗುತ್ತಿದೆ.

    ಪ್ರತಿ ಘನ ಮೀಟರ್ ಗಾಳಿಯಲ್ಲಿ 2.5 ಮೈಕ್ರಾನ್ ಗಾತ್ರದ ಮಾಲಿನ್ಯಕಾರಕ ಕಣಗಳ ಸಂಖ್ಯೆ ಶೇ.50 ಇದ್ದರೆ, ಗಾಳಿಯ ಗುಣಮಟ್ಟ ಉತ್ತಮವೆಂದು ಕರೆಯಲಾಗುತ್ತದೆ. ಆದರೆ, ಈ ಕಣಗಳ ಸಂಖ್ಯೆ ಹೆಚ್ಚಿದ್ದರೆ ಅಪಾಯಕಾರಿ, 401ರಿಂದ 500ವರೆಗೆ ಕಣಗಳ ಸಂಖ್ಯೆ ಇದ್ದರೆ ಅತಿ ಅಪಾಯಕಾರಿ ಎಂದು ವರ್ಗೀಕರಿಸಲಾಗಿದೆ. ಕರೊನಾ ಲಾಕ್​ಡೌನ್​ನಲ್ಲಿ ಕಡಿಮೆಯಾಗಿದ್ದ ಮಾಲಿನ್ಯ ತೆರವು ಬಳಿಕ ಹೆಚ್ಚಾಗಿದೆ. ಸಾರಿಗೆ ವಲಯದಿಂದಲೇ ಶೇ.40 ಮಾಲಿನ್ಯ ಉಂಟಾಗುತ್ತಿದೆ ಎಂದು ತಜ್ಞರು ಹೇಳುತ್ತಾರೆ.

    ಆಯಸ್ಸು ಇಳಿಕೆ

    ವಾಯು ಮಾಲಿನ್ಯದಿಂದ ಶೇ.40 ಭಾರತೀಯರ ಜೀವಿತಾವಧಿ ಆಯಸ್ಸು ಕುಸಿತವಾಗಿದೆ. ದೆಹಲಿ ಸೇರಿ ಕೇಂದ್ರ, ಪೂರ್ವ ಹಾಗೂ ಈಶಾನ್ಯ ಭಾರತದ ವಿಶಾಲ ಭಾಗಗಳಲ್ಲಿ ಮಾಲಿನ್ಯ ಮಟ್ಟ ಗಣನೀಯ ಪ್ರಮಾಣದಲ್ಲಿ ಹೆಚ್ಚಾಗಿದೆ. ದೇಶದ 102 ನಗರಗಳಲ್ಲಿ ಅತಿ ಹೆಚ್ಚು ಮಾಲಿನ್ಯ ಸಮಸ್ಯೆ ಇದೆ. ಜಗತ್ತಿನ ಅತ್ಯಂತ ಹೆಚ್ಚು ಮಲಿನ ರಾಜಧಾನಿ ಎಂಬ ಕುಖ್ಯಾತಿಗೆ ದೆಹಲಿ ಪಾತ್ರವಾಗಿದೆ.

    ಇವಿ ವಾಹನಗಳ ಉತ್ತೇಜನ ಅಗತ್ಯ

    ವಾಯುಮಾಲಿನ್ಯವನ್ನು ಸಂಪೂರ್ಣವಾಗಿ ಕಡಿಮೆ ಮಾಡಲು ಸಮೂಹ ಸಾರಿಗೆ ಮತ್ತು ಎಲೆಕ್ಟ್ರಿಕ್ ವಾಹನಗಳ(ಇವಿ) ಉತ್ತೇಜನ ನೀಡಬೇಕಿದೆ. ಇದಕ್ಕಾಗಿ ಇವಿ ವಾಹನಗಳ ಖರೀದಿಗೆ ಆಯಾ ರಾಜ್ಯ ಸರ್ಕಾರಗಳು ಸಬ್ಸಿಡಿ ನೀಡಬೇಕು. ಆದರೆ, ಸಬ್ಸಿಡಿ ಸಿಗದ ಹಿನ್ನೆಲೆಯಲ್ಲಿ ಇವಿ ಖರೀದಿಗೆ ಮಧ್ಯಮ ವರ್ಗದ ಜನರಿಗೆ ಹೊರೆಯಾಗುತ್ತಿದೆ. ಮಾಲಿನ್ಯ ನಿಯಂತ್ರಣಕ್ಕೆ ಸಾರಿಗೆ ವ್ಯವಸ್ಥೆಯಲ್ಲಿ ಬದಲಾವಣೆ ತರಬೇಕು ಸೇರಿ ಇತರ ಕ್ರಮಗಳನ್ನು ಸರ್ಕಾರಗಳು ಕೈಗೊಳ್ಳಬೇಕಿದೆ.

    ಆಚರಣೆ ಏಕೆ?

    ಪ್ರತಿ ವರ್ಷ ಡಿ.2 ರಾಷ್ಟ್ರೀಯ ಮಾಲಿನ್ಯ ನಿಯಂತ್ರಣ ದಿನವನ್ನಾಗಿ ಆಚರಣೆ ಮಾಡಲಾಗುತ್ತದೆ. ಮಧ್ಯಪ್ರದೇಶದ ಯೂನಿಯನ್ ಕಾರ್ಬೆಡ್ ಇಂಡಿಯಾ ಲಿಮಿಟೆಡ್ ಕೀಟನಾಶಕ ಘಟಕದಲ್ಲಿ ಡಿ.2, 1984ರ ರಾತ್ರಿ ಭೋಪಾಲ್​ನಲ್ಲಿ ಅನಿಲ ದುರಂತ ಸಂಭವಿಸಿತ್ತು. ಅಲ್ಲಿ ಮಡಿದವರ ಸ್ಮರಣಾರ್ಥ ಮಾಲಿನ್ಯ ನಿಯಂತ್ರಣದ ಕುರಿತು ಜಾಗೃತಿ ಮೂಡಿಸುವ ಸಲುವಾಗಿ ರಾಷ್ಟ್ರೀಯ ಮಾಲಿನ್ಯ ನಿಯಂತ್ರಣ ದಿನ ಆಚರಿಸಲಾಗುತ್ತದೆ.

    ವಾಯುಮಾಲಿನ್ಯಕ್ಕೆ ಕಾರಣ?

    • ವಾಹನಗಳ ಸಂಖ್ಯೆ ಹೆಚ್ಚಾಗುತ್ತಲೇ ಇರುವುದು
    • ಕೀಟ ನಿಯಂತ್ರಕ ಔಷಧಗಳು, ಬೆಳೆ ತ್ಯಾಜ್ಯಗಳನ್ನು ಸುಡುವುದರಿಂದ
    • ರಾಸಾಯನಿಕ ಗೊಬ್ಬರಗಳ ಬಳಕೆ ಮಿತಿಮೀರುತ್ತಿರುವುದು
    • ಕೈಗಾರಿಕೆಗಳು ಹೊರಸೂಸುತ್ತಿರುವ ಅಪಯಾಕಾರಿ ರಾಸಾಯನಿಕಗಳು
    • ಮಿತಿ ಮೀರಿದ ಪ್ಲಾಸ್ಟಿಕ್ ಬಳಕೆ

    ಮಾಲಿನ್ಯ ನಿಯಂತ್ರಣ ಹೇಗೆ?

    • ಇಂಧನ ಆಧಾರಿತ ವಾಹನಗಳ ಬದಲು ಇ ವೆಹಿಕಲ್​ಗಳ ಬಳಕೆ ಹೆಚ್ಚಬೇಕು
    • ವೈಜ್ಞಾನಿಕ ರೀತಿಯಲ್ಲಿ ತ್ಯಾಜ್ಯ ಸಂಗ್ರಹಣೆ ಹಾಗೂ ನಿರ್ವಹಣೆಗೆ ಆದ್ಯತೆ ಬೇಕು
    • ಜಲಮೂಲಗಳನ್ನು ರಕ್ಷಣೆ ಮಾಡುವುದರ ಜತೆಗೆ ನೀರಿನ ಮಿತಬಳಕೆಗೆ ಜಾಗೃತಿ
    • ಕೀಟ ನಾಶಕ, ರಾಸಾಯನಿಕ ಗೊಬ್ಬರಗಳ ಬಳಕೆ ಕಡಿಮೆಯಾಬೇಕು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts