More

    ಜಾನುವಾರು ರಕ್ಷಣೆಗೆ ದನದ ಶೆಡ್ ಆಸರೆ

    ಕುಷ್ಟಗಿ: ತೋಳ, ಚಿರತೆಯಂತಹ ಕಾಡು ಪ್ರಾಣಿಗಳ ದಾಳಿಯಿಂದ ಜಾನುವಾರುಗಳನ್ನು ರಕ್ಷಿಸಿಕೊಳ್ಳಲು ತಾಲೂಕಿನ ರೈತರು ದನದ ಶೆಡ್‌ಗಳ ಮೊರೆ ಹೋಗುತ್ತಿದ್ದಾರೆ. ಶೆಡ್ ನಿರ್ಮಾಣಕ್ಕೆ ನರೇಗಾ ಯೋಜನೆಯ ಸದುಪಯೋಗವಾಗುತ್ತಿದೆ.

    ಈ ಹಿಂದೆ ಬೆರಳೆಣಿಕೆ ರೈತರು ಮಾತ್ರ ದನದ ಶೆಡ್ ನಿರ್ಮಿಸಿಕೊಳ್ಳುತ್ತಿದ್ದರು. ಕಾಡು ಪ್ರಾಣಿಗಳ ಹಾವಳಿ ಹೆಚ್ಚಾಗುತ್ತಿದ್ದಂತೆ ಜಾನುವಾರುಗಳ ರಕ್ಷಣೆಗೆ ದನದ ಶೆಡ್ ಸೂಕ್ತ ಎಂಬುದನ್ನು ಅರಿತ ರೈತರು, ಅವುಗಳ ನಿರ್ಮಾಣಕ್ಕೆ ಮುಂದಾಗಿದ್ದಾರೆ. 2023-24ನೇ ಸಾಲಿಗೆ ನರೇಗಾ ಯೋಜನೆಯಡಿ ತಾಲೂಕು ಪಂಚಾಯಿತಿಯಿಂದ ತಾಲೂಕಿನಾದ್ಯಂತ 453 ದನದ ಶೆಡ್ ನಿರ್ಮಾಣದ ಗುರಿ ಹೊಂದಲಾಗಿದೆ.

    ಆ ಪೈಕಿ 96 ಶೆಡ್‌ಗಳ ನಿರ್ಮಾಣ ಕಾರ್ಯ ಪ್ರಗತಿ ಹಂತದಲ್ಲಿದೆ ಎಂದು ತಾಪಂ ಅಧಿಕಾರಿಗಳು ತಿಳಿಸಿದ್ದಾರೆ. ತಾಲೂಕಿನ ಮಾಲಗಿತ್ತಿ, ಕಾಟಾಪುರ, ಜುಮಲಾಪುರ, ಕಿಲಾರಹಟ್ಟಿ, ಮೇಣೆಧಾಳ ಸುತ್ತ ಮುತ್ತ ಗುಡ್ಡಗಾಡು ಪ್ರದೇಶ ಇರುವುದರಿಂದ ಆ ಭಾಗದ ಅತಿ ಹೆಚ್ಚು ರೈತರು ದನದ ಶೆಡ್ ನಿರ್ಮಿಸಿಕೊಳ್ಳುತ್ತಿದ್ದಾರೆ.

    ನರೇಗಾ ಯೋಜನೆಯಡಿ ದನದ ಶೆಡ್ ನಿರ್ಮಾಣಕ್ಕೆ ಆದ್ಯತೆ ನೀಡಲಾಗುತ್ತಿದೆ. ರೈತರೂ ಸಹ ತಮ್ಮ ಜಾನುವಾರುಗಳ ರಕ್ಷಣೆಗಾಗಿ ಶೆಡ್ ನಿರ್ಮಿಸಿಕೊಳ್ಳಲು ಮುಂದೆ ಬರುತ್ತಿದ್ದಾರೆ. ಈಗಾಗಲೇ 96 ಶೆಡ್‌ಗಳ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ.
    ನಿಂಗಪ್ಪ ಮಸಳಿ ತಾಪಂ ಇಒ ಕುಷ್ಟಗಿ

    ಉದ್ಯೋಗ ಖಾತ್ರಿ ಯೋಜನೆಯಡಿ ಸುಸಜ್ಜಿತ ದನದ ಶೆಡ್ ನಿರ್ಮಿಸಿಕೊಂಡಿದ್ದೇನೆ. ಕಾಡು ಪ್ರಾಣಿಗಳಿಂದ ಜಾನುವಾರುಗಳ ರಕ್ಷಣೆಯಾಗುವುದರಿಂದ ನಿರಾತಂಕವಾಗಿ ಇರಲು ಸಾಧ್ಯವಾಗಿದೆ.
    ಪರಸಪ್ಪ ದನದ ಶೆಡ್ ಫಲಾನುಭವಿ, ಕಾಟಾಪುರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts