More

    ಎಂಟು ತಿಂಗಳಾದರೂ ಮೇಲೇರದ ಪೀಠ

    ಉಳ್ಳಾಲ: ಮಂಗಳೂರು ವಿಶ್ವವಿದ್ಯಾಲಯದಲ್ಲಿ ಬ್ರಹ್ಮಶ್ರೀ ನಾರಾಯಣ ಗುರು ಅಧ್ಯಯನ ಪೀಠದ ಕಟ್ಟಡಕ್ಕೆ ಶಿಲಾನ್ಯಾಸ ನಡೆದು ಎಂಟು ತಿಂಗಳು ಕಳೆದರೂ ಆರಂಭಿಕ ಹಂತದ ಕಾಮಗಾರಿಯೇ ಆರಂಭವಾಗಿಲ್ಲ.

    ರಾಜ್ಯ ಸರ್ಕಾರ 2013ರ ನ.18ರಂದು ಮಂಗಳೂರು ವಿವಿಯಲ್ಲಿ ಬ್ರಹ್ಮಶ್ರೀ ನಾರಾಯಣ ಗುರು ಅಧ್ಯಯನ ಪೀಠ ಘೋಷಿಸಿತ್ತು. 2017ರ ಜ.19ರಂದು ಆಗಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಪೀಠಕ್ಕೆ ಅಧಿಕೃತ ಚಾಲನೆ ನೀಡಿದ್ದರು. ನಾಲ್ಕು ವರ್ಷ ಹಿಂದೆ ಅಂದಿನ ರಾಜ್ಯಸಭಾ ಸದಸ್ಯ ಬಿ.ಕೆ.ಹರಿಪ್ರಸಾದ್ 50 ಲಕ್ಷ ರೂ. ಅನುದಾನ ಮೀಸಲಿಟ್ಟಿದ್ದರು. ಐದು ಕೋಟಿ ರೂ. ವೆಚ್ಚದಲ್ಲಿ ಕಟ್ಟಡ ನಿರ್ಮಾಣಕ್ಕೆ ಯೋಜನೆ ರೂಪಿಸಲಾಯಿತು. ಈ ವರ್ಷ ಜ.12ರಂದು ಶಿಲಾನ್ಯಾಸ ಮಾಡಲಾಗಿತ್ತು. ಸೆಮಿನಾರ್ ಹಾಲ್, ಜ್ಞಾನಮಂದಿರ, ಗ್ರಂಥಾಲಯ, ವಸ್ತು ಸಂಗ್ರಹಾಲಯ, ಸಂಶೋಧನಾ ವಿಭಾಗ, ಕಲಾಪ್ರದರ್ಶನ ವೇದಿಕೆ, ಕಚೇರಿ, ಅಧ್ಯಯನಕ್ಕೆ ಪೂರಕ ಸವಲತ್ತುಗಳನ್ನು ಕಟ್ಟಡ ಹೊಂದಿರಲಿದ್ದು, ಸಂತೋಷ್ ಕುಮಾರ್ ವಿನ್ಯಾಸ ಮಾಡಿದ್ದಾರೆ.

    ಸ್ಪಂದಿಸುವುದೇ ಸರ್ಕಾರ?: ಸರ್ಕಾರದಿಂದ ತಕ್ಷಣ ಕೋಟಿ ರೂ. ಅನುದಾನ ಬಿಡುಗಡೆ ಬಗ್ಗೆ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಭರವಸೆ ನೀಡಿದ್ದರು. ಜತೆಗೆ ದಾನಿಗಳ ನೆರವಿನ ನಿರೀಕ್ಷೆಯಲ್ಲಿ ಕುಲಪತಿ, ಎರಡು ವರ್ಷದಲ್ಲೇ ಕಟ್ಟಡ ಕಾಮಗಾರಿ ಪೂರ್ಣಗೊಳ್ಳುವ ವಿಶ್ವಾಸ ವ್ಯಕ್ತಪಡಿಸಿದ್ದರು. ಫೆಬ್ರವರಿಯಲ್ಲಿ ಇ-ಟೆಂಡರ್ ಪ್ರಕ್ರಿಯೆ ಆರಂಭಿಸಿ ಕೊನೆಯ ಹಂತ ತಲುಪುವಾಗ ಕರೊನಾ ಶುರುವಾಯಿತು. ಇರುವ 50 ಲಕ್ಷ ರೂ.ನಲ್ಲೇ ಕಾಮಗಾರಿ ಆರಂಭಿಸಲು ಮುಂದಾದ ವಿವಿ, ಈ ತಿಂಗಳ ಸಿಂಡಿಕೇಟ್ ಸಭೆಯಲ್ಲಿ ಅನುಮತಿ ಪಡೆಯಲು ಬಯಸಿದರೂ ಸಭೆ ಮುಂದೂಡಲ್ಪಟ್ಟಿದೆ.

    ನಾರಾಯಣಗುರು ಅಧ್ಯಯನ ಪೀಠದ ಬಗ್ಗೆ ಅಧಿವೇಶನದಲ್ಲಿ ಸರ್ಕಾರದ ಗಮನ ಸೆಳೆಯುತ್ತೇನೆ. ಶಾಸಕರ ಕ್ಷೇತ್ರಾಭಿವೃದ್ಧಿ ಬಾಕಿ ಅನುದಾನ ಬಿಡುಗಡೆಗೊಂಡರೆ ಪೀಠದ ಕಟ್ಟಡಕ್ಕೆ 5 ಲಕ್ಷ ರೂ. ನೀಡುತ್ತೇನೆ.
    -ಯು.ಟಿ.ಖಾದರ್, ಶಾಸಕ

    ರಾಜ್ಯಸಭಾ ಸದಸ್ಯ ಬಿ.ಕೆ.ಹರಿಪ್ರಸಾದ್ 50 ಲಕ್ಷ ರೂ. ಅನುದಾನದಲ್ಲಿ 35 ಲಕ್ಷ ರೂ. ಬಂದಿದ್ದು, ಮುಂದಿನ ತಿಂಗಳು ಕಾಮಗಾರಿ ಆರಂಭಗೊಳ್ಳಲಿದೆ. ಕಾಮಗಾರಿ ಮುಗಿಯಲು ಕನಿಷ್ಠ 3 ಕೋಟಿ ರೂ. ಅನುದಾನ ಬೇಕಿದೆ.
    -ಪ್ರೊ.ಪಿ.ಎಸ್.ಯಡಪಡಿತ್ತಾಯ, ಕುಲಪತಿ, ಮಂಗಳೂರು ವಿಶ್ವವಿದ್ಯಾಲಯ

    ನಾರಾಯಣ ಗುರುಗಳ ಅನುಯಾಯಿಗಳು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಕಟ್ಟಡ ನಿರ್ಮಾಣವಾದರೆ ಗುರುಗಳ ಬಗ್ಗೆ ಹೆಚ್ಚಿನ ಅಧ್ಯಯನ, ಸಂಶೋಧನೆ ಸಾಧ್ಯವಿದೆ.
    -ಮುದ್ದು ಮೂಡುಬೆಳ್ಳೆ, ನಿರ್ದೇಶಕ, ಬ್ರಹ್ಮಶ್ರೀ ನಾರಾಯಣ ಗುರು ಅಧ್ಯಯನ ಪೀಠ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts