More

    ಕಾಂಗ್ರೆಸ್ 30 ಸ್ಥಾನಕ್ಕಿಂತ ಹೆಚ್ಚು ಗೆಲ್ಲದು: ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು

    ಉಡುಪಿ: ಚುನಾವಣೆಯಲ್ಲಿ ಜಾತಿ ರಾಜಕಾರಣ, ಗೂಂಡಾಗಿರಿ ಇನ್ಮುಂದೆ ನಡೆಯೋದಿಲ್ಲ. ಅಭಿವೃದ್ಧಿಗೆ ಮತದಾರರ ಆದ್ಯತೆ. ಮುಂದಿನ ಜಿಪಂ, ತಾಪಂ, ಗ್ರಾಪಂ ಚುನಾವಣೆಯಲ್ಲಿ ಬಿಜೆಪಿ ಶೇ.80ರಷ್ಟು ಸ್ಥಾನ ಪಡೆಯಲಿದ್ದು, ಕಾಂಗ್ರೆಸ್ ವಿಧಾನಸಭಾ ಚುನಾವಣೆಯಲ್ಲಿ 30ಕ್ಕಿಂತ ಹೆಚ್ಚಿನ ಸ್ಥಾನದಲ್ಲಿ ಗೆಲುವು ದಾಖಲಿಸುವುದಿಲ್ಲ ಎಂದು ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಹೇಳಿದರು.

    ಗುರುವಾರ ಉಡುಪಿಯಲ್ಲಿ ಬಿಜೆಪಿ ಮಂಗಳೂರು ವಿಭಾಗ ಮಟ್ಟದ ಪ್ರಶಿಕ್ಷಣ ಅಭ್ಯಾಸ ವರ್ಗ ಉದ್ಘಾಟಿಸಿ ಅವರು ಮಾತನಾಡಿದರು.

    ಸ್ವಾತಂತ್ರಾೃನಂತರ ದೇವಸ್ಥಾನಕ್ಕೆ ಶಿಲಾನ್ಯಾಸ ಮಾಡಿದ ಮೊದಲ ಪ್ರಧಾನಿ ನರೇಂದ್ರ ಮೋದಿ. ಆದರೆ ದೇಶದಲ್ಲಿ ಕಾಂಗ್ರೆಸ್ ಜಾತ್ಯತೀತತೆ ಹೆಸರಿನಲ್ಲಿ ಹಿಂದು ಮತ್ತು ಮುಸ್ಲಿಮರನ್ನು ಒಡೆದಿದೆ. ಹಿಂದುಗಳನ್ನು ಜಾತಿ ಆಧಾರದಲ್ಲಿ ವಿಭಜಿಸಿದೆ. ಅಧಿಕಾರ ರಾಜಕಾರಣದಿಂದ ಕಾಂಗ್ರೆಸ್ ದಾರಿ ತಪ್ಪಿದೆ ಎಂದರು.
    ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್, ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಸುದರ್ಶನ ಮೂಡುಬಿದರೆ, ವಿಭಾಗ ಪ್ರಭಾರಿ ಕೆ. ಉದಯಕುಮಾರ್ ಶೆಟ್ಟಿ, ಸಹ ಪ್ರಭಾರಿ ಗೋಪಾಲಕೃಷ್ಣ ಹೇರಳೆ, ಪ್ರಶಿಕ್ಷಣ ವರ್ಗದ ರಾಜ್ಯ ಸಮಿತಿ ಸದಸ್ಯೆ ಡಾ. ಮಂಜುಳ ರಾವ್, ಶಾಸಕ ಲಾಲಾಜಿ ಮೆಂಡನ್, ವಿಧಾನ ಪರಿಷತ್ ಸದಸ್ಯ ಪ್ರತಾಪ್‌ಸಿಂಹ ನಾಯಕ್, ಪಕ್ಷದ ವಕ್ತಾರ ಗಣೇಶ್ ಕಾರ್ಣಿಕ್, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರ್ ರತ್ನಾಕರ ಹೆಗ್ಡೆ, ಜಿಲ್ಲಾ ಉಪಾಧ್ಯಕ್ಷ ಯಶ್‌ಪಾಲ್ ಸುವರ್ಣ ಉಪಸ್ಥಿತರಿದ್ದರು.

    ವ್ಯಕ್ತಿ ನಿರ್ಮಾಣದಿಂದ ರಾಷ್ಟ್ರ ನಿರ್ಮಾಣ ಎಂಬ ಧ್ಯೇಯದಲ್ಲಿ ಪಕ್ಷ ವಿಚಾರಧಾರೆ ತಿಳಿಸಿಕೊಟ್ಟು, ಸಿದ್ಧಾಂತದಲ್ಲಿ ನಂಬಿಕೆ ಬೆಳೆಸಿ ಸಂಸ್ಕಾರ ನೀಡುವ ಕಾಯಕವೇ ಅಭ್ಯಾಸ ವರ್ಗ. ಇಲ್ಲಿ ಸಾಮಾನ್ಯ ಕಾರ್ಯಕರ್ತನನ್ನು ನಾಯಕನನ್ನಾಗಿ ರೂಪಿಸಲಾಗುತ್ತದೆ. ಪಕ್ಷದಲ್ಲಿ ವ್ಯಕ್ತಿಗಿಂತ ತತ್ವ ಪೂಜೆಗೆ ಪ್ರಾಧಾನ್ಯತೆ. ಹೀಗಾಗಿ ಪಕ್ಷ 2 ಎಂಪಿಗಳು ಹಾಗೂ 2 ಕೊಠಡಿಯಿಂದ ಪ್ರಾರಂಭವಾಗಿ ಇಂದು ಉನ್ನತ ಸ್ಥಾನಕ್ಕೆ ತಲುಪಿದೆ.
    – ನಳಿನ್‌ಕುಮಾರ್ ಕಟೀಲು, ಬಿಜೆಪಿ ರಾಜ್ಯಾಧ್ಯಕ್ಷ

    ಸಂಪತ್‌ರಾಜ್ ಶರಣಾಗಲು ಡಿಕೆಶಿ ಸೂಚಿಸಲಿ
    ಶಾಸಕ ಅಖಂಡ ಶ್ರೀನಿವಾಸಮೂರ್ತಿ ಮನೆ ಮೇಲೆ ದಾಳಿ ಪ್ರಕರಣದ ಆರೋಪಿ ಮಾಜಿ ಮೇಯರ್ ಸಂಪತ್‌ರಾಜ್ ತಲೆಮರೆಸಿಕೊಂಡಿಲ್ಲ, ಮನೆಯಲ್ಲೇ ಇದ್ದಾರೆ ಎಂದು ಹೇಳುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ಗೆ ನೈತಿಕತೆ ಇದ್ದರೆ ಆರೋಪಿಯನ್ನು ಶರಣಾಗಲು ಸೂಚಿಸಲಿ ಎಂದು ನಳಿನ್ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಧಿಕಾರಕ್ಕಾಗಿ ದಲಿತ ಶಾಸಕನ ಮೇಲಿನ ಹಲ್ಲೆ ಖಂಡನೀಯ. ಅವರಿಗೆ ನ್ಯಾಯ ಕೊಡಿಸುವ ಕೆಲಸ ಬಿಜೆಪಿ ಸರ್ಕಾರ ಮಾಡುತ್ತದೆ. ಡಿ.ಕೆ.ಶಿವಕುಮಾರ್ ಮತ್ತು ಮಾಜಿ ಸಿಎಂ ಸಿದ್ದರಾಮಯ್ಯ ಇದಕ್ಕೆ ಉತ್ತರ ಕೊಡಬೇಕು ಎಂದರು.

    ಪಕ್ಷದ ಶಿಸ್ತು ಮೀರಬೇಡಿ: ಬಸನಗೌಡ ಪಾಟೀಲ್ ಯತ್ನಾಳ್ ಭಿನ್ನಮತ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ನಳಿನ್, ರಾಜ್ಯದಲ್ಲಿ ಪಕ್ಷ ಮತ್ತು ಸರ್ಕಾರ ಚೆನ್ನಾಗಿ ನಡೆಯುತ್ತಿದೆ. ಪಕ್ಷದ ನಿಯಮ ಮೀರಿ ಯಾರೂ ವರ್ತಿಸಬಾರದು. ಎಲ್ಲವನ್ನೂ ಪಕ್ಷದ ವೇದಿಕೆಯಲ್ಲೇ ಮಾತನಾಡಬೇಕು. ಅವರ ಬಗ್ಗೆ ಪಕ್ಷದ ಒಳಗೆ ಏನು ತೀರ್ಮಾನ ತೆಗೆದುಕೊಳ್ಳಬೇಕೋ ಅದನ್ನು ಮಾಡಿದ್ದೇವೆ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts