More

    ನಮ್ಮನಮ್ಮಲ್ಲಿ..|ಅವನ ಅನುಮಾನ ಮತ್ತು ಇವಳ ಆತಂಕಗಳ ಮಧ್ಯೆ…

    ನಮ್ಮನಮ್ಮಲ್ಲಿ..|ಅವನ ಅನುಮಾನ ಮತ್ತು ಇವಳ ಆತಂಕಗಳ ಮಧ್ಯೆ...ಪ್ರೀತಿಗೆ ಉಸಿರಾಟ ಬೇಕು.
    ಉಸಿರಾಟಕ್ಕೆ Space ಬೇಕು. ಜಗತ್ತಿನ ಬಹುತೇಕ ಪ್ರೀತಿ ಪ್ರಣಯಗಳು ಈ Space ಇಲ್ಲದೇನೇ ಸತ್ತು ಹೋಗುತ್ತವೇನೋ? ಒಂದು ಅಫೇರ್​ನ ಅತ್ಯಂತ ಮಧುರ ಕಾಲ ಯಾವುದು ಅಂತ ಕೇಳಿಕೊಳ್ಳಿ. ಅದು proposalಗೆ ಮುಂಚಿನ ಕಾಲ. ಅವನಿನ್ನೂ ಹೇಳಿಲ್ಲ: ಇವಳಿನ್ನೂ ಒಪ್ಪಿಲ್ಲ. ಆದರೆ ಇಬ್ಬರಲ್ಲೂ ಪ್ರೀತಿ ಮೊಳೆತಿದೆಯೆಂಬುದು ಇಬ್ಬರಿಗೂ ಗೊತ್ತಾಗಿದೆ. ಮಹಾನ್ ಮಧುರ ಕಾಲವದು. ಏಕೆಂದರೆ, ಅವರಿಬ್ಬರ ಮಧ್ಯೆ ಆರೋಗ್ಯಕರವಾದ್ದೊಂದು Space ಇದೆ. ಅವಳ ಬರುವಿಕೆಗಾಗಿ ಇವನು ಕಾಯುತ್ತಾನೆ. ಇವನ ಗೈರುಹಾಜರಿಯನ್ನು ಅವಳು ಫೀಲ್ ಮಾಡುತ್ತಾಳೆ. ‘ಎಲ್ಲಿಗೆ ಹೋಗಿದ್ದೆ? ಯಾಕೆ ಲೇಟು? ಜೊತೇಲಿ ಯಾರಿದ್ದರು? ನಂಗದು ಇಷ್ಟವಾಗಲ್ಲ ಅಂತ ನಿಂಗೆ ಹೇಳಿಲ್ವಾ?’ ಉಹುಂ! ಈ ತರಹದ ಪ್ರಶ್ನೆಗಳು ಇಬ್ಬರ ಮಧ್ಯೆ ಇನ್ನೂ ಉದ್ಭವಿಸಿರುವುದೇ ಇಲ್ಲ.

    ಆದರೆ ಒಂದು ಸಲ ಪ್ರೇಮದ ಅಭಿವ್ಯಕ್ತಿ ಆಗಿಹೋಯಿತೋ- ಕಥೆ ಮುಗಿಯಿತು. ಪ್ರೀತಿಯ ಜಾಗದಲ್ಲಿ ಹಕ್ಕು ಬಂದು ಸ್ಥಾಪಿತವಾಗುತ್ತದೆ. ಕಾಳಜಿಯ ಹೆಸರಿನಲ್ಲಿ ಪೊಸೆಸಿವ್​ನೆಸ್ಸು. ಅದು ಸಂಶಯವಾ, ಅಸಹನೆಯಾ, ಅನುಮಾನವಾ, ಆತಂಕವಾ, ತನ್ನ ಸಾಮರ್ಥ್ಯದ ಬಗ್ಗೆ ತನಗೇ ಇರುವ ಅಪನಂಬಿಕೆಯಾ? ಗೊತ್ತಿಲ್ಲ.

    ‘ನಿಜ ಹೇಳು, ನನ್ನನ್ನ ಪ್ರೀತಿಸ್ತೀ ತಾನೆ? ನನ್ನೊಬ್ಬಳನ್ನೇ? ಗಾಡ್ ಪ್ರಾಮಿಸ್? ಯಾಕೋ ನಂಗೆ ನಂಬಿಕೇನೇ ಹುಟ್ತಿಲ್ಲ. ತುಂಬ ಭಯ ಆಗುತ್ತೆ. ನಿನ್ನನ್ನೇ ನಂಬ್ಕೊಂಡಿದೀನಿ ಕಣೋ…’ ಅಂತ ಅವಳು ಕಣ್ಣೀರಿಡುತ್ತಾಳೆ. ಅವನು ತನ್ನ ಪ್ರೀತಿ, ನಿಷ್ಠೆ, ತೀವ್ರತೆಗಳನ್ನು ಪ್ರೂವ್ ಮಾಡಲು ತುಂಬ ಹೆಣಗಬೇಕು. ಸಾವಿರ ದೃಷ್ಟಾಂತ ಕೊಡಬೇಕು. ಎಷ್ಟೆಲ್ಲ ಎನರ್ಜಿ ಬಸಿದು ಹೋಗುತ್ತದೆ ಅದರಲ್ಲಿ? ಅದಕ್ಕಿಂತ ಹೆಚ್ಚಾಗಿ ಒಂದು ಸಂಬಂಧದ ಸುನೀತ ಪದರುಗಳಲ್ಲಿ ಈ ಪೊಸೆಸಿವ್​ನೆಸ್ಸು, ಅಸಹನೆ, ಆತಂಕಗಳೆಲ್ಲ ಹೇಗೆ ತುಂಬಿಕೊಂಡು ಕೊತಕೊತ ಕುದಿಯತೊಡಗುತ್ತವೆ!

    ಅವುಗಳ ಮಧ್ಯೆ ಎಲ್ಲಿಂದ ಉಸಿರಾಡೀತು ಪ್ರೇಮ?

    ಇವನಾದರೂ ಅಷ್ಟೆ. ಅವಳ ಬ್ಯಾಗ್ ಸೋಸುತ್ತಾನೆ. ಡ್ರಾವರ್ ಹುಡುಕುತ್ತಾನೆ. ಅವಳ ಮೊಬೈಲ್​ನಲ್ಲಿ ಯಾರದಾದರೂ ಮೆಸೇಜಿದೆಯಾ? ಮೆಸೇಜಿನ ಧಾಟಿ ಏನಿದೆ? ನಾನಿರುವಾಗ ಇವಳಿಗೆ ಮತ್ತೊಬ್ಬ ಫ್ರೆಂಡ್ ಯಾಕೆ? ಇಷ್ಟಕ್ಕೂ ಮಧ್ಯಾಹ್ನ ಎಲ್ಲಿಗೆ ಹೋಗಿದ್ದೆ? ಮೊದಲಿನ ಹಾಗಿಲ್ಲ ನೀನು. ನನ್ನ ಮೇಲಿನ ಪ್ರೀತಿ ಕಡಿಮೆ ಆಗಿದೆ ನಿಂಗೆ. ಹೀಗೇ ಸಿಡಿಮಿಡಿ. ‘ನಿನ್ನ ಮೇಲೆ ನಂಗೆ ಅನುಮಾನ’ ಅಂತ ಸ್ಪಷ್ಟವಾಗಿ ಹೇಳುವುದಿಲ್ಲ. ಆದರೆ ಅವಳನ್ನು ಇಡೀ ದಿವಸ ನಿರ್ಬಂಧಕ್ಕೊಳಪಡಿಸುತ್ತಾನೆ. ಅವಚಿಕೊಂಡೇ ಇರುತ್ತಾನೆ. ಇಬ್ಬರ ಮಧ್ಯದ breathing Space ಸತ್ತು ಹೋಗಿರುತ್ತದೆ.

    ಅಂಥದ್ದೊಂದು ಯಡವಟ್ಟಿಗೆ ಸಿಕ್ಕಿಕೊಂಡ ಹುಡುಗಿಯನ್ನು ಗಮನಿಸಿ. ಅವಳಲ್ಲಿ ವಿಪರೀತ ಹೆದರಿಕೆ, ಆತಂಕಗಳಿರ್ತವೆ. ತನ್ನ ಹುಡುಗನ ಬಗ್ಗೆ ಇರುವ ಪ್ರೀತಿಗಿಂತ, ಯಾವ ಕ್ಷಣಕ್ಕೆ ಏನೋ ಎಂಬ ದುಗುಡ. ಎಲ್ಲಿ ಸಿಟ್ಟು ಮಾಡಿಕೊಂಡು ಬಿಡುತ್ತಾನೋ ಎಂಬ ಕಳವಳ. ಪ್ರಪೋಸ್ ಮಾಡಿದ ದಿನ ಕಂಡಷ್ಟು ಆತ್ಮೀಯವಾಗಿ ಇವತ್ತು ಕಾಣುತ್ತಿಲ್ಲ. ಪದೇಪದೆ ಹಕ್ಕು ಸಾಧಿಸುವ ಒರಟನಂತೆ ಕಾಣುತ್ತಾನೆ. ಅವನೆಲ್ಲಾದರೂ ಊರಿಗೋ, ಮತ್ತೊಂದಕ್ಕೋ ಹೋಗುತ್ತಾನೆಂದರೆ ಚಿಕ್ಕದೊಂದು ರಿಲೀಫು. ಸದ್ಯ, ಕಾಯುವ ಕಣ್ಣಿಲ್ಲದೆ ಎರಡು ದಿನ ಹಾಯಾಗಿರಬಹುದಲ್ಲ ಎಂಬ ನೆಮ್ಮದಿ.

    ಗಂಡಸಿನದು ಕೊಂಚ ವಿಭಿನ್ನ ಪರಿಸ್ಥಿತಿ. ತೀರಾ ಪೊಸೆಸಿವ್ ಆದ ಹುಡುಗಿಯೊಂದಿಗೆ ಹೆಣಗುವ ಗಂಡಸು ಕ್ರಮೇಣ ಗಿಲ್ಟ್​ಗೆ ಒಳಗಾಗುತ್ತಾನೆ. ಯಾರನ್ನು ಮಾತಾಡಿಸಿದರೆ ಏನಂದುಕೊಳ್ಳುತ್ತಾಳೋ ಎಂಬ ದುಗುಡ. ‘ನಿನ್ನ ಪ್ರಶ್ನೆಗಳಿಗೆ ನಾನು ಉತ್ತರ ಕೊಡಬೇಕಾಗಿಲ್ಲ ಹೋಗ್!’ ಅಂತ ಸೆಟೆದು ಕುಳಿತರೂ, ಮರುಕ್ಷಣ ‘ಅವಳು ಹರ್ಟ್ ಆಗದಿರಲಿ’ ಅಂತ ಚಡಪಡಿಸುತ್ತಾನೆ. ಅವಳ ಪ್ರೀತಿಯನ್ನು ಕಳೆದುಕೊಂಡು ಬಿಡುತ್ತೀನೇನೋ ಅಂತ ಆತಂಕಕ್ಕೊಳಗಾಗುತ್ತಾನೆ. ಅನವಶ್ಯಕವಾಗಿ ಸುಳ್ಳು ಹೇಳತೊಡಗುತ್ತಾನೆ. ಗಿಫ್ಟ್ ತಂದುಕೊಡುತ್ತಾನೆ. ಅಮ್ಮನ ಪ್ರೀತಿಗೆ ಅಂಗಲಾಚುವ ಮಗುವಿಗೂ ಗೆಳತಿಯ ವಿಶ್ವಾಸಕ್ಕಾಗಿ ಚಡಪಡಿಸುವ ಗಂಡಸಿಗೂ ಅಂಥ ವ್ಯತ್ಯಾಸವೇನಿರುವುದಿಲ್ಲ.

    ಇವು ದೊಡ್ಡ ಅನುಮಾನಗಳಲ್ಲ. ತೀರ ಸಂಬಂಧವನ್ನೇ ಕತ್ತರಿಸಿ ಹಾಕುವ ಸಂಗತಿಗಳಲ್ಲ. ಆದರೆ ಇವು, ಪ್ರೀತಿಸುವ ಮನಸುಗಳನ್ನು ಉಸಿರುಗಟ್ಟಿಸಿಬಿಡುತ್ತವೆ. ಇಬ್ಬರ ನಡುವಿನ Space ಸತ್ತು ಹೋಗಿ ಪರಸ್ಪರರ ಬಗ್ಗೆ ಒಂದು ತೆರನಾದ ಭಯ-ಆತಂಕಗಳ ತೆರೆ ಎದ್ದು ನಿಲ್ಲುತ್ತದೆ. ಇವು ಯಾರೋ ದೂರದವರಿಗೆ ಆಗುವಂಥವುಗಳು ಅಂದುಕೊಳ್ಳಬೇಡಿ. ನಮ್ಮ ನಮ್ಮ ನಡುವೆಯೇ ದಿನಕ್ಕೆ ಹತ್ತುಬಾರಿ ಆಗಬಹುದಾದಂಥ ಸಂಗತಿಗಳಿವು.

    ಹೀಗಾದಾಗ ಏನು ಮಾಡಬೇಕು ಎಂಬುದು ನಿಜಕ್ಕೂ ಕಷ್ಟದ ಪ್ರಶ್ನೆಯೇ. ‘ನಿನ್ನನ್ನು ನಾನು ಅನುಮಾನಿಸುತ್ತಿಲ್ಲ. ಆದರೂ… ನೀನು ಮಾಡ್ತಿರೋದು ಯಾಕೋ ನಂಗೆ ಇಷ್ಟವಾಗ್ತಿಲ್ಲ! ಆದರೆ ಅದನ್ನ ನಿಂಗೆ ಹ್ಯಾಗೆ ತಿಳಿಸಬೇಕೋ ಅರ್ಥವಾಗ್ತಿಲ್ಲ’ ಎಂಬ ಪರಿಸ್ಥಿತಿ ಇದು. ಇಂಥ ಸಂದರ್ಭ ಬಂದಾಗ ಬ್ಯಾಗು ಸೋಸುವ, ಮೊಬೈಲು ಜಾಲಿಸುವ, ‘ನಿಮ್ಮನೇಗೇನಾದ್ರೂ ಬಂದಿದ್ಲಾ?’ ಅಂತ ಅವರಿವರಿಗೆ ಫೋನು ಮಾಡಿ ವಿಚಾರಿಸುವ-ಈ ತೆರನಾದ ಕೆಲಸಗಳನ್ನು ತಕ್ಷಣ ನಿಲ್ಲಿಸಿಬಿಡಬೇಕು.

    ‘ಇವತ್ತಿನಿಂದ ನಿಂಗೆ ಬೇಕು ಅನ್ನಿಸಿದ ಹಾಗಿರು. ಆದರೆ ನನಗೆ ಯಾವುದು ಬೇಡ ಅನ್ಸುತ್ತೆ ಎಂಬುದನ್ನು ಸೂಕ್ಷ್ಮವಾಗಿ ಅರ್ಥ ಮಾಡಿಕೋ. ನಿನ್ನ ಸ್ವಾತಂತ್ರ್ಯ ನೀನು ಅನುಭವಿಸು: ನನಗೆ ಹರ್ಟ್ ಆಗದ ಹಾಗೆ. ಇಷ್ಟರ ಮೇಲೆ ನನಗೆ ನಿನ್ನಿಂದ ಮೋಸವಾಯ್ತೋ, ಅದು ನನಗಷ್ಟೆ ಆದ ಮೋಸವಲ್ಲ. ಮನುಷ್ಯ ಸಂಬಂಧಕ್ಕೇ ಆದ ಮೋಸ. ಅದು ಬಯಲಾದ ದಿನ- ಎಲ್ಲ ಮುಗಿದು ಹೋಗುತ್ತದೆ. ನಿನ್ನ ಮೋಸ-ನನ್ನ ಪ್ರೀತಿ… ಎಲ್ಲವೂ!’ ಹಾಗಂತ ಅವಳಿಗೆ ಮನವರಿಕೆ ಮಾಡಿಕೊಟ್ಟು ಸುಮ್ಮನಾಗಿಬಿಡಿ. ನಿಮ್ಮ ಬಗ್ಗೆ, ಸಂಬಂಧದ ಬಗ್ಗೆ, ತನ್ನದೇ ಪ್ರೀತಿಯ ಬಗ್ಗೆ ನಿಜವಾದ ಕಾಳಜಿಯುಳ್ಳ ಗೆಳತಿಯಾದರೆ ಖಂಡಿತ ನಿಮಗೆ ಮೋಸ ಮಾಡಲಾರಳು.

    ಹೆಂಗಸಾದರೂ ಅಷ್ಟೆ: ಗಂಡಸಿಗೊಂದಷ್ಟು ಖಟಚ್ಚಛಿ ಅಂತ ಕೊಡಲೇಬೇಕು. ಅವನು ನಿಮಗೆ ಸಿಕ್ಕು ನಿಮ್ಮವನಾಗುವುದಕ್ಕೂ ಮುಂಚೆ ಅವನಿಗೆ ತನ್ನದೇ ಆದ ಗೆಳತಿಯರಿದ್ದರು. ನಿಸ್ಪಹ ಗೆಳೆತನಗಳಿದ್ದವು. ಹೇಗೆ ನಿಮ್ಮ ಪ್ರೀತಿಗೆ ತನ್ನದೇ ಆದ ಒಂದು Domain ಅಂತ, ಒಂದಷ್ಟು ಜಾಗ ಅಂತ ಇರುತ್ತದೋ, ಆ ನಿರುಪದ್ರವಿ ಗೆಳೆತನಗಳಿಗೂ ತಂತಮ್ಮವೇ ಆದ Domain ಗಳಿದ್ದಾವೆ. ಅವುಗಳನ್ನು ಗೌರವಿಸಬೇಕಲ್ಲವೆ? ನಿಮ್ಮೊಂದಿಗೆ ಸಹಸ್ರಾರು ಗಂಟೆ ಮಾತನಾಡಿದ ನಂತರವೂ ಅವನಿಗೆ ತನ್ನ ಗೆಳತಿಯೊಬ್ಬಳೊಂದಿಗೆ ಮಾತಾಡಬೇಕು ಅನ್ನಿಸಿದರೆ ತಪ್ಪಿಲ್ಲ. ಅವಳೊಂದಿಗೆ ಅವನು ನಿಮ್ಮ ಬಗ್ಗೆಯೇ ಮಾತನಾಡುತ್ತಿರಬಹುದು! ಸ್ವಭಾವತಃ ತೀರ ಹೆಗಲು ತೊಳೆದುಕೊಂಡ Flirt ಅಲ್ಲದೆ ಹೋದಲ್ಲಿ, ಯಾವ ಗಂಡಸೂ ತನ್ನನ್ನು ತುಂಬ

    ಪ್ರೀತಿಸಿದ ಹುಡುಗಿಗೆ ಮೋಸ ಮಾಡಬಯಸುವುದಿಲ್ಲ. ಸುಳ್ಳೇ ಅನುಮಾನಿಸಿ, ಆತಂಕಗೊಂಡು ದುಮುದುಮು ಅಂದುಬಿಡಬೇಡಿ. ನಿಚ್ಚಳವಾದ Space ಇಲ್ಲದೆ ಯಾವ ಪ್ರೀತಿಯೂ ಬದುಕಲಾರದು. ಅವರೆಷ್ಟೇ ಪ್ರೀತಿಪಾತ್ರರಿರಬಹುದು: ನಮ್ಮನ್ನು ಅವರು ನಿರಂತರವಾಗಿ ಗಮನಿಸುತ್ತಿದ್ದಾರೆ ಅನ್ನಿಸಿಬಿಟ್ಟರೆ ಕಿರಿಕಿರಿಯಾಗಿಬಿಡುತ್ತದೆ. ಎತ್ತಿಕೊಂಡ ಮಗುವನ್ನು ತುಂಬ ಹೊತ್ತು ತಬ್ಬಿಹಿಡಿದು ಉಸಿರುಗಟ್ಟಿಸಬೇಡಿ. ಅದನ್ನು ಕೆಳಗಿಳಿಸಿ ಅಂಗಳದಲ್ಲಿ ಆಡಲು ಬಿಡಿ. ಹೊಸ ಅಕ್ಕರೆಯೊಂದಿಗೆ ಮತ್ತೆ ನಿಮ್ಮಲ್ಲಿಗೇ ಮರಳುತ್ತದೆ.

    (ಲೇಖಕರು ಹಿರಿಯ ಪತ್ರಕರ್ತರು)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts