More

    PHOTOS| ಡೊನಾಲ್ಡ್​​ ಟ್ರಂಪ್​​ ಭಾರತ ಪ್ರವಾಸದ ಮೊದಲ ದಿನದ ವಿಶೇಷ ಕ್ಷಣಗಳ ಫೋಟೋ ಝಲಕ್​ !

    ಅಹಮದಾಬಾದ್​​: ವಿಶ್ವದ ದೊಡ್ಡಣ್ಣನೆಂದೇ ಖ್ಯಾತಿಯಾಗಿರುವ ಅಮೆರಿಕ ಮತ್ತು ಭಾರತ ನಡುವಿನ ಸಂಬಂಧಕ್ಕೆ ಗುಜರಾತಿನ ಅಹಮದಬಾದ್​ನಲ್ಲಿ ಇಂದು ನಡೆದ “ನಮಸ್ತೆ ಟ್ರಂಪ್” ಕಾರ್ಯಕ್ರಮ ಹೊಸ ಭಾಷ್ಯ ಬರೆಯಿತು. ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಅಧ್ಯಕ್ಷ ಡೊನಾಲ್ಡ್​ ಟ್ರಂಪ್ ಭಾಗಿಯಾಗಿದ್ದರು. ಟ್ರಂಪ್​ ಅವರಿಗೆ ಇದು ಭಾರತದ ಮೊದಲನೇ ಭೇಟಿ ಎಂಬುದು ವಿಶೇಷ. ಹೀಗಾಗಿ ಎಂದೂ ಮರೆಯದ ಸ್ಮರಣೀಯ ಸ್ವಾಗತವನ್ನು ಭಾರತೀಯರ ನೀಡಿದರು. ಅದಕ್ಕೆ ಟ್ರಂಪ್​ ಕೂಡ ಧನ್ಯವಾದ ತಿಳಿಸಿದರು.

    ಟ್ರಂಪ್​ ತಾವೊಬ್ಬರೇ ಬರದೇ ತಮ್ಮ ಪತ್ನಿ ಹಾಗೂ ಅಮೆರಿಕ ಪ್ರಥಮ ಮಹಿಳೆ ಮೆಲಾನಿಯಾ ಟ್ರಂಪ್​, ಪುತ್ರಿ ಇವಾಂಕ ಟ್ರಂಪ್​ ಹಾಗೂ ಅಳಿಯ ಜರೇದ್​ ಕುಶ್ನರ್​ ಮತ್ತು ಅಮೆರಿಕ ನಿಯೋಗವನ್ನು ತಮ್ಮೊಡನೆ​ ಕರೆತಂದಿದ್ದರು. ಇಂದು ಬೆಳಗ್ಗೆ ಅಹಮದಬಾದ್​ನ ಸರ್ದಾರ್​ ವಲ್ಲಭಭಾಯಿ ಪಟೇಲ್​ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ಅವರನ್ನು ಪ್ರಧಾನಿ ಮೋದಿ ಆತ್ಮೀಯವಾಗಿ ಬರಮಾಡಿಕೊಂಡರು. ಬಳಿಕ ಬೃಹತ್​ ರೋಡ್​ ಶೋ ಮೂಲಕ ಸಬರಮತಿಯ ಗಾಂಧಿ ಆಶ್ರಮಕ್ಕೆ ಭೇಟಿ ನೀಡಿ, ಗಾಂಧಿ ಜೀವನವನ್ನು ಮೆಲುಕು ಹಾಕಿದರು. ಬಳಿಕ ವಿಶ್ವದ ಬಹುದೊಡ್ಡ ಮೊಟೆರಾ ಕ್ರಿಕೆಟ್​ ಕ್ರೀಡಾಂಗಣದಲ್ಲಿ ಆಯೋಜನೆಗೊಂಡಿದ್ದ “ನಮಸ್ತೆ ಟ್ರಂಪ್​” ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಭಾಷಣದ ಉದ್ದಕ್ಕೂ ಪ್ರಧಾನಿ ಮೋದಿ ಸೇರಿದಂತೆ ಭಾರತೀಯರನ್ನು ಕೊಂಡಾಡಿದರು. ಕಾರ್ಯಕ್ರಮದಲ್ಲಿ ನೆರೆದಿದ್ದ ಸುಮಾರು ಒಂದು ಲಕ್ಷ ಮಂದಿಗೂ ಧನ್ಯವಾದ ತಿಳಿಸಿದರು.

    ಬಳಿಕ ಅಹಮದಾಬಾದ್​ನಿಂದ ಉತ್ತರ ಪ್ರದೇಶದ ಆಗ್ರಾಗೆ ತೆರಳಿದ ಟ್ರಂಪ್​ ಕುಟುಂಬ ಜಗತ್ತಿನ ಅದ್ಭುತಗಳಲ್ಲಿ ಒಂದಾದ ತಾಜ್​ ಮಹಲಿನ ಸೊಬಗನ್ನು ಕಣ್ತುಂಬಿಕೊಂಡರು. ಫೋಟೋಗಳನ್ನು ಕ್ಲಿಕ್ಕಿಸಿಕೊಳ್ಳುವ ಮೂಲಕ ಭೇಟಿಯನ್ನು ಮತ್ತಷ್ಟು ಸ್ಮರಣೀಯವಾಗಿಸಿಕೊಂಡರು. ಬಳಿಕ ಅಲ್ಲಿಂದ ಟ್ರಂಪ್​ ಕುಟುಂಬ ದೆಹಲಿಗೆ ಪ್ರಯಾಣ ಬೆಳೆಸಿತು.

    ಇಂದು ಭಾರತದಲ್ಲಿ ಇಡೀ ದಿನ ಟ್ರಂಪ್​ ಮಯವಾಗಿತ್ತು. ಟ್ರಂಪ್​ ಹೋದಲೆಲ್ಲಾ ಅದ್ಧೂರಿ ಸ್ವಾಗತವನ್ನು ನೀಡಲಾಯಿತು. ವಿವಿಧ ಕಲಾತಂಡಗಳು, ವಿದ್ಯಾರ್ಥಿಗಳು ಟ್ರಂಪ್​ ಕುಟುಂಬವನ್ನು ಆತ್ಮೀಯವಾಗಿ ಬರಮಾಡಿಕೊಂಡು ಅಷ್ಟೇ ಪ್ರೀತಿಯಿಂದ ಬೀಳ್ಕೊಟ್ಟರು. ಟ್ರಂಪ್​ ಹಾದು ಹೋಗುವ ರಸ್ತೆಯುದ್ದಕ್ಕೂ ಸ್ವಾಗತ ಸಂದೇಶ ಸೇರಿದಂತೆ ಪ್ರಧಾನಿ ಮೋದಿ ಜತೆಗಿನ ಪೋಸ್ಟರ್​ಗಳು ರಾರಾಜಿಸಿದವು. ಒಂದೇ ದಿನದಲ್ಲಿ ಹಲವು ಉತ್ತಮ ಕ್ಷಣಗಳನ್ನು ಟ್ರಂಪ್​ ಅವರಿಗೆ ಭಾರತೀಯರು ಕೊಡುಗೆ ನೀಡಿದರು. ಹೀಗಾಗಿ ಟ್ರಂಪ್​ ಅವರ ಇಡೀ ದಿನದ ಝಲಕ್​ ಅನ್ನು ಈ ಕೆಳಕಂಡ ಅದ್ಭುತ ಫೋಟೋಗಳ ಮೂಲಕ ಕಣ್ತುಂಬಿಕೊಳ್ಳಬಹುದಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts