More

  ರವಿ ಬೆಳಗೆರೆ ಅಂಕಣ; ‘ಪಾಪ ನಾನು’ ಎಂಬ ಕಷ್ಟ, ‘ಅಯ್ಯೋ ಪಾಪ’ ಅನ್ನಿಸಿಕೊಳ್ಳುವ ಸುಖ!

  ಅಯ್ಯೋ ಪಾಪ! ಹಾಗಂತ ನಾವು ಬೇರೆ ಯಾರ ಬಗ್ಗೆಯಾದರೂ ಅಂದರೆ ಅದು ಒಳ್ಳೆಯದೇ. ತೊಂದರೆಯಲ್ಲಿರುವವರ ಬಗ್ಗೆ ‘ಅಯ್ಯೋ ಪಾಪ’ ಅನ್ನಿಸುವುದು ಮನುಷ್ಯತ್ವದ ಸಹಜ ಲಕ್ಷಣ. ಆದರೆ ‘ಅಯ್ಯೋ ಪಾಪ’ ಅಂತ ನಮ್ಮ ಬಗ್ಗೆ ನಮಗೇ ಅನ್ನಿಸಿ ಬಿಡುವುದಿದೆಯಲ್ಲ? That’s dangerous.

  “Poor me, ಪಾಪ ನಾನು’ ಎಂಬಂತಹ ಶಬ್ದಗಳನ್ನು ನಮ್ಮ ಮಾತುಗಳಲ್ಲಿ, ಮೆಸೇಜುಗಳಲ್ಲಿ ಬಳಸುತ್ತಿರುತ್ತೇವೆ. ಇದು ತಮಾಷೆಯಾಗಿ ಬಳಕೆಯಾಗುತ್ತಿದ್ದರೆ ಓಕೆ. ಆದರೆ ನಿಜಕ್ಕೂ ನಮಗೆ ನಮ್ಮ ಬಗ್ಗೆ ಅಯ್ಯೋ ಅನ್ನಿಸಿ ಬಿಡುವುದು ಅಪಾಯಕಾರಿಯಷ್ಟೆ ಅಲ್ಲ, ಅದು ಮಾನಸಿಕ ಕಾಯಿಲೆಯ ಲಕ್ಷಣವೂ ಹೌದು. ಇಂಗ್ಲಿಷಿನಲ್ಲಿ ಮತ್ತು ವೈದ್ಯಕೀಯ ಭಾಷೆಯಲ್ಲಿ ಇದನ್ನು self pity ಅನ್ನುತ್ತಾರೆ. ‘ಪಾಪ ನಾನು’ ಎಂಬುದು ಕೇವಲ ಡಿಪ್ರೆಷನ್​ನ ಲಕ್ಷಣವಲ್ಲ. elf pityಗೆ ಒಳಗಾಗುವವರೆಲ್ಲರೂ ಡಿಪ್ರೆಷನ್ ಎಂಬ ಕಾಯಿಲೆಯ ರೋಗಿಗಳಲ್ಲ.

  Self pity ಎಂಬುದಕ್ಕಿಂತ ದೊಡ್ಡ ಶತ್ರು ಪ್ರಪಂಚದಲ್ಲಿಲ್ಲ. ಅದಕ್ಕೆ ನಾವು ಬಲಿಯಾದದ್ದೇ ಆದರೆ ಜಗತ್ತಿನಲ್ಲಿ ಏನನ್ನೂ ಸಾಧಿಸಲು ಸಾಧ್ಯವಿಲ್ಲ ಎಂಬ ಮಾತನ್ನು ಹೆಲೆನ್ ಕೆಲರ್ ಹೇಳುತ್ತಿದ್ದಳು. ಆಕೆ ಬಗ್ಗೆ ನಾನು ಹೇಳಬೇಕಾಗಿಲ್ಲ. ನಾನಾ ರೀತಿಯಲ್ಲಿ ಅಂಗವಿಕಲೆಯಾಗಿದ್ದ ಹೆಲೆನ್ ಕೆಲರ್, ‘ಪಾಪ ನಾನು’ ಎಂಬ ಮಹಾನ್ ಸಮುದ್ರದಲ್ಲಿ ಸಂಪೂರ್ಣವಾಗಿ ಮುಳುಗಿ ಹೋಗಬಹುದಿತ್ತು. ಆಕೆಗೆ ಅಷ್ಟೊಂದು ಕಾರಣಗಳಿದ್ದವು.

  ಆಕೆ ಮೊದಲು ಗೆದ್ದು ನಿಂತದ್ದೇ Self pity ಎಂಬ ಮೊದಲ ವೈಕಲ್ಯವನ್ನ. ತಮಾಷೆಯೇನು ಗೊತ್ತ? ‘ಪಾಪ ನಾನು’ ಎಂಬ ಭಾವನೆ ಹುಟ್ಟುವುದೇ ಅದಕ್ಕೆ ತದ್ವಿರುದ್ಧವಾದ ಪೊದರಿನಲ್ಲಿ. ವಿಪರೀತ ಸ್ವಾರ್ಥ, ವಿಪರೀತ ಅಹಂಕಾರ, ego centrismನ ಇನ್ನೊಂದು ಅತಿರೇಕವೇ ‘ಪಾಪ ನಾನು’ ಎಂಬ ಭಾವ. ಇಂಥ ಭಾವದಿಂದ ನರಳುವವರು ತಾವಷ್ಟೇ ಅಲ್ಲ, ತಮ್ಮ ಸುತ್ತಲಿನವರನ್ನೂ ಭಯಂಕರ ಅಸುಖಿಗಳನ್ನಾಗಿಸುತ್ತಾರೆ. ಜಗತ್ತಿನಲ್ಲಿ ದುಃಖ ಬೇರೆ. ಅದು ಎಲ್ಲರನ್ನೂ ಒಂದಲ್ಲ ಒಂದು ಹಂತದಲ್ಲಿ ಕಾಡುತ್ತದೆ. ನಾವು ನಾನಾ ಕಾರಣಗಳಿಂದಾಗಿ ದುಃಖಿಗಳಾಗುತ್ತೇವೆ. ಆದರೆ ದುಃಖ ಕೂಡ ಸಂತೋಷದಂತೆಯೇ ಬದುಕಿನಲ್ಲಿ ‘ಬಂದು ಹೋಗುವ’ ಅತಿಥಿ. ಯಾವ ದುಃಖವೂ

  ಶಾಶ್ವತವಲ್ಲ: ಸುಖ ಕೂಡ ಅಷ್ಟೆ. ‘ಪುತ್ರ ಶೋಕಂ ನಿರಂತರಂ’ ಎಂಬಂಥ ವೇದಾಂತದ ಮಾತುಗಳನ್ನು ನಾವು ಕೇಳುತ್ತಿರುತ್ತೇವೆ. ಆದರೆ ನನಗೆ ಗೊತ್ತಿದೆ: ಮಗನನ್ನು ಕಳೆದುಕೊಂಡು ವಿಪರೀತ ವ್ಯಾಕುಲರಾಗಿದ್ದ ಬೀchiಯವರು ಆ ನಂತರ ಅನೇಕ ವರ್ಷ ನಗೆ ಲೇಖನ ಬರೆದರು. ಹೊಟ್ಟೆಬಿರಿಯೆ ನಗಿಸಿ ಭಾಷಣ ಮಾಡಿದರು. ತಾವೂ ಮನಸಾರೆ ನಕ್ಕರು. ಅವರದು ಕೇವಲ ದುಃಖ. ಅದು ಕ್ರಮೇಣ ತಿಳಿಯಾಗಿ, ಕಡೆಗೆ ಮರೆಯೂ ಆಗಿತ್ತು.

  ಆದರೆ ದುಃಖಕ್ಕೆ ತುಂಬ ವಿಭಿನ್ನವಾದದ್ದು self pity. ಈ ಗೀಳಿಗೆ ತುತ್ತಾದರೆ ನಾವು ನಿರಂತರವಾಗಿ ಇನ್ನೊಬ್ಬರ ಸಿಂಪಥಿಗಾಗಿ, ಸಾಂತ್ವನಕ್ಕಾಗಿ, ಸಂತೈಸುವಿಕೆಗಾಗಿ ಇದಿರು ನೋಡುತ್ತಿರುತ್ತೇವೆ. ವಿಚಿತ್ರವೆಂದರೆ, ಅದರಲ್ಲೇ ಒಂದು ರುಚಿ ಮತ್ತು ಸುಖ ಕಂಡುಕೊಳ್ಳುತ್ತೇವೆ. ‘ಪಾಪ ಕಣ್ರೀ ನಿಮಗೆ ಹೀಗಾಗಬಾರದಿತ್ತು’ ಅಂತ ಯಾರಾದರೂ ಅಂದರೆ ಸಾಕು, ಅದರಲ್ಲೊಂದು ಖುಷಿ ಸಿಗುತ್ತದೆ.

  ಇದು ಒಂದು ಸಲಕ್ಕೆ ಸಿಕ್ಕು, ತೃಪ್ತಿಯಾಗುವಂತಹ ಖುಷಿಯಾಗಿದ್ದರೆ ಸಹಿಸಿಕೊಳ್ಳಬಹುದಿತ್ತು. ಆದರೆ ಇದು ದಿನದಿಂದ ದಿನಕ್ಕೆ ಬೆಳೆಯುವಂತಹುದು. ಒಂಥರಾ ಡ್ರಿಂಕ್​ನಂತಹುದು, ಡ್ರಗ್​ನಂತಹುದು. ಮೊದಲ ಸಲ ತಲೆನೋವು ಬಂದಾಗ ಒಂದು dart ಮಾತ್ರೆ ಸಾಕಾಗುತ್ತದೆ. ಅದನ್ನೇ ಅಭ್ಯಾಸ ಮಾಡಿಕೊಂಡು ನೋಡಿ? ಊಟಕ್ಕಿಂತ ಹೆಚ್ಚು dart ಮಾತ್ರೆ ತಿನ್ನತೊಡಗುತ್ತೀರಿ ಮತ್ತು ಹಸಿವೆಗಿಂತ ಹೆಚ್ಚಿನ ಸಲ ನಿಮಗೆ ತಲೆನೋವು ಬರತೊಡಗುತ್ತದೆ. ಕೆಮಿಕಲ್​ನ ಸಹವಾಸವೇ ಅಂತಹುದು.

  Exactly, ಆ ಕೆಮಿಕಲ್​ನಂತಹುದೇ self pity ಎಂಬ ಗೀಳು. ಒಂದು ಸಲ ‘ಅಯ್ಯೋ ಪಾಪ’ ಅಂದರೆ ಸಾಲದು. ಆ ಸಂತೋಷ ಬೇಗ ಇಳಿದು ಹೋಗಿ ಮತ್ತೊಂದು ಸಲ ಬೇಕು, ಇನ್ನೊಂದು ಡೋಸ್ ಬೇಕು ಅನ್ನಿಸತೊಡಗುತ್ತದೆ. ‘ಇಲ್ಲ ಕಣೇ, ನಿನಗೆ ಅಂಥದ್ದೇನೂ ಆಗಿಲ್ಲ.You are fine. ಸುಮ್ಮನೆ ಗೋಳು ಕರೆಯುತ್ತಾ, ಗೊರಬುತ್ತಾ, ನಿನ್ನನ್ನೇ ನೀನು-ನಿನ್ನ ಬದುಕನ್ನೇ ನೀನು ಹಳಿದುಕೊಳ್ತಾ ಕೂಡಬೇಡ. ನೀನು ತಪ್ಪು ಮಾಡುತ್ತಿದ್ದೀಯ. ಅತೀ ಮಾಡ್ತಿದೀಯ’ ಅಂತ ಅವರಿಗೆ ಹೇಳಿ ನೋಡಿ? ಅವರು ಒಪ್ಪುವುದಿಲ್ಲ. ನಿಮ್ಮ ಮೇಲೆಯೇ ಸಿಟ್ಟು ಮಾಡಿಕೊಳ್ಳುತ್ತಾರೆ. ಇನ್ನೊಂದು ಪೆಗ್ ಕೊಡಲಾಗುವುದಿಲ್ಲ ಅಂತ ಅಂಗಡಿಯವನು ಹೇಳಿದಾಗ ಕುಡುಕನೊಬ್ಬ ಸಿಟ್ಟು ಮಾಡಿಕೊಂಡಂತೆ! ಏಕೆಂದರೆ, ಅವರಿಗೆ ಮೇಲಿಂದ ಮೇಲೆ ‘ಅಯ್ಯೋ ಪಾಪ’ಗಳು, ಸಾಂತ್ವನಗಳು ಸಿಗದಿದ್ದರೆ ಸಂತೋಷವಾಗುವುದಿಲ್ಲ. ಇದನ್ನು ತಮಾಷೆಗಾಗಿ “pity party’ ಅಂತಲೂ ಅನ್ನುತ್ತಾರೆ. ಏಕೆಂದರೆ, ಅವರಿಗೆ ನಿರಂತರವಾಗಿ ಇನ್ನೊಬ್ಬರ ದಯೆ, ಸಾಂತ್ವನ, ಕರುಣೆ, ಅಯ್ಯೋ ಪಾಪಗಳು ಬೇಕು. ಅದು ಅವರೇ ಆರಿಸಿಕೊಂಡ ಸಂತೋಷ(?)ದ ವಿಧಾನ. ಅದು ಅವರದೇ ಚಾಯ್ಸ್​.

  ಅಂಥ ಕೆಲವರು ನನಗೇ ಪರಿಚಯವಿದ್ದಾರೆ. ಅವರಿಗೆ ಬದುಕಿನಲ್ಲಿ ಎಲ್ಲವೂ ಇವೆ. ಮನೆ, ಒಳ್ಳೆಯ ನೌಕರಿ, ಸುಂದರ ಸಂಸಾರ, ಕಾರು-ಯಾವುದಕ್ಕೂ ಕೊರತೆಯಿಲ್ಲ. ಆದರೆ ಅವರು ಯಾವತ್ತೂ ಸಂತುಷ್ಟರಲ್ಲ. ಸಮಾಧಾನಿಗಳಲ್ಲ. ಇದನ್ನು ಇಂಗ್ಲಿಷಿನಲ್ಲಿ Martyr complex ಅಂತಲೂ ಅನ್ನುತ್ತಾರೆ. ಬದುಕಿನಲ್ಲಿ ಯಾಕೋ ಯಾವುದೂ ಸರಿಯಿಲ್ಲ. ಎಲ್ಲ ಹಾಳಾಗುತ್ತಿದೆ. ಏನೋ ಕೆಟ್ಟದ್ದಾಗಲಿದೆ ಎಂಬ ಭಾವನೆ.

  ಒಬ್ಬ ಗೃಹಿಣಿ ಇಂಥ ಸಮಸ್ಯೆ ಹೇಳಿಕೊಂಡು ನನಗೆ ಪದೇಪದೆ ಫೋನು ಮಾಡುತ್ತಿದ್ದಳು. ಮೊದಲೆಲ್ಲ ನಿಜಕ್ಕೂ ತೊಂದರೆಯಲ್ಲಿದ್ದಾಳಲ್ಲ, ಪಾಪ ಅನ್ನಿಸುತ್ತಿತ್ತು. ಆದರೆ ಖುದ್ದಾಗಿ ಭೇಟಿಯಾದಾಗ ಅದ್ಯಾವ ತೊಂದರೆಯೂ ಆಕೆಗಿರಲಿಲ್ಲ. ಪಾಪ ಅನ್ನುವಂಥದ್ದೇನೂ ಇರಲಿಲ್ಲ. ಆಕೆಗೆ ನನ್ನಿಂದ ಅಥವಾ ಮತ್ಯಾರಿಂದಲಾದರೂ ಸರಿ, ಬೇಕಾದದ್ದು ಸಿಂಪಥಿಯೊಂದೇ. ಜಗತ್ತಿನಲ್ಲಿ ಯಾರಿಗೂ ಆಗದಂಥದ್ದು, ಆಗಬಾರದಂಥದ್ದು ತನಗೇ ಆಗಿದೆ ಅಥವಾ ಆಗುತ್ತಿದೆ ಎಂಬ ಭಾವ. ನಿಜ ಹೇಳಬೇಕೆಂದರೆ, ಆಕೆ ಹೇಳಿಕೊಂಡಳಲ್ಲ? ಅಷ್ಟು ತೊಂದರೆಗಳು ಜಗತ್ತಿನಲ್ಲಿ ಯಾರಿಗೂ ಇರಲು ಸಾಧ್ಯವೇ ಇಲ್ಲ ಅನ್ನಿಸಿತು. ನಾನು ಸಮಾಧಾನ ಹೇಳುವುದನ್ನು ತಕ್ಷಣ ನಿಲ್ಲಿಸಲಿಲ್ಲ. ಆದರೆ ಕಡಿಮೆ ಮಾಡುತ್ತಾ ಹೋದೆ.

  ‘ಅಯ್ಯೋ ಪಾಪ’ದ dosage ನಿಧಾನವಾಗಿ taper off ಮಾಡುತ್ತಾ ಹೋದೆ. ಆಮೇಲೆ ನಿಧಾನವಾಗಿ ಆಕೆಯಲ್ಲಿ ತುಂಬತೊಡಗಿದ್ದು ಆತ್ಮವಿಶ್ವಾಸದ, ಜೀವನ ಸಂತೋಷದ ಭಾವನೆಯನ್ನ. ಇವತ್ತು ಆ ಹೆಣ್ಣುಮಗಳು ನಿಜಕ್ಕೂ ಚೆನ್ನಾಗಿದ್ದಾಳೆ. ಸಂತೋಷದಿಂದ ಮಾತನಾಡುತ್ತಾಳೆ.

  ಆಕೆಗೆ ನಾನು ಮನವರಿಕೆ ಮಾಡಿಕೊಟ್ಟ ಸಂಗತಿಯೆಂದರೆ ‘ನಿಮಗಿರುವ ಅಥವಾ ಇವೆ ಅಂತ ನೀವು ಅಂದುಕೊಂಡಿರುವ ಸಮಸ್ಯೆಗಳಿಗಿಂತ ನಿಜಕ್ಕೂ ಗಂಭೀರವಾದ ಸಮಸ್ಯೆಗಳು ಅನೇಕರಿಗೆ ಇವೆ. ಅವರ್ಯಾರೂ self pityಯಿಂದ ನರಳುತ್ತಿಲ್ಲ. ಒಮ್ಮೆ ಈ ಗೀಳಿನಿಂದ ಹೊರ ಬನ್ನಿ. ಜಗತ್ತು ನಿಜಕ್ಕೂ ಸುಂದರವಾಗಿ ಕಾಣುತ್ತದೆ. ಬದುಕಿನಲ್ಲಿ ನಿಮಗಿರುವ ಸಂತೋಷ, ಸವಲತ್ತುಗಳೆಡೆಗೆ ನೋಡಿ. ನೀವು ಕೊರಗಲು ಕಾರಣವೇ ಇಲ್ಲ.

  ಒಂದೇ ಮಾತಿನಲ್ಲಿ ಹೇಳುವುದಾದರೆ, ನಿಮಗೇನೂ ಧಾಡಿಯಾಗಿಲ್ಲ’. ಈ ಮಾತು ಆಕೆಯ ಮನಸ್ಸಿಗೆ ನಾಟಿದಂತೆ ಕಾಣುತ್ತದೆ. ಈ ಮಧ್ಯೆ ಫೋನು ಮಾಡುತ್ತಿಲ್ಲ. ಅಪರೂಪಕ್ಕೆ ಮಾಡಿದರೂ ಮಾತಿನಲ್ಲಿ ‘ಪಾಪ ನಾನು’ ಎಂಬ ಭಾವವಿಲ್ಲ. ಈ ವಿಷಯಕ್ಕೆ ಸಂಬಂಧಿಸಿದಂತೆ ಮಹಾನ್ ಲೇಖಕ ಡಿ.ಎಚ್.ಲಾರೆನ್ಸ್ ಒಂದು ಮಾತು ಹೇಳುತ್ತಿದ್ದ : ‘ಮರದ ಕೊಂಬೆಯಿಂದ ಸತ್ತು ಬೀಳುವ ಹಕ್ಕಿ ಕೂಡ ತನ್ನ ಬಗ್ಗೆ ತಾನು ಅಯ್ಯೋ ಅಂದುಕೊಳ್ಳುವುದಿಲ್ಲ!’ ಎಂಥ ಮಾತು!

  (ಲೇಖಕರು ಹಿರಿಯ ಪತ್ರಕರ್ತರು) 

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts