More

    ಮಾದಕ ವಸ್ತುಗಳ ಮಾರಾಟ ಜಾಲ ಪ್ರಕರಣ, ಮತ್ತೊಬ್ಬ ಸೆರೆ

    ಶಿವಮೊಗ್ಗ: ಅಂತರ್ ಜಿಲ್ಲಾ ವ್ಯಾಪ್ತಿಯಲ್ಲಿ ಮಾದಕ ವಸ್ತುಗಳ ಮಾರಾಟ ಜಾಲ ಪ್ರಕರಣದ ತನಿಖೆ ಚುರುಕುಗೊಳಿಸಿದ ಜಿಲ್ಲಾ ಪೊಲೀಸರು, ವ್ಯಕ್ತಿ ಕೊಲೆಗೆ ರೂಪಿಸಿದ ಸಂಚನ್ನು ವಿಫಲಗೊಳಿಸಿದ್ದು ಮಾದಕ ವಸ್ತು ನೀಡಿದ ಆರೋಪದಡಿ ಮತ್ತೊಬ್ಬ ಆರೋಪಿಯನ್ನು ಬಂಧಿಸಿದ್ದಾರೆ. ಇದರೊಂದಿಗೆ ಬಂಧಿತರ ಸಂಖ್ಯೆ ನಾಲ್ಕಕ್ಕೇರಿದೆ.
    ಮಂಗಳೂರು ಗೋರಿಗುಡ್ಡದ ತಿಲಕ್ ಬಂಧಿತ ಆರೋಪಿ. ಮಾ.13ರಂದು ಮಂಗಳೂರು ತೋಡಾರ್ ಗ್ರಾಮದ ಸೃಜನ್ ಎಸ್ ಶೆಟ್ಟಿ (20), ಸಾಗರ ಅಣಲೆಕೊಪ್ಪದ ಮೊಹಮ್ಮದ್ ಸಲ್ಮಾನ್ (24) ಮತ್ತು ಶ್ರೀಧರ್‌ನಗರದ ಮೊಹಮ್ಮದ್ ಯಾಸೀಫ್ (25) ಎಂಬುವರನ್ನು ಬಂಧಿಸಿದ್ದರು. ಸಾಗರ ಅಣಲೆಕೊಪ್ಪದಲ್ಲಿ ಮಾದಕ ವಸ್ತುಗಳನ್ನು ಸಾಗಿಸುತ್ತಿದ್ದ ವೇಳೆ ಪೊಲೀಸರು ಮತ್ತು ಅಬಕಾರಿ ಇಲಾಖೆ ಜಂಟಿ ಕಾರ್ಯಾಚರಣೆ ನಡೆಸಿದ್ದರು.
    ಮಂಗಳೂರಿನಿಂದ ಬಸ್‌ನಲ್ಲಿ ಬಂದಿದ್ದ ಸೃಜನ್ ಶೆಟ್ಟಿ ಅಣಲೆಕೊಪ್ಪದಲ್ಲಿರುವ ಶುಂಠಿ ಕಣಕ್ಕೆ ಮಾದಕ ವಸ್ತು ಕೊಂಡೊಯ್ದಿದ್ದ. ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ ಮೂವರನ್ನು ಬಂಧಿಸಿ 10 ಸಾವಿರ ರೂ. ಮೌಲ್ಯದ ಮಾದಕ ವಸ್ತು, 4 ಮೊಬೈಲ್ ಮತ್ತು 2 ಲಕ್ಷ ರೂ. ಮೌಲ್ಯದ ಸ್ವಿಫ್ಟ್ ಡಿಸೈರ್ ಕಾರು ಜಪ್ತಿ ಮಾಡಿದ್ದರು. ಸಾಗರ ಟೌನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
    ಎಎಸ್ಪಿ ರೋಹನ್ ಜಗದೀಶ್ ನೇತೃತ್ವದಲ್ಲಿ ಮಾದಕ ವಸ್ತು ಸಾಗಾಣಿಕೆ ಮತ್ತು ಮಾರಾಟದ ಜಾಲ ಪತ್ತೆ ಮಾಡುವ ಬಗ್ಗೆ ಒಂದು ವಿಶೇಷ ತಂಡ ರಚನೆ ಮಾಡಲಾಗಿತ್ತು. ಈ ವೇಳೆ ಆರೋಪಿ ಸೃಜನ್ ಶೆಟ್ಟಿಯನ್ನು ವಿಚಾರಣೆಗೆ ಒಳಪಡಿಸಿದಾಗ ಈತ ತನ್ನ ಸಹಚರರೊಂದಿಗೆ ಸೇರಿ ವ್ಯಕ್ತಿಯೊಬ್ಬನನ್ನು ಕೊಲೆ ಮಾಡುವ ಸಂಚು ರೂಪಿಸಿರುವುದಾಗಿ ಒಪ್ಪಿಕೊಂಡಿದ್ದ. ಅಲ್ಲದೆ, ಕೊಲೆ ಮಾಡುವ ಉದ್ದೇಶದಿಂದ ಮನೆಯಲ್ಲಿ 8 ಲಾಂಗ್‌ಗಳನ್ನು ಇಟ್ಟುಕೊಂಡಿದ್ದ. ಮೂವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಸೃಜನ್ ಶೆಟ್ಟಿಯನ್ನು ವಶಕ್ಕೆ ಪಡೆದಿದ್ದ ಪೊಲೀಸರು 8 ಲಾಂಗ್ ವಶಕ್ಕೆ ಪಡೆದು ಕೊಲೆ ಸಂಚನ್ನು ವಿಫಲಗೊಳಿಸಿದ್ದಾರೆ.
    ಸಾಗರ ಟೌನ್ ಠಾಣೆ ಇನ್‌ಸ್ಪೆಕ್ಟರ್ ಜೆ.ಬಿ.ಸೀತಾರಾಮ್, ಸಾಗರ ಗ್ರಾಮಾಂತರ ಠಾಣೆ ಇನ್‌ಸ್ಪೆಕ್ಟರ್ ವಿ.ಪ್ರವೀಣ್‌ಕುಮಾರ್‌ನೇತೃತ್ವದಲ್ಲಿ ಕಾರ್ಗಲ್ ಪಿಎಸ್‌ಐ ಜಿ.ತಿರುಮಲೇಶ್, ಸಾಗರ ಟೌನ್ ಠಾಣೆ ಪಿಎಸ್‌ಐಗಳಾದ ಹೊಳಬಸಪ್ಪ ಹೋಳಿ, ಶ್ರೀಪತಿ ಗಿನ್ನಿ, ಮತ್ತು ಸಿಬ್ಬಂದಿಗಳಾದ ರತ್ನಾಕರ್, ಶಿವಕುಮಾರ್, ಮೋಹನ್, ಸನಾವುಲ್ಲಾ, ಲೋಹಿತ್, ಶ್ರೀಧರ್ ವಿಶೇಷ ತಂಡದಲ್ಲಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts