More

    ನರೇಗಾದಡಿ ಕೊಪ್ಪಳ ಫಸ್ಟ್ – ನಿತ್ಯ 1,08,389 ಜನರಿಗೆ ಕೆಲಸ

    ಕೊಪ್ಪಳ: ಬೇಸಿಗೆಯಲ್ಲಿ ಗ್ರಾಮೀಣರ ಗುಳೆ ತಡೆ ಹಾಗೂ ನರೇಗಾದಡಿ ಅತಿ ಹೆಚ್ಚು ಮಾನವ ದಿನ ಸೃಜಿಸುವ ಮೂಲಕ ಕೊಪ್ಪಳ ಜಿಲ್ಲೆ ರಾಜ್ಯದಲ್ಲಿ ಪ್ರಥಮ ಸ್ಥಾನ ಪಡೆದಿದೆ. ನಿತ್ಯ ಲಕ್ಷಕ್ಕೂ ಅಧಿಕ ಜನರಿಗೆ ಕೂಲಿ ಕೆಲಸ ನೀಡುತ್ತಿದ್ದು, ಇತರ ಜಿಲ್ಲೆಗಳನ್ನು ಹಿಂದಿಕ್ಕಿದೆ.

    ರಾಜ್ಯದಲ್ಲಿ ನರೇಗಾದಡಿ ನಿತ್ಯ 9,15,433 ಕೂಲಿಕಾರರು ಕೆಲಸ ಮಾಡುತ್ತಿದ್ದಾರೆ. ಈ ಪೈಕಿ 1,08,389 ಕೂಲಿಕಾರರು ಕೊಪ್ಪಳ ಜಿಲ್ಲೆಯಲ್ಲಿ ಕೆಲಸ ಮಾಡುತ್ತಿದ್ದು, ಮೊದಲ ಸ್ಥಾನ ಪಡೆದಿದೆ. ರಾಯಚೂರು 1,05,816 (ದ್ವಿತೀಯ), ಬೆಳಗಾವಿ 94,590 (ತೃತೀಯ ) ಸ್ಥಾನದಲ್ಲಿದೆ. ಬಳ್ಳಾರಿ 86,069, ಗದಗ 78,334, ವಿಜಯನಗರ 68,381 ಕೂಲಿಕಾರರಿಗೆ ಕೆಲಸ ನೀಡಿವೆ. ಬಾಕಿ ಜಿಲ್ಲೆಗಳಲ್ಲಿ ಇದಕ್ಕಿಂತ ಕಡಿಮೆ ಕೂಲಿಕಾರರಿಗೆ ಕೆಲಸ ನೀಡಲಾಗುತ್ತಿದೆ.

    ಗ್ರಾಪಂವಾರು ಜಾಗೃತಿ ಕಾರ್ಯಕ್ರಮ

    ಬೇಸಿಗೆಯಲ್ಲಿ ಜನರು ಗುಳೆ ಹೋಗುವುದನ್ನು ತಡೆವ ದೃಷ್ಟಿಯಿಂದ ಜಿಪಂನಿಂದ ಗ್ರಾಪಂವಾರು ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಏ.1ರಿಂದ ನರೇಗಾ ಕೂಲಿ ಮೊತ್ತ 316ರೂ.ಗೆ ಹೆಚ್ಚಳವಾಗಿದೆ. ಈ ಬಗ್ಗೆ ಕೂಲಿಕಾರರಿಗೆ ಅರಿವು ಮೂಡಿಸಿ ಹೆಚಚು ಜನರು ಕೆಲಸಕ್ಕೆ ಬರುವಂತೆ ನೋಡಿಕೊಳ್ಳಲಾಗುತ್ತಿದೆ.

    ಬೆಳಗಾವಿ ಹಾಗೂ ಕಲಬುರಗಿ ವಿಭಾಗ ವ್ಯಾಪ್ತಿಯ ಜಿಲ್ಲೆಗಳಲ್ಲಿ ಬಿಸಿಲಿನ ತಾಪಮಾನ ಹೆಚ್ಚಳ ಹಿನ್ನೆಲೆಯಲ್ಲಿ ನರೇಗಾ ಕೆಲಸದಲ್ಲಿ ಶೇ.30 ರಿಯಾಯತಿ ನೀಡಲಾಗುತ್ತಿದೆ. ಜಿಲ್ಲೆಯ ಕೂಲಿಕಾರರು ಹೆಚ್ಚು ಸೌಲಭ್ಯವನ್ನು ಸದ್ಬಳಕೆ ಮಾಡಿಕೊಂಡಿದ್ದಾರೆ.

    ಅಣಕು ಮತದಾನದ ಮೂಲಕ ಪ್ರಾತ್ಯಕ್ಷಿಕೆ

    ಸದ್ಯ ವಿಧಾನಸಭೆ ಚುನಾವಣೆ ನಡೆಯುತ್ತಿದ್ದು, ಜಿಪಂನಿಂದ ಮತದಾನ ಜಾಗೃತಿ ಹಮ್ಮಿಕೊಳ್ಳಲಾಗುತ್ತಿದೆ. ನರೇಗಾ ಕಾಮಗಾರಿ ನಡೆವ ಸ್ಥಳದಲ್ಲಿಯೇ ಕೂಲಿಕಾರರಿಗೆ ಮತದಾನ ಮಹತ್ವ ತಿಳಿಸಲಾಗುತ್ತಿದೆ. ಅಲ್ಲದೇ ಅಣಕು ಮತದಾನದ ಮೂಲಕ ಪ್ರಾತ್ಯಕ್ಷಿಕೆ ನೀಡಲಾಗುತ್ತಿದ್ದು, 153 ಗ್ರಾಪಂಗಳಲ್ಲೂ ಜಾಗೃತಿ ಕೆಲಸ ನಡೆದಿದೆ. ಇವಿಎಂ, ವಿವಿಪ್ಯಾಟ್ ಯಂತ್ರಗಳ ಪರಿಚಯ, ಮತದಾನ ಜಾಗೃತಿ ಗೀತೆಗಳ ಮೂಲಕ ಮತದಾರರನ್ನು ಸೆಳೆಯಲಾಗುತ್ತಿದೆ.

    ಇದನ್ನೂ ಓದಿ: ನರೇಗಾ ಯೋಜನೆ ಅರಿವಿಗೆ ಜಾಗೃತಿ ನಾಟಕ

    ನರೇಗಾದಡಿ ಕೊಪ್ಪಳ ಫಸ್ಟ್ - ನಿತ್ಯ 1,08,389 ಜನರಿಗೆ ಕೆಲಸ

    ಬೇಸಿಗೆಯಲ್ಲಿ ಜನರು ಕೆಲಸ ಅರಸಿ ಗುಳೆ ಹೋಗುವುದನ್ನು ತಪ್ಪಿಸಲು ನರೇಗಾ ಯೋಜನೆಯನ್ನು ಸದ್ಬಳಕೆ ಮಾಡಲಾಗುತ್ತಿದೆ. ನರೇಗಾ ಪರಿಣಾಮಕಾರಿ ಅನುಷ್ಠಾನದಿಂದ ರಾಜ್ಯದಲ್ಲಿ ನಮ್ಮ ಜಿಲ್ಲೆಯಲ್ಲಿ ಅತಿ ಹೆಚ್ಚು ಮಾನವ ದಿನಗಳನ್ನು ಸೃಜಿಸಲು ಸಾಧ್ಯವಾಗಿದೆ.ನರೇಗಾದಿಂದ ಜನರ ಗುಳೆಯೂ ತಪ್ಪಿದೆ.
    | ರಾಹುಲ್ ರತ್ನಂ ಪಾಂಡೆ. ಜಿಪಂ ಸಿಇಒ ಕೊಪ್ಪಳ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts