More

    ಸಾವರ್ಕರ್​ರಿಗೆ ಸಿಗುತ್ತಿರುವ ಈ ಗೌರವಕ್ಕೆ ನಮೋ ನಮಃ!

    ಸಾವರ್ಕರ್​ರಿಗೆ ಸಿಗುತ್ತಿರುವ ಈ ಗೌರವಕ್ಕೆ ನಮೋ ನಮಃ!ಅವರನ್ನು ದೇಶದ್ರೋಹಿ ಎಂದರು, ಹೇಡಿ ಎಂದರು, ಬ್ರಿಟಿಷರ ಏಜೆಂಟು ಎಂದರು, ಕೊಲೆಗಾರ ಎಂದರು, ಢೋಂಗಿ ಹಿಂದುತ್ವವಾದಿ ಎಂದರು, ಉಗ್ರವಾದಿಗಳೊಂದಿಗೆ ಸಮೀಕರಿಸಿದರು. ಇಷ್ಟೆಲ್ಲ ಆದರೂ ದೇಶಭಕ್ತರ ಹೃದಯದಿಂದ ಅವರನ್ನು ಒಂದಿಂಚೂ ಬದಿಗೆ ಸರಿಸಲಾಗಲಿಲ್ಲ. ಸಾವರ್ಕರ್, ಹೆಸರೇ ರೋಮಾಂಚನವನ್ನುಂಟು ಮಾಡುವಂಥದ್ದು. ವಿರೋಧಿಗಳು ಇಷ್ಟೆಲ್ಲ ತಿಪ್ಪರಲಾಗ ಹೊಡೆಯುವುದಕ್ಕೂ, ಮೋದಿ ಅರೆದು ಮೆಣಸಿನಕಾಯಿ ತಿಕ್ಕುವಂತೆ ಅವರ ಜಯಂತಿಯಂದೇ ಹೊಸ ಸಂಸತ್ ಭವನವನ್ನು ದೇಶಕ್ಕೆ ಸಮರ್ಪಿಸುತ್ತಿರುವುದು ವಿಶೇಷವಲ್ಲದೆ ಮತ್ತೇನು? ಕಾಂಗ್ರೆಸ್ಸು ಈ ಸಭೆಯನ್ನು ಬಾಯ್ಕಾಟ್ ಮಾಡುತ್ತಿರುವುದಕ್ಕೆ ಮೋದಿ ಎಂಬ ಒಂದು ಸಂಗತಿಯಲ್ಲದೆ, ಸಾವರ್ಕರ್ ಎಂಬ ಮತ್ತೊಂದೂ ಕೂಡಿಕೊಳ್ಳುತ್ತಿದೆ ಎಂಬುದು ದೇಶ ನೆನಪಿಡುವ ಸಂಗತಿ.

    ಸಾವರ್ಕರ್ ಅವರನ್ನು ಜನರ ಸ್ಮತಿಪಟಲದಿಂದ ದೂರ ಸರಿಸಲು ಕಾಂಗ್ರೆಸ್ಸು ಮಾಡಿದ ಪ್ರಯತ್ನ ಒಂದೆರಡಲ್ಲ. ಅವರ ಭಾಷಣಗಳನ್ನು ರೇಡಿಯೊದಿಂದ ದೂರವಿಟ್ಟಿತು. ಅವರು ಬರೆದ ಗೀತೆಗಳನ್ನು ರೇಡಿಯೊದಲ್ಲಿ ಹಾಡುವಂತಿರಲಿಲ್ಲ. ಪಠ್ಯಪುಸ್ತಕದಲ್ಲಿ ಅವರ ಬಗ್ಗೆ ವಿಶೇಷವಾದ ವಿವರಣೆ ಇಲ್ಲ. ಕೊನೆಗೆ ಸಾವರ್ಕರ್ ಎಂಬ ವ್ಯಕ್ತಿ ಗಣಿಸಬೇಕಾದಂಥವರೇ ಅಲ್ಲ ಎಂದು ಮಾಡಿಬಿಟ್ಟರು. ಒಂದೇ ಮಾತಿನಲ್ಲಿ ಹೇಳಬೇಕೆಂದರೆ ಇವರ ಇಷ್ಟು ಪ್ರಯತ್ನದ ನಂತರವೂ ಸಾವರ್ಕರರಿಗೆ ಸಮನಾದ ಕಾಂಗ್ರೆಸ್ಸಿನ ಮತ್ತೊಬ್ಬ ನಾಯಕನನ್ನು ತೋರಿಸುವುದು ಇವರಿಗೆ ಸಾಧ್ಯವಾಗಲಿಲ್ಲ. ಸಾವರ್ಕರರದು ಬಹುಮುಖ ವ್ಯಕ್ತಿತ್ವ. ಅವರು ಲೇಖಕರೂ ಹೌದು, ಇತಿಹಾಸಕಾರರೂ ಕೂಡ. ಭಾಷೆಗೆ ಸಂಬಂಧಪಟ್ಟಂತೆ ಸಾಕಷ್ಟು ಕೆಲಸ ಮಾಡಿದ್ದಾರೆ. ಕ್ರಾಂತಿಕಾರ್ಯದ ವಿಚಾರಕ್ಕೆ ಬಂದರೆ ಬ್ರಿಟಿಷರ ಪಾಲಿಗೆ ಸಿಂಹಸ್ವಪ್ನ. ಧಾರ್ವಿುಕ ಸುಧಾರಣೆಯ ವಿಚಾರದಲ್ಲಿ ಸಂಪ್ರದಾಯಬದ್ಧ ಹಿಂದೂಗಳು ಮುಟ್ಟಿ ನೋಡಿಕೊಳ್ಳುವಂತೆ ಕಾರ್ಯಗೈದವರು. ಹಿಂದೂ ಸಂಘಟನೆಯ ವಿಚಾರದಲ್ಲಂತೂ ಅವರು ಅಗ್ರಣಿಯೇ. ಇಂದಿಗೂ ಹಿಂದುತ್ವವಾದಿಗಳು ಸಾವರ್ಕರರನ್ನು ಮರೆತು ಮುಂದಡಿಯಿಡುವುದಿಲ್ಲ. ಅಷ್ಟರಮಟ್ಟಿಗೆ ವಿಸ್ತಾರವಾಗಿ ಹಬ್ಬಿದವರು ಅವರು. ಇವೆಲ್ಲವೂ ಏಕಾಕಿಯಾದುದಲ್ಲ. ಇದನ್ನು ಸಾಧಿಸುವ ಮಾರ್ಗವನ್ನು ಅವರು ಕ್ರಮಿಸಿದ ರೀತಿ ಬಲು ಚೇತೋಹಾರಿಯಾದದ್ದು. ಕಿಶೋರಾವಸ್ಥೆಯಲ್ಲಿಯೇ ತಿಲಕರೊಂದಿಗೆ ಸಂಪರ್ಕ ಸಾಧಿಸಿ ರಾಷ್ಟ್ರೋನ್ನತಿಯ ಮಾರ್ಗದಲ್ಲಿ ಸ್ಥಿರವಾದ ಹೆಜ್ಜೆಗಳನ್ನೂರಿದವರು. ಗಾಂಧೀಜಿ ಸ್ವಾತಂತ್ರ್ಯದ ಮುನ್ನೆಲೆಗೆ ಬರುವ ಒಂದೂವರೆ ದಶಕಗಳಿಗಿಂತಲೂ ಮುನ್ನವೇ ಸ್ವದೇಶೀ ವಸ್ತುಗಳ ಪ್ರಚಾರ, ವಿದೇಶೀ ವಸ್ತುಗಳ ಬಹಿಷ್ಕಾರದ ಬಲುದೊಡ್ಡ ಕಲ್ಪನೆಗೆ ಮೂರ್ತರೂಪ ಕೊಟ್ಟವರು. ಬ್ರಿಟಿಷರನ್ನು ಭಾರತದಿಂದೋಡಿಸಲು ಕಠಿಣ ಮಾರ್ಗವನ್ನೇ ಅನುಸರಿಸಬೇಕೆಂದು ವಿದೇಶದಿಂದ ಶಸ್ತ್ರಾಸ್ತ್ರಗಳ ಆಮದಿಗೆ ಯೌವ್ವನಾವಸ್ಥೆಯಲ್ಲೇ ಪ್ರಯತ್ನಪಟ್ಟವರು. ಇಷ್ಟೂ ಸಾಲದೆಂಬಂತೆ ವಿದೇಶಕ್ಕೆ ಹೋಗಿ ಅಲ್ಲಿನ ಭಾರತೀಯ ತರುಣರಲ್ಲಿ ರಾಷ್ಟ್ರದ ಹಿತರಕ್ಷಣೆಯ ಕನಸುಗಳನ್ನು ಬಿತ್ತಿದವರು. ಅಲ್ಲಿಯೇ ಕುಳಿತು ಬಾಂಬ್ ತಯಾರಿಕೆಯ ದಿಸೆಯಲ್ಲಿ ಮಹತ್ವದ ಹೆಜ್ಜೆ ಇಟ್ಟಿದ್ದಲ್ಲದೆ, ಭಾರತೀಯರಿಗೆ ಕಿರುಕುಳ ಕೊಡುತ್ತಿದ್ದ ಕರ್ಜನ್ ವೈಲಿಯ ಹತ್ಯೆಯನ್ನೂ ಮಾಡಿಸಿದರು. ಸಾವರ್ಕರ್​ರಿಲ್ಲದೇ ಹೋಗಿದ್ದರೆ ಇಂದಿಗೂ 1857ರ ಸ್ವಾತಂತ್ರ್ಯ ಸಂಗ್ರಾಮ ಸಿಪಾಯಿ ದಂಗೆಯಾಗಿ ಅಂದಿನ ಎಲ್ಲ ಹೋರಾಟಗಾರರೂ ಅವಮಾನಿತರಾಗಿಯೇ ಉಳಿದುಬಿಡುತ್ತಿದ್ದರು. ಪಠ್ಯಪುಸ್ತಕಗಳನ್ನು ಮನಸೋ ಇಚ್ಛೆ ತಿರುಚುವ ರೂಢಿಯಿರುವ ಕಾಂಗ್ರೆಸ್ಸಿಗೆ ಇದನ್ನು ಹೇಳಿ ಅರ್ಥೈಸಿಕೊಳ್ಳುವಂತೆ ಮಾಡುವುದು ಬಲುಕಷ್ಟ. ತಮ್ಮ ಬರಹಗಳಿಂದ ಆ ಕಾಲಘಟ್ಟದ ತರುಣರಲ್ಲಿ ಅವರು ಉಂಟು ಮಾಡಿದ ಸ್ವಾತಂತ್ರೊ್ಯೕದ್ದೀಪನ ಲೇಖನದ ಚೌಕಟ್ಟಿಗೆ ಮುಗಿಯುವಂಥದ್ದಲ್ಲ. ಸುಮ್ಮನೆ ಹೇಳಬೇಕೆಂದರೆ 1857ರ ಸಂಗ್ರಾಮದ ಅವರ ಕೃತಿ ಮೊದಲ ಬಾರಿ ಬಲು ಪ್ರಯಾಸದಿಂದ ಮುದ್ರಣಗೊಂಡರೂ ಎರಡನೇ, ಮೂರನೇ ಮುದ್ರಣಗಳೆಲ್ಲ ಕ್ರಾಂತಿಕಾರಿಗಳ ಪಾಲಿಗೆ ಪ್ರೇರಣೆಯಷ್ಟೇ ಅಲ್ಲ, ಮಾರಾಟದಿಂದ ಬಂದ ಹಣದ ಲಾಭವನ್ನೂ ಮಾಡಿಕೊಡುತ್ತಿತ್ತು. ಈ ಲಾಭವನ್ನು ಪಡೆದವರಲ್ಲಿ ಭಗತ್​ಸಿಂಗರಷ್ಟೇ ಅಲ್ಲ, ಸುಭಾಷ್​ಚಂದ್ರ ಬೋಸರೂ ಇದ್ದರು. ಐಎನ್​ಎಯ ಸೈನಿಕರು ಓದಲೇಬೇಕಾಗಿದ್ದ ಕೃತಿಗಳಲ್ಲಿ ಇದೂ ಒಂದಾಗಿತ್ತು ಎನ್ನುವುದೇ ಸಾವರ್ಕರರ ಬರಹದ ತಾಕತ್ತನ್ನು ತೋರಿಸುತ್ತದೆ. ಇನ್ನು ಅವರ ಮಾತಿನ ವೈಖರಿ ಎಷ್ಟು ಚಮತ್ಕಾರಿಕವಾದ್ದೆಂದರೆ 1905ರಲ್ಲಿ ಅವರು ಮಾಡಿದ ಭಾಷಣದ ಕೆಲವು ಸಾಲುಗಳಿಗೆ ಬ್ರಿಟಿಷ್ ಸರ್ಕಾರ 1910ರಲ್ಲಿ ಅವರನ್ನು ಬಂಧಿಸಿ, ಅವರಿಗೆ 25 ವರ್ಷಗಳ ಜೀವಾವಧಿ ಶಿಕ್ಷೆ ನೀಡಿತ್ತು. ಕಾಂಗ್ರೆಸ್ ಮಿತ್ರರು ನೆಹರೂ ಬದುಕಿನಲ್ಲಿ ಇಂಥದ್ದೊಂದು ಘಟನೆಯನ್ನಾದರೂ ತೋರಿಸಿಬಿಡಲಿ ನೋಡೋಣ. ಜೀವನದಲ್ಲಿ ಅವರು ಮಾಡಿದ ಒಂದೇ ಒಂದು ತಪ್ಪೆಂದರೆ ಬ್ರಿಟಿಷರು ಭಡಕಾಯಿಸುತ್ತಿದ್ದ ಮಾತುಗಳಿಗೆ ಬಲಿಯಾದದ್ದು. ಜತೆಗಾರರನ್ನು ಪ್ರಾಣಾರ್ಪಣೆಗೆ ಪ್ರೇರೇಪಿಸಿ ಈತ ತಲೆಮರೆಸಿಕೊಂಡಿದ್ದಾನೆ ಎನ್ನುವ ಯೋಜನಾಬದ್ಧ ಚರ್ಚೆಗಳೆದುರು ಮಣಿದ ಸಾವರ್ಕರ್, ಮೇಡಂ ಕಾಮಾರ ಆತಿಥ್ಯದಲ್ಲಿ ಪ್ಯಾರಿಸ್​ನ ಸುಖದ ವಾತಾವರಣವನ್ನು ಬಿಟ್ಟು ಲಂಡನ್ನಿನ ಕಾರ್ಯಕ್ಷೇತ್ರಕ್ಕೆ ಮತ್ತೆ ಮರಳಿದರು. ಅದೇ ಮುಳುವಾಗಿ ಅವರು ಬ್ರಿಟಿಷರ ವಶದಲ್ಲಿ ಭಾರತಕ್ಕೆ ಮರಳುವಂತಾಯ್ತು. ಇವಿಷ್ಟೂ ಅವರು ಮಾಡಿದ ಚಟುವಟಿಕೆಗಳ ಒಂದು ಪುಟ್ಟ ಝುಲಕ್. ಹಾಗಂತ ಬದುಕು ಮುಗಿಯಿತೆಂದು ಭಾವಿಸಬೇಡಿ. ಇಷ್ಟು ಮಾಡುವಲ್ಲಿ ಆತ ಅನುಭವಿಸಿದ ಯಾತನೆ ಏನು ಎನ್ನುವುದನ್ನು ಅವಕಾಶ ಸಿಕ್ಕಾಗಲೆಲ್ಲ ಥಾಯ್ಲೆಂಡಿನಲ್ಲಿ ರಜೆಯನ್ನು ಆನಂದಿಸಲು ಹೋಗುವ ರಾಹುಲ್​ನಂಥವರಿಗೆ ಗೊತ್ತಾಗುವುದು ಬಹಳ ಕಷ್ಟ! ವಿದೇಶದ ನಾಲ್ಕೇ ವರ್ಷಗಳ ಅವಧಿಯಲ್ಲಿ ಸಾವರ್ಕರರು ತಮ್ಮ ಬದುಕಿನ ಬಹುಪಾಲನ್ನು ಕಳೆದುಕೊಂಡುಬಿಟ್ಟಿದ್ದರು, ನಾಲ್ಕು ವರ್ಷದ ಮಗ ಪ್ರಭಾಕರನನ್ನೂ ಕೂಡ! ಮರಳಿ ಬಂದ ಈ ಮಹಾವೀರನ ವಿಚಾರಣೆ ನಡೆದು ಆತನಿಗೆ ಎರಡೆರಡು ಜೀವಾವಧಿ ಶಿಕ್ಷೆ ಕೊಡಲಾಯ್ತು. ನೆಹರೂ ಹೆಸರು ಹೇಳಲೂ ಹೇಸಿಗೆಯಾಗುತ್ತದೆ. ಅಂಡಮಾನಿನ ಸೆಲ್ಯುಲಾರ್ ಜೈಲಿನಲ್ಲಿ ಯಾತನಾಮಯ ಬದುಕಿಗೆ ತನ್ನ ತೆರೆದುಕೊಂಡ ಸಾವರ್ಕರರಂತಹ ವ್ಯಕ್ತಿಯನ್ನು ಜೀವಂತವಾಗಿ ಉಳಿಸುವುದಿರಲಿ, ಅವರು ಜೀವತೇಯ್ದ ಆ ಜೈಲನ್ನೂ ಒಡೆದುಹಾಕಿ ಆಸ್ಪತ್ರೆ ಕಟ್ಟಿಸುವ ಯೋಜನೆ ರೂಪಿಸಿಕೊಂಡಿದ್ದರು. ದೇಶಭಕ್ತರ ಅಬ್ಬರದ ಕೂಗಿನ ಸದ್ದಿಗೆ ಬೆಚ್ಚಿಬಿದ್ದು ಯೋಜನೆಯನ್ನು ಕೈಬಿಡಬೇಕಾಗಿ ಬಂತು.

    ಕಾಲಾಪಾನಿ, ಹೆಸರಿಗೆ ತಕ್ಕಂತೆ ಕಡುಕಷ್ಟದ ಜೈಲು. ಅಲ್ಲಿನ ಹನ್ನೊಂದು ವರ್ಷ ಸಾವರ್ಕರರ ಪಾಲಿಗಷ್ಟೇ ಅಲ್ಲ, ಪ್ರತಿಯೊಬ್ಬ ಕ್ರಾಂತಿಕಾರಿಯ ಪಾಲಿಗೂ ಜೀವನ್ಮರಣಗಳ ಹೋರಾಟ. ಬೌದ್ಧಿಕವಾಗಿ ಚುರುಕಾಗಿದ್ದ ಸಾವರ್ಕರರಂಥವರಿಗಂತೂ ಅದು ದಿನನಿತ್ಯದ ಸಾವು. ಅವರಿಗೀಗ ಬ್ರಿಟಿಷರ ಕೈಗೆ ಅನವಶ್ಯಕವಾಗಿ ಸಿಕ್ಕುಹಾಕಿಕೊಂಡಿದುದರ ತಪ್ಪಿನ ಅರಿವಾಗುತ್ತಿತ್ತು. ಆದಷ್ಟು ಬೇಗ ಕಾಲಾಪಾನಿಯನ್ನು ಬಿಟ್ಟು ಮತ್ತೊಮ್ಮೆ ಸ್ವಾತಂತ್ರ್ಯ ಸಂಗ್ರಾಮದ ನೊಗವನ್ನು ಹೊರುವ ಅಪರಿಮಿತ ಬಯಕೆ ಅವರಿಗಿತ್ತು. ಹೀಗಾಗಿಯೇ ಭಿನ್ನ-ಭಿನ್ನ ಮಾರ್ಗಗಳನ್ನು ಹುಡುಕಲಾರಂಭಿಸಿದರು. ತಪ್ಪಿಸಿಕೊಂಡು ಹೋಗುವ ತಯಾರಿಯೂ ಆಗಿತ್ತು. ಆದರೆ, ಕಾಲಾಪಾನಿ ಎಂತಹ ಪ್ರದೇಶವೆಂದರೆ ತಪ್ಪಿಸಿಕೊಂಡರೂ ಬ್ರಿಟಿಷರ ಕೈಗೆ ಸಿಕ್ಕುಹಾಕಿಕೊಳ್ಳುವುದು ಬಿಟ್ಟು ಬೇರೆ ಮಾರ್ಗವೇ ಇರಲಿಲ್ಲ. ಅನೇಕ ಬಾರಿ ಜೈಲರ್​ಗಳು ಆಗಾಗ ಬಂದು ಇವರ ಕೋಣೆಯನ್ನು ಪರೀಕ್ಷಿಸುತ್ತಾ, ಇವರು ಮಾಡಿಕೊಂಡಿರುವ ತಯಾರಿಯ ಕುರಿತಂತೆ ಅನುಮಾನ ವ್ಯಕ್ತಪಡಿಸುತ್ತಿದ್ದರು. ಹೀಗಾಗಿಯೇ ಸಾವರ್ಕರರು ಕ್ಷಮಾಪಣಾ ಪತ್ರವನ್ನು ಬರೆದು ಮೊದಲು ಇಲ್ಲಿಂದ ಕಳಚಿಕೊಳ್ಳಬೇಕೆಂಬ ಧಾವಂತಕ್ಕೆ ಬಿದ್ದರು. ಆದರೆ, ಪ್ರತಿ ಬಾರಿ ಕ್ಷಮಾಪಣಾ ಪತ್ರ ಬರೆದಾಗಲೂ ಬ್ರಿಟಿಷರು ಅದನ್ನು ಮೂಲೆಗೆಸೆಯುತ್ತಿದ್ದರೆ ಹೊರತು ಎಂದಿಗೂ ಪುರಸ್ಕರಿಸಲಿಲ್ಲ. ಸಾವರ್ಕರ್ ಎಂದರೆ ಅವರ ಪಾಲಿಗೆ ಅಷ್ಟು ಡೇಂಜರ್. ಅವರು ಬರೆದದ್ದು ಒಂದೆರಡಲ್ಲ, ಬರೋಬ್ಬರಿ ಆರು ಕ್ಷಮಾಪಣಾ ಪತ್ರ. ಪ್ರತಿ ಕ್ಷಮಾಪಣಾ ಪತ್ರವೂ ಒಂದು ಅದ್ಭುತವಾದ ಕೃತಿಯೇ ಸರಿ. ಅವರ ಮೊದಲ ಕ್ಷಮಾಪಣಾ ಪತ್ರವನ್ನು ನೋಡಿ ಸರ್ಕಾರದ ಆದೇಶದಂತೆ ಅಂಡಮಾನಿಗೆ ಹೋದ ಕ್ರೆಡಾಕ್ ಈತನನ್ನು ಯಾವ ಕಾರಣಕ್ಕೂ ಬಿಡಬಾರದೆಂದೇ ತಾಕೀತು ಮಾಡಿದ. ಇದಕ್ಕೆ ವಿಪರೀತವಾಗಿ ಗಾಂಧಿ-ನೆಹರೂರವರನ್ನು ಶಿಕ್ಷೆಯ ನಡುವಲ್ಲೇ ಬಿಟ್ಟು ಕಳಿಸುತ್ತಿದ್ದ ಬ್ರಿಟಿಷರು ಅವರಿಂದ ಯಾವ ಅಪಾಯವೂ ಇಲ್ಲ ಎನ್ನುವುದನ್ನು ಸ್ಪಷ್ಟವಾಗಿ ಒಪ್ಪಿಕೊಂಡಿದ್ದರು. ಕೊನೆಗೂ ಸಾವರ್ಕರರು ಹೊರಬಂದದ್ದು ಜಾಗತಿಕ ಮಟ್ಟದಲ್ಲಾದ ಅನೇಕ ಬದಲಾವಣೆಗಳಿಂದಲೇ ಹೊರತು ಕ್ಷಮಾಪಣಾ ಪತ್ರಗಳ ಕಾರ್ಯದಿಂದಲ್ಲ. ಬಿಡಿ, ಇವಿಷ್ಟನ್ನೂ ಅರ್ಥೈಸಿಕೊಳ್ಳುವ ತಾಕತ್ತು ಕಾಂಗ್ರೆಸ್ಸಿಗರಿಗಿದ್ದಿದ್ದರೇ ಅವರು ಈ ದೇಶವನ್ನು ಈ ಮಟ್ಟಿಗೆ ವಿರೋಧಿಸುವ ಹಂತಕ್ಕೆ ತಲುಪುತ್ತಿರಲಿಲ್ಲ.

    ಸಾವರ್ಕರರ ನಿಜವಾದ ಬದುಕು ಆರಂಭವಾಗುವುದೇ ಕಾಲಾಪಾನಿಯಿಂದ ಹೊರಬಂದ ಮೇಲೆ. ಹಿಂದೂ ಧರ್ಮಕ್ಕೆ ಅಂಟಿರುವ ಅಸ್ಪಶ್ಯತೆಯ ಅಭಿಶಾಪವನ್ನು ದೂರಗೊಳಿಸಲು ಅವರು ಮಾಡಿದ್ದು ಒಂದೆರಡು ಪ್ರಯತ್ನವಲ್ಲ. ಮಂದಿರವೊಂದಕ್ಕೆ ಅಸ್ಪಶ್ಯರಿಗೆ ಪ್ರವೇಶವಿಲ್ಲವೆಂದಾದಾಗ ಮೇಲ್ವರ್ಗದ ಜನರೊಂದಿಗೆ ಬಡಿದಾಡಿದ ಚಿತ್ಪಾವನ ಬ್ರಾಹ್ಮಣನೀತ. ಅವರು ಸುಲಭಕ್ಕೆ ಬಗ್ಗಲಾರರು ಎಂದು ಗೊತ್ತಾದಾಗ ತಾನೇ ಮಂದಿರವೊಂದನ್ನು ಕಟ್ಟಿಸಿ ಮುಕ್ತ ಪ್ರವೇಶಕ್ಕೆ ಕ್ರಾಂತಿಕಾರಿ ಹೆಜ್ಜೆಯನ್ನಿರಿಸಿದ. ಅವರೇ ಕಟ್ಟಿಸಿದ ಹೊಟೆಲ್​ನಲ್ಲಿ ಅಡುಗೆ ಮಾಡುವವ ಕೆಳಜಾತಿಯವನಾದರೆ, ಅದನ್ನು ತಂದು ಬಡಿಸುವವ ಕೂಡ ಅಂಥದ್ದೇ ಜಾತಿಗೆ ಸೇರಿದವನಾಗಿರುತ್ತಿದ್ದ. ತಥಾಕಥಿತ ಮೇಲ್ಜಾತಿಯವರು ಸಾವರ್ಕರರ ಭೇಟಿಗೆ ಅಲ್ಲಿಗೇ ಬರಬೇಕಾಗುತ್ತಿತ್ತು ಮತ್ತು ಅವರೊಂದಿಗೆ ತಿಂಡಿ ಮೆಲ್ಲುತ್ತಲೇ ಮಾತನಾಡಬೇಕಾಗುತ್ತಿತ್ತು. ಅಂದಿನ ದಿನಗಳಲ್ಲಿ ಈ ಬದಲಾವಣೆ ಸಾಮಾನ್ಯವಾದ್ದಾಗಿರಲಿಲ್ಲ. ಸಾವರ್ಕರರು ಅದನ್ನು ಸಾಧಿಸಿದ್ದರು. ಒಂದು ಹಂತದಲ್ಲಂತೂ ಸಾವರ್ಕರರ ಈ ಚಟುವಟಿಕೆಗಳು ಬರಿ ಬಾಯ್ಮಾತಿನ ಸಂಗತಿಯೋ ಪತ್ರಿಕೆಯ ಲೇಖನವೋ ಆಗಿರದೇ ಬದಲಾವಣೆ ತರುವ ಮಹತ್ವದ ವಿಚಾರಧಾರೆಯಾಗಿಬಿಟ್ಟಿತ್ತು. ಅಷ್ಟೇ ಆಗಿದಿದ್ದರೆ ಕಾಂಗ್ರೆಸ್ಸು ತಲೆಕೆಡಿಸಿಕೊಳ್ಳುತ್ತಿರಲಿಲ್ಲ. ಕಾಂಗ್ರೆಸ್ಸಿನ ಮುಸ್ಲಿಂ ತುಷ್ಟೀಕರಣದ ವಿರುದ್ಧ ದನಿ ಎತ್ತಿದ ಸಾವರ್ಕರ್ ಹಿಂದೂಗಳನ್ನು ಒಗ್ಗೂಡಿಸಲಾರಂಭಿಸಿದರು. ಪತರಗುಟ್ಟಿದ ಕಾಂಗ್ರೆಸ್ಸು ಪಟೇಲರನ್ನು ಕಠೋರ ಹಿಂದುತ್ವವಾದಿಯಾಗಿ ಬಿಂಬಿಸಿ ಜನರನ್ನು ಸಾವರ್ಕರರಿಂದ ತಮ್ಮತ್ತ ಸೆಳೆಯುವ ತಂತ್ರಗಾರಿಕೆ ರೂಪಿಸಿಕೊಳ್ಳಬೇಕಾಯ್ತು. ಮುಲಾಜಿಲ್ಲದೇ ಮಾತನಾಡುತ್ತಿದ್ದ ಸಾವರ್ಕರರು ಕಾಂಗ್ರೆಸ್ಸಿಗರಿಗೆ ತಲೆನೋವಾಗಿಬಿಟ್ಟಿದ್ದರು. ಈ ಕಾರಣಕ್ಕೇ ಗಾಂಧಿ ಹತ್ಯೆಯಾದಾಗ ಗೋಡ್ಸೆ ಒಂದೆರಡು ಬಾರಿ ಸಾವರ್ಕರರೊಂದಿಗೆ ಮಾತನಾಡಿದ್ದ ಎಂಬುದರ ಜಾಡನ್ನು ಹಿಡಿದು ಗಾಂಧಿ ಹತ್ಯೆಯ ಆರೋಪವನ್ನು ಅವರ ತಲೆಗೇ ಕಟ್ಟಿಬಿಟ್ಟರು. ಒಬ್ಬ ಶ್ರೇಷ್ಠ ಸೇನಾನಿಗೆ ಇದಕ್ಕಿಂತ ಅವಮಾನ ಮತ್ತೊಂದಿರಲು ಸಾಧ್ಯವೇನು? ಆದರೆ ಆ ಜೀವ ಎದೆಗುಂದಲಿಲ್ಲ. ಹಠ ಹಿಡಿದು ಮಾಡಬೇಕಾದ್ದನ್ನು ಮಾಡುತ್ತಲೇ ಹೋಯ್ತು. ಏಕೆ ಗೊತ್ತೇ? ಅವರ ಗುರಿ ಭಾರತವನ್ನು ಮಜಬೂತುಗೊಳಿಸುವುದೇ ಆಗಿತ್ತು.

    ಸಾವರ್ಕರರು ನಮಗೆ ಕಲಿಸುವ ಪಾಠ ಅದೇ. ಜತೆಗಾರರು ಅವಮಾನ ಮಾಡುತ್ತಾರೆ, ಅವಗಣನೆ ಮಾಡುತ್ತಾರೆ, ನಿಮ್ಮ ಬೆನ್ನಿಗೆ ತಿವಿಯುವ ಪ್ರಯತ್ನ ಮಾಡುತ್ತಾರೆ, ಆಗೆಲ್ಲ ನೀವು ಮಂಕಾದರೆ ಎದುರಾಳಿ ಪಡೆ ಗೆದ್ದೇಬಿಡುತ್ತದೆ. ರಾಷ್ಟ್ರಹಿತಕ್ಕೆ ಬಲವಾಗಿ ನಿಲ್ಲಬೇಕಾದ್ದು ಅಗತ್ಯ. ಸಾವರ್ಕರರು ಎಲ್ಲ ಅವಮಾನಗಳನ್ನು ಸಹಿಸಿಯೂ ಗುರಿಯೆಡೆಗೆ ಏಕಮನಸ್ಕರಾಗಿ ನಡೆದರು. ಅದರ ಪರಿಣಾಮ ಇಂದು ಸ್ವಾತಂತ್ರ್ಯದ ಈ ಅನುಭೂತಿ ನಮಗಾಗುತ್ತಿದೆ. ಕಾಂಗ್ರೆಸ್ಸಿಗರ ಓಟಕ್ಕೆ ಸಾವರ್ಕರರಂಥವರು ತಡೆಯೊಡ್ಡುವ ಪ್ರಯತ್ನ ಮಾಡದೇ ಹೋಗಿರುತ್ತಿದ್ದರೆ ಇಂದು ಕಂಡ-ಕಂಡಲ್ಲಿ ಪಾಕಿಸ್ತಾನವಿರುತ್ತಿತ್ತು ಮತ್ತು ಭಾರತದ ಸ್ಥಿತಿಯೂ ಪಾಕಿಸ್ತಾನದಂತೆ ಆಗಿಬಿಟ್ಟಿರುತ್ತಿತ್ತು. ಇಷ್ಟು ವರ್ಷಗಳ ನಂತರ ಸಾವರ್ಕರ್​ರ ಕನಸನ್ನು ನನಸು ಮಾಡಬಲ್ಲ ವಾತಾವರಣ ಮತ್ತೆ ರೂಪುಗೊಂಡಿದೆ. ಯಾವ ವ್ಯಕ್ತಿಯನ್ನು ದೇಶದ್ರೋಹಿ ಎಂದು ಕಾಂಗ್ರೆಸ್ಸಿಗರು ಅವಮಾನಗೊಳಿಸಿದ್ದರೋ ಅದೇ ವ್ಯಕ್ತಿಯ ಜನ್ಮದಿನದಂದು ಪ್ರಜಾಪ್ರಭುತ್ವದ ದೇಗುಲ ಅನಾವರಣಗೊಳ್ಳುತ್ತಿರುವುದು ನಿಜಕ್ಕೂ ಸಾಂಕೇತಿಕ. ಸ್ವಾತಂತ್ರ್ಯ ದೊರಕಿ 75 ವರ್ಷಗಳ ನಂತರ ಈ ಪುಣ್ಯಾತ್ಮನಿಗೆ ಸಿಗುತ್ತಿರುವ ಈ ಗೌರವಕ್ಕೆ ನಮೋ ನಮಃ ಎನ್ನದೇ ಬೇರೆ ದಾರಿಯಿಲ್ಲ!

    (ಲೇಖಕರು ಖ್ಯಾತ ವಾಗ್ಮಿ ಹಾಗೂ ಚಿಂತಕರು)

    ಶಿಕ್ಷಣ ಕ್ಷೇತ್ರದ ಪ್ರಗತಿಗೆ ಸರ್ಕಾರ ಆದ್ಯತೆ; ವಿಜಯವಾಣಿ-ದಿಗ್ವಿಜಯ ನ್ಯೂಸ್ ‘ಎಜುಕೇಷನ್ ಎಕ್ಸ್‌ಪೋ’ನಲ್ಲಿ ಸಚಿವ ರಾಮಲಿಂಗಾರೆಡ್ಡಿ ಹೇಳಿಕೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts