More

    ಆಪ್ತ ಸಲಹೆ: ಗುರಿಗಳು ಸಾಕಷ್ಟಿವೆ, ಓದಲು ಆಗುತ್ತಲೇ ಇಲ್ಲ, ಇದಕ್ಕೆ ಕಾರಣವೇನು? ಪರಿಹಾರವೇನು?

    ಆಪ್ತ ಸಲಹೆ: ಗುರಿಗಳು ಸಾಕಷ್ಟಿವೆ, ಓದಲು ಆಗುತ್ತಲೇ ಇಲ್ಲ, ಇದಕ್ಕೆ ಕಾರಣವೇನು? ಪರಿಹಾರವೇನು?

    ಪ್ರಶ್ನೆ : ನಾನು ವಿಜ್ಞಾನದ ವಿಷಯದಲ್ಲಿ ಪದವಿಯಲ್ಲಿ ಓದುತ್ತಿರುವ ವಿದ್ಯಾರ್ಥಿನಿ. 10ನೇ ತರಗತಿಯಲ್ಲಿ 95% ಅಂಕಗಳನ್ನು ತೆಗೆದಾಗ ಖುಷಿಯಾಗಿ, ಮುಂದೆ ವೈದ್ಯಕೀಯ ರಂಗಕ್ಕೆ ಹೋಗಬೇಕೆಂದು ಆಸೆಯಿಟ್ಟುಕೊಂಡು ಪಿಯುಸಿ ಓದಿದೆ. ಆದರೆ ಎರಡನೇ ಪಿಯುಸಿಯಲ್ಲಿ 86% ಅಷ್ಟೇ ಅಂಕ ತೆಗೆಯಲು ಸಾಧ್ಯವಾಗಿದ್ದು. ಡಾಕ್ಟರ್ ಆಗುವ ಕನಸು ಮುರುಟಿಯೇ ಹೋಯಿತು. ಆದರೂ ಛಲ ಬಿಡದೇ ವೈದ್ಯಕೀಯ ಕ್ಷೇತ್ರಕ್ಕೆ ಸಂಬಂಧಿಸಿದ ವಿಷಯಗಳನ್ನು ಆರಿಸಿಕೊಂಡು ವಿಜ್ಞಾನದ ಪದವಿಯನ್ನು ಮಾಡುತ್ತಿದ್ದೇನೆ.
    ಈಗಿನ ನನ್ನ ಸಮಸ್ಯೆ ಏನೆಂದರೆ, ನನಗೆ ರಾತ್ರಿ ಇದ್ದ ಮನಸ್ಥಿತಿ ಬೆಳಗ್ಗೆ ಇರುವುದಿಲ್ಲ. ರಾತ್ರಿಯೆಲ್ಲಾ ನನ್ನನ್ನು ನಾನು ಮೋಟಿವೇಷನ್ ಮಾಡಿಕೊಳ್ಳುತ್ತೇನೆ. ’ ನಾಳೆಯಿಂದ ಚೆನ್ನಾಗಿ ಓದಬೇಕು ’ ಅಂದುಕೊಳ್ಳುತ್ತೇನೆ. ಆದರೆ ಬೆಳಗ್ಗೆ ಏಳುವ ಹೊತ್ತಿಗೆ ಆ ಮನಸ್ಥಿತಿ ಬದಲಾಗಿಬಿಟ್ಟಿರುತ್ತದೆ. ಓದುವುದು ಸಾಧ್ಯವೇ ಆಗುವುದಿಲ್ಲ. ಸುಮ್ಮನೇ ಟಿ.ವಿ ನೋಡುವುದೋ ಅಥವಾ ಮತ್ತೇನಾದರೂ ಮಾಡುವುದೋ ಮಾಡಿ ಕಾಲ ಕಳೆದುಬಿಡುತ್ತೇನೆ. ಮತ್ತೆ ರಾತ್ರಿಯಾದಾಗ ಭಯ ಶುರುವಾಗುತ್ತದೆ. ಮತ್ತೆ ಮೋಟಿವೇಷನ್ ಮಾಡಿಕೊಳ್ಳುತ್ತೇನೆ. ಹೀಗೇ ಆಗುತ್ತಿದೆ.
    ನಮ್ಮ ಮನೆಯ ಸ್ಥಿತಿ ಅಷ್ಟೇನೂ ಚೆನ್ನಾಗಿಲ್ಲ. ನನ್ನ ಅಣ್ಣ ಯಾರದೋ ಮಾತು ಕೇಳಿ ಬಿಜಿನೆಸ್ ಮಾಡಲು ಹೋಗಿ ಮೈತುಂಬಾ ಸಾಲ ಮಾಡಿ ಎಲ್ಲಿಯೋ ತಲೆ ಮರೆಸಿಕೊಂಡಿದ್ದಾನೆ. ನನ್ನ ಅಪ್ಪ ಈ ಬಗ್ಗೆ ಏನೂ ಮಾತನಾಡುವುದಿಲ್ಲ. ಪಾಪ ಅಪ್ಪನನ್ನು ಸಾಲಗಾರರು ಕಾಡುತ್ತಾರೆ. ನಾನು ಓದುವುದಕ್ಕಾಗಿ ಬೇರೆ ಊರಿಗೆ ಬಂದು ಪಿಜಿಯಲ್ಲಿದ್ದೇನೆ. ನನಗೆ ಜೋರಾಗಿ ಓದಿದರೇ ತಲೆಗೆ ಹತ್ತುವುದು ಆದ್ದರಿಂದ ನನ್ನೊಬ್ಬಳಿಗೇ ಒಂದು ರೂಮನ್ನು ಪಡೆದಿದ್ದೇನೆ. ಆದರೆ ದಿನದಿನಕ್ಕೆ ನಾನು ಓದುತ್ತಿರುವುದು ಸಾಕಾಗುವುದಿಲ್ಲ ಮತ್ತು ನನಗೆ ಓದುವುದಕ್ಕೇ ಸಾಧ್ಯವಾಗುತ್ತಿಲ್ಲ ಎನ್ನುವ ಭಯ ಶುರುವಾಗಿದೆ.
    ನಾನು ಚೆನ್ನಾಗಿ ಓದಬೇಕು. ಬರೀ ಪರೀಕ್ಷೆಗೆ ಮಾತ್ರ ಓದುವುದಲ್ಲ, ನನ್ನ ಸಬ್ಜೆಕ್ಟ್ ನಲ್ಲಿ ಸರಿಯಾದ ಜ್ಞಾನವನ್ನೂ ಸಂಪಾದಿಸಬೇಕು. ಏಕೆಂದರೆ ನಾಳೆ ಕೆಲಸಕ್ಕಾಗಿ ಇಂಟರ್ ವ್ಯೂಗೆ ಹೋದರೆ ಅವರು ಕೇಳುವ ಪ್ರಶ್ನೆಗಳಿಗೆಲ್ಲಾ ಉತ್ತರಿಸಲು ನನ್ನಲ್ಲಿ ಸರಿಯಾದ ಮಾಹಿತಿಗಳು ಇರಬೇಕಲ್ಲವೇ? ನಾನು ಚೆನ್ನಾಗಿ ಓದಬೇಕು, ಒಳ್ಳೆಯ ಕೆಲಸವನ್ನು ಪಡೆಯ ಬೇಕು, ತುಂಬಾ ಸಂಪಾದಿಸಿ ತಂದೆಗೆ ಸಹಾಯ ಮಾಡಬೇಕು. ಎಷ್ಟೊಂದು ಗುರಿಗಳಿವೆ ಮೇಡಂ ನನಗೆ. ಆದರೆ ಓದುವುದೇ ಆಗುತ್ತಿಲ್ಲವಲ್ಲಾ? ಏನುಮಾಡಲಿ?

    ಉತ್ತರ:
    ನಿಮ್ಮ ಐದು ಪುಟಗಳ ಪತ್ರ ಓದಿ ನನಗೆ ನಿಮ್ಮ ಆತಂಕ ಅರ್ಥವಾಗಿದೆ. ನಿಮ್ಮ ಓದುವಿಕೆಗೆ ನಿಮ್ಮ ಮನೆಯ ಸ್ಥಿತಿಗತಿಗಳ ಚಿಂತನೆಗಳು ಪೂರಕ ಒತ್ತಡಗಳಾಗಿ ನಿಮ್ಮನ್ನು ಬಾಧಿಸುತ್ತಿವೆ. ನೀವಿನ್ನೂ ಪದವಿ ಓದುತ್ತಿರುವ ವಿದ್ಯಾರ್ಥಿನಿಯಾದ್ದರಿಂದ ನಿಮ್ಮ ವಯಸ್ಸು 20ರ ಒಳಗಿರಬಹುದು. ಈ ವಯಸ್ಸಿನಲ್ಲಿ ಮೆದುಳು ಇನ್ನೂ ಪೂರ್ಣರೀತಿಯಲ್ಲಿ ಪ್ರೌಢಾವಸ್ಥೆಗೆ ತಲುಪಿರುವುದಿಲ್ಲ.

    ಗುಂಪುಗುಂಪಾಗಿ ಸಮಸ್ಯೆಗಳು ಎದುರಾದಾಗ ಈ ರೀತಿ ವಿಚಲಿತರಾಗುವ ಸ್ಥಿತಿ ಉಂಟಾಗುತ್ತದೆ. ಆದರೂ ನೀವು 10ನೇ ಕ್ಲಾಸಿನಲ್ಲಿ ಮತ್ತು ಪಿಯುಸಿಯಲ್ಲಿ ತೆಗೆದುಕೊಂಡಿರುವ ಅಂಕಗಳನ್ನು ಗಮನಿಸಿದರೆ ನೀವು ತುಂಬಾ ಜಾಣೆ ಮತ್ತು ನಿಮ್ಮ ಮೆದುಳು ಗ್ರಹಿಕೆ ಮತ್ತು ನೆನಪಿಡುವಿಕೆಯಲ್ಲಿ ಚುರುಕಾಗಿದೆಯೆಂದೇ ಭಾವಿಸಬೇಕು. ನನಗೆ ನೀವು ನಿಮ್ಮ ಇಡೀ ಪತ್ರದಲ್ಲಿ ಪದೇಪದೇ ಬರೆದಿರುವ ” ನಾನು ಚೆನ್ನಾಗಿ ಓದಬೇಕು, ಒಳ್ಳೆಯ ಕೆಲಸಗಳಿಸಬೇಕು, ತುಂಬಾ ಹಣ ಗಳಿಸಬೇಕು ” ಎನ್ನುವ ನಿಮ್ಮ ಮಾತುಗಳು ಸ್ವಲ್ಪ ಪೂರ್ವ ಚಿಂತನೆಯ ಕೊರತೆಯಲ್ಲಿ ಹುಟ್ಟುತ್ತಿರುವುದರಿಂದ ನಿಮಗೆ ಒತ್ತಡ ಹೆಚ್ಚಾಗುತ್ತಿದೆ ಎನಿಸುತ್ತದೆ. ನಾವು ಸಾಧಾರಣವಾಗಿ ಪರೀಕ್ಷೆಯನ್ನು ಎದುರಿಸಲು ಸಜ್ಜಾಗುತ್ತಿರುವ ವಿದ್ಯಾರ್ಥಿಗಳಿಗೆ ಒತ್ತಡ ಕಡಿಮೆಯಾಗಲು ಕೆಲವು ಸಲಹೆಗಳನ್ನು ಕೊಡುತ್ತೇನೆ. 1) ಹತ್ತಿರದ ಮೆಟ್ಟಿಲನ್ನು ಗಮನಿಸಿ ( ಅಂದರೆ ಯಾವ ಪರೀಕ್ಷೆಯನ್ನು ಎದುರಿಸಿತ್ತಿದ್ದೀರೋ ಅದನ್ನು ಮಾತ್ರ ಗಮನಿಸುವುದು )

    2) ಅದಕ್ಕೆ ಮಾತ್ರ ಸಿದ್ಧತೆ ಮಾಡಿಕೊಳ್ಳಿ. ( ಅಂದರೆ ನೀವು ಒಂದನೇ ಮೆಟ್ಟಿಲನ್ನು ಹತ್ತುವ ಪ್ರಯತ್ನ ಮಾಡುವಾಗ ನಿಮ್ಮ ಗಮನ ಅದರ ಮೇಲೇ ಇರಬೇಕು. ಅದು ಬಿಟ್ಟು ಹತ್ತನೇ ಮೆಟ್ಟಿಲನ್ನು ನೋಡುತ್ತಾ ” ಓ ನಾನಿನ್ನೂ ಇಲ್ಲೇ ಇದ್ದೇನೆ, ಅಲ್ಲಿಗೆ ತಲುಪುವುದು ಯಾವಾಗ ” ಎಂದುಕೊಂಡರೆ ನಿಮಗೆ ಒಂದನೇ ಮೆಟ್ಟಿಲೇ ಸರಿಯಾಗಿ ಕಾಣಿಸುವುದಿಲ್ಲ )

    3) ಒಂದನೇ ಮೆಟ್ಟಿಲನ್ನು ಹತ್ತಲು ಯಾವೆಲ್ಲಾ ಶ್ರಮ ಬೇಕು ಮನನ ಮಾಡಿಕೊಳ್ಳಿ ( ಕಾಲು ಎತ್ತಬೇಕು, ಅಲ್ಲಿ ನೀರಿಲ್ಲವಾ ಗಮನಿಸ ಬೇಕು, ಮೆಟ್ಟಿಲು ಎತ್ತರದಲ್ಲಿದ್ದರೆ ಪಕ್ಕದಲ್ಲಿ ಹಿಡಿದು ಹತ್ತಲು ಕಂಬಿಯಿದೆಯಾ ನೋಡ ಬೇಕು ಇತ್ಯಾದಿ ) ಅಂದರೆ ನಿಮ್ಮ ಹತ್ತಿರ ಪರೀಕ್ಷೆಯಲ್ಲಿ ಯಾವಯಾವ ಸಬ್ಜೆಕ್ಟ್ ಇವೆ, ಅದರ ಪಾಠ ತರಗತಿಯಲ್ಲಿ ನಾನು ಚೆನ್ನಾಗಿ ಆಲಿಸಿ ಮನನ ಮಾಡಿಕೊಂಡಿದ್ದೀನಾ? ಯಾವ ಪ್ರಶ್ನೆಗೆ ಖಚಿತವಾಗಿ ಉತ್ತರಿಸಬಲ್ಲೆ? ಇತ್ಯಾದಿ ಪ್ರಶ್ನೆಗಳನ್ನು ನಿಮಗೆ ನೀವೇ ಹಾಕಿಕೊಂಡು ಉತ್ತರಿಸಲು ಪ್ರಯತ್ನಿಸಿ.

    4) ನಿಮ್ಮ ಎಲ್ಲಾ ಸಿದ್ಧತೆಗಳೂ ನಿಮಗೆ ತೃಪ್ತಿ ತಂದಿವೆಯೇ ಗಮನಿಸಿ. ಇಲ್ಲವಾದರೆ ಯಾವ ವಿಭಾಗದಲ್ಲಿ ಇಲ್ಲ ಎನ್ನುವುದನ್ನು ದೃಢಪಡಿಸಿಕೊಂಡು ಅದರತ್ತ ನಿಮ್ಮ ಪೂರ್ತಿ ಗಮನವನ್ನು ಕೊಡಿ. ಇಂಥಾ ಸಿದ್ಧತೆಗಳೆಲ್ಲಾ ಪರೀಕ್ಷೆಯನ್ನು ಎದುರಿಸಲು ಆತ್ಮವಿಶ್ವಾಸವನ್ನು ಕೊಡುತ್ತದೆ. ಬರೀ ಚೆನ್ನಾಗಿ ಓದಬೇಕು, ಚೆನ್ನಾಗಿ ಓದಬೇಕು ಅಂತ ಜಪ ಮಾಡುತ್ತಿದ್ದರೆ, ಈ ಚೆನ್ನಾಗಿ ಓದುವುದು ಎಂದರೇನು ಎನ್ನುವ ಪ್ರಶ್ನೆಗೂ ನಿಮಗೇ ಉತ್ತರ ಗೊತ್ತಿರಬೇಕಲ್ಲವೇ? ದುರಂತವೆಂದರೆ ಇಂದಿನ ನಮ್ಮ ಯುವ ಪೀಳಿಗೆಯಲ್ಲಿ ಅನೇಕರಿಗೆ ” ಈ ಚೆನ್ನಾಗಿ ಓದುವುದು ಎಂದರೇನು ” ಎನ್ನುವ ಪ್ರಶ್ನೆಗೆ ಉತ್ತರವೇ ಗೊತ್ತಿಲ್ಲ.

    ಒಬ್ಬೊಬ್ಬರ ತಿಳಿವಳಿಕೆಗಳು ಒಂದೊಂದು ರೀತಿಯಲ್ಲಿವೆ.
    1) ದಿನಕ್ಕೆ ಇಷ್ಟು ಗಂಟೆಗಳ ಕಾಲ ಓದಿದರೆ ಚೆನ್ನಾಗಿ ಓದುವುದು
    2) ಎಲ್ಲಾ ಪ್ರಶ್ನೆಗಳನ್ನೂ ಮತ್ತು ಅದರ ಉತ್ತರಗಳನ್ನೂ ಉರುಹೊಡೆದು ಬಿಟ್ಟರೆ ಚೆನ್ನಾಗಿ ಓದಿದಂತೆ.
    3) ಓದಿದ್ದೆಲ್ಲವೂ ನೆನಪಿನಲ್ಲಿಟ್ಟುಕೊಂಡರೆ ಚೆನ್ನಾಗಿ ಓದಿದಂತೆ.
    4) ಬೆಳಗಿನ ಜಾವ ಓದಿದರೆ ಚೆನ್ನಾಗಿ ಓದಿದಂತೆ. ಆದರೆ ಗಮನಿಸಿ, ಇವು ಯಾವುವೂ ವೈಜ್ಞಾನಿಕವಾಗಿ ಸತ್ಯವಲ್ಲ.

    ಹೀಗೆಯೇ ಕೆಲವರು ಪರೀಕ್ಷೆಗಳನ್ನು ಪಾಸು ಮಾಡಿರಬಹುದಾದರೂ ಇದು ’ಚೆನ್ನಾದ ಓದು’ ಎನಿಸಿಕೊಳ್ಳುವುದಿಲ್ಲ. ಚೆನ್ನಾದ ಓದು ಎಂದರೆ
    1) ಸಬ್ಜೆಕ್ಟ್ ಗಳ ಬಗ್ಗೆ ಗೌರವವಿರಬೇಕು. 2) ಆ ವಿಷಯಗಳು ನಮ್ಮ ಜೀವನಕ್ಕೆ ಎಷ್ಟು ಹತ್ತಿರವಾಗಿದೆ ಎನ್ನುವುದನ್ನು ಗಮನಿಸ ಬೇಕು. ತರಗತಿಯಲ್ಲಿ ಗಮನವಿಟ್ಟು ಪಾಠ ಕೇಳಿದವರು ಮತ್ತೊಮ್ಮೆ ಪುಸ್ತಕ ಓದದೇ ಒಳ್ಳೆಯ ಅಂಕಗಳಿಸಿದವರನ್ನು, ಜೀವನದಲ್ಲಿ ಯಶಸ್ವಿಯಾದವರನ್ನು ಇತಿಹಾಸದಲ್ಲಿ ಬೇಕಾದಷ್ಟು ಜನರನ್ನು ಕಾಣಬಹುದು. ಯಾವುದೇ ವಿಷಯದ ಬಗ್ಗೆ ಆಸೆ ಮತ್ತು ಮನಸ್ಸುಗಳನ್ನು ತೊಡಗಿಸಿದರೆ, ಅದೇ ನಮ್ಮನ್ನು ತನ್ನ ವಿಸ್ತಾರದ ಒಳಗೆ ಕೈಹಿಡಿದು ಕರೆದುಕೊಂಡು ಹೋಗುತ್ತದೆ. ಮತ್ತು ಎಲ್ಲವೂ ನಮಗೆ ಗೋಚರವಾಗುವ ಹಾಗೆ ಮಾಡುತ್ತದೆ.

    ಇನ್ನು ನಿಮ್ಮ ಸಮಸ್ಯೆಯನ್ನು ಮರು ಚಿಂತನೆ ಮಾಡೋಣ. ನಿಮ್ಮ ಎಲ್ಲಾ ಸಮಸ್ಯೆಗೂ ನಿಮ್ಮ ಮೂಲ ಚಿಂತನಕ್ರಮವೇ ಸರಿಯಾಗಿಲ್ಲದಿರುವುದೇ ಮುಖ್ಯ ಕಾರಣ. ” ನಾನು ಚೆನ್ನಾಗಿ ಓದಬೇಕು ” ಎನ್ನುವ ಮಾತಿಗೆ ನೀವು ಕೊಡುವ ಕಾರಣಗಳು, ಪರೀಕ್ಷೆಯಲ್ಲಿ ಉತ್ತಮ ಅಂಕಗಳು ಬರಬೇಕು, ಇಂಟರ್ವ್ಯೂ ನಲ್ಲಿ ಅವರು ಕೇಳಿದ ಎಲ್ಲಾ ಪ್ರಶ್ನೆಗಳಿಗೂ ತಕ್ಕ ಉತ್ತರ ಕೊಡಬೇಕು, ಉದ್ಯೋಗಗಳಿಸ ಬೇಕು, ತುಂಬಾ ಸಂಬಳ ಬರಬೇಕು, ಅಪ್ಪನ ಕಷ್ಟಕ್ಕೆ ನೆರವಾಗಬೇಕು, ಒಳ್ಳೆಯ ಜೀವನ ನಡೆಸ ಬೇಕು. ಇವು ಯಾವುದೂ ತಪ್ಪಲ್ಲ. ಸದುದ್ದೇಶಗಳೇ. ಆದರೆ ಚೆನ್ನಾಗಿ ಓದುವುದೊಂದನ್ನೇ ಇದಕ್ಕೆ ಲಿಂಕ್ ಮಾಡಿ, ಎಲ್ಲವೂ ನನ್ನ ಕೈಲೇ ಇದೆ ಎಂದು ಭಾವಿಸುತ್ತೀರಲ್ಲ? ಮತ್ತು ಈಗ ಓದದೇ ಇದ್ದರೆ ಇವು ಯಾವುವೂ ಆಗುವುದೇ ಇಲ್ಲ ಎಂದೂ ಭಾವಿಸುತ್ತೀರಲ್ಲ? ಇವೆರಡೂ ಅಡಿಪಾಯವಿಲ್ಲದೇ ಕಟ್ಟಡ ಕಟ್ಟಿದಂತೆ ಅಭದ್ರ ಚಿಂತನೆಗಳು. ನಾವು ಇಂಥಾ ಅಸಹಜ ಚಿಂತನೆಗಳನ್ನು ನಮ್ಮ ಮನಸ್ಸಿನ ಮೇಲೆ ಹೇರಿಕೊಂಡಷ್ಟೂ ನಮ್ಮದೇ ಮನಸ್ಸು ನಮ್ಮ ವಿರುದ್ಧವೇ ಬಂಡೆದ್ದು, ಈಗ ನೀವು ಹೇಳುತ್ತಿದ್ದೀರಲ್ಲ, ರಾತ್ರಿಯಿದ್ದ ಮನಸ್ಥಿತಿ ಹಗಲಿನಲ್ಲಿಲ್ಲ ಅಂತ ಹಾಗೆ ಸತ್ಯಾಗ್ರಹ ಹೂಡುತ್ತದೆ. ಇದಕ್ಕೆ ಕಾರಣ ನಾವು ನಮ್ಮ ಮನಸ್ಸಿಗೆ ಕೊಟ್ಟುಕೊಳ್ಳುತ್ತಿರುವ ನಿರ್ದೇಶನವೇ ಕಾರಣವಾಗಿರುತ್ತದೆ.

    ” ನೀನು ಚೆನ್ನಾಗಿ ಓದು, ಒಳ್ಳೆಅಂಕ ಬರಬೇಕು, ಇಂಟರ್ ವ್ಯೂ ಎದುರಿಸಬೇಕು, ಕೆಲಸ ಸಿಗಬೇಕು, ಒಳ್ಳೆ ಸಂಬಳ ಬರಬೇಕು, ಸಾಲ ತೀರಿಸಬೇಕು, ಅದಕ್ಕಾಗಿ ಚೆನ್ನಾಗಿ ಓದು ” . ಹೀಗೆ ತಪ್ಪುತಪ್ಪಾದ ಮತ್ತು ಒತ್ತಡದ ನಿರ್ದೇಶನ ಕೊಟ್ಟುಕೊಳ್ಳುವ ನಡವಳಿಕೆಗೆ ಮನಶಾಸ್ತ್ರದಲ್ಲಿ ’ Anchoring Bias Affects ‘ ಎನ್ನುತ್ತಾರೆ. ನಮಗೆ ನಾವೇ ಕೊಟ್ಟುಕೊಳ್ಳುವ ನಿರ್ದೇಶನಗಳಲ್ಲಿ ತಪ್ಪುಗಳು ಮತ್ತು ಅಸಾಧ್ಯವಾದ ಸಂಗತಿಗಳಿದ್ದರೆ ಮೆದುಳು ವಿಚಲಿತವಾಗಿ ನಮ್ಮ ನಿರ್ದೆಶನದ ವಿರುದ್ಧವಾಗಿ ವರ್ತಿಸಲು ಪ್ರಾರಂಭಿಸುತ್ತದೆ. ಅದಕ್ಕೇ ನಿಮಗೆ ರಾತ್ರಿ ಓದುವ ನಿರ್ಧಾರ ಮಾಡಿದರೂ ಬೆಳಗ್ಗೆ ಓದಲಾಗುವುದಿಲ್ಲ.
    ಈಗ ನೀವು ಏನೂ ಮಾಡಬೇಡಿ. ಮನೆಯ ಸಂಕಷ್ಟಗಳು, ಇಂಟರ್ ವ್ಯೂ, ಉದ್ಯೋಗ, ಸಂಬಳ ಎಲ್ಲವನ್ನೂ ತಲೆಯಲ್ಲಿ ಪಕ್ಕಕ್ಕೆ ಸರಿಸಿರಿ. ಸದ್ಯಕ್ಕೆ ನೀವು ಎದುರಿಸಬೇಕಾಗಿರುವ ಪರೀಕ್ಷೆ ಮತ್ತು ಅದರ ಸಬ್ಜೆಕ್ಟ್ ಮಾತ್ರ ಗಮನಿಸಿ. ಓದುವುದು ಕಷ್ಟವೆನಿಸಿದರೆ ಪುಸ್ತಕ ನೋಡಿಕೊಂಡೇ ಬರೆಯುವುದಕ್ಕೆ ಪ್ರಯತ್ನಿಸಿ. ಹತ್ತುಸಲ ಓದುವುದೂ ಒಂದೇ ಒಮ್ಮೆ ಬರೆಯುವುದೂ ಒಂದೇ. ಸಣ್ಣ ಗುರಿಗಳು ಎಂದಿಗೂ ಯಶಸ್ವಿಯೇ ಆಗುತ್ತವೆ. ಶುಭವಾಗಲಿ.

    ನಿಮ್ಮಲ್ಲೂ ಇಂಥ ಸಮಸ್ಯೆಗಳು ಇವೆಯೆ? ಮಾನಸಿಕವಾಗಿ ತೊಂದರೆಗೆ ಒಳಗಾಗಿರುವಿರಾ? ಹಾಗಿದ್ದರೆ ನಿಮ್ಮ ಪ್ರಶ್ನೆಗೆ ಡಾ.ಶಾಂತಾ ನಾಗರಾಜ್‌ ಅವರು ಉತ್ತರಿಸುತ್ತಾರೆ. ನಿಮ್ಮ ಪ್ರಶ್ನೆಗಳನ್ನು ಕಳುಹಿಸಬೇಕಾದ ಇ-ಮೇಲ್‌ ಐಡಿ: [email protected] / [email protected]

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts