More

    ಯುವ ಜನಾಂಗ ಕನ್ನಡದಿಂದ ದೂರವಾಗುತ್ತಿದ್ದಾರೆ: ಡಾ.ವೈ.ಎಂ.ಯಾಕೊಳ್ಳಿ

    ನರಗುಂದ: ಇಂದಿನ ಯುವ ಜನಾಂಗ ಕನ್ನಡದಿಂದ ದೂರವಾಗುತ್ತಿದ್ದಾರೆ. ಇದು ದುರಂತದ ಸಂಗತಿ‌ ಎಂದು ಸಾಹಿತಿ ಡಾ.ವೈ.ಎಂ.ಯಾಕೊಳ್ಳಿ ಹೇಳಿದರು.

    ಪಟ್ಟಣದ ಶ್ರೀಸಿದ್ದೇಶ್ವರ ಸರ್ಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯ ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರದಲ್ಲಿ ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ ದೊರೆಸ್ವಾಮಿ ವಿರಕ್ತಮಠ ಭೈರನಹಟ್ಟಿ ಹಾಗೂ ಕ.ಸಾ.ಪ ತಾಲೂಕಾ ಘಟಕ, ಶ.ಸಾ.ಪ ತಾಲೂಕ ಘಟಕದ ವತಿಯಿಂದ ಹಮ್ಮಿಕೊಂಡಿದ್ದ ಏಕೀಕರಣ ಯೋಧರ ಯಶೋಗಾಥೆ-೨ರ ಕಾರ್ಯಕ್ರಮದಲ್ಲಿ ಕರ್ನಾಟಕ ಏಕೀಕರಣ ಮತ್ತು ಕನ್ನಡ ಕಟ್ಟುವಲ್ಲಿ ಯುವಕರ ಪಾತ್ರದ ಕುರಿತು ಮಾತನಾಡಿದರು.

    ಕನ್ನಡ ಮಾದ್ಯಮದಲ್ಲಿ ಓದಿದವರಿಗೆ ನೌಕರಿ ಸಿಗುವುದಿಲ್ಲ ಎಂಬ ಭ್ರಮೆಯಿಂದ ಪಾಲಕರು ಮತ್ತು ವಿದ್ಯಾರ್ಥಿಗಳು ಹೊರಬರಬೇಕಾಗಿದೆ. ನಾಡಿನ ಮಠ-ಮಾನ್ಯಗಳು, ಸಂಘ ಸಂಸ್ಥೆಗಳು, ಶಾಲಾ-ಕಾಲೇಜುಗಳು, ವಿಶ್ವವಿದ್ಯಾಲಯಗಳು ಯುವ ಜನಾಂಗಕ್ಕೆ ನಾಡಿನ ವರ್ತಮಾನದ ಸಂಕಟಗಳನ್ನು ತಿಳಿಸುವ ಅನಿವಾರ್ಯತೆ ಸೃಷ್ಟಿಯಾಗಿದೆ ಎಂದರು.

    ಕರ್ನಾಟಕ ಏಕೀಕರಣಕ್ಕೆ ಗದಗ ಜಿಲ್ಲೆಯ ಪಾತ್ರ ಪ್ರಮುಖವಾಗಿದೆ. ಗದಗ ಏಕೀಕರಣ ಹೋರಾಟದ ಹೃದಯ ಭಾಗವಾಗಿತ್ತು. ಆದರೀಗ ಕನ್ನಡವನ್ನು ಉಳಿಸಿ, ಬೆಳೆಸಬೇಕಾದರೆ ಇಂದಿನ ಯುವ ಜನಾಂಗ ಸಮೃದ್ಧ ಕರ್ನಾಟಕದ ಇತಿಹಾಸವನ್ನರಿತು ಕನ್ನಡ ಕನ್ನಡತನವನ್ನು ಮೈಗೂಡಿಸಿಕೊಳ್ಳಬೇಕು ಎಂದು ಕರೆಕೊಟ್ಟರು. ಕರುನಾಡಿನಲ್ಲಿಯೇ ಕನ್ನಡ ಭಾಷೆ ಅತಂತ್ರದ ಸ್ಥಿತಿಯಲ್ಲಿದೆ. ಕರ್ನಾಟಕದ ಇತಿಹಾಸ ಚಾರಿತ್ರ್ಯಯುತವಾದ ಇತಿಹಾಸವಾಗಿದೆ. ಇದನ್ನು ಪ್ರತಿಯೊಬ್ಬ ಕನ್ನಡಿಗರೂ ಅರ್ಥಮಾಡಿಕೊಂಡು ಕನ್ನಡವನ್ನು ಉಳಿಸಿ ಬೆಳೆಸುವ ಪಣ ತೊಡಬೇಕು ಎಂದು ತಿಳಿಸಿದರು.

    ಸಾನಿದ್ಯವಹಿಸಿದ್ದ ಶಾಂತಲಿಂಗ ಶ್ರೀಗಳು ಮಾತನಾಡಿ, ಬಾಷೆಯ ನಿಜವಾದ ವಾರಸುದಾರರು ಯುವ ಸಮುದಾಯ. ಆದರೀಗ ಅವರಿಂದಲೇ ಕನ್ನಡ ಅಯೋಮಯವಾಗುವ ಸ್ಥಿತಿಗೆ ಬಂದಿರುವುದು ದುರ್ದೈವ. ಯುವ ಜನಾಂಗ ಕನ್ನಡವನ್ನು ಕಣ್ಣಿನಂತೆ ರಕ್ಷಸಿಬೇಕು. ಕರ್ನಾಟಕ ಏಕೀಕರಣ ಹೋರಾಟದಲ್ಲಿ ಅದ್ವೀತಿಯ ಪಾತ್ರ ವಹಿಸಿದ್ದ ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘವನ್ನು ಕಟ್ಟಿರುವ ೨೯ ವರ್ಷ ಹರೆಯದ ರಾ.ಹಾ.ದೇಶಪಾಂಡೆ ಅವರು ಯುವ ಸಮುದಾಯಕ್ಕೆ ಮಾದರಿ ಆಗಿದ್ದಾರೆ.

    ಕರ್ನಾಟಕ ಎಂಬದು ಕೇವಲ ಹೆಸರಲ್ಲ. ಅದು ಪ್ರತಿಯೊಬ್ಬ ಕನ್ನಡಿಗರ ಅಸ್ಮಿತೆ. ಕೇಂದ್ರ ಸರ್ಕಾರ ಪ್ರಾದೇಶಿಕ ಭಾಷೆಗಳ ಮೇಲೆ ಹಿಂದಿ ಬಾಷೆಯನ್ನು ಬಲವಂತವಾಗಿ ಹೇರುತ್ತಿದೆ. ಇದು ಖಂಡನೀಯ. ಜಗತ್ತಿನ ಯಾವುದೇ ಭಾಷೆಗಳು ಕಣ್ತೆರೆಯುವ ಮುನ್ನವೇ ಕನ್ನಡ ಭಾಷೆ ಉಚ್ರಾಯಸ್ಥಿತಿಯಲ್ಲಿತ್ತು. ಬಾಷೆ ಬಳಸಿದಷ್ಟು ಬೆಳೆಯುತ್ತದೆ. ಹೀಗಾಗಿ ಕನ್ನಡಿಗರಾದ ನಾವು ಕನ್ನಡವನ್ನು ಉಳಿಸಿ ಬೆಳೆಸಬೇಕಾಗಿರುವುದು ನಮ್ಮೆಲ್ಲರ ಆಧ್ಯಕರ್ತವ್ಯ ಎಂದು ತಿಳಿಸಿದರು.

    ಗದಗ ಜಿಲ್ಲಾ ಶಸಾಪ ಅಧ್ಯಕ್ಷ ಚನ್ನಬಸಪ್ಪ ಕಂಠಿ, ಪ್ರೊ ಆರ್.ಹೆಚ್.ತಿಗಡಿ ಮಾತನಾಡಿದರು. ವೇದಿಕೆ ಮೇಲೆ ಕ.ಸಾ.ಪ ಅಧ್ಯಕ್ಷ ಪ್ರೋ ಬಿ.ಸಿ.ಹನಮಂತಗೌಡ್ರ, ಹಿರಿಯ ಉಪನ್ಯಾಸಕ ಪ್ರೋ ಪಿ.ಎಸ್.ಅಣ್ಣಿಗೇರಿ, ಪ್ರಾಧ್ಯಾಪಕ ಎಸ್.ವ್ಹಿ.ಮನಗುಂಡಿ, ಎಚ್.ಎ.ಮುದಿಯಪ್ಪನವರ, ಬಿ.ಹೆಚ್.ಮಹಾದೇವಪ್ಪನವರ, ಎಮ್.ಎಸ್.ಶಿರಿಯಣ್ಣವರ ಉಪಸ್ಥಿತರಿದ್ದರು. ನೀಲಾಂಬಿಕಾ ಹೂಗಾರ ನಿರೂಪಿಸಿದರು. ಸಹಾಯಕ ಕನ್ನಡ ಪ್ರಾಧ್ಯಾಪಕಿ ಪವಿತ್ರಾ ಎಸ್ ಸ್ವಾಗತಿಸಿದರು. ಡಾ.ನಾಗರಾಜ ಸುರಳಿಕೇರಿ ವಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts