More

  ಚಾಲುಕ್ಯರ ನಾಡಲ್ಲಿ ನಮೋ ಮೇನಿಯಾ..! – ಹರಿದು ಬಂದ ಜನಸಾಗರ

  ಬಾಗಲಕೋಟೆ/ಬಾದಾಮಿ: ವಿಧಾನಸಭೆ ಚುನಾವಣೆ ಪ್ರಚಾರಕ್ಕಾಗಿ ಶನಿವಾರ ಚಾಲುಕ್ಯರ ನಾಡಿಗೆ ಲಗ್ಗೆ ಹಾಕಿದ್ದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಹತ್ತಿರದಿಂದ ಕಣ್ತುಂಬಿಕೊಳ್ಳಲು ಜನಸಾಗರವೇ ಹರಿದು ಬಂದಿತ್ತು.

  ಬಾದಾಮಿ- ಬನಶಂಕರಿ ಮಧ್ಯದಲ್ಲಿ ಬನಶಂಕರಿ ಲೇಔಟ್ ಹಿಂಭಾಗದಲ್ಲಿ 33 ಎಕರೆ ವಿಶಾಲ ಜಮೀನಿನಲ್ಲಿ ನಡೆದ ಸ್ತ್ರೀಶಕ್ತಿ ಸಮಾವೇಶದಲ್ಲಿ ಬಾಗಲಕೋಟೆ ಜಿಲ್ಲೆಯ ಐದು ಹಾಗೂ ಗದಗ ಜಿಲ್ಲೆಯ ಎರಡು ಕ್ಷೇತ್ರಗಳನ್ನು ಒಳಗೊಂಡಂತೆ ಬಿಜೆಪಿ ಅಭ್ಯರ್ಥಿಗಳ ಪರವಾಗಿ ಮೋದಿ ಅವರು ಭರ್ಜರಿ ಮತ ಶಿಕಾರಿ ನಡೆಸಿದರು.

  people stay at modi speech at badami
  ಬಾದಾಮಿಯಲ್ಲಿ ನಡೆದ ಸಮಾವೇಶದಲ್ಲಿ ಭಾಗವಹಿಸಿದ್ದ ಜನಸ್ತೋಮ.

  ನರೇಂದ್ರ ಮೋದಿ ಅವರು ಮೊದಲ ಭಾರಿಗೆ ಬಾದಾಮಿಗೆ ಆಗಮಿಸಿದ್ದರಿಂದ ಈ ಭಾಗದ ಜನರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರು. ವಯಸ್ಸಿನ ವಯೋಮಿತಿ ಇಲ್ಲದೆ ಪುಟಾಣಿ ಮಕ್ಕಳಿಂದ ಹಿಡಿದ ವೃದ್ಧರವರೆಗೂ ಜನರು ರಣಬಿಸಿಲಿಗೆ ಸೆಡ್ಡು ಹೊಡೆದು ಕಿ.ಮೀ. ಗಟ್ಟಲೆ ನಡೆದುಕೊಂಡು ಸಮಾವೇಶದಲ್ಲಿ ಸಂಗಮಗೊಂಡಿದ್ದರು.

  ಇದನ್ನೂ ಓದಿ : ಬಿಜೆಪಿ ಪರ ಅಲೆಯಲ್ಲ, ಸುನಾಮಿಯೇ ಇದೆ! – ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ

  ಮಧ್ಯಾಹ್ನ 3.20 ನಿಮಿಷಕ್ಕೆ ಹೆಲಿಪ್ಯಾಡ್‌ಗೆ ಆಗಮಿಸಿ ಮೋದಿ ಅವರು ವೇದಿಕೆಗೆ ಆಗಮಿಸುತ್ತಿದ್ದಂತೆ ಜನೋತ್ಸಾಹ ಮುಗಿಲು ಮುಟ್ಟಿತ್ತು. ಮೋದಿ, ಮೋದಿ ಎನ್ನುವ ಘೋಷಣೆಗಳ ಪ್ರತಿಧ್ವನಿಸುತ್ತಿದ್ದರೆ ಜನರತ್ತ ಆತ್ಮೀಯತೆಯಿಂದ ಮೋದಿ ಅವರು ಕೈಬೀಸಿದಾಗ ಸೇರಿದ್ದ ಜನರಿಗೆ ಅದರಲ್ಲೂ ಯುವಪಡೆ ಸಂಭ್ರಮಕ್ಕೆ ಪಾರವೇ ಇರಲಿಲ್ಲ.

  ಬನದ ತಾಯಿಯ ಬೆಳ್ಳಿ ಮೂರ್ತಿ ಕಾಣಿಕೆ

  ಬಾದಾಮಿಗೆ ಆಗಮಿಸಿದ್ದ ಪ್ರಧಾನಿ ನರೇಂದ್ರ ಮೋದಿ ಈ ಭಾಗದ ಶಕ್ತಿಪೀಠ ಬನಶಂಕರಿ ದೇವಸ್ಥಾನದ ಟ್ರಸ್ಟ್‌ನವರು ಕೊಟ್ಟಿದ್ದ ಸಿಂಹದ ಮೇಲೆ ಆಸೀನರಾಗಿದ್ದ ಬನಶಂಕರಿ ತಾಯಿಯ ಬೆಳ್ಳಿ ಮೂರ್ತಿ ಹಾಗೂ ವೀರಶೈವ ಲಿಂಗಾಯತರ ಶ್ರದ್ಧಾಕೇಂದ್ರ ಶಿವಯೋಗ ಮಂದಿರದಲ್ಲಿ ತಯಾರಾಗುವ ಪರಿಶುದ್ಧ ಕ್ರಿಯಾಗಟ್ಟಿಯ ವಿಭೂತಿ, ರುದ್ರಾಕ್ಷಿ ಮಾಲೆ ಹಾಗೂ ನೂರಾರು ವರ್ಷಗಳ ಇತಿಹಾಸ ಇರುವ ಸುಪ್ರಸಿದ್ದ ಗುಳೇದಗುಡ್ಡ ಕೈಮಗ್ಗದ ರೇಷ್ಮೆ ಖಣವನ್ನು ನೀಡಿ ಗೌರವಿಸಲಾಯಿತು.

  Portrait of Narendra Modi woven into a rug
  ಬಾದಾಮಿಯಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದ ನಾರಿ ಶಕ್ತಿ ನಾಡಿನ ಶಕ್ತಿ ಸಮಾವೇಶದಲ್ಲಿ ಅಭಿಮಾನಿಯೊಬ್ಬರು ಕಂಬಳಿಯಲ್ಲಿ ನೇಯ್ಕೆ ಮೂಲಕ ಬಿಡಿಸಿದ ನರೇಂದ್ರ ಮೋದಿ ಭಾವಚಿತ್ರ ಪ್ರದರ್ಶಿಸಿ ಗಮನ ಸೆಳೆದರು.
  ಇಳಕಲ್ ಸೀರೆ, ಗುಳೇದಗುಡ್ಡದ ಖಣ ದೇಶದ ಗೌರವ 
  ಚುನಾವಣೆ ಪ್ರಚಾರ ಭಾಷಣದಲ್ಲಿ ನರೇಂದ್ರ ಮೋದಿ ಅವರು ಕಮ್ಮಾರ, ಕುಂಬಾರ, ಬಡಿಗ, ಅಕ್ಕಸಾಲಿಗ ಎಲ್ಲರೂ ನಮ್ಮ ಶಕ್ತಿ. ಜಿಲ್ಲೆಯ ಇಳಕಲ್ ಸೀರೆ ಹಾಗೂ ಗುಳೇದಗುಡ್ಡ ಖಣ ನಮ್ಮ ದೇಶದ ಗೌರವ ಎಂದು ಬಣ್ಣಿಸಿದರು. ಈ ಬಗ್ಗೆ ಕಾಂಗ್ರೆಸ್ ಎಂದೂ ಕೇರ್ ಮಾಡಲಿಲ್ಲ. ಆದರೆ, ನಮ್ಮ ಸರ್ಕಾರ ಅವುಗಳನ್ನು ಗುರುತಿಸಿ ಗೌರವಿಸಿದೆ ಎನ್ನುವ ಮೂಲಕ ಜಿಲ್ಲೆಯಲ್ಲಿ ಅಧಿಕವಾಗಿರುವ ನೇಕಾರರು ಹಾಗೂ ಕುಶಲ ಕರ್ಮಿಗಳ ಮತಬುಟ್ಟಿಗೆ ಕೈಹಾಕಿದರು.
  
  ಬಾದಾಮಿ ಕ್ಷೇತ್ರದ ಶಾಸಕ, ಮಾಜಿ ಸಿಎಂ ಸಿದ್ದರಾಮಯ್ಯನವರನ್ನು ಕುಟುಕಿದ ನರೇಂದ್ರ ಮೋದಿ, ಬರೀ ಬಿಜೆಪಿಗೆ ಬೈಯೋದು, ಲಿಂಗಾಯತರಿಗೆ ಬೈಯುವುದು ಇದೆ ಆಗಿದೆ. ಸಿದ್ದರಾಮಯ್ಯ ಅವರು ಬಾದಾಮಿಯಲ್ಲಿ ಅಭಿವೃದ್ದಿ ಮಾಡಿದ್ದೇನೆ ಎನ್ನುತ್ತಾರೆ. ಆದರೆ, ಕ್ಷೇತ್ರದಲ್ಲಿ ಅಭಿವೃದ್ಧಿ ಮಾಡಿದ್ದ ನಮ್ಮ ಡಬಲ್ ಇಂಜಿನ್ ಸರ್ಕಾರ. ಸ್ನೇಹಿತರೇ, ಸಿದ್ದರಾಮಯ್ಯ ಕ್ಷೇತ್ರ ಬಿಟ್ಟು ಹೋಗಿದ್ದಾರೆ. ಯಾಕೆ ಅಂತ ಅವರನ್ನು ಕೇಳುತ್ತೀರಾ? ಕೈ ಮೇಲೆ ಮಾಡಿ ಹೇಳಿ ಎಂದು ಜನರನ್ನು ಪ್ರಶ್ನಿಸಿದರು. ನೀವೆ ಈ ಕ್ಷೇತ್ರದ ಶಾಸಕರು ಆಗಿದ್ದೀರಿ ಇಷ್ಟೊಂದು ಕೆಲಸವನ್ನು ಮೊದಲು ಯಾಕೆ ಮಾಡಲಿಲ್ಲ ಎಂದು ಚುಚ್ಚಿದರು.

  ಇದನ್ನೂ ಓದಿ : ರಬಕವಿಯಲ್ಲಿ ಶಾಸಕ ಸಿದ್ದು ಸವದಿ ಪ್ರಚಾರ

  ಬಾದಾಮಿ ಸಹೋದರ, ಸಹೋದರಿಯರಿಗೆ ನಮಸ್ಕಾರಗಳು

  ಬಾದಾಮಿಗೆ ಚುನಾವಣೆ ಪ್ರಚಾರಕ್ಕೆ ಆಗಮಿಸಿದ್ದ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಭಾಷಣದ ಆರಂಭದಲ್ಲಿ ಬಜರಂಗ ಬಲಿ ಕೀ… ಚಾಲುಕ್ಯ ಸಾಮ್ರಾಜ್ಯದ ರಾಜಧಾನಿ ಬಾದಾಮಿ ಸಹೋದರ ಸಹೋದರಿಯರಿಗೆ ನಮಸ್ಕಾರಗಳು ಎನ್ನುತ್ತಿದ್ದಂತೆ ಜನರ ಉತ್ಸಾಹ ಇಮ್ಮಡಿಗೊಂಡಿ ಮೋದಿ ಮೋದಿ ಎನ್ನುವ ಘೋಷಣೆ ಕೂಗಿ ಸಂಭ್ರಮಿಸಿದರು.

  A fan shows Prime Minister Narendra Modi to his child.
  ಬಾದಾಮಿಯಲ್ಲಿ ನಡೆದ ನಾರಿ ಶಕ್ತಿ ನಾಡಿನ ಶಕ್ತಿ ಸಮಾವೇಶದಲ್ಲಿ ಅಭಿಮಾನಿಯೊಬ್ಬರು ತಮ್ಮ ಮಗುವಿಗೆ ಪ್ರಧಾನ ಮಂತ್ರಿ ನರೇಂದ್ರ ಅವರನ್ನು ತೋರಿಸುತ್ತಿರುವುದು.
  ನೀವು ಎಲ್ಲಿ ಇದ್ದೀರಾ ಅಲ್ಲಿ ಇರಿ
  ಪ್ರಧಾನಮಂತ್ರಿಗಳು ವೇದಿಕೆಯಲ್ಲಿ ಭಾಷಣ ಮಾಡುತ್ತಿದ್ದಾಗಲೂ ಜನರು ಮಾತ್ರ ಹರಿದು ಬರುತ್ತಲೇ ಇತ್ತು. ಇದನ್ನು ಗಮನಿಸಿದ ಮೋದಿ ಅವರು, ನೀವು ಎಲ್ಲಿ ಇದ್ದೀರಿ ಅಲ್ಲೆ ಇರಿ. ನಿಮಗೆ ನನ್ನನ್ನು ನೋಡುವುದಕ್ಕೆ ಆಗುತ್ತಿಲ್ಲ. ಇದರಿಂದ ನಾನು ನಿಮ್ಮನ್ನು ಕ್ಷಮೆ ಕೇಳುತ್ತೇನೆ. ಬೆಂಗಳೂರು ಜನರು ಸಹ ಇವತ್ತು ನಿಮ್ಮ ರೀತಿಯಲ್ಲೆ ಪ್ರೀತಿಯನ್ನು ತೋರಿದರು ಎಂದು ಬೆಂಗಳೂರು ರೋಡ್ ಶೋವನ್ನು ನೆನಪಿಸಿಕೊಂಡರು.
  Prime Minister Narendra Modi saluted.
  ಬಾದಾಮಿಯಲ್ಲಿ ನಡೆದ ನಾರಿಶಕ್ತಿ ನಾಡಿನ ಶಕ್ತಿ ಸಮಾವೇಶದಲ್ಲಿ ನೆರೆದ ಜನರಿಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಶಿರಬಾಗಿ ವಂದಿಸಿದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts