More

    ನಾಗಠಾಣ ಶಾಸಕ ದೇವಾನಂದ ಚವ್ಹಾಣ್ ಟಾಂಗ್, ಕಾಂಗ್ರೆಸ್ ಅಭ್ಯರ್ಥಿ ರಬ್ಬರ್ ಸ್ಟಾಂಪ್ !

    ವಿಜಯಪುರ: ಮಹಾಪೂರ ಬಂದಾಗ ಬರಲಿಲ್ಲ, ಕರೊನಾ ಸಂಕಷ್ಟದಲ್ಲೂ ನೆರವಾಗಲಿಲ್ಲ, ಇದೀಗ ಚುನಾವಣೆ ಬರುತ್ತಿದ್ದಂತೆ ಭಿನ್ನ ಭಿನ್ನ ಮುಖವಾಡ ಧರಿಸಿ ಜನರ ಮನೆ ಬಾಗಿಲಿಗೆ ಬರುತ್ತಿರುವ ಕಾಂಗ್ರೆಸ್ ಹಾಗೂ ಬಿಜೆಪಿ ನಾಯಕರ ಮುಖವಾಡಗಳನ್ನು ಜನರೇ ಕಳಚಲಿದ್ದಾರೆಂದು ನಾಗಠಾಣ ಜೆಡಿಎಸ್ ಅಭ್ಯರ್ಥಿ ಡಾ. ದೇವಾನಂದ ಚವ್ಹಾಣ್ ಎದುರಾಳಿಗಳಿಗೆ ಚಾಟಿ ಬೀಸಿದರು.

    ವಿಜಯಪುರ ನಗರದ ನಾಗಠಾಣ ಕ್ಷೇತ್ರ ವ್ಯಾಪ್ತಿಯ ವಿವಿಧ ವಾರ್ಡ್‌ಗಳಲ್ಲಿ ಶನಿವಾರ ಮತಯಾಚನೆ ಸಂದರ್ಭ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಜೆಡಿಎಸ್ ಅಭ್ಯರ್ಥಿ ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂದಿರುವ ಕಾಂಗ್ರೆಸ್ ಅಭ್ಯರ್ಥಿ ವಿಠಲ ಕಟಕಧೋಂಡ ರಬ್ಬರ್ ಸ್ಟಾಂಪ್ ಇದ್ದ ಹಾಗೆ. ಅವರನ್ನು ಬಿಜೆಪಿಯಿಂದ ಕರೆತಂದು ಕಾಂಗ್ರೆಸ್‌ನಿಂದ ಟಿಕೆಟ್ ಕೊಡಿಸಿದ್ದು ಕೇವಲ ರಬ್ಬರ್ ಸ್ಟಾಂಪ್ ಆಗಿ ಬಳಸಿಕೊಳ್ಳಲು ಮಾತ್ರ. ಹೀಗಾಗಿ ಅವರು ಸ್ವಂತ ವಿವೇಚನೆಯಿಂದ ಮಾತನಾಡಿರಲಿಕ್ಕಿಲ್ಲ ಎಂದರು.

    2018ರ ಚುನಾವಣೆಯಲ್ಲಿ ಯಾರು ಆಟಕ್ಕುಂಟು ಯಾರು ಆಟಕ್ಕಿಲ್ಲ ಎಂಬುದನ್ನು ಜನ ತೋರಿಸಿಕೊಟ್ಟಿದ್ದಾರೆ. ಈ ಬಾರಿಯೂ ಅದು ಮರುಕಳಿಸಲಿದೆ. ಒಟ್ಟಾರೆ ನಾಗಠಾಣ ಕ್ಷೇತ್ರದ ಚಿತ್ರಣ ನೋಡಿದರೆ ಅಲ್ಲಿ ಬಂಜಾರ ಸಮುದಾಯಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿದ್ದು, ಖಂಡಿತವಾಗಿಯೂ ಈ ಬಾರಿ ಮತ್ತೆ ಅಧಿಕಾರದ ಅವಕಾಶ ಸಿಗಲಿದೆ ಎಂದರು.
    ಕಾಂಗ್ರೆಸ್ ಸದ್ಯ ಬೂದಿ ಮುಚ್ಚಿದ ಕೆಂಡದಂತಿದೆ. ಬಿಜೆಪಿಯಲ್ಲಿಯೂ ಅಭ್ಯರ್ಥಿ ಆಯ್ಕೆ ಅಂತಿಮಗೊಂಡಿಲ್ಲ. ಹೀಗಾಗಿ ಜೆಡಿಎಸ್‌ಗೆ ಸದ್ಯಕ್ಕೆ ಪ್ರಬಲ ಎದುರಾಳಿಗಳೇ ಇಲ್ಲದಂತಾಗಿದೆ.

    ಯಾರೇ ಬಂದರೂ ಈ ಬಾರಿ ನಾಗಠಾಣ ಕ್ಷೇತ್ರದಲ್ಲಿ ಜೆಡಿಎಸ್ ಗೆಲುವು ತಪ್ಪಿಸಲಿಕ್ಕಾಗುವುದಿಲ್ಲ. ಏಕೆಂದರೆ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯ ಕೈಗೊಂಡಿದ್ದೇನೆ. ಕರೊನಾ ಸಂದರ್ಭ ಜನರ ಮನೆ ಬಾಗಿಲಿಗೆ ತೆರಳಿ ಸಂಕಷ್ಟ ಆಲಿಸಿದ್ದೇನೆ. ಕೈಲಾದ ಮಟ್ಟಿಗೆ ಸಹಾಯ ಹಸ್ತ ಚಾಚಿದ್ದೇನೆ. ಮಹಾಪೂರ ಬಂದಾಗ ಸಂತ್ರಸ್ತರಿಗೆ ನೆರವಾಗಿದ್ದೇನೆ. ಸರ್ಕಾರದಿಂದ ಪರಿಹಾರ ಕೊಡಿಸುವ ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ. ಹೀಗಾಗಿ ಜನರ ಒಲವು ಜೆಡಿಎಸ್ ಪರ ಇದೆ ಎಂದರು.

    ನಾಗಠಾಣ ಶಾಸಕ ದೇವಾನಂದ ಚವ್ಹಾಣ್ ಮನೆ ಮನೆಗೆ ಭೇಟಿ

    ನಾಗಠಾಣ ಕ್ಷೇತ್ರದ ಜುಮನಾಳ, ರೇವತಗಾಂವ, ಉಮರಜ ಗ್ರಾಮಗಳಲ್ಲಿ ಮನೆ ಮನೆಗೆ ಭೇಟಿ ನೀಡಿ ಮತಯಾಚಿಸಿದ ದೇವಾನಂದ ಚವ್ಹಾಣ್, ಪ್ರಸಕ್ತ ವಿಧಾನಸಭೆ ಚುನಾವಣೆಯಲ್ಲಿ ಮತ್ತೊಮ್ಮೆ ಆಶೀರ್ವದಿಸುವಂತೆ ಬೇಡಿಕೊಂಡರು.

    ಜೆಡಿಎಸ್ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿದೆ. ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಅಪಾರ ಅನುದಾನ ತಂದು ಕ್ಷೇತ್ರದಲ್ಲಿ ಮೂಲ ಸೌಕರ್ಯ ಕಲ್ಪಿಸುವ ಪ್ರಯತ್ನ ಮಾಡಿದ್ದೇನೆ. ಮತ್ತೊಂದು ಅವಧಿಗೆ ಆಯ್ಕೆಯಾದಲ್ಲಿ ಸಮಗ್ರ ಅಭಿವೃದ್ಧಿಗೆ ಆದ್ಯತೆ ನೀಡುವುದಾಗಿ ಭರವಸೆ ನೀಡಿದರು. ವಿವಿಧ ಸಮುದಾಯಗಳ ಮುಖಂಡರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts