More

    ನಾಗರ ಪಂಚಮಿಗೆ ಖರೀದಿ ಡಲ್

    ಮಂಗಳೂರು: ಕರೊನಾ ನಿಯಂತ್ರಣ ನಿಟ್ಟಿನಲ್ಲಿ ಈ ಬಾರಿ ಸಾರ್ವಜನಿಕವಾಗಿ ನಾಗರ ಪಂಚಮಿ ಆಚರಣೆ ಇಲ್ಲದಿದ್ದರೂ ಸಾಕಷ್ಟು ಪ್ರಮಾಣದಲ್ಲಿ ಹೂವು, ಸೀಯಾಳ, ಕೇದಗೆ, ಹಿಂಗಾರ ಶುಕ್ರವಾರ ಮಾರುಕಟ್ಟೆಗೆ ಬಂದಿದೆ. ಆದರೆ ಗ್ರಾಹಕರು ಖರೀದಿಗೆ ಆಸಕ್ತಿ ತೋರಿಲ್ಲ.
    ಶ್ರೀ ಕ್ಷೇತ್ರ ಕುಕ್ಕೆ, ಕುಡುಪು ಶ್ರೀ ಅನಂತ ಪದ್ಮನಾಭ ದೇವಸ್ಥಾನ ಸೇರಿದಂತೆ ಜಿಲ್ಲೆಯ ಪ್ರಮುಖ ಸುಬ್ರಹ್ಮಣ್ಯ ದೇವಸ್ಥಾನಗಳಲ್ಲಿ ಪ್ರತಿ ವರ್ಷ ನಾಗರ ಪಂಚಮಿ ದಿನದಂದು ಬೆಳಗ್ಗಿನ ಜಾವವೇ ಭಕ್ತರು ಸಾಲಿನಲ್ಲಿ ನಿಲ್ಲುತ್ತಿದ್ದರು. ಈ ವರ್ಷ ಅರ್ಚಕರು ಮಾತ್ರ ನಾಗ ದೇವರಿಗೆ ಹಾಲು ಎರೆಯಲಿದ್ದಾರೆ. ಎಲ್ಲ ದೇವಾಲಯಗಳಲ್ಲೂ ಸಾರ್ವಜನಿಕರಿಗೆ ಪ್ರವೇಶ ನಿರ್ಬಂಧಿಸಲಾಗಿದ್ದು, ಸರಳವಾಗಿ ನಡೆಸುವಂತೆ ಜಿಲ್ಲಾಡಳಿತ ಸೂಚನೆ ನೀಡಿದೆ. ಮನೆಗಳ ನಾಗಬನಗಳಲ್ಲಿ ಕುಟುಂಬಸ್ಥರು ಮಾತ್ರ ಜತೆಯಾಗಿ ಹೆಚ್ಚು ಜನ ಸೇರದೆ ಹಾಲು ಎರೆಯಲು ಅವಕಾಶ ಕಲ್ಪಿಸಲಾಗಿದೆ.

    ಹೂವು ದರ ಇಳಿಕೆ
    ಹೂವು, ಸಿಯಾಳ, ಕೇದಗೆ, ಹಿಂಗಾರಕ್ಕೆ ಬೇಡಿಕೆ ಇಲ್ಲದ ಕಾರಣ ಕಳೆದ ವರ್ಷಕ್ಕೆ ಹೋಲಿಸಿದರೆ ದರವೂ ಕಡಿಮೆಯಾಗಿದೆ. ಸೇವಂತಿಗೆಗೆ 30 ರೂ.(ಮೊಳ), ಒಂದು ಚೆಂಡು ಮಲ್ಲಿಗೆಗೆ 150 ರೂ., ಕಾಕಡ 30 ರೂ.(ಮೊಳ), ಹಿಂಗಾರ 60 ರೂ., ಕೇದಗೆ 80 ರೂ., ಅರಸಿನ ಎಲೆ 12ರ ಕಟ್ಟಿಗೆ 30 ರೂ. ದರವಿತ್ತು. ಗೆಂದಾಳಿ ಸೀಯಾಳ 40 ರೂ.ಗೆ ಮಾರಾಟವಾಗಿದೆ.
    ನಾಗರಪಂಚಮಿ ಮುನ್ನಾ ದಿನ ನೂರಾರು ಸಂಖ್ಯೆಯಲ್ಲಿ ಬೆಂಗಳೂರು, ಮೈಸೂರು ಮೊದಲಾದ ಕಡೆಗಳಿಂದ ನಗರಕ್ಕೆ ಬರುವ ಹೂವು ಮಾರಾಟಗಾರರು ಈ ಬಾರಿ ಕೆಲವು ಕಡೆ ಬೆರಳೆಣಿಕೆಯಲ್ಲಿ ಕಂಡು ಬಂದರು. ಸ್ಥಳೀಯ ಮಾರಾಟಗಾರರು ಕೂಡ ವ್ಯಾಪಾರ ಇಲ್ಲದ ಕಾರಣ ಹೆಚ್ಚಿನ ಪ್ರಮಾಣದಲ್ಲಿ ಹೂವು ಖರೀದಿ ಮಾಡಿಲ್ಲ. ನಾಗರ ಪಂಚಮಿಯಂದು ನಾಗನಕಟ್ಟೆಗೆ ಹಾಲಿನ ಜತೆ ಗೆಂದಾಳಿ ಸೀಯಾಳ ಅರ್ಪಣೆ ಮಾಡುವುದು ಸಂಪ್ರದಾಯ. ಪ್ರತಿ ವರ್ಷ ತಮಿಳುನಾಡಿನಿಂದ ಗೆಂದಾಳಿ ಸೀಯಾಳ ಕರಾವಳಿಗೆ ಬರುತ್ತದೆ. ಈ ವರ್ಷ ಕರೊನಾ ಸಮಸ್ಯೆಯಿಂದ ಇದರ ಪ್ರಮಾಣ ಕಡಿಮೆಯಾಗಿದೆ ಎಂದು ವ್ಯಾಪಾರಿಗಳು ತಿಳಿಸಿದ್ದಾರೆ.

    ಉಡುಪಿಯಲ್ಲಿಯೂ ಇಲ್ಲ ಸಂಭ್ರಮ
    ಉಡುಪಿ: ಜಿಲ್ಲೆಯಲ್ಲಿ ಶುಕ್ರವಾರ ನಾಗರಪಂಚಮಿ ಆಚರಣೆಗೆ ತಯಾರಿ, ಪೂಜಾ ಸಾಮಗ್ರಿ ಖರೀದಿ ಚಟುವಟಿಕೆ ನಡೆಯಿತು. ಕೃಷ್ಣಮಠ, ರಥಬೀದಿ, ಕೆಎಂ ಮಾರ್ಗ, ಚಿತ್ತರಂಜನ್ ಸರ್ಕಲ್, ಆದಿ ಉಡುಪಿ ಮಾರುಕಟ್ಟೆಯಲ್ಲಿ ಹಿಂಗಾರದ ದಾಳೆ, ಅರಿಶಿನ ಎಲೆ, ಕೇದಗೆ, ಹೂ, ಹಣ್ಣುಗಳನ್ನು ಜನರು ಖರೀದಿಸಿದರು. ಎಂದಿನಂತೆ ಖರೀದಿಯ ಸಂಭ್ರಮ ಈ ಬಾರಿ ಇರಲಿಲ್ಲ. ಪ್ರತೀ ವರ್ಷ ಹೊರ ಜಿಲ್ಲೆಯ ವ್ಯಾಪಾರಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬೀಡು ಬಿಡುತ್ತಿದ್ದರು. ಕೋವಿಡ್ ಸಂಕಷ್ಟದಿಂದಾಗಿ ವ್ಯಾಪಾರಿಗಳ ಸಂಖ್ಯೆಯೂ ಕಡಿಮೆ ಇತ್ತು. ಹಿಂಗಾರ ಒಂದಕ್ಕೆ 120 ರಿಂದ 180 ರೂವರೆಗೆ, ಅರಿಶಿನ ಎಲೆ ಒಂದು ಕಟ್ಟಿಗೆ 30 ರಿಂದ 40 ರೂ., ಬಾಳೆ ಹಣ್ಣು ಒಂದು ಕೆಜಿಗೆ 50 ರೂ., ಶಂಕರಪುರ ಮಲ್ಲಿಗೆ ಒಂದು ಅಟ್ಟೆಗೆ 450 ರೂ, ಹೂವಿನ ದರ ಒಂದು ಮಾರು ಹಳದಿ ಸೇವಂತಿಗೆಗೆ 80 ರೂ., ಕಾಕಡ 60 ರೂ, ಗೊಂಡೆ 70 ರೂ, ಕನಕಾಂಬರ 80 ರೂ,ದರವಿತ್ತು. ಹೂ ಹಣ್ಣುಗಳ ದರದಲ್ಲಿ ಏರಿಳಿಕೆ ಇರಲಿಲ್ಲ.

    ನಾಗನ ಮೂರ್ತಿಗೂ ಕುಸಿದ ಬೇಡಿಕೆ
    ಉಡುಪಿ: ಕರೊನಾ ಸೋಂಕು ದೇವರ ಆರಾಧನೆಗೂ ಅಡ್ಡಿಯಾಗಿದ್ದು, ನಾಗನ ಕಲ್ಲು, ದೇವರ ಮೂರ್ತಿಗೆ ಬೇಡಿಕೆ ಕುಸಿದಿದೆ. ನಾಗನ ಕಲ್ಲು ಕೆತ್ತನೆಯಲ್ಲಿ ಕಾರ್ಕಳದ ಶಿಲ್ಪಿ ಸಚ್ಚಿದಾನಂದ ನಾಯಕ್ ಪ್ರಮುಖರು. ಇವರಿಂದ ತಯರಾಗುವ ಮೂರ್ತಿಗಳಿಗೆ ಹೊರ ಜಿಲ್ಲೆ, ರಾಜ್ಯಗಳಲ್ಲಿಯೂ ಬೇಡಿಕೆ ಇದೆ. ಬೆಂಗಳೂರು, ಮಹಾರಾಷ್ಟ್ರ, ಕೇರಳ ಸೇರಿದಂತೆ ರಾಜ್ಯದ ಇತರೆ ಜಿಲ್ಲೆಗಳಿಂದ ಇವರಿಗೆ ನಾಗ ದೇವರ ಮೂರ್ತಿ ಮಾಡಿಕೊಡಲು ಬೇಡಿಕೆ ಬರುತ್ತದೆ. ಸಚ್ಚಿದಾನಂದ ನಾಯಕ್ ಇದುವರೆಗೆ 12 ಸಾವಿರಕ್ಕೂ ಅಧಿಕ ನಾಗನ ಕಲ್ಲು, ದೇವರ ಮೂರ್ತಿಗಳನ್ನು ನಿರ್ಮಿಸಿದ್ದಾರೆ. ಕಾರ್ಕಳದ ಕೃಷ್ಣ ಶಿಲೆಯ ಕಲ್ಲಿನ ಮೂರ್ತಿಗೆ ಹಿಂದಿನಿಂದಲೂ ಬೇಡಿಕೆ ಇದೆ. ಪ್ರತೀ ವರ್ಷ 300ಕ್ಕೂ ಅಧಿಕ ನಾಗನ ಕಲ್ಲುಗಳಿಗೆ ಬೇಡಿಕೆ ಬರುತ್ತಿತ್ತು. ಹೊಸದಾಗಿ ನಾಗಬನ ನಿರ್ಮಾಣ, ಜೀರ್ಣೋದ್ಧಾರ ಕಾರ್ಯವೂ ನಡೆಯುತ್ತಿಲ್ಲ, ಪ್ರಸಕ್ತ ಕರೊನಾದಿಂದಾಗಿ ಬೇಡಿಕೆಯ ಸಂಖ್ಯೆ 15ರಿಂದ 20 ಮೂರ್ತಿಗೆ ಸೀಮಿತವಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts