More

    ದರದಲ್ಲೂ, ಗುಣಮಟ್ಟದಲ್ಲೂ ನಂದಿನಿಗಿಲ್ಲ ಸಾಟಿ; ಬೇರೆ ಹಾಲು ಖರೀದಿಸಿದರೆ ಗ್ರಾಹಕರಿಗೆ ಹೊರೆ

    ಹರೀಶ್ ಬೇಲೂರು

    ಬೆಂಗಳೂರು: ಲಕ್ಷಾಂತರ ರೈತರ ಬದುಕು ಹಸನಾಗಿಸುತ್ತಿರುವ ಕರ್ನಾಟಕ ಹಾಲು ಮಹಾಮಂಡಳಿ (ಕೆಎಂಎಫ್) ಬೇರೆ ರಾಜ್ಯಗಳ ಹಾಲಿಗೆ ಹೋಲಿಸಿದರೆ ಕಡಿಮೆ ದರದಲ್ಲೇ ನಂದಿನಿ ಹಾಲು ಮಾರಾಟ ಮಾಡುತ್ತಿದೆ. ಜತೆಗೆ, ನಂದಿನಿ ಹಾಲು ಎಲ್ಲೆಡೆ ಗುಣಮಟ್ಟದಲ್ಲೂ ಹೆಸರುವಾಸಿಯಾಗಿದೆ.

    ರಾಜ್ಯದಲ್ಲಿ ಟೋನ್ಡ್ ನಂದಿನಿ ಹಾಲು ಪ್ರತಿ ಲೀ.ಗೆ 39 ರೂ.ಗೆ ದೊರೆಯುತ್ತಿದೆ. ಇದೇ ಮಾದರಿಯ ಆಂಧ್ರಪ್ರದೇಶದ ವಿಜಯ ಬ್ರಾ್ಯಂಡ್, ಕೇರಳದ ಮಿಲ್ಮಾ, ದೆಹಲಿಯ ಮದರ್ ಡೇರಿ ಹಾಗೂ ಗುಜರಾತ್​ನ ಅಮೂಲ್ ಹಾಲಿನ ಬೆಲೆ 10-15 ರೂ.ವರೆಗೆ ಹೆಚ್ಚಿಗೆಯಿದೆ. ಮಾರುಕಟ್ಟೆಯಲ್ಲಿ 2ನೇ ಸ್ಥಾನ: ಒಟ್ಟಾರೆ ಮಾರುಕಟ್ಟೆಯಲ್ಲಿ ಅಮೂಲ್ ನಂತರ ಕೆಎಂಎಫ್ 2ನೇ ಸ್ಥಾನದಲ್ಲಿದೆ. ಕೆಎಂಎಫ್ ವ್ಯಾಪ್ತಿಯಲ್ಲಿ 14 ಹಾಲು ಒಕ್ಕೂಟಗಳಿವೆ.

    ರಾಜ್ಯದಲ್ಲಿ ಅಂದಾಜು 10 ಲಕ್ಷ ರೈತರಿಂದ 14,700 ಹಾಲು ಉತ್ಪಾದಕರ ಸಹಕಾರ ಸಂಘಗಳು, ಪ್ರತಿನಿತ್ಯ ಹಾಲು ಶೇಖರಣೆ ಮಾಡುತ್ತಿವೆ. 25 ಲಕ್ಷ ಹಾಲು ಉತ್ಪಾದಕ ಸದಸ್ಯರಿದ್ದಾರೆ. ಪ್ರತಿವರ್ಷ 16 ಸಾವಿರ ಕೋಟಿ ರೂ. ವಹಿವಾಟು ನಡೆಯುತ್ತಿದೆ. ಹೈನುಗಾರಿಕೆಗೆ ಪ್ರೋತ್ಸಾಹ ನೀಡುತ್ತಿರುವ ಕೆಎಂಎಫ್, ಗ್ರಾಮೀಣ ಪ್ರದೇಶದಲ್ಲಿ ಉದ್ಯೋಗ ಸೃಷ್ಟಿಸಿ ರೈತರ ಆರ್ಥಿಕ ಮತ್ತು ಸಾಮಾಜಿಕ ಭದ್ರತೆಗೆ ಸಹಕಾರಿಯಾಗಿದೆ. ವಿಶೇಷವಾಗಿ ಗ್ರಾಮೀಣ ಭಾಗದ ಮಹಿಳೆಯರು ಹೈನುಗಾರಿಕೆಯಲ್ಲಿ ತೊಡಗಿಸಿಕೊಂಡು ಆರ್ಥಿಕವಾಗಿ ಸಬಲವಾಗುತ್ತಿದ್ದಾರೆ. ರಾಜ್ಯದಲ್ಲಿ ಪ್ರತಿನಿತ್ಯ ಹಾಲು ಪೂರೈಸುವ ಸದಸ್ಯರಲ್ಲಿ ಶೇ.80ಕ್ಕೂ ಹೆಚ್ಚು ಸಣ್ಣ ರೈತರು ಇದನ್ನೇ ಜೀವನೋಪಾಯಕ್ಕೆ ಅವಲಂಬಿಸಿದ್ದಾರೆ. ಕೆಎಂಎಫ್ ಹಾಲಿನಿಂದ ಹಿಡಿದು ಐಸ್ಕ್ರೀಮ್ರೆಗೆ ಹಲವು ಉತ್ಪನ್ನಗಳು ದೇಶ-ವಿದೇಶಗಳಲ್ಲಿ ಬೇಡಿಕೆ ಹೊಂದಿವೆ. ಕಳೆದ ವರ್ಷಕ್ಕೆ ತುಲನೆ ಮಾಡಿದ್ದಲ್ಲಿ ಈ ವರ್ಷ ಕೆಎಂಎಫ್ ಉತ್ಪನ್ನಗಳ ಮಾರಾಟ ಶೇ.20ರಿಂದ ಶೇ.22 ವರೆಗೆ ಏರಿಕೆಯಾಗಿದೆ. 2027ರ ಹೊತ್ತಿಗೆ ಅಂದಾಜು 1.30 ಕೋಟಿ ಲೀಟರ್ ಹಾಲಿನ ಉತ್ಪಾದನೆ ಗುರಿ ಹಾಕಿಕೊಳ್ಳಲಾಗಿದೆ.

    ಖಾಸಗಿಯವರ ಪ್ರಾಬಲ್ಯ

    ರಾಜ್ಯದಲ್ಲಿ ಖಾಸಗಿ ಸಂಸ್ಥೆಗಳು ಪ್ರತಿನಿತ್ಯ 12.29 ಲಕ್ಷ ಲೀಟರ್ ಹಾಲು ಶೇಖರಣೆ ಮಾಡುತ್ತಿವೆ. ವರ್ಷದಿಂದ ವರ್ಷಕ್ಕೆ ಈ ಪ್ರಮಾಣ ಹೆಚ್ಚಾಗುತ್ತಿದೆ. ಇತ್ತೀಚಿನ ದಿನಗಳಲ್ಲಿ ಕೆಎಂಎಫ್ ಶೇಖರಿಸುತ್ತಿದ್ದ ಹಾಲು ಕುಸಿತವಾಗಿದೆ. ಕಳೆದ ಜುಲೈ ಮತ್ತು ಆಗಸ್ಟ್ ನಲ್ಲಿ ಸುರಿದ ಭಾರಿ ಮಳೆಯಿಂದ ಮೇವಿನ ಕೊರತೆ, ರಾಸುಗಳಲ್ಲಿ ಕಾಣಿಸಿಕೊಂಡ ಚರ್ಮಗಂಟು ರೋಗ, ಹಾಲು ಉತ್ಪಾದನೆ ವೆಚ್ಚ ಹೆಚ್ಚಳದಿಂದ ಹೈನುಗಾರಿಕೆ ಲಾಭದಾಯಕ ಆಗುತ್ತಿಲ್ಲವೆಂದು ಹಸುಗಳ ಮಾರಾಟ, ತಾಂತ್ರಿಕ ಸೌಲಭ್ಯಗಳ ಕೊರತೆ, ಹೆಣ್ಣು ಕರುಗಳ ಸಂತತಿ ವೃದ್ಧಿಗೆ ನಿರ್ಲಕ್ಷ್ಯ ಹಾಗೂ ಕೃತಕ ಗರ್ಭಧಾರಣೆ ತಳಿ ಅಭಿವೃದ್ಧಿಗೆ ಉದಾಸೀನ ಇತರ ಕಾರಣಗಳಿಂದ ಹಾಲು ಉತ್ಪಾದನೆ 96 ಲಕ್ಷ ಲೀಟರ್​ಗಳಿಂದ 76 ಲಕ್ಷ ಲೀಟರ್​ಗೆ ಕುಸಿತವಾಗಿದೆ.

     ನಂದಿನಿ ನಮ್ಮದು. ನಮ್ಮ ರೈತರ ರಕ್ಷಣೆ ಎಲ್ಲರ ಜವಾಬ್ದಾರಿ. ಗುಜರಾತ್​ನ ಅಮೂಲ್ ಕೂಡ ರೈತರದೇ. ಆದರೆ, ನಮ್ಮನ್ನು ಹಿಂದಕ್ಕೆ ತಳ್ಳಿ ಅವರು ಮುಂದೆ ಹೋಗಲು ಹೊರಟಿರುವುದು ಖಂಡನೀಯ.

    | ಡಿ.ಕೆ. ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷ

    ಕೆಎಂಎಫ್ ಆಪೋಶನಕ್ಕೆ ಕೇಂದ್ರ ಬಿಜೆಪಿ ಸರ್ಕಾರ ಮೂರನೇ ಸಂಚು ರೂಪಿಸಿದೆ. 2008ರಲ್ಲಿಯೇ ನಂದಿನಿಯನ್ನು ಮುಗಿಸಲು ಹೊರಟಿತ್ತು. ಆಗಲೇ ರಾಜ್ಯದ ಬಿಜೆಪಿ ಸರ್ಕಾರ ಅಮೂಲ್ ವಿಸ್ತರಣೆಗೆ ಬೆಂಬಲಿಸಿತ್ತು. ಕೆಎಂಎಫ್​ನ ಅಂದಿನ ಅಧ್ಯಕ್ಷ ಎಚ್.ಡಿ. ರೇವಣ್ಣ ರಾಜ್ಯದಲ್ಲಿ ಅಮೂುಲ್ ಹಾಲು ಮಾರಾಟಕ್ಕೆ ಅವಕಾಶ ಕೊಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದರು. ರಾಜ್ಯದ ಒಂದೊಂದೇ ಉದ್ಯಮವನ್ನು ಮುಗಿಸಲು ಬಿಜೆಪಿ ಹೊಂಚು ಹಾಕಿರುವುದು ಸ್ಪಷ್ಟ.

    | ಎಚ್.ಡಿ. ಕುಮಾರಸ್ವಾಮಿ ಮಾಜಿ ಸಿಎಂ

    ರಾಜ್ಯದಲ್ಲಿ ಅಮೂಲ್ ಮತ್ತು ಕೆಎಂಎಫ್ ವಿಲೀನಗೊಳ್ಳುವುದಿಲ್ಲ ವೆಂದು ಈಗಾಗಲೆ ಸ್ಪಷ್ಟಪಡಿಸಲಾಗಿದೆ. ಆದರೂ ಚುನಾವಣೆ ಸಂದರ್ಭದಲ್ಲಿ ಲಾಭ ಪಡೆಯಲು ಜೆಡಿಎಸ್ ಮತ್ತು ಕಾಂಗ್ರೇಸ್ ಅಪಪ್ರಚಾರ ಮಾಡುತ್ತಿವೆ. ಗೋಹತ್ಯೆ ಪರ ಮಾತನಾಡುವವರು ನಂದಿನಿ ಉಳಿಸುವ ಮಾತನಾಡುತ್ತಿರುವುದು ಹಾಸ್ಯಾಸ್ಪದ.

    | ಪ್ರತಾಪ ಸಿಂಹ ಸಂಸದ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts