More

    ತಾರತಮ್ಯ ತೊಲಗಿಸಲು ಶ್ರಮಿಸಿದ್ದ ನಾರಾಯಣಗುರು

    ಸೋಮವಾರಪೇಟೆ: ಮೌಢ್ಯ, ವರ್ಣಭೇದ, ಜಾತಿ, ಶೋಷಣೆ ಹೆಚ್ಚಾಗಿದ್ದ ಸಂದರ್ಭ ಸಮಾಜ ಸುಧಾರಕ ನಾರಾಯಣಗುರು ಅವರು ಉದಯಿಸಿ ಸಮಾಜದ ತಾರತಮ್ಯಗಳನ್ನು ಹೋಗಲಾಡಿಸಲು ಇಡೀ ಜೀವನ ಮುಡಿಪಾಗಿಟ್ಟಿದ್ದರು ಎಂದು ಮಾಜಿ ಸಚಿವ ಅಪ್ಪಚ್ಚು ರಂಜನ್ ಹೇಳಿದರು.

    ಇಲ್ಲಿನ ಶ್ರೀ ನಾರಾಯಣಗುರು ಸೇವಾ ಸಮಿತಿ, ತುಳುನಾಡು ಬಿಲ್ಲವ ಮಹಿಳಾ ಸಂಘದ ವತಿಯಿಂದ ಪಟ್ಟಣದ ಶಂಕಪ್ಪ ಹಾಲ್‌ನಲ್ಲಿ ಭಾನುವಾರ ಆಯೋಜಿಸಿದ್ದ ಶ್ರೀನಾರಾಯಣಗುರುಗಳ ಸ್ಮರಣೆ ಹಾಗೂ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಅವರು ಒಂದು ಜಾತಿಗೆ ಸೀಮಿತವಲ್ಲ. ಅವರ ಆದರ್ಶ, ಚಿಂತನೆ, ಉಪದೇಶಗಳನ್ನು ನಾವೆಲ್ಲರೂ ಮೈಗೂಡಿಸಿಕೊಳ್ಳಬೇಕು. ಜಗತ್ತಿನಲ್ಲಿರುವುದು ಒಂದೇ ಜಾತಿ, ಒಂದೇ ಮತ ಹಾಗೂ ಒಂದೇ ದೇವರು ಎಂಬುದಾಗಿ ಅವರು ಪ್ರತಿಪಾದಿಸಿದ್ದರು ಎಂದು ಸ್ಮರಿಸಿದರು.

    ಸಮಾಜದಲ್ಲಿನ ಅಸ್ಪಶ್ಯತೆಯ ಪಿಡುಗಿಗೆ ತಮ್ಮದೇ ಆದ ನಿಲುವಿನಲ್ಲಿ ಉಪಾಯಗಳನ್ನು ಕಂಡುಕೊಂಡರು. ಅದರ ಪ್ರತಿಫಲವನ್ನು ಈಗ ನಾವೆಲ್ಲರೂ ಅನುಭವಿಸುತ್ತಿದ್ದೇವೆ. ಶಿಕ್ಷಣದಿಂದ ಮಾತ್ರ ಎಲ್ಲವನ್ನೂ ಪಡೆದುಕೊಳ್ಳಲು ಸಾಧ್ಯ. ಉನ್ನತ ಶಿಕ್ಷಣವೆಂಬ ಸಂಪತ್ತನ್ನು ಮಕ್ಕಳಿಗೆ ಕಲ್ಪಿಸುವ ಮೂಲಕ ಗುರುಗಳ ಚಿಂತನೆಯನ್ನು ಮುಂದಿನ ಪೀಳಿಗೆಗೂ ತಲುಪಿಸುವ ಕಾರ್ಯವಾಗಬೇಕು ಎಂದರು.

    ಸೋಮವಾರಪೇಟೆಯಲ್ಲಿ ಶ್ರೀ ನಾರಾಯಣಗುರುಗಳ ಭವನ ನಿರ್ಮಿಸಲು ಹಿಂದಿನ ನಮ್ಮ ಬಿಜೆಪಿ ಸರ್ಕಾರ 25 ಲಕ್ಷ ರೂ. ಅನುದಾನ ಕಲ್ಪಿಸಿತ್ತು. ಆದರೆ ಈಗಿನ ಸರ್ಕಾರ ಹಣವನ್ನು ಬಿಡುಗಡೆಗೊಳಿಸಿಲ್ಲ. ಕಾಂಗ್ರೆಸ್ ಸರ್ಕಾರದ ಬಿಟ್ಟಿ ಭಾಗ್ಯಗಳಿಂದಾಗಿ ಅಭಿವೃದ್ಧಿ ಕಾಮಗಾರಿಗಳಿಗೆ ಹಣ ನೀಡುತ್ತಿಲ್ಲ. ಕೂಡಲೇ ಹಣ ಬಿಡುಗಡೆಗೊಳಿಸಬೇಕು ಎಂದು ಒತ್ತಾಯಿಸಿದರು.

    ಮೈಸೂರು ಎನ್‌ಐಇ ಸಹಾಯಕ ಪ್ರಾಧ್ಯಾಪಕ ಡಾ.ಸಂಜಿತ್ ಎಸ್.ಅಂಜನ್ ಮಾತನಾಡಿ, 20ನೇ ಶತಮಾನದ ಆರಂಭದಲ್ಲಿ ಕೇರಳ ರಾಜ್ಯದಲ್ಲಿ ಭಾರತದಲ್ಲಿಯೇ ಕಂಡರಿಯದ ಮೇಲ್ಜಾತಿಯವರ ಅಮಾನುಷ ವರ್ತನೆಯಿಂದ ಶೂದ್ರರು ಹೀನಾಯ ಸ್ಥಿತಿಯಲ್ಲಿ ಬದುಕುವಂತಹ ದುಸ್ಥಿತಿ ಇತ್ತು. ಸ್ತ್ರೀಯರು ಮೇಲುಡುಪು ಧರಿಸಲು ತೆರಿಗೆ ಕಟ್ಟಬೇಕಿತ್ತು. ಪುರುಷರು ನಡೆಯುವಾಗ ಅವರ ನೆರಳು ಮೇಲ್ಜಾತಿಯವರ ಮೇಲೆ ಬೀಳುವಂತಿರಲಿಲ್ಲ. ಜಾತೀಯತೆ, ಅಸ್ಪಶ್ಯತೆ ಎಂಬ ಕೊಳಕಿನಿಂದ ಸಮಾಜ ಕೊಳೆಯುತ್ತಿರುವಾಗ ನಾರಾಯಣ ಗುರುಗಳು ಅವತಾರ ಪುರುಷರಂತೆ ಜನ್ಮತಾಳಿದರು. ಒಂದೇ ಜಾತಿ, ಒಂದೇ ದೇವರು, ಒಂದೇ ಧರ್ಮ ಇವುಗಳ ಮೂಲಕ ಮಾನವ ಸಮಾಜವನ್ನು ಎತ್ತರಕ್ಕೆ ಕೊಂಡೊಯ್ದರು ಎಂದರು.

    ಶ್ರೀ ನಾರಾಯಣಗುರು ಸೇವಾ ಸಮಿತಿ ಅಧ್ಯಕ್ಷ ಬಿ.ಎ.ಭಾಸ್ಕರ್ ಮಾತನಾಡಿ, 24 ವರ್ಷಗಳ ಹಿಂದೆ ಜನ್ಮತಾಳಿದ ಸೇವಾ ಸಮಿತಿ ಇವತ್ತು ಅರ್ಧ ಎಕರೆ ನಿವೇಶನವನ್ನು ಹೊಂದಿದೆ. 2.60 ಕೋಟಿ ರೂ. ವೆಚ್ಚದಲ್ಲಿ ಭವನ ನಿರ್ಮಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಸರ್ಕಾರದಿಂದ ಈಗಾಗಲೇ 25 ಲಕ್ಷ ರೂ. ಬಿಡುಗಡೆಯಾಗಿದ್ದು, ಹಣಕಾಸು ಇಲಾಖೆಯ ಒಪ್ಪಿಗೆ ಸಿಕ್ಕ ತಕ್ಷಣ ಕಾಮಗಾರಿ ಪ್ರಾರಂಭವಾಗಲಿದೆ ಎಂದು ಹೇಳಿದರು. ಗೌರವಾಧ್ಯಕ್ಷ ಲಕ್ಷ್ಮಣ ಪೂಜಾರಿ ಅವರು ನಿವೇಶನ ಖರೀದಿಗೆ 5 ಲಕ್ಷ ರೂ.ಗಳನ್ನು ದಾನವಾಗಿ ನೀಡಿದ್ದಾರೆ ಎಂದರು.

    ಸನ್ಮಾನ: ಎಸ್‌ಎಸ್‌ಎಲ್‌ಸಿ ಮತ್ತು ದ್ವಿತೀಯ ಪಿಯುಸಿಯಲ್ಲಿ ಶೇ. 85ಕ್ಕಿಂತ ಹೆಚ್ಚಿನ ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಬಾಲನಟ ಅರುಶ್ ಉಮೇಶ್ ಅವರನ್ನು ಸನ್ಮಾನಿಸಲಾಯಿತು.

    ಶ್ರೀ ನಾರಾಯಣಗುರು ಸೇವಾ ಸಮಿತಿಯ ಗೌರವಾಧ್ಯಕ್ಷ ಲಕ್ಷ್ಮಣ ಪೂಜಾರಿ, ಹಿಂದು ಮಲೆಯಾಳ ಸಮಾಜದ ಜಿಲ್ಲಾಧ್ಯಕ್ಷ ವಿ.ಎಂ.ವಿಜಯ, ಮಡಿಕೇರಿ ಬಿಲ್ಲವ ಸೇವಾ ಸಮಾಜದ ತಾಲೂಕು ಅಧ್ಯಕ್ಷೆ ಬಿ.ಎಸ್.ಲೀಲಾವತಿ, ವಿರಾಜಪೇಟೆ ಅಧ್ಯಕ್ಷ ಬಿ.ಎಂ.ಗಣೇಶ್, ಕುಶಾಲನಗರ ಅಧ್ಯಕ್ಷ ಸುಧೀರ್, ಸೋಮವಾರಪೇಟೆ ತುಳುನಾಡು ಬಿಲ್ಲವ ಮಹಿಳಾ ಸಂಘದ ಅಧ್ಯಕ್ಷೆ ಬೇಬಿ ಚಂದ್ರಹಾಸ್, ಸಮಿತಿ ಮಾಜಿ ಅಧ್ಯಕ್ಷ ಬಿ.ಆರ್.ಚಂದ್ರಹಾಸ್ ಉಪನ್ಯಾಸಕರಾದ ತೇಜಸ್, ಮೋಹನ್ ಇದ್ದರು.


    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts