More

    ಸಂಬಂಧಗಳ ಮರುಜೋಡಣೆಯಾಗುತ್ತಿರಬೇಕು!

    ಸಂಬಂಧಗಳನ್ನು ರೀ ಅರೇಂಜ್ ಮಾಡಿಕೊಂಡ ಮೇಲೆ ಎಲ್ಲದಕ್ಕೂ ಹೊಸ ಅರ್ಥ ಬರತೊಡಗುತ್ತದೆ. ಇಷ್ಟು ದಿನ ನಮ್ಮ ಕೂಗಾಟಗಳನ್ನೆಲ್ಲ ಕಿಕಿಂಗ್ ಬ್ಯಾಗ್ ಥರಾ ಭರಿಸಿಕೊಂಡ ಹೆಂಡತಿ, ಈಗ ಪಳಗಿದ ಕನ್ಸಲ್ಟೆಂಟ್ ಥರಾ ಮಾತನಾಡತೊಡಗುತ್ತಾಳೆ. ಸಾವಿರ ತಪ್ಪು ಮಾಡಿದಾಗ್ಯೂ ನಮ್ಮ ಮನೆಯವರು, ಮಕ್ಕಳು ನಮ್ಮನ್ನು ಮತ್ತೆ ಅರ್ಥ ಮಾಡಿಕೊಳ್ಳುತ್ತಿದ್ದಾರೆನ್ನಿಸುತ್ತದೆ.

    ಸಂಬಂಧಗಳ ಮರುಜೋಡಣೆಯಾಗುತ್ತಿರಬೇಕು!ನಿಮ್ಮ ಮಕ್ಕಳು ನಿಮಗೆ ತಿರುಗಿ ಬೀಳುವ ಕ್ಷಣವಿದೆಯಲ್ಲ, ತುಂಬ ನೋವುಂಟು ಮಾಡುವ ಬದುಕಿನ ಗಳಿಗೆಯದು. ತಿರುಗಿ ಬೀಳುವ ಮಗ ಬಾಯಿಗೆ ಬಂದದ್ದೇ ಮಾತನಾಡುತ್ತಾನೆ. ‘ಹುಟ್ಟಿಸು ಅಂದಿದ್ನಾ ನನ್ನನ್ನ? ನಿನ್ನ ಮನೇಲಿ ಹುಟ್ಟೋ ಬದಲು ಶ್ರೀಮಂತರ ಮನೇಲಿ ನಾಯಾಗಿ ಹುಟ್ಟಿದ್ರೂ ಒಳ್ಳೇದಿತ್ತು’ ಅನ್ನುತ್ತಾನೆ. ಮಗಳು ಇಷ್ಟೆಲ್ಲ ಮಾತನಾಡುವುದಿಲ್ಲ. ಆದರೆ ಮೌನವಾಗಿದ್ದುಕೊಂಡೇ ಜಾಸ್ತಿ ಹರ್ಟ್ ಮಾಡುತ್ತಾಳೆ. ಇವನ ಮಾತಿಗಿಂತ ಅವಳ ಮೌನ ಹೆಚ್ಚು ಭೀಕರ. ಚಿಕ್ಕವರಿದ್ದಾಗ ಇವರಿಗೆ ಕಾಯಿಲೆ, ಇವರ ಓದು, ಇವರ ಹಟ, ಸಂತೋಷ-ಅದಕ್ಕೆಲ್ಲ ಎಷ್ಟು ಕಷ್ಟಪಟ್ಟೆ. ಅಷ್ಟೆಲ್ಲ ಕಷ್ಟಪಟ್ಟದ್ದು ಇಂಥ ಮಾತು ಕೇಳಿಸಿಕೊಳ್ಳಲಿಕ್ಕೇನಾ?

    ಕಣ್ಣು ತುಂಬಿ ಬರುತ್ತವೆ.

    ಆದರೆ ಸುಮ್ಮನೆ ನೊಂದುಕೊಂಡು ಫಾಯ್ದೆಯಿಲ್ಲ. ಹೇಳಿಕೊಳ್ಳೋಣ ಅಂದರೆ, ಹೆಂಡತಿ ಕೂಡ ಮಗ ಅಥವಾ ಮಗಳ ಪರ ವಾದಿಸಲು ನಿಂತು ಬಿಟ್ಟಿರುತ್ತಾಳೆ. ಇಡೀ ಮನೆ ಮಂದಿ ಒಂದಾಗಿ ನೀವೊಬ್ಬರೇ ನಿಸ್ಸಹಾಯಕರು. ಬೇರೆ ಯಾರಿಗಾದರೂ ಹೇಳಿಕೊಂಡರೆ ನೀವೇ ನಗೆಪಾಟಲು!

    ಇಂಥ ಪರಿಸ್ಥಿತಿಗೆ ಯಾವ ಗಂಡಸು ಬೇಕಾದರೂ ಸಿಕ್ಕಿಬೀಳಬಹುದು.

    ಹೆಂಗಸರಾದರೂ ಅಷ್ಟೆ. ಐವತ್ತು ಐವತ್ತೈದರ ಗೃಹಿಣಿಯನ್ನು ಆಕೆಯ ಗಂಡ ಬಯ್ಯುತ್ತಿರುತ್ತಾನೆ. ‘ನಿನ್ನಿಂದಾಗಿಯೇ ಮಗಳು ಹೀಗಾದಳು. ಬೇಡ ಅಂದ್ರೂ ಸಲುಗೆ ಕೊಟ್ಟೆ. ಜಾತಿಯಲ್ಲದ ಜಾತಿಯವನನ್ನ ಪ್ರೀತಿಸ್ತೀನಿ ಅಂತಾಳೆ. ನೀನು ಸರಿಯಾಗಿ ನೋಡಿಕೊಂಡಿದ್ದಿದ್ರೆ ಹೀಗ್ಯಾಕೆ ಆಗ್ತಾ ಇತ್ತು?’ ಅನ್ನುತ್ತಾನೆ. ಬುದ್ಧಿ ಹೇಳಲು ಹೋದರೆ, ಮಗಳು ತಿರುಗಿ ಕೂಡ ನೋಡುವುದಿಲ್ಲ. ತನಗಾದ ನಿರಾಸೆ, ಮಗಳಿಗೆ ಅವಳ ಬದುಕಿನಲ್ಲಿ ಆಗದಿರಲಿ ಅಂತ ತಾಯಿಗೆ ಅನ್ನಿಸುತ್ತಿರುತ್ತದೆ. ಆದರೆ ಮಗಳ ಅಫೇರನ್ನ ಬಹಿರಂಗವಾಗಿ ಬೆಂಬಲಿಸಲಾರಳು. ಅಂಥ ಗಳಿಗೆಯಲ್ಲಿ ಹೆಂಗಸು ತುಂಬ lonely ಆಗಿಬಿಡುತ್ತಾಳೆ. ರಾತ್ರಿ ಒಂದು ಹೊತ್ತಿನಲ್ಲಿ ಎದ್ದರೆ ನಿದ್ರೆಯೇ ಬರುವುದಿಲ್ಲ. ಸುಮ್ಮನೆ ಬಚ್ಚಲಿಗೆ ಹೋಗಿ ಸೀಮೆಎಣ್ಣೆ ಸುರಿದುಕೊಂಡು ಸತ್ತುಬಿಡಲಾ ಎಂಬ ತನಕ ಬೇಸರ ಮುಗಿಬೀಳುತ್ತದೆ.

    ಇದನ್ನೂ ಓದಿ: ನಮ್ಮನಮ್ಮಲ್ಲಿ: ಕಡು ದುಃಖಕ್ಕೂ ಒಂದು ಆಯುಷ್ಯ ಅಂತ ಇರುತ್ತೆ!

    ಇದು ದುಃಖ, ಬೇಸರ, ಪ್ರತಿರೋಧ, ಶತ್ರುತ್ವಗಳನ್ನು ಸಲೀಸಾಗಿ ಎದುರಿಸಬಹುದಾದಂಥ ವಯಸ್ಸೂ ಅಲ್ಲ. ಮೊದಲಿನ ಧೈರ್ಯ ಈಗ ಉಳಿದಿರುವುದಿಲ್ಲ. ಐವತ್ತರ ಅಂಚಿನಲ್ಲಿ ಸೆಡವು ಕೂಡ ಸುಸ್ತುಂಟು ಮಾಡುತ್ತದೆ. ಮಕ್ಕಳು ಚಿಕ್ಕ ಮಾತು ಅಂದರೂ ಆಳವಾಗಿ ಇಗೋ ಹರ್ಟ್ ಆಗುತ್ತದೆ. ಮಗನನ್ನ ಆಸ್ತಿ ಕೊಡದೆ ಹೊರಹಾಕುವುದು, ಜಾತಿ ತಪ್ಪಿ ಮದುವೆಯಾದ ಮಗಳನ್ನು ‘ನೀನು ನನ್ನ ಪಾಲಿಗೆ ಸತ್ತೆ ಅಂದ್ಕೋತೀನಿ’ ಅನ್ನುವುದು-ಇದೆಲ್ಲ ಎಲ್ಲರಿಂದಲೂ ಸಾಧ್ಯವಿಲ್ಲ. ಸಾಧ್ಯವಾಗಲೂ ಬಾರದು. ಎಷ್ಟಾದರೂ ಅವರು ನಮ್ಮ ಮಕ್ಕಳು. ಕರುಳು ಹರಿದುಕೊಂಡರೆ, ಕಾಲಮೇಲೆ. ಇಷ್ಟಕ್ಕೂ ಮಕ್ಕಳು ಯಾವ್ಯಾವ ಕಾರಣಗಳಿಗಾಗಿ ತಿರುಗಿಬೀಳುತ್ತಾರೆ ಅಂತ ಗಮನಿಸಿ. ಬೆಳೆದ ಮಗ ದುಡಿಯುವ ಯೋಗ್ಯತೆ ಗಳಿಸಿಕೊಳ್ಳದಿದ್ದಾಗ ಅಪ್ಪ ತನ್ನ ವ್ಯಾಪಾರ-ವ್ಯವಹಾರಕ್ಕೆ ಹಣ ಕೊಡಲಿ ಅಂತ ಬಯಸುತ್ತಾನೆ. ಕೊಡದಿದ್ದಾಗ ತಿರುಗಿಬೀಳುತ್ತಾನೆ. ದುಡಿಯಲಾಗದ ವಯಸ್ಸಿನಲ್ಲಿ ತಾನು ಕಲಿತ ದುಶ್ಚಟಗಳು ಮನೆಯಲ್ಲಿ ಪತ್ತೆಯಾಗಿ, ಅವುಗಳ ಬಗ್ಗೆ ಪ್ರಶ್ನಿಸಿದಾಗ ತಿರುಗಿ ಬೀಳುತ್ತಾನೆ. ತನ್ನ ತಂದೆ ವಿನಾಕಾರಣ ತಾಯಿಯನ್ನು ಹಿಂಸಿಸುತ್ತಾನೆ ಅಂತ ಪದೇಪದೆ ಅನ್ನಿಸಿದಾಗ ತಿರುಗಿಬೀಳುತ್ತಾನೆ. ತಂದೆ ಮತ್ತೊಂದು ಕಡೆ ಸಂಬಂಧ ಇರಿಸಿಕೊಂಡಿದ್ದಾನೆ ಅಂತ ಗೊತ್ತಾದಾಗ ಸಿಡಿಮಿಡಿಗೊಳ್ಳುತ್ತಾನೆ. ತಂದೆಯ ಕುಡಿತ, ಇಸ್ಪೀಟು, ಕ್ರೌರ್ಯದಂತಹ ದುಶ್ಚಟಗಳು ವಿಪರೀತವಾದಾಗ ಮಗ ತಿರುಗಿ ಬೀಳುತ್ತಾನೆ.

    ತಕ್ಷಣ ಎಚ್ಚೆತ್ತುಕೊಳ್ಳಬೇಕಾದದ್ದು ತಂದೆಯೇ! ಇಷ್ಟು ದಿನಗಳಂತೆ ಇನ್ನು ಮುಂದೆ ಬದುಕುವುದು ಸಾಧ್ಯವಿಲ್ಲ. ಮಕ್ಕಳು ದೊಡ್ಡವರಾಗಿದ್ದಾರೆ. ಮೊದಲು ನನ್ನ ಕುಡಿತದ ಬಗ್ಗೆ ಬೇಸರಿಸಿಕೊಳ್ಳುತ್ತಿದ್ದರು. ಈಗ ಅಸಹ್ಯಿಸಿ ಕೊಳ್ಳುತ್ತಿದ್ದಾರೆ. ಅವರನ್ನು ಅದು ಸಾರ್ವಜನಿಕವಾಗಿ ಅವಮಾನಕ್ಕೆ ಈಡುಮಾಡತೊಡಗಿದೆ. ಇಸ್ಪೀಟಾಡುವುದು, ಇನ್ನೊಂದು ಕಡೆಗೆ ಸಂಬಂಧವಿರುವುದು, ಆಸ್ತಿ ಮಾರಲೆತ್ನಿಸುವುದು, ಹೆಂಡತಿಯನ್ನು ಹೊಡೆಯುವುದು ಇದೆಲ್ಲ ಮಕ್ಕಳ ಗಮನಕ್ಕೆ ಬರುತ್ತಿವೆ. ಅವರು ಸಿಟ್ಟಿಗೇಳುತ್ತಿದ್ದಾರೆ. ಅವರೆದುರಿಗೆ ತಾನು ಚಿಕ್ಕವನಾಗುತ್ತಿದ್ದೇನೆ ಎಂಬುದನ್ನು ತಂದೆ ಅರ್ಥಮಾಡಿಕೊಳ್ಳಬೇಕು. ನಮ್ಮ ಬಗ್ಗೆ ನಮ್ಮ ಮಕ್ಕಳು ಇತರರೆದುರಿನಲ್ಲಿ ಏನು ಮಾತನಾಡಿದ್ದಾರೆ ಅಂತ ಗೊತ್ತಾದಾಗ ಸಿಟ್ಟು ಬರಬಹುದು, ಶಾಕ್ ಆಗಬಹುದು. ಆದರೆ ಪ್ರಜ್ಞಾವಂತನಾದ ತಂದೆ ಸಿಟ್ಟಿಗೇಳುವುದಿಲ್ಲ.

    ಆತ ಮನೆಯೊಳಗಿನ ಸಂಬಂಧಗಳನ್ನು re-arrange ಮಾಡಿಕೊಳ್ಳುತ್ತಾನೆ. ಎಲ್ಲ ಮನೆಗಳಲ್ಲೂ ಕಾಲದಿಂದ ಕಾಲಕ್ಕೆ ಸಂಬಂಧಗಳ ಮರುಜೋಡಣೆಯ ಅವಶ್ಯಕತೆ ಇದ್ದೇ ಇರುತ್ತದೆ. ನಾವು ಅದನ್ನು ಗಮನಿಸಿರುವುದಿಲ್ಲ. ನಮ್ಮ ಅಪ್ಪಣೆಗಾಗಿ ಸಣ್ಣದಕ್ಕೂ ಕಾದು ನಿಲ್ಲುತ್ತಿದ್ದ ಮಗ, ಈಗ ನಮಗಿಂತ ಸೂಕ್ತವಾದ ನಿರ್ಧಾರಗಳನ್ನು ಕೈಗೊಳ್ಳಬಲ್ಲ ಅಂತ ನಮಗೆ ಅರ್ಥವಾಗಿರುವುದಿಲ್ಲ. ಅರ್ಥವಾದದ್ದೇ ಆದರೆ, ತಕ್ಷಣ ನಾವು ಮಕ್ಕಳೊಂದಿಗಿನ ಸಂಬಂಧಕ್ಕೆ ಬೇರೆಯದೇ ಸ್ವರೂಪ ಕೊಡುತ್ತೇವೆ.

    ಇದನ್ನೂ ಓದಿ: ರವಿ ಬೆಳಗೆರೆ ನಮ್ಮನಮ್ಮಲ್ಲಿ ಅಂಕಣ: ಮಲಗಿ ಕಳೆದ ಬಡವನೆದುರು ಸಮಯ ಬಳಸಿ ಬೆಳೆದವನಿದ್ದಾನೆ!

    ಮೊದಲನೆಯದಾಗಿ, ಚಿಕ್ಕದೊಂದು ಡಿಸ್ಟೆನ್ಸ್ ಏರ್ಪಡಿಸಿಕೊಳ್ಳಬೇಕು. ಮಗನಿಗೆ ಒಂದು ಪ್ರೖೆವಸಿ ಕಲ್ಪಿಸಿಕೊಡಬೇಕು. ಅವನ ಮೇಲಿನ Possessive ಆದ ಹಿಡಿತ ಬಿಟ್ಟುಕೊಡಬೇಕು. ಹತ್ತರಲ್ಲಿ ಎಂಟಕ್ಕೆ ‘ಆಯ್ತು’ ಅನ್ನಬೇಕು. ತಕ್ಷಣದ ಜಗಳಕ್ಕೆ, ಬೈಗುಳಕ್ಕೆ, ಕನ್​ಫ್ರಾಂಟೇಷನ್ನುಗಳಿಗೆ ಹೋಗದೆ ಕೆಲವು ಉದ್ವೇಗದ ಗಳಿಗೆಗಳನ್ನು ಪೋಸ್ಟ್​ಪೋನ್ ಮಾಡಬೇಕು. ಸಾಧ್ಯವಾದರೆ ಅವೈಡ್ ಮಾಡಿಬಿಡಬೇಕು. ಒಮ್ಮೊಮ್ಮೆ ಪ್ರೀತಿ ಉಕ್ಕಿ, ಉಬುಕಿ ಬೀಳುತ್ತಿರಬಹುದು. ಆಗಲೂ ತಂದೆ ಸಂಯಮದಿಂದಲೇ ವರ್ತಿಸಬೇಕು. ತೀವ್ರವಾದ ಒಂದು ಅಪ್ರಿಸಿಯೇಷನ್ ಕೂಡ ನೀವು ಆತನಕ ಮಾಡಿಕೊಂಡ ಸಂಬಂಧಗಳ ರೀಅರೇಜ್​ವುಂಟ್ ಹಾಳು ಮಾಡಿಬಿಡಬಲ್ಲದು. ಹಾಗಂತ ತೀರಾ ನಿರ್ಭಾವುಕರಾಗಿ ಇದ್ದುಬಿಡಬೇಕು ಅಂತಲ್ಲ. ರಾಗ ಮತ್ತು ಕೋಪ ಎರಡನ್ನೂ ಹಿತವಾಗಿ ಅನಾವರಣಗೊಳಿಸುವ ಸಂಯಮ ನಮಗೆ ರೂಢಿ ಆಗಬೇಕು. ಮುಖ್ಯವಾಗಿ, ‘ನನ್ನ ಮಗನಾಗಿ ಅವ್ನು ಹೇಗಿರಬೇಕೂ… ಏನ್ಕತೇ…’ ಎಂಬಂಥ ಭ್ರಮೆಗಳಿಂದ ತಂದೆಯರು ಹೊರಬರಬೇಕು. ಏಕೆಂದರೆ, ಈ ಬದುಕು ನಮ್ಮದು. ಇದೇ ಥರದ ಬದುಕು ನಮ್ಮ ಮಕ್ಕಳದೂ ಆಗಬೇಕು ಅಂದುಕೊಳ್ಳಬೇಕಿಲ್ಲ. ‘ನನ್ನ ಹೆಸರು ಉಳಿಸೋರ್ಯಾರು?’ ಅಂತ ಗೋಳಾಡುವುದು ದೊಡ್ಡ ಮೂರ್ಖತನ. ನಮ್ಮ ಹೆಸರನ್ನು ನಾವೇ ಗಳಿಸಿಕೊಂಡಿದ್ದೇವೆ. ಅದನ್ನು ಇಲ್ಲೇ ಬಿಟ್ಟು ಹೊರಟು ಹೋಗೋಣ. ಉಳಿಯೋದೇ ಆದರೆ, ಉಳಿದಷ್ಟು ದಿನ ಉಳಿದೇ ಉಳಿಯುತ್ತೆ. ಅದನ್ನು ಉಳಿಸಲಿ ಅಂತ ಮಗನಿಂದ ನಿರೀಕ್ಷಿಸೋದಾದರೆ, ಅವನು ತನ್ನ ಹೆಸರನ್ನು ಗಳಿಸೋದು ಯಾವಾಗ?

    ಇದನ್ನೂ ಓದಿ: ಮಂಗಳೂರು ಉದ್ಯಮಿ ಕೊಲೆ: ಭಯಾನಕ ಹತ್ಯೆಯ ಸಿಸಿಟಿವಿಯಲ್ಲಿ ಸೆರೆಯಾದ ದೃಶ್ಯ ಇಲ್ಲಿದೆ ನೋಡಿ

    ಇಷ್ಟೆಲ್ಲ ದುಡಿದೆ, ದುಡ್ಡು ಮಾಡಿದೆ, ಇದನ್ನೆಲ್ಲ ಮಕ್ಕಳಿಗೆ ಬಿಟ್ಟು ಹೋಗುತ್ತಿದ್ದೇನೆ. ನಾಳೆ ಇವರು ಇದನ್ನೆಲ್ಲ ಏನೇನು ಮಾಡಿಬಿಡುತ್ತಾರೋ ಅಂದುಕೊಂಡು ನರಳುವುದೂ ಬೇಡ. ದುಡ್ಡಾಗಲೀ, ಒಳ್ಳೆಯದನ್ನಾಗಲೀ ನಾವು ನಮಗೋಸ್ಕರ ಮಾಡಿಕೊಂಡಿರುತ್ತೇವೆ. ಮಕ್ಕಳಿಗೋಸ್ಕರ ಅಂತ ಮನೆ ಕಟ್ಟಿಸಿದರೂ, ಅವರು ನಮ್ಮ ಮಕ್ಕಳಾದ್ದರಿಂದ ಕಟ್ಟಿಸಿಕೊಟ್ಟಿರುತ್ತೇವೆ. ಹೇಗೆ ನಾವು ನಮ್ಮ ತಂದೆಯ ಶ್ರಾದ್ಧ ಮಾಡಿದ ದಿನ ಪುರೋಹಿತನಿಗೆ ಕೊಟ್ಟ ನೂರು ರೂಪಾಯಿ ದಕ್ಷಿಣೆಯನ್ನು ‘ಅವನೇನು ಮಾಡಿದ’ ಅಂತ ಯೋಚಿಸುವುದಿಲ್ಲವೋ ಹಾಗೆಯೇ ನಮ್ಮ ಮಕ್ಕಳು ನಮ್ಮ ನಂತರ ನಾವು ದುಡಿದದ್ದನ್ನು ಏನು ಮಾಡುತ್ತಾರೆ ಅಂತ ಯೋಚಿಸಬಾರದು.

    ಸಂಬಂಧಗಳನ್ನು ರೀ ಅರೇಂಜ್ ಮಾಡಿಕೊಂಡ ಮೇಲೆ ಎಲ್ಲದಕ್ಕೂ ಹೊಸ ಅರ್ಥ ಬರತೊಡಗುತ್ತದೆ. ಇಷ್ಟು ದಿನ ನಮ್ಮ ಕೂಗಾಟಗಳನ್ನೆಲ್ಲ ಕಿಕಿಂಗ್ ಬ್ಯಾಗ್ ಥರಾ ಭರಿಸಿಕೊಂಡ ಹೆಂಡತಿ, ಈಗ ಪಳಗಿದ ಕನ್ಸಲ್ಟೆಂಟ್ ಥರಾ ಮಾತನಾಡತೊಡಗುತ್ತಾಳೆ. ಮುನಿದ ಮಗಳು ಹತ್ತಿರಕ್ಕೆ ಬಂದು ‘ಸ್ವಾರಿ’ ಅನ್ನುತ್ತಾಳೆ. ಮಗ ತಾನು ದುಡಿದ ಹಣದಲ್ಲಿ ಸ್ವೆಟರು ತಂದು ಮಾತಾಡದೇನೇ ಕೈಗೆ ಕೊಟ್ಟು ಹೋಗುತ್ತಾನೆ. ಸಾವಿರ ತಪ್ಪು ಮಾಡಿದಾಗ್ಯೂ ನಮ್ಮ ಮನೆಯವರು, ಮಕ್ಕಳು ನಮ್ಮನ್ನು ಮತ್ತೆ ಅರ್ಥ ಮಾಡಿಕೊಳ್ಳುತ್ತಿದ್ದಾರೆನ್ನಿಸುತ್ತದೆ.

    ಇದನ್ನೂ ಓದಿ: ಪತ್ನಿ ರಿತಿಕಾ ಕಣ್ಣೀರಿಗೆ ಕಾರಣ ಕೊಟ್ಟ ರೋಹಿತ್

    ಕೆಲಬಾರಿ, ದುಷ್ಟಾತಿದುಷ್ಟ ಮನುಷ್ಯ ಸತ್ತಾಗಲೂ ಹೆಂಡತಿ ಮಕ್ಕಳು ಅವನನ್ನು ನೆನೆದು, ಸಣ್ಣಪುಟ್ಟ ಸದ್ಗುಣಗಳನ್ನೇ ಹಾಡಿ ಹೊಗಳುವುದನ್ನು ನೀವೂ ನೋಡಿರುತ್ತೀರಿ. ಬದುಕಿದ್ದಾಗ ಆ ಮನುಷ್ಯ ತನ್ನ ಮನೆಯವರೊಂದಿಗಿನ ಸಂಬಂಧಗಳನ್ನು ರೀ ಅರೇಂಜ್ ಮಾಡಿಕೊಂಡಿದ್ದಿದ್ದರೆ, ಇನ್ನಷ್ಟು ಸುಖವಾಗಿ ಬದುಕಿರುತ್ತಿದ್ದನೇನೋ ಅಂತ ನಿಮಗೂ ಅನ್ನಿಸಿರುತ್ತದೆ. ಅಲ್ವೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts