More

    ಖಾತೆ ಬದಲಾಯಿಸಲು ಲಂಚ : ಬಿ.ವಿ. ಹಳ್ಳಿ ಪಿಡಿಒ ವಿರುದ್ಧ ಮಹಿಳೆ ಆರೋಪ

    ವಿಜಯವಾಣಿ ಸುದ್ದಿಜಾಲ ಚನ್ನಪಟ್ಟಣ


    ಇತ್ತೀಚೆಗಷ್ಟೇ ನರೇಗಾ ಕಾಮಗಾರಿಯ ಎಂಸಿ ಬಿಲ್ ನೀಡಲು ತಾಲೂಕಿನ ಬಿ.ವಿ. ಹಳ್ಳಿ ಗ್ರಾಪಂ ಪಿಡಿಒ ಕಮಿಷನ್ ನೀಡುವಂತೆ ಒತ್ತಾಯಿಸಿರುವ ಆಡಿಯೋ ವೈರಲ್ ಆಗಿತ್ತು. ಇದರ ಬೆನ್ನಲ್ಲೇ ಇದೇ ಪಿಡಿಒ ವಿರುದ್ದ ಲಂಚದ ಬೇಡಿಕೆಯ ಮತ್ತೊಂದು ಆರೋಪ ಕೇಳಿ ಬಂದಿದೆ.
    ತಾಲೂಕಿನ ಬಿ.ವಿ. ಹಳ್ಳಿ ಗ್ರಾಪಂ ಪಿಡಿಒ ಶೋಭಾ ವಿರುದ್ದ ಇದೀಗ ಖಾತೆ ಬದಲಾವಣೆ ಮಾಡಿಕೊಡಲು ಲಂಚಕ್ಕೆ ಬೇಡಿಕೆ ಇಟ್ಟಿರುವ ಆರೋಪ ಕೇಳಿಬಂದಿದೆ. ಗ್ರಾಪಂ ವ್ಯಾಪ್ತಿಯ ವಿಠಲೇನಹಳ್ಳಿಯ ಮಹಿಳೆ ಈ ಆರೋಪ ಮಾಡಿದ್ದಾರೆ.


    ಏನಿದು ಆರೋಪ? ಬಿ.ವಿ.ಹಳ್ಳಿ ಗ್ರಾಪಂ ವ್ಯಾಪ್ತಿಯ ವಿಠಲೇನಹಳ್ಳಿ ಗ್ರಾಮದ ಮಲ್ಲಿಕಾ ಎಂಬುವವರು ಖಾತೆ ಬದಲಾವಣೆ ಮಾಡಿಕೊಡಲು ಪಿಡಿಒ 20 ಸಾವಿರ ರೂ.ಗಳಿಗೆ ಬೇಡಿಕೆ ಇಟ್ಟಿದ್ದಾರೆ. ಹಣ ನೀಡದ ಕಾರಣ ಖಾತೆ ಬದಲಾವಣೆ ಮಾಡಿಕೊಡುತ್ತಿಲ್ಲ ಎಂದು ಮಲ್ಲಿಕಾ ಆರೋಪಿಸಿದರು.


    ನಗರದ ಪ್ರವಾಸಿ ಮಂದಿರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗ್ರಾಮದಲ್ಲಿ ಹಲವು ವರ್ಷಗಳ ಹಿಂದೆ ಸಿದ್ದಮ್ಮ ಎಂಬುವವರ ನಿವೇಶನವನ್ನು ಖರೀದಿಸಿದ್ದೆವು. ಆದರೆ, ಇದರ ಖಾತೆ ಬದಲಾವಣೆ ಆಗಿರಲಿಲ್ಲ. ಕಳೆದ ಆಗಸ್ಟ್ನಲ್ಲಿ ಖಾತೆ ಬದಲಾವಣೆಗೆ ಕೋರಿ ಗ್ರಾಪಂಗೆ ಅರ್ಜಿ ಸಲ್ಲಿಸಿದಾಗ ಪಿಡಿಒ ಶೋಭಾ ಅವರು ಖಾತೆ ಬದಲಾಯಿಸಲು 20 ಸಾವಿರ ರೂ. ನೀಡುವಂತೆ ಬೇಡಿಕೆ ಇಟ್ಟರು. ಇಷ್ಟೊಂದು ಹಣ ನೀಡಲು ಸಾಧ್ಯವಿಲ್ಲ ಎಂದಾಗ, ಸ್ಥಳದಲ್ಲಿದ್ದ ಕೆಲವರು ಮಧ್ಯಸ್ಥಿಕೆ ವಹಿಸಿ ಹತ್ತು ಸಾವಿರ ರೂ. ನೀಡುವಂತೆ ತೀರ್ಮಾನಿಸಿದ್ದರು. ಅದರಂತೆ ಪಿಡಿಒ ಶೋಭಾ ಮುಂಗಡವಾಗಿ 2 ಸಾವಿರ ರೂ. ಪಡೆದು ಕೆಲ ದಿನದ ನಂತರ ಬರುವಂತೆ ತಿಳಿಸಿದ್ದರು. ಇದೀಗ, ಈ ವಿಚಾರವಾಗಿ ಮತ್ತೆ ಅವರ ಬಳಿ ಹೋದಾಗ ಬಾಕಿ ಹಣ ನೀಡುವವರೆಗೂ ಖಾತೆ ಬದಲಾವಣೆ ಮಾಡುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ. ಆದರೆ, ಹಣ ನೀಡುವಷ್ಟು ಶಕ್ತಿ ನನ್ನಲ್ಲಿಲ್ಲ. ದಯವಿಟ್ಟು ಸಂಬಂಧಪಟ್ಟ ಹಿರಿಯ ಅಧಿಕಾರಿಗಳು ಖಾತೆ ಬದಲಾವಣೆ ಮಾಡಿಸಿಕೊಡಬೇಕು ಎಂದು ಮಲ್ಲಿಕಾ ಅಲವತ್ತುಕೊಂಡರು.


    ಈಗಾಗಲೇ ಈ ಗ್ರಾಪಂ ಪಿಡಿಒ ವಿರುದ್ದದ ಭ್ರಷ್ಟಾಚಾರದ ಆಡಿಯೋ ಪ್ರಕರಣ ತನಿಖೆಯಲ್ಲಿದ್ದು, ಈಕೆಗೆ ಜಿಪಂ ಸಿಇಒ ನೋಟಿಸ್ ಕೂಡ ಜಾರಿ ಮಾಡಿದ್ದಾರೆ. ನರೇಗಾ ಯೋಜನೆಯ ಭ್ರಷ್ಟಾಚಾರದ ಜತೆಗೆ ಇದೀಗ ಪಿಡಿಒಗೆ ಖಾತೆ ಬದಲಾವಣೆಗಾಗಿ ಲಂಚಕ್ಕೆ ಬೇಡಿಕೆ ಇಟ್ಟ ಆರೋಪವೂ ಸುತ್ತಿಕೊಂಡಿದೆ. ಸಂಬಂಧಿಸಿದ ಹಿರಿಯ ಅಧಿಕಾರಿಗಳು ಈಕೆಯ ವಿರುದ್ಧ ಏನು ಕ್ರಮ ಕೈಗೊಳ್ಳುತ್ತಾರೆ ಎಂದು ಕಾದು ನೋಡಬೇಕಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts