More

    ಮೆಟ್ರೋ ನಿಲ್ದಾಣಗಳಲ್ಲಿ ಸ್ಕ್ರೀನ್​ಡೋರ್​; ರೈಲು ಹತ್ತುವಾಗ, ಇಳಿಯುವಾಗ ಸುರಕ್ಷತೆ ಗ್ಯಾರಂಟಿ

    ರಾಮ ಕಿಶನ್​ ಕೆ.ವಿ.
    ಬೆಂಗಳೂರು: ನಮ್ಮ ಮೆಟ್ರೋ ನಿಲ್ದಾಣಗಳಲ್ಲಿ ಸಂಭವಿಸುವ ಆಕಸ್ಮಿಕ ಅಪಘಾತ ಹಾಗೂ ರೈಲ್ವೆ ಹಳಿಗಳಿಗೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳುವ ಪ್ರಕರಣಗಳನ್ನು ತಡೆಯಲು ‘ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ’ (ಬಿಎಂಆರ್​ಸಿಎಲ್​) ಇದೇ ಮೊದಲ ಬಾರಿಗೆ ಸ್ವಯಂಚಾಲಿತ ಪ್ರವೇಶ ದ್ವಾರ (ಸ್ಕ್ರೀನ್​ ಡೋರ್​) ಸ್ಥಾಪಿಸಲು ಮುಂದಾಗಿದೆ. ಎಲೆಕ್ಟ್ರಾನಿಕ್ಸ್​ ಸಿಟಿಯ ಕೋನಪ್ಪನ ಅಗ್ರಹಾರ ನಿಲ್ದಾಣದ ಅಂಕಣಗಳಲ್ಲಿ ನೂತನ ವ್ಯವಸ್ಥೆ ಅನುಷ್ಠಾನಗೊಳ್ಳಲಿದೆ.

    ಈಗಾಗಲೆ ಮುಂಬೈ ಹಾಗೂ ಚೆನ್ನೆ$ನ ಮೆಟ್ರೋ ನಿಲ್ದಾಣಗಳಲ್ಲಿ ಈ ಬಗೆಯ ಸ್ಕ್ರೀನ್​ ಡೋರ್​ ಅಳವಡಿಸಲಾಗಿದೆ. ಹೊಸ ವಿಧಾನದಿಂದಾಗಿ ಜನದಟ್ಟಣೆ ಹೆಚ್ಚಿರುವ ಮೆಟ್ರೋ ನಿಲ್ದಾಣಗಳಲ್ಲಿ ಸಂಭವಿಸುವ ಅವಡಗಳಿಗೆ ತಡೆ ನೀಡುವುದರ ಜತೆಗೆ ಪ್ರಯಾಣಿಕರಿಗೆ ಪೂರ್ಣಪ್ರಮಾಣದ ಸುರಕ್ಷತಾ ಭಾವವನ್ನು ಒದಗಿಸಿದಂತಾಗುತ್ತದೆ.

    ಇನ್ಫೋಸಿಸ್​ ಪ್ರತಿಷ್ಠಾನದ ಧನಸಹಾಯದಿಂದ (135 ಕೋಟಿ ರೂ.) ನಿರ್ಮಾಣವಾಗುತ್ತಿರುವ ಎಲೆಕ್ಟ್ರಾನಿಕ್ಸ್​ ಸಿಟಿ ನಿಲ್ದಾಣವು ಆರ್​.ವಿ. ರಸ್ತೆ& ಬೊಮ್ಮಸಂದ್ರ ಮಧ್ಯೆ ಹಳದಿ ಮಾರ್ಗದ ಭಾಗವಾಗಿರಲಿದೆ. ಇಂಥದ್ದೊಂದು ವಿನೂತನ ವ್ಯವಸ್ಥೆಯನ್ನು ಜಾರಿಗೆ ತರಲು ಬಿಎಂಆರ್​ಸಿಎಲ್​ ಎರಡು ವರ್ಷಗಳಿಂದ ಸಿದ್ಧತೆ ನಡೆಸಿತ್ತು.

    ಪ್ರಯಾಣಿಕರು ನಿಲ್ದಾಣದ ಫ್ಲಾಟ್​ಫಾರ್ಮ್​​ಗಳಲ್ಲಿ ಸಾಲಾಗಿ ನಿಂತಿರುವುದನ್ನು ನೀವು ನೋಡಿರುತ್ತೀರಿ. ಹೀಗೆ ನಿಂತವರು ಕುತೂಹಲಕ್ಕೋ, ಉದ್ದೇಶಪೂರ್ವಕವಾಗಿಯೋ ಹಳಿಯತ್ತ ಇಣುಕಿ ನೋಡುತ್ತಾರೆ. ಆ ಸ್ಥಳದಲ್ಲಿ ಮಕ್ಕಳನ್ನು ನಿಯಂತ್ರಿಸುವುದು ತ್ರಾಸದಾಯಕ. ಇಂಥವರಿಗೆ ಎಚ್ಚರಿಕೆ ನೀಡಲು ಭದ್ರತಾ ಸಿಬ್ಬಂದಿ ಸದಾ ಹೆಣಗಾಡುತ್ತಿರುತ್ತಾರೆ. ಹೀಗಿದ್ದರೂ ಕೆಲ ಮಂದಿ ಬೇಜವಾಬ್ದಾರಿಯ ವರ್ತನೆ ತೋರುತ್ತಾರೆ. ಇದಕ್ಕೆ ಕಡಿವಾಣ ಹಾಕಲು ಸ್ಕ್ರೀನ್​ ಡೋರ್​ ಅಳವಡಿಕೆ ಬಗ್ಗೆ ಇನ್ಫೋಸಿಸ್​ ಫೌಂಡೇಷನ್​ ಪ್ರಸ್ತಾವನೆ ಸಲ್ಲಿಸಿತ್ತು. ಇದರ ಭಾಗವಾಗಿ ಹೆಚ್ಚುವರಿ ವೆಚ್ಚವನ್ನು ಭರಿಸಲು ಸಂಸ್ಥೆಯು ಒಪ್ಪಿಕೊಂಡಿದೆ ಎಂದು ಬಿಎಂಆರ್​ಸಿಎಲ್​ ಅಧಿಕಾರಿಗಳು ತಿಳಿಸಿದ್ದಾರೆ.

    ಹೊಸ ವ್ಯವಸ್ಥೆ ಅನುಷ್ಠಾನಗೊಂಡ ಬಳಿಕ ರೈಲು ಬರುವವರೆಗೆ ‘ಸ್ಕ್ರೀನ್​ ಡೋರ್​’ ಮುಚ್ಚಿಕೊಂಡಿರುತ್ತದೆ. ಆ ವೇಳೆ ಯಾರೂ ಹಳಿಯತ್ತ ಸಾಗಲು ಸಾಧ್ಯವಿಲ್ಲ. ರೈಲು ಆಗಮನವಾದಾಗ ಸ್ಕ್ರೀನ್​ ಡೋರ್​ ತಂತಾನೆ ತೆರೆದುಕೊಳ್ಳುತ್ತದೆ. ಪ್ರಯಾಣಿಕರು ಒಳಪ್ರವೇಶಿಸಿ, ರೈಲು ತೆರಳಿದ ಬಳಿಕ ಸ್ಕ್ರೀನ್​ ಡೋರ್​ ಮತ್ತೆ ಮುಚ್ಚಿಕೊಳ್ಳುತ್ತದೆ.

    ಇನ್ಫೋಸಿಸ್​ಗೆ ಎಂಟ್ರಿ

    ಕೋನಪ್ಪನ ಅಗ್ರಹಾರ ಮೆಟ್ರೋ ನಿಲ್ದಾಣ ವರ್ಷಾಂತ್ಯದಲ್ಲಿ ಆರಂಭಗೊಳ್ಳಲಿದ್ದು, ಇಲ್ಲಿನ ವಾಕ್​ ವೇ ಮೂಲಕ ಇನ್ಫೋಸಿಸ್​ ಕ್ಯಾಂಪಸ್​ ಅನ್ನು ಪ್ರವೇಶಿಸಬಹುದು.

    ಆತ್ಮಹತ್ಯೆಯ ಸ್ಪಾಟ್​!

    ಆತ್ಮಹತ್ಯೆ ಮಾಡಿಕೊಳ್ಳುವವರಿಗೆ ನಮ್ಮ ಮೆಟ್ರೋ ರೈಲು ನಿಲ್ದಾಣಗಳ ಪ್ಲಾಟ್​ಫಾಮ್​ರ್ಗಳು ಕೃತ್ಯಕ್ಕೆ ಆಹ್ವಾನ ನೀಡುವಂತಿವೆ. 2012ರ ಮಾರ್ಚ್​ನಲ್ಲಿ ಎಂ.ಜಿ. ರಸ್ತೆ ನಿಲ್ದಾಣದಲ್ಲಿ ಸೇಂಟ್​ ಜೋಸೆಫ್​ ಪಿಯು ಕಾಲೇಜಿನ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆಗೆ ಶರಣಾಗಿದ್ದ. 2019ರ ಜನವರಿಯಲ್ಲಿ ನ್ಯಾಷನಲ್​ ಕಾಲೇಜು ನಿಲ್ದಾಣದಲ್ಲಿ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆಗೆ ಯತ್ನಿಸಿ ಸ್ವಲ್ಪದರಲ್ಲೇ ಪಾರಾಗಿದ್ದ. ರೈಲು ಬರುವಾಗ ಸೆಲ್ಫಿ& ರೀಲ್ಸ್​ ಹುಚ್ಚು ಸಹ ಅನಾಹುತಗಳಿಗೆ ಎಡೆಮಾಡಿಕೊಡುತ್ತಿದೆ.

    ಭದ್ರತಾ ಸಿಬ್ಬಂದಿಗೆ ರಿಲೀಫ್

    ನಾಡಪ್ರಭು ಕೆಂಪೇಗೌಡ ನಿಲ್ದಾಣ (ಮೆಜೆಸ್ಟಿಕ್​), ಯಶವಂತಪುರ, ಮಹಾತ್ಮ ಗಾಂಧಿ ರಸ್ತೆ, ಮಲ್ಲೇಶ್ವರ, ಕಬ್ಬನ್​ ಉದ್ಯಾನವನ, ಬನಶಂಕರಿ ಮುಂತಾದ ಮೆಟ್ರೋ ನಿಲ್ದಾಣಗಳಲ್ಲಿ ಸದಾ ಜನದಟ್ಟಣೆ ಕಾಣಿಸುತ್ತದೆ. ಧಾವಂತದ ಮನಸ್ಥಿತಿಯಲ್ಲಿರುವ ಪ್ರಯಾಣಿಕರು ಸುರಕ್ಷತಾ ನಿಯಮಗಳತ್ತ ಗಮನಹರಿಸದೆ ಇದ್ದಾಗ ಆಕಸ್ಮಿಕ ಅನಾಹುತ ಸಂಭವಿಸುವ ಸಾಧ್ಯತೆ ಇರುತ್ತದೆ. ಮೊಬೈಲ್​ ಹಾವಳಿಯೂ ಅನಿರೀಕ್ಷಿತ ದುರಂತಗಳಿಗೆ ಕಾರಣವಾಗಬಲ್ಲದು. ಹೀಗಿರುವಾಗ ಸ್ಕ್ರೀನ್​ಡೋರ್​ ವ್ಯವಸ್ಥೆಯು ಭದ್ರತಾ ಸಿಬ್ಬಂದಿಗೆ ದೊಡ್ಡ ರಿಲೀಫ್​ ನೀಡಲಿದೆ. ಈ ವ್ಯವಸ್ಥೆ ನಗರದ ಎಲ್ಲ ಮೆಟ್ರೋ ನಿಲ್ದಾಣಗಳಲ್ಲೂ ಅನುಷ್ಠಾನಗೊಳ್ಳಬೇಕು ಎಂಬುದು ಸಾರ್ವಜನಿಕರ ಆಗ್ರಹವಾಗಿದೆ.

    ಬೇರೆ ನಿಲ್ದಾಣಗಳಲ್ಲೂ ಅಳವಡಿಕೆ

    ಪ್ರಯಾಣಿಕರ ಸುರಕ್ಷತೆಯನ್ನು ಹೆಚ್ಚಿಸಲು ಐದು ವರ್ಷದ ನಿರ್ವಹಣೆ ಸೇರಿ ಸಿಗ್ನಲಿಂಗ್​, ನಿಯಂತ್ರಣ, ಕಂಟ್ರೋಲಿಂಗ್​ ಮತ್ತು ಫ್ಲಾಟ್​ಫಾರ್ಮ್​​ನಲ್ಲಿ ಸ್ಕ್ರೀನ್​ ಡೋರ್​ ವಿನ್ಯಾಸ ನಿರ್ಮಾಣಕ್ಕಾಗಿ ಬಿಎಂಆರ್​ಸಿಎಲ್​ ಟೆಂಡರ್​ ಆಹ್ವಾನಿಸಿದೆ. ಇದನ್ನು ಹಂತ&2, 2ಎ ಮತ್ತು 2ಬಿ ಯೋಜನೆಯಲ್ಲಿ ಬರುವ ನಿಲ್ದಾಣಗಳಲ್ಲಿ ಅಳವಡಿಸಲಾಗುತ್ತದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts