More

    ಬೆಂಗಳೂರು ಕರಗ ಉತ್ಸವಕ್ಕೆ ಭರದ ಸಿದ್ಧತೆ

    ಬೆಂಗಳೂರು: ಐತಿಹಾಸಿಕ ಬೆಂಗಳೂರು ಕರಗ ಉತ್ಸವ ಆರಂಭಕ್ಕೆ ಇನ್ನೊಂದು ದಿನವಷ್ಟೇ ಬಾಕಿ ಇದ್ದು, ಈಗಾಗಲೇ ಸಿದ್ಧತೆಗಳು ಭರದಿಂದ ಸಾಗಿವೆ. ಶ್ರೀ ಧರ್ಮರಾಯಸ್ವಾಮಿ ದೇವಾಲಯವು ಸುಣ್ಣ-ಬಣ್ಣಗಳಿಂದ ಕಂಗೊಳಿಸುತ್ತಿದ್ದು, ಕರಗ ಸಾಗುವ ರಸ್ತೆಗಳಿಗೆ ವಿದ್ಯುತ್ ದೀಪಾಲಂಕಾರ ಮಾಡಲಾಗಿದೆ. ಏ.15ರಂದು ಧ್ವಜಾರೋಹಣದೊಂದಿಗೆ ಉತ್ಸವಕ್ಕೆ ಚಾಲನೆ ದೊರೆಯಲಿದ್ದು, 25ರವರೆಗೆ ಜರುಗಲಿದೆ.

    ಈ ಬಾರಿಯೂ ಅರ್ಚಕ ಎ. ಜ್ಞಾನೇಂದ್ರ ಕರಗ ಹೊರಲಿದ್ದು, ಈಗಾಗಲೇ ದೇವಾಲಯ ಸೇರಿರುವ ಅವರು, ಜ್ಞಾನ, ಯೋಗ ಸೇರಿ ಧಾರ್ಮಿಕ ಕೈಂಕರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ದ್ರೌಪದಿಸಹಿತ ಧರ್ಮರಾಯಸ್ವಾಮಿಯ ಪರಿವಾರವನ್ನು ಹೊತ್ತು ಸಾಗುವ ಬೃಹತ್ ಮರದ ತೇರು ನವೀಕರಣಗೊಂಡು ರಥೋತ್ಸವಕ್ಕೆ ಸಜ್ಜಾಗಿ ನಿಂತಿದೆ. ಉತ್ಸವದ ಯಶಸ್ಸಿಗೆ ವಹ್ನಿಕುಲ ಕ್ಷತ್ರಿಯ ಸಮಾಜ ಬಾಂಧವರು, ಗೌಡರು, ಗಣಾಚಾರಿಗಳು, ಗಂಟೆ ಪೂಜಾರಿಗಳು, ಚಾಕರೀದಾರರು ಸಿದ್ಧತೆಯಲ್ಲಿ ತೊಡಗಿಕೊಂಡಿದ್ದಾರೆ.

    ಸಜ್ಜಾಗದ ಕಲ್ಯಾಣಿ ಹಾಗೂ ರಸ್ತೆಗಳು: ಕರಗ ಶಕ್ತ್ಯೋತ್ಸವ ಸಾಗುವ ರಸ್ತೆಗಳ ದುರಸ್ತಿ ಕಾರ್ಯ ಮತ್ತು ಕರಗದ ಪ್ರಮುಖ ಧಾರ್ಮಿಕ ಆಚರಣೆಗಳನ್ನು ನಡೆಸುವ ಸಂಪಂಗಿರಾಮನಗರದ ಕಲ್ಯಾಣಿ ಸ್ವಚ್ಛತಾ ಕಾರ್ಯ ಇನ್ನೂ ಪೂರ್ಣಗೊಂಡಿಲ್ಲ. ಉತ್ಸವಕ್ಕೆ ಇನ್ನು ಒಂದು ದಿನವಷ್ಟೇ ಬಾಕಿ ಇರುವುದರಿಂದ ಈ ಕಾರ್ಯಗಳನ್ನು ಶೀಘ್ರದಲ್ಲಿ ಪೂರ್ಣಗೊಳಿಸಿಕೊಡಬೇಕು ಎಂದು ಶ್ರೀ ಧರ್ಮರಾಯಸ್ವಾಮಿ ದೇವಾಲಯದ ವ್ಯವಸ್ಥಾಪನ ಸಮಿತಿ, ಬಿಬಿಎಂಪಿ ಅಧಿಕಾರಿಗಳಿಗೆ ಮನವಿ ಮಾಡಿದೆ.

    ಧ್ವಜಾರೋಹಣಕ್ಕೆ ಬಿದಿರಿನ ಮರ: ಉತ್ಸವದಲ್ಲಿ ಸಂಪ್ರದಾಯದಂತೆ ಜರಗನಹಳ್ಳಿಯ ಕುಲಬಾಂಧವರು ಪ್ರತಿ ವರ್ಷದಂತೆ ಬಿದಿರಿನ ಮರವನ್ನು ತರಲಿದ್ದು, ಅದನ್ನು ದೇವಾಲಯದ ಆವರಣದಲ್ಲಿ ನೆಟ್ಟು, ಸೋಮವಾರ ರಾತ್ರಿ ರಥೋತ್ಸವ ಹಾಗೂ ಧ್ವಜಾರೋಹಣ ಮಾಡುವ ಮೂಲಕ ಉತ್ಸವಕ್ಕೆ ಚಾಲನೆ ನೀಡಲಾಗುವುದು. ಹೀಗೆ ಚೈತ್ರಮಾಸ ಶುಕ್ಲ ಪಕ್ಷದ ಸಪ್ತಮಿ ದಿನ ಆರಂಭವಾಗಿ ಬಿದಿಗೆವರೆಗೆ ಉತ್ಸವ ಜರುಗಲಿದೆ. ಏ.23ರ ಚೈತ್ರ ಪೌರ್ಣಿಮೆ ದಿನವಾದ ಮಂಗಳವಾರ ಶ್ರೀ ಧರ್ಮರಾಯಸ್ವಾಮಿ ಮಹಾರಥೋತ್ಸವ ಹಾಗೂ ಕರಗ ಶಕ್ತ್ಯೋತ್ಸವ ವಿಜೃಂಭಣೆಯಿಂದ ಜರುಗಲಿದೆ.

    ವೀರಕುಮಾರರಿಗೆ ವಸ್ತ್ರ ವಿತರಣೆ: ಈ ಬಾರಿಯ ಉತ್ಸವದಲ್ಲಿ ಕರಗದ ರಕ್ಷಣೆಗೆ ನಿಲ್ಲುವ 3 ಸಾವಿರಕ್ಕೂ ಅಧಿಕ ವೀರಕುಮಾರರಿಗೆ ಶ್ರೀ ಧರ್ಮರಾಯಸ್ವಾಮಿ ದೇವಾಲಯದ ವ್ಯವಸ್ಥಾಪನ ಸಮಿತಿ ವತಿಯಿಂದ ಉಚಿತವಾಗಿ ವಸ್ತ್ರ ಮತ್ತು ಪೇಟ ವಿತರಿಸಲಾಗುತ್ತಿದೆ. ಅದೇ ರೀತಿ ಈ ಬಾರಿ ದೀಕ್ಷೆ ಪಡೆಯುವವರಿಗೆ ಉಚಿತವಾಗಿ ಖಡ್ಗ ನೀಡಲಾಗುವುದು ಎಂದು ಸಮಿತಿ ಅಧ್ಯಕ್ಷ ಕೆ. ಸತೀಶ್ ತಿಳಿಸಿದ್ದಾರೆ.

    ಕುಡಿಯುವ ನೀರಿನ ವ್ಯವಸ್ಥೆ: ಬಿಸಿಲ ಝಳ ತೀವ್ರವಾಗಿರುವುದರಿಂದ ಭಕ್ತರಿಗೆ ಸಮಸ್ಯೆ ಆಗದಂತೆ ಅಗತ್ಯ ಎಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ. ದಣಿದು ಬರುವ ಭಕ್ತರಿಗೆ ಶುದ್ಧ ಕುಡಿಯುವ ನೀರು ಒದಗಿಸಲು ದೇವಾಲಯದ ಆವರಣದಲ್ಲಿ ಎರಡು ಆರೋ ನೀರಿನ ಘಟಕ ಸ್ಥಾಪಿಸಲಾಗಿದೆ. ಉತ್ಸವ ನಡೆಯುವ ಹನ್ನೊಂದು ದಿನಗಳ ಕಾಲವೂ ಭಕ್ತರಿಗೆ ಕಟ್ ಫ್ರೂಟ್ಸ್ ವ್ಯವಸ್ಥೆ ಸಹ ಮಾಡಲಾಗಿದೆ ಎಂದು ಹೇಳಿದರು.

    ಸೇಲಂ ಮಲ್ಲಿಗೆ ಘಮ: ಕರಗ ಉತ್ಸವದಲ್ಲಿ ಹೂವಿನದೇ ಪ್ರಧಾನ ಪಾತ್ರವಾಗಿದ್ದು, ಪ್ರತಿ ಭಾರಿಯಂತೆ ಈ ವರ್ಷವೂ ಕರಗ ಉತ್ಸವಕ್ಕೆ ಸೇಲಂನಿಂದ ಮಲ್ಲಿಗೆ ಬರಲಿದೆ. ಬೇಸಿಗೆ ಬಿಸಿಲು ತೀವ್ರವಾಗಿರುವುದರಿಂದ ಹೂವನ್ನು ಹೆಚ್ಚು ಸಮಯ ತಾಜಾವಾಗಿ ಉಳಿಸಿಕೊಳ್ಳಲು ಸಾಧ್ಯವಿಲ್ಲ. ಹೀಗಾಗಿ ಆಯಾ ದಿನಕ್ಕೆ ಅಗತ್ಯವಾದಷ್ಟು ಹೂ ಪ್ರತಿ ದಿನ ರಾತ್ರಿ ಸೇಲಂನಿಂದ ಬರಲಿದೆ. ಉತ್ಸವದ ಮೆರಗು ಹೆಚ್ಚಿಸಲು ಈ ವರ್ಷವೂ ತಮಿಳುನಾಡಿನ ಚೇತನ್ ನೇತೃತ್ವದ ತಂಡಕ್ಕೆ ಹೂವಿನ ಅಲಂಕಾರದ ಜವಾಬ್ದಾರಿ ನೀಡಲಾಗಿದೆ ಎಂದು ಕೆ. ಸತೀಶ್ ತಿಳಿಸಿದರು.

    ಕೋಟ್ . . .
    ಕರಗ ಉತ್ಸವಕ್ಕೆ ಬಿಬಿಎಂಪಿ ವತಿಯಿಂದ 1.5 ಕೋಟಿ ರೂ. ಮೀಸಲಿಡಲಾಗಿದೆ. ಆದರೆ ಉತ್ಸವ ಸಮೀಪಿಸುತ್ತಿದ್ದರೂ, ಪಾಲಿಕೆಯಿಂದ ಈವರೆಗೂ ಅನುದಾನ ಬಿಡುಗಡೆಯಾಗಿಲ್ಲ. ಹಾಗಾಗಿ ಸಮಿತಿ ವತಿಯಿಂದಲೇ ಸಿದ್ಧತಾ ಕಾರ್ಯ ಕೈಗೊಳ್ಳಲಾಗಿದೆ. ಶೀಘ್ರದಲ್ಲೇ ರಸ್ತೆ ಹಾಗೂ ಕಲ್ಯಾಣಿ ಸ್ವಚ್ಛತಾ ಕಾರ್ಯ ಪೂರ್ಣಗೊಳಿಸುವಂತೆ ಮನವಿ ಮಾಡಲಾಗಿದೆ.
    ಕೆ.ಸತೀಶ್, ಅಧ್ಯಕ್ಷ, ಶ್ರೀ ಧರ್ಮರಾಯಸ್ವಾಮಿ ದೇವಾಲಯದ ವ್ಯವಸ್ಥಾಪನ ಸಮಿತಿ

    ಕೋಟ್ . . .
    ಚುನಾವಣೆ ಕಾರ್ಯಗಳ ನಡುವೆ ಕರಗ ಉತ್ಸವವೂ ಬಂದಿದ್ದು, ಕೆಲಸ ಹೆಚ್ಚಿದೆ. ಶುಕ್ರವಾರ ಸಂಪಂಗಿರಾಮ ನಗರ ಕಲ್ಯಾಣಿ ಸ್ವಚ್ಛತಾ ಕಾರ್ಯ ಕೈಗೊಳ್ಳಲಾಗಿದ್ದು, ಉತ್ಸವದ ವೇಳೆಗೆ ಪೂರ್ಣಗೊಳ್ಳಲಿದೆ. ಕರಗ ಸಂಚರಿಸುವ ರಸ್ತೆಗಳ ಪರಿಶೀಲನೆ ನಡೆಸಲಾಗಿದೆ. ಅಲ್ಲಿ ಹೆಚ್ಚಿನ ಸಮಸ್ಯೆಗಳು ಕಂಡು ಬಂದಿಲ್ಲ. ಹಾಗಾಗಿ ಉತ್ಸವ ಆರಂಭಕ್ಕೂ ಮುನ್ನ ತ್ಯಾಜ್ಯ ವಿಲೇವಾರಿ ಮಾಡಿಸಿ, ಸಣ್ಣಪುಟ್ಟ ಗುಂಡಿಗಳನ್ನು ಮುಚ್ಚಿಸಿ ಸೂಕ್ತ ವ್ಯವಸ್ಥೆ ಮಾಡಿಕೊಡಲಾಗುವುದು.
    – ಬಿಬಿಎಂಪಿ ಅಧಿಕಾರಿಗಳು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts