More

    ನಾಗಸಮುದ್ರಕ್ಕೆ ಬೇಕು ಪಿಯು ಕಾಲೇಜು

    ಕೆ.ಕೆಂಚಪ್ಪ ಮೊಳಕಾಲ್ಮೂರು: ಹೆಚ್ಚು ಜನಸಂಖ್ಯೆ ಹೊಂದಿರುವ ನಾಗಸಮುದ್ರ ಗ್ರಾಮಕ್ಕೆ ಸರ್ಕಾರಿ ಪದವಿ ಪೂರ್ವ ಕಾಲೇಜು ಬೇಕೆಂಬ ಕೂಗೆದ್ದಿದೆ.

    ಆಂಧ್ರ-ಕರ್ನಾಟಕದ ಗಡಿಭಾಗದ ಗ್ರಾಮ ನಾಗಸಮುದ್ರದಲ್ಲಿ 12 ಸಾವಿರಕ್ಕೂ ಅಧಿಕ ಜನಸಂಖ್ಯೆ ಹೊಂದಿದ್ದು, ಇಲ್ಲಿ ಅಂಗನವಾಡಿಯಿಂದ ಪ್ರೌಢಶಿಕ್ಷಣ, ಆಸ್ಪತ್ರೆ, ವಿದ್ಯಾರ್ಥಿಗಳ ವಸತಿನಿಲಯ, ಬ್ಯಾಂಕ್ ಮತ್ತಿತರ ಸೌಲಭ್ಯಗಳಿವೆ. ಪ್ರತಿ ವರ್ಷವೂ ನೂರಾರು ಮಕ್ಕಳು ಪ್ರೌಢಶಿಕ್ಷಣ ಪೂರೈಸುತ್ತಾರೆ. ಆದರೆ, ಸರ್ಕಾರಿ ಪಿಯು ಕಾಲೇಜು ಇಲ್ಲದಿರುವುದು ಶೈಕ್ಷಣಿಕ ಪ್ರಗತಿಗೆ ಅಡ್ಡಿಯಾಗಿದೆ.

    ದೂರದ ಮೊಳಕಾಲ್ಮೂರು, ರಾಂಪುರ, ಬಳ್ಳಾರಿಗೆ ಹೋಗುವ ಪರಿಸ್ಥಿತಿ ಇದೆ. ಇದರಿಂದ ಬೇಸತ್ತ ಕಾರ್ಮಿಕ, ಬಡ ಕುಟುಂಬದ ಮಕ್ಕಳು ಪ್ರೌಢಶಿಕ್ಷಣ ಪೂರೈಸುತ್ತಿದ್ದಂತೆ ಓದಿಗೆ ಗುಡ್‌ಬೈ ಹೇಳುತ್ತಿರುವ ನಿದರ್ಶನಗಳು ಹೆಚ್ಚು ಇವೆ.

    ಪ್ರೌಢಶಿಕ್ಷಣ ಪೂರೈಸುವ ಈ ಭಾಗದ ಮಕ್ಕಳು ಪದವಿಪೂರ್ವ ಶಿಕ್ಷಣಕ್ಕೆ ಸರ್ಕಾರಿ ಜೂನಿಯರ್ ಕಾಲೇಜು ಬೇಕೆಂಬ ಬೇಡಿಕೆ ದಶಕದ ಕೂಗು ಆಗಿದೆ. ಇಂತಹ ಸ್ಥಿತಿಗೆ ಸರ್ಕಾರ ಮತ್ತು ಜಿಲ್ಲಾಡಳಿತದ ಉದಾಸೀನತೆಯೇ ಕಾರಣ ಎಂಬುದು ಗ್ರಾಮಸ್ಥರ ದೂರು.

    ಪ್ರೌಢಶಾಲೆ ಬಳಿಕ ಶಿಕ್ಷಣಕ್ಕೆ ಗುಡ್‌ಬೈ: ಗ್ರಾಮದ 7 ಅಂಗನವಾಡಿ ಕೇಂದ್ರಗಳಲ್ಲಿ 200ಕ್ಕೂ ಅಧಿಕ ಮಕ್ಕಳಿವೆ. ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಖಾಸಗಿ ಶಾಲೆಯಲ್ಲಿ 800 ಮತ್ತು ಸರ್ಕಾರಿ ಪ್ರೌಢಶಾಲೆಯಲ್ಲಿ 350 ಸೇರಿ 1150 ವಿದ್ಯಾರ್ಥಿಗಳು ಓದುತ್ತಿದ್ದಾರೆ. ಇದರಲ್ಲಿ ಬಹುತೇಕ ಮಕ್ಕಳು ಪರಿಶಿಷ್ಟ ಸಮುದಾಯಕ್ಕೆ ಸೇರಿದವರು. ಪ್ರತಿ ಸಾಲಿನಲ್ಲೂ ಎಸ್ಸೆಸ್ಸೆಲ್ಸಿ ಪೂರೈಸಿದ ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು ಕಾಲೇಜಿಗೆ ದೂರದ ಊರಿಗೆ ಹೋಗುವ ಪ್ರಯಾಸಕ್ಕೆ ಬೇಸತ್ತು, ಶಿಕ್ಷಣವನ್ನು ಅರ್ಧಕ್ಕೆ ನಿಲ್ಲಿಸಿರುವ ನಿದರ್ಶನಗಳಿವೆ.

    ಸ್ಪಂದನೆ ಶೂನ್ಯ: ಹೆದ್ದಾರಿಯಿಂದ ಎರಡು ಕಿಮೀ ದೂರದಲ್ಲಿದ್ದರೂ ಬಸ್ ಸಂಚಾರ ವಿರಳ. ಆಟೋವನ್ನೇ ಆಶ್ರಯಿಸಬೇಕು. ಇಲ್ಲದಿದ್ದರೆ ಕಾಲೇಜಿಗೆ ಗೈರಾಗಬೇಕಾದ ಪರಿಸ್ಥಿತಿ ಇದೆ. ಕಲಿಯುವ ಆಸಕ್ತಿ ಹೊಂದಿದ್ದರೂ ದೂರ ತೆರಳಬೇಕೆನ್ನುವುದು ಸಮಯದ ಜತೆ ಆರ್ಥಿಕವಾಗಿಯೂ ಹೊರೆಯಾಗಿದೆ. ಜನಪ್ರತಿನಿಧಿಗಳು, ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ.

    ಆಂಧ್ರಕ್ಕೆ ಹೊಂದಿಕೊಂಡಿರುವ ಗ್ರಾಮದಲ್ಲಿ ಕನ್ನಡಕ್ಕಿಂತ ತೆಲುಗು ಭಾಷಿಗರೇ ಹೆಚ್ಚು. ಆದರೂ ಕನ್ನಡ ಭಾಷೆ ಮೇಲಿನ ಪ್ರೀತಿ, ವಾತ್ಸಲ್ಯದ ಮನೋಭಾವ ಇದೆ. ಸರ್ಕಾರಿ ಜೂನಿಯರ್ ಕಾಲೇಜು ತೆರೆಯಲು ಎಲ್ಲ ರೀತಿಯಲ್ಲೂ ಅರ್ಹವಾಗಿದ್ದರೂ ಏಕೆ ಸಕಾರವಾಗುತ್ತಿಲ್ಲ ಎಂಬ ಬೇಸರ ಇದೆ.
    ನಾಗೇಂದ್ರಪ್ಪ ಅಧ್ಯಕ್ಷರು, ವಾಲ್ಮೀಕಿ ಸಂಘ, ಗ್ರಾಮ ಘಟಕ

    ನಮ್ಮೂರಿನ ಸರ್ಕಾರಿ ಪ್ರೌಢಶಾಲೆ ಹಾಗೂ ಪಕ್ಕದ ಚಿಕ್ಕೇರಹಳ್ಳಿ, ಅಶೋಕ ಸಿದ್ದಾಪುರದಲ್ಲಿ 250ಕ್ಕೂ ಹೆಚ್ಚು ವಿದ್ಯಾರ್ಥಿಗಳು ಕಾಲೇಜು ಶಿಕ್ಷಣ ಪಡೆಯುತ್ತಿದ್ದಾರೆ. ದೂರದ ಪ್ರಯಾಣ ತಪ್ಪಿಸಲು ಬರುವ ಶೈಕ್ಷಣಿಕ ವರ್ಷದಿಂದ ಪಿಯುಸಿ ಕಾರ್ಯರೂಪಕ್ಕೆ ಶಾಸಕರ ಮೇಲೆ ಒತ್ತಡ ತರಲಾಗಿದೆ.
    ಎನ್.ಬಿ.ಗೋವಿಂದಪ್ಪ ಗ್ರಾಮದ ಮುಖ್ಯಸ್ಥ

    ಪ್ರೌಢಶಾಲೆ ಓದಿದ್ದು ಕಾಲೇಜು ಮೆಟ್ಟಿಲು ಹತ್ತುವ ಆಸೆ ಇದೆ. ನಿತ್ಯ ದೂರದ ಪಟ್ಟಣ, ನಗರದ ಕಾಲೇಜಿಗೆ ಹೋಗಲು ಸಂಕಷ್ಟ. ಜಿಲ್ಲಾಧಿಕಾರಿ ನಮ್ಮ ಸಮಸ್ಯೆ ಅರಿತು ನಮ್ಮೂರಿಗೆ ಕಾಲೇಜು ಸೌಭಾಗ್ಯ ಕಲ್ಪಿಸಿಕೊಡಬೇಕು. ಇದರಿಂದ ಪ್ರತಿಭಾನ್ವಿತ ಗ್ರಾಮೀಣ ಹೆಣ್ಣುಮಕ್ಕಳ ಭವಿಷ್ಯ ಉಜ್ವಲವಾಗಲಿದೆ.
    ಶ್ರಾವಣಿ, ಅನಸೂಯಾ, ವಿದ್ಯಾರ್ಥಿನಿಯರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts