More

    ನರೇಗಲ್‌ನಲ್ಲಿಲ್ಲ ಕಾಯಂ ಮುಖ್ಯಾಧಿಕಾರಿ

    ನರೇಗಲ್ಲ: ಎಲ್ಲೆಂದರಲ್ಲಿ ಕಸದ ರಾಶಿ, ದೀಪವಿಲ್ಲದ ವಿದ್ಯುತ್ ಕಂಬಗಳು, ನಿತ್ಯ ಕೆಲಸ ಕಾರ್ಯಗಳಿಗೆ ಅಲೆದಾಡುತ್ತಿರುವ ಸಾರ್ವಜನಿಕರು, ಚುನಾಯಿತರಾದರೂ ಅಧಿಕಾರವಿಲ್ಲದ ಪಟ್ಟಣ ಪಂಚಾಯಿತಿ ಸದಸ್ಯರು… ಹೀಗೆ ಒಂದಿಲ್ಲೊಂದು ಸಮಸ್ಯೆಗಳಿಂದ ಬಳಲುತ್ತಿದೆ ನರೇಗಲ್ಲ ಪಟ್ಟಣ ಪಂಚಾಯಿತಿ.
    ಕಳೆದೊಂದು ತಿಂಗಳಿನಿಂದ ಮುಖ್ಯಾಧಿಕಾರಿ ಇಲ್ಲದ ಕಾರಣ ಹತ್ತಾರು ಸಮಸ್ಯೆಗಳು ಎದುರಾಗಿವೆ. ಲಭ್ಯವಿರುವ ಅಧಿಕಾರಿಗಳು ಜನರ ಆಕ್ರೋಶಕ್ಕೆ ತುತ್ತಾಗುತ್ತಿದ್ದಾರೆ. ಮುಖ್ಯಾಧಿಕಾರಿಯಾಗಿದ್ದ ಹನುಮಂತಪ್ಪ ಮಣ್ಣವಡ್ಡರ ಅವರು ಅವ್ಯವಹಾರದ ಆರೋಪದ ಮೇಲೆ ಅಮಾನತುಗೊಂಡಿದ್ದಾರೆ. ಆ ಹುದ್ದೆಗೆ ಪ್ರಭಾರಿಯಾಗಿ ನಗರಾಭಿವೃದ್ಧಿ ಕೋಶದ ವ್ಯವಸ್ಥಾಪಕ ಶಿವಾನಂದ ಅಜ್ಜಣ್ಣವರ ಅವರನ್ನು ನಿಯೋಜಿಸಲಾಗಿತ್ತು. ಅವರು ಅನಾರೋಗ್ಯದ ಕಾರಣದಿಂದ ಒಂದು ತಿಂಗಳಿನಿಂದ ರಜೆಯಲ್ಲಿದ್ದಾರೆ. ಬಳಿಕ ಮುಳಗುಂದ ಪಪಂ ಮುಖ್ಯಾಧಿಕಾರಿ ಮಂಜುನಾಥ ಗುಳೇದ ಅವರನ್ನು ವಾರದಲ್ಲಿ 3 ದಿನಗಳ ಮಟ್ಟಿಗೆ ನಿಯೋಜಿಸಲಾಗಿತ್ತು. ಅವರು ಕೂಡ ಕರ್ತವ್ಯಕ್ಕೆ ಹಾಜರಾಗಿದ್ದು ಬಿಟ್ಟರೆ ಮರಳಿ ಬಂದಿಲ್ಲ. ಹೀಗಾಗಿ, ಅ. 7ರಂದು ರೋಣ ಪುರಸಭೆ ಮುಖ್ಯಾಧಿಕಾರಿ ರಮೇಶ ಗೋಂದಕರ ಅವರನ್ನು ಪ್ರಭಾರ ಮುಖ್ಯಾಧಿಕಾರಿಯನ್ನಾಗಿ ನಿಯೋಜಿಸಲಾಗಿತ್ತು. ಅವರು ಅ. 10ರಂದು ಸಂಜೆ ಕರ್ತವ್ಯಕ್ಕೆ ಹಾಜರಾಗಿದ್ದಾರೆ. 11ರಂದು ಅವರೂ ಬಂದಿಲ್ಲ. ಅವರೂ ಮುಂದಿನ ದಿನಗಳಲ್ಲಿ ಇಲ್ಲಿಗೆ ಬಂದು ಕೆಲಸ ನಿರ್ವಹಿಸುತ್ತಾರೆ ಎಂಬ ಭರವಸೆ ಇಲ್ಲಿನ ಜನರಲ್ಲಿ ಇಲ್ಲವಾಗಿದೆ.
    ಡಿಜಿಟಲ್ ಕೀ ಸಮಸ್ಯೆ: ಮುಖ್ಯಾಧಿಕಾರಿ ಹುದ್ದೆ ಖಾಲಿ ಇರುವುದರಿಂದ ಡಿಜಿಟಲ್ ಕೀ ಇಲ್ಲದಾಗಿದೆ. ಹಾಗಾಗಿ, ಯಾವುದೇ ಕೆಲಸಕ್ಕೂ ಹಣವಿಲ್ಲದಂತಾಗಿದೆ. ಪ್ರಭಾರ ವಹಿಸಿಕೊಂಡವರು ಡಿಜಿಟಲ್ ಕೀ ಮಾಡಿಸಿಕೊಳ್ಳುತ್ತಿಲ್ಲ. ಈ ಕೀ ಮೂಲಕವೇ ಜನನ-ಮರಣ ಪ್ರಮಾಣ ಪತ್ರ, ಉತಾರ, ಖಾತೆ ಬದಲಾವಣೆ ಸೇರಿ ಹತ್ತು ಹಲವು ಕೆಲಸ ಕಾರ್ಯಗಳು ನಡೆಯುತ್ತವೆ.
    ಕಾಮಗಾರಿ ನನೆಗುದಿಗೆ: ಸರ್ಕಾರದ ವಿವಿಧ ಯೋಜನೆಗಳಿಂದ ಬಿಡುಗಡೆಯಾದ 2 ಕೋಟಿ ರೂ.ಗೂ ಅಧಿಕ ಕಾಮಗಾರಿಗಳ ಟೆಂಡರ್ ಕರೆದು ತಿಂಗಳುಗಳೇ ಕಳೆದಿವೆ. ಜಿಲ್ಲಾಧಿಕಾರಿ ಅನುಮೋದನೆ ನೀಡಿದ್ದಾರೆ. ಆದರೆ, ಇಂಜಿನಿಯರ್ ಮತ್ತು ಮುಖ್ಯಾಧಿಕಾರಿಗಳು ಕಾರ್ಯಾದೇಶವನ್ನು ನೀಡದ ಕಾರಣ ಕಾಮಗಾರಿ ನನೆಗುದಿಗೆ ಬಿದ್ದಿವೆ. ಪಪಂ ಅಧ್ಯಕ್ಷ-ಉಪಾಧ್ಯಕ್ಷ ಅಧಿಕಾರವಧಿ ಮುಗಿದ ಕಾರಣ ಗಜೇಂದ್ರಗಡ ತಹಸೀಲ್ದಾರರನ್ನು ಆಡಳಿತಾಧಿಕಾರಿಗಳನ್ನಾಗಿ ನೇಮಿಸಲಾಗಿದೆ. ಆಡಳಿತಾಧಿಕಾರಿಗಳಾಗಿ ನೇಮಕವಾಗಿದ್ದು ಬಿಟ್ಟರೆ, ಅವರಿಂದ ಯಾವುದೇ ಕೆಲಸ ಕಾರ್ಯಗಳಾಗಿಲ್ಲ ಎಂಬುದು ಸಾರ್ವಜನಿಕರ ದೂರು.
    ಕಸ ವಿಲೇವಾರಿ ಸಮಸ್ಯೆ: ತ್ಯಾಜ್ಯ ವಿಲೇವಾರಿ ವಾಹನಗಳಿಗೆ ಡಿಸೇಲ್ ಹಾಕಿಸಲು ಹಣವಿಲ್ಲ. ಜನರಿಗೆ ಸಮಸ್ಯೆ ಆಗಬಾರದು ಎಂದು ಸ್ವಂತ ಹಣವನ್ನು ನೀಡಿ ಇಂಧನ ಹಾಕಿಸುತ್ತಿದ್ದೇವೆ ಎನ್ನುತ್ತಾರೆ ಸಿಬ್ಬಂದಿ.

    ನರೇಗಲ್ಲ ಪಪಂ ಪ್ರಭಾರ ಮುಖ್ಯಾಧಿಕಾರಿ ಶಿವಾನಂದ ಅಜ್ಜಣ್ಣವರ ರಜೆಯಲ್ಲಿದ್ದ ಕಾರಣ ಮುಳಗುಂದ ಪಪಂ ಮುಖ್ಯಾಧಿಕಾರಿಯನ್ನು ನಿಯೋಜಿಸಲಾಗಿತ್ತು. ನರೇಗಲ್ಲ ಮತ್ತು ಮುಳಗುಂದ ದೂರವಾಗುವುದರಿಂದ ಕಾರ್ಯ ನಿರ್ವಹಣೆ ಕಷ್ಟಸಾಧ್ಯ. ಆದ್ದರಿಂದ, ರೋಣ ಪುರಸಭೆ ಮುಖ್ಯಾಧಿಕಾರಿಯನ್ನು ನಿಯೋಜನೆ ಮಾಡಲಾಗಿದೆ.
    ಮಾರುತಿ ಬ್ಯಾಕೋಡ ಯೋಜನಾ ನಿರ್ದೇಶಕರು ನಗರಾಭಿವೃದ್ಧಿ ಕೋಶ ಗದಗ

    ಕಳೆದ ಆರು ತಿಂಗಳಿನಿಂದ ವಾರ್ಡ್ ನಲ್ಲಿನ ಸಮಸ್ಯೆಗಳನ್ನು ಹೊತ್ತು ತರುವ ಸಾರ್ವಜನಿಕರಿಗೆ ಉತ್ತರಿಸಲಾಗದ ಸ್ಥಿತಿ ನಿರ್ಮಾಣವಾಗಿದೆ. ಸರ್ವ ಸದಸ್ಯರು ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿ ನರೇಗಲ್ಲ ಪಪಂಗೆ ಕಾಯಂ ಮುಖ್ಯಾಧಿಕಾರಿ, ಇಂಜಿನಿಯರರನ್ನು ನೇಮಕ ಮಾಡಬೇಕು. ಇಲ್ಲದಿದ್ದರೆ ರಾಜಿನಾಮೆ ನೀಡಿ, ಸಾರ್ವಜನಿಕರೊಂದಿಗೆ ಪ್ರತಿಭಟನೆ ಕೈಗೊಳ್ಳಲಾಗುವುದು.
    ಶ್ರೀಶೈಲಪ್ಪ ಬಂಡಿಹಾಳ
    ಪಟ್ಟಣ ಪಂಚಾಯಿತಿ ಸದಸ್ಯ

    ನರೇಗಲ್ಲ ಪಪಂಗೆ ನಾನು ಆಡಳಿತಾಧಿಕಾರಿ ಮಾತ್ರ. ಸಹಿ ಮಾಡುವುದು ಹಾಗೂ ಇತರ ಯಾವುದೇ ನಿರ್ಣಯ ಕೈಗೊಳ್ಳುವ ಅಧಿಕಾರ ನನಗೆ ಇಲ್ಲ. ಈಗಾಗಲೇ, ಮೇಲಧಿಕಾರಿಗಳಿಗೆ ಮುಖ್ಯಾಧಿಕಾರಿಗಳನ್ನು ನೇಮಕ ಮಾಡುವಂತೆ ಮನವಿ ಮಾಡಲಾಗಿದೆ. ಇನ್ನೊಂದು ವಾರದಲ್ಲಿ ಕಾಯಂ ಮುಖ್ಯಾಧಿಕಾರಿಯನ್ನು ನೇಮಕ ಮಾಡಲಾಗುತ್ತದೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
    ಕಿರಣ ಕುಮಾರ
    ತಹಸೀಲ್ದಾರ್ ಗಜೇಂದ್ರಗಡ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts