More

    ಶ್ರೀ ಕೋರಿಸಿದ್ಧನ ಉತ್ಸವ ಇಂದಿನಿಂದ

    ನಾಲವಾರ: ಶ್ರೀ ಕೋರಿಸಿದ್ಧೇಶ್ವರ ಮಠದಲ್ಲಿ ಶುಕ್ರವಾರ, ಶನಿವಾರ ಸಂಭ್ರಮದಿಂದ ಶ್ರೀ ಕೋರಿಸಿದ್ಧೇಶ್ವರ ಜಾತ್ರೋತ್ಸವ ನಡೆಯಲಿದೆ ಎಂದು ಮಠದ ವಕ್ತಾರ ಮಹಾದೇವ ಗಂವ್ಹಾರ್ ತಿಳಿಸಿದ್ದಾರೆ.

    ಶುಕ್ರವಾರ ಸಂಜೆ ೮ಕ್ಕೆ ಪೀಠಾಧಿಪತಿ ಶ್ರೀ ಡಾ.ಸಿದ್ಧತೋಟೇಂದ್ರ ಶಿವಾಚಾರ್ಯರ ಅಧ್ಯಕ್ಷತೆ, ಅನುಭವ ಮಂಟಪದ ಅಧ್ಯಕ್ಷರಾದ ನಾಡೋಜ ಶ್ರೀ ಡಾ.ಬಸವಲಿಂಗ ಪಟ್ಟದ್ದೇವರ ಸಾನ್ನಿಧ್ಯದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಜಾತ್ರಾ ಮಹೋತ್ಸವಕ್ಕೆ ಚಾಲನೆ ನೀಡುವರು. ಸಚಿವರಾದ ಡಾ.ಶರಣಪ್ರಕಾಶ ಪಾಟೀಲ್, ಶರಣಬಸಪ್ಪಗೌಡ ದರ್ಶನಾಪುರ, ಈಶ್ವರ ಖಂಡ್ರೆ ಮುಖ್ಯ ಅತಿಥಿಗಳಾಗಿ, ಶಾಸಕರಾದ ಅಶೋಕ ಮನಗೂಳಿ, ಎಂ.ವೈ.ಪಾಟೀಲ್, ಚನ್ನಾರೆಡ್ಡಿ ಪಾಟೀಲ್ ತುನ್ನೂರ, ರಾಜಾ ವೆಂಕಟಪ್ಪ ನಾಯಕ, ಅಲ್ಲಮಪ್ರಭು ಪಾಟೀಲ್, ಹೈಕೋರ್ಟ್ ನ್ಯಾಯವಾದಿ ಆರ್.ಎಸ್.ಹಿರೇಮಠ ಉಪಸ್ಥಿತರಿರುವರು. ಇಸ್ರೋ ಅಧ್ಯಕ್ಷ ಎನ್.ಸೋಮನಾಥ, ಆಳ್ವಾಸ್ ಶಿಕ್ಷಣ ಸಂಸ್ಥೆ ಅಧ್ಯಕ್ಷ ಡಾ.ಮೋಹನ ಆಳ್ವಾ ಅವರಿಗೆ ಸಿದ್ಧ ತೋಟೇಂದ್ರ ಪ್ರಶಸ್ತಿ ನೀಡಿ ಗೌರವಿಸಲಾಗುವುದು. ಕಸಾಪ ಅಧ್ಯಕ್ಷ ಡಾ.ಮಹೇಶ ಜೋಶಿ ಅವರು ಶ್ರೀಮಠದ ಮುಖವಾಣಿ ತನಾರತಿ ಪತ್ರಿಕೆ ಬಿಡುಗಡೆಗೊಳಿಸುವರು. ಕೆಕೆಆರ್‌ಡಿಬಿ ಅಧ್ಯಕ್ಷ ಡಾ.ಅಜಯಸಿಂಗ್, ಮುಖ್ಯಮಂತ್ರಿ ಸಲಹೆಗಾರ ಬಿ.ಆರ್.ಪಾಟೀಲ್ ಅವರನ್ನು ವಿಶೇಷವಾಗಿ ಸತ್ಕರಿಸಲಾಗುವುದು ಎಂದು ಮಾಹಿತಿ ನೀಡಿದ್ದಾರೆ.

    ಫೆ.೧೧ರಂದು ಬೃಹತ್ ಜಾನುವಾರ ಜಾತ್ರೆ ನಡೆಯಲಿದ್ದು, ಉತ್ತಮ ಜಾನುವಾರುಗಳಿಗೆ ಬಹುಮಾನ ವಿತರಣೆ, ಗ್ರಾಮೀಣ ಕ್ರೀಡಾಕೂಟ ಆಯೋಜಿಸಲಾಗಿದೆ. ಜಾತ್ರೋತ್ಸವ ನಿಮಿತ್ತ ನಾಲವಾರ ರೈಲು ನಿಲ್ದಾಣದಲ್ಲಿ ಎಲ್ಲ ರೈಲು ನಿಲುಗಡೆ ಆಗಲಿವೆ. ಯಾದಗಿರಿ, ಕಲಬುರಗಿಯಿಂದ ವಿಶೇಷ ಬಸ್ ವ್ಯವಸ್ಥೆ ಮಾಡಲಾಗಿದೆ. ಭಕ್ತರ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಗುರುಗಳ ಕೃಪೆಗೆ ಪಾತ್ರರಾಗಬೇಕು ಎಂದು ಪ್ರಕಟಣೆಯಲ್ಲಿ ಕೋರಿದ್ದಾರೆ.

    ನಾಳೆ ಸಂಜೆ ಅದ್ದೂರಿ ರಥೋತ್ಸವ: ಶನಿವಾರ ಸಂಜೆ ಸದ್ಗುರು ಶ್ರೀ ಕೋರಿಸಿದ್ಧೇಶ್ವರ ಶಿವಯೋಗಿಗಳ ಕರ್ತೃ ಗದ್ದುಗೆಗೆ ವಿಶೇಷ ಪೂಜೆ, ಅಲಂಕಾರ, ಅಭಿಷೇಕ ಸೇರಿ ವಿವಿಧ ಧಾರ್ಮಿಕ ಕಾರ್ಯಕ್ರಮ ನೆರವೇರಲಿವೆ. ಸಂಜೆ ೬.೩೦ಕ್ಕೆ ಅಪಾರ ಭಕ್ತರ ಜೈಘೋಷದ ಮಧ್ಯೆ ಭವ್ಯ ರಥೋತ್ಸವಕ್ಕೆ ಚಾಲನೆ ನೀಡಲಾಗುವುದು. ರಾತ್ರಿ ೮ಕ್ಕೆ ಸಾಂಸ್ಕೃತಿಕ ಕಾರ್ಯಕ್ರಮಗಳ ಸಮಾರೋಪ ಸಮಾರಂಭ ನಡೆಯಲಿದೆ. ಶ್ರೀಶೈಲ ಸಾರಂಗಧರ ಮಠದ ಜಗದ್ಗುರು ಶ್ರೀ ಡಾ.ಸಾರಂಗಧರ ದೇಶಿಕೇಂದ್ರ ಸ್ವಾಮೀಜಿ, ಅಥಣಿ ಗಚ್ಚಿನ ಮಠದ ಶ್ರೀ ಶಿವಬಸವ ಸ್ವಾಮಿಗಳ ಸಾನ್ನಿಧ್ಯದಲ್ಲಿ ನಟ, ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಉದ್ಘಾಟಿಸುವರು. ಸಂಸದ ಡಾ.ಉಮೇಶ ಜಾಧವ್, ಶಾಸಕರಾದ ಶರಣಗೌಡ ಕಂದಕೂರ, ಬಸವರಾಜ ಮತ್ತಿಮಡು, ಪ್ರಮುಖರಾದ ಗುರು ಪಾಟೀಲ್, ಬಿ.ಎನ್.ಜಗದೀಶ, ಸುರೇಶ ಸಜ್ಜನ್, ಚಂದು ಪಾಟೀಲ್, ಅಮೀನರೆಡ್ಡಿ ಯಾಳಗಿ, ಶಿವರಾಜ ಪಾಟೀಲ್ ರದ್ದೇವಾಡಗಿ, ಬಾಲರಾಜ ಗುತ್ತೇದಾರ್, ಡಾ.ಶರಣಭೂಪಾಲರೆಡ್ಡಿ ನಾಯ್ಕಲ್ ಇತರರು ಪಾಲ್ಗೊಳ್ಳುವರು. ಜಾನಪದ ಗಾಯಕ ಗುರುರಾಜ ಹೊಸಕೋಟೆ ತಂಡದಿಂದ ಸಂಗೀತ ರಸಮಂಜರಿ ನಡಯಲಿದೆ ಎಂದು ಗಂವ್ಹಾರ್ ಮಾಹಿತಿ ನೀಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts