More

    77 ಅಪ್ರಾಪ್ತೆಯರು ಗರ್ಭಿಣಿಯರು

    ನಾಗಮಂಗಲ: ತಾಲೂಕಿನಲ್ಲಿ ಬಾಲ್ಯವಿವಾಹ ಹೆಚ್ಚಳ ಪರಿಣಾಮ 77 ಮಂದಿ ಅಪ್ರಾಪ್ತೆಯರು ಗರ್ಭಿಣಿಯರಾಗಿದ್ದಾರೆ.

    ಪಟ್ಟಣದ ತಾಲೂಕು ಆಡಳಿತಸೌಧದ ನ್ಯಾಯಾಲಯದ ಸಭಾಂಗಣದಲ್ಲಿ ಮಕ್ಕಳ ರಕ್ಷಣಾ ವ್ಯವಸ್ಥೆ ಕುರಿತು ಶನಿವಾರ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ವೆಂಕಟೇಶ್ ಅಧ್ಯಕ್ಷತೆಯಲ್ಲಿ ಆಯೋಜಿಸಿದ್ದ ತಾಲೂಕು ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಈ ವಿಷಯ ಬೆಳಕಿಗೆ ಬಂದಿದ್ದು, ತೀವ್ರ ಕಳವಳ ಮೂಡಿಸಿದೆ.
    ಇಂತಹ ಪ್ರಕರಣಗಳು ಹೆಚ್ಚುತ್ತಿದ್ದರೂ ತಾಲೂಕು ಆಡಳಿತ ಹಾಗೂ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಕಣ್ಮುಚ್ಚಿ ಕುಳಿತಿರುವುದು ವಿಷಾದನೀಯ ಎಂದು ವೆಂಕಟೇಶ್ ಅಸಮಾಧಾನ ವ್ಯಕ್ತಪಡಿಸಿದರು.

    ತಾಲೂಕಿನ ಆರೋಗ್ಯ ಇಲಾಖೆಯಲ್ಲಿ 77 ಅಪ್ರಾಪ್ತೆಯರು ಗರ್ಭಿಣಿಯಾಗಿ ನೋಂದಣಿಯಾಗಿದ್ದು, ಬಾಲ್ಯವಿವಾಹ ಹೆಚ್ಚಳಕ್ಕೆ ಇದು ಸಾಕ್ಷಿಯಾಗಿದೆ. ಈ ಪೈಕಿ 18 ವರ್ಷದ 57 ಗರ್ಭಿಣಿಯರು, 17 ವರ್ಷದ 13 ಗರ್ಭಿಣಿಯರು ಹಾಗೂ 16 ವರ್ಷದ 7 ಮಂದಿ ಗರ್ಭಿಣಿಯರಿದ್ದಾರೆ. ಇದೊಂದು ಗಂಭೀರ ವಿಷಯವಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.

    ಬಾಲ್ಯವಿವಾಹ ನಡೆಯುತ್ತಿರುವ ಬಗ್ಗೆ ಮಾಹಿತಿ ಬಂದ ತಕ್ಷಣ ಅಧಿಕಾರಿಗಳು ದಾಳಿ ನಡೆಸಿ ಮದುವೆ ರದ್ದುಪಡಿಸಿ ಕೈತೊಳೆದುಕೊಳ್ಳುತ್ತಿದ್ದೀರಿ. ನಂತರ ಆ ಬಾಲಕಿಯ ವಿಚಾರವಾಗಿ ಗಮನಹರಿಸದೆ ನಿರ್ಲಕ್ಷ್ಯ ಮಾಡುತ್ತಿರುವುದರಿಂದ ಮತ್ತೆ ಬಾಲ್ಯವಿವಾಹ ಮಾಡಲಾಗುತ್ತಿದೆ. ಇಷ್ಟೆಲ್ಲ ನಡೆಯುತ್ತಿದ್ದರೂ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ಬಂದಿಲ್ಲವೇ? ಎಂದು ಆಕ್ರೋಶ ವ್ಯಕ್ತಪಡಿಸಿದರು.

    ನಾಗಮಂಗಲ ಮತ್ತು ಕೆ.ಆರ್.ಪೇಟೆ ತಾಲೂಕಿನಲ್ಲಿ ಬಾಲ್ಯವಿವಾಹ ಪ್ರಕರಣಗಳು ಹೆಚ್ಚಾಗಿ ದಾಖಲಾಗುತ್ತಿವೆ. ಈ ಹಿಂದಿನಿಂದಲೂ ಬಾಲ್ಯವಿವಾಹ ವಿಷಯದಲ್ಲಿ ನಾಗಮಂಗಲ ತಾಲೂಕು ಅತ್ಯಂತ ಸೂಕ್ಷ್ಮ ಪ್ರದೇಶವಾಗಿದೆ. ಇಷ್ಟಾದರೂ ಅಧಿಕಾರಿಗಳ ಕಣ್ತಪ್ಪಿಸಿ ಬಾಲ್ಯವಿವಾಹಗಳು ಹೆಚ್ಚು ನಡೆಯುತ್ತಿವೆ. ಈ ರೀತಿಯ ಪ್ರಕರಣಗಳಿಗೆ ಕಡಿವಾಣ ಹಾಕಬೇಕೆಂದರೆ ನ್ಯಾಯಾಲಯದಿಂದ ಅಧಿಕಾರಿಗಳು ಇಂಜೆಕ್ಷನ್ ಆದೇಶ ತರಬೇಕು ಎಂದರು.

    77 ಅಪ್ರಾಪ್ತ ಗರ್ಭಿಣಿಯರ ಸಂಪೂರ್ಣ ಮಾಹಿತಿಯನ್ನು ಆರೋಗ್ಯ ಇಲಾಖೆಯಿಂದ ಪಡೆದುಕೊಂಡ ಅವರು, ಇದು ಅತ್ಯಂತ ಗಂಭೀರ ವಿಚಾರವಾಗಿದೆ. ಅವರು ಯಾವ ಗ್ರಾಮದವರು, ಬಾಲ್ಯ ವಿವಾಹದ ವಿಷಯ ಆ ವ್ಯಾಪ್ತಿಯ ಅಧಿಕಾರಿಗಳ ಗಮನಕ್ಕೆ ಬಂದಿದೆಯಾ ಅಥವಾ ಇಲ್ಲವೇ ಎಂಬೆಲ್ಲ ಮಾಹಿತಿಯನ್ನು ಪಡೆದು ರಾಜ್ಯ ಸಮಿತಿಯ ಮುಂದೆ ಚರ್ಚಿಸಿ ಕ್ರಮವಹಿಸುವುದಾಗಿ ತಿಳಿಸಿದರು. ತಾ.ಪಂ. ಇಒ ಚಂದ್ರಮೌಳಿ, ಉಪತಹಸೀಲ್ದಾರ್ ಮಲ್ಲಿಕಾರ್ಜುನ್, ಬಿಇಒ ಸುರೇಶ್, ಸಿಡಿಪಿಒ ಕೃಷ್ಣಮೂರ್ತಿ, ಪಿಎಸ್ಸೈಗಳಾದ ಅನ್ನಪೂರ್ಣ, ರವಿ, ಡಾ.ನಾರಾಯಣ್, ಡಾ.ಕುಮಾರ್ ಸೇರಿದಂತೆ ಮತ್ತಿತರಿದ್ದರು.

    ಗೋಡೆಬರಹ ಬರೆಸಿ
    ತಾಲೂಕಿನಾದ್ಯಂತ ಗ್ರಾಮ ಪಂಚಾಯಿತಿ ಹಂತದಲ್ಲಿ ಮಹಿಳಾ ಮತ್ತು ಮಕ್ಕಳ ರಕ್ಷಣೆ ಹಾಗೂ ಹಕ್ಕುಗಳ ಮಾಹಿತಿಯುಳ್ಳ ಗೋಡೆಬರಹಗಳನ್ನು ಸಾರ್ವಜನಿಕ ಸ್ಥಳಗಳಲ್ಲಿ ಬರೆಸಬೇಕು. ಇದರಿಂದ ಬಾಲ್ಯವಿವಾಹ, ಜೀತಪದ್ಧತಿ, ಬಾಲಕಾರ್ಮಿಕ ಪದ್ಧತಿ ಹಾಗೂ ಪೋಕ್ಸೋ ಪ್ರಕರಣಗಳನ್ನು ತಡೆಗಟ್ಟಬಹುದು. ಜತೆಗೆ ಎಲ್ಲ ಹಂತಗಳಲ್ಲಿಯೂ ಡಿ.15 ರೊಳಗೆ ಮಹಿಳೆ ಮತ್ತು ಮಕ್ಕಳ ಕುರಿತ ರಕ್ಷಣಾ ಕಾವಲು ಸಮಿತಿ ಸಭೆ ನಡೆಸಿ ವರದಿ ಸಲ್ಲಿಸುವಂತೆ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ವೆಂಕಟೇಶ್ ಸೂಚಿಸಿದರು.

    ಶಾಲೆಗಳ ದುರಸ್ತಿಗೆ ಕ್ರಮವಹಿಸಿ
    ಸರ್ಕಾರಿ ಶಾಲೆ ಉಳಿವಿಗೆ ಕ್ರಮ ವಹಿಸಬೇಕು. ಆರ್‌ಟಿಇ ಅಡಿಯಲ್ಲಿ ದಾಖಲಾಗಿರುವ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕೊಡಿಸಬೇಕು. ಶಾಲೆಗಳಲ್ಲಿ ಮಕ್ಕಳ ರಕ್ಷಣೆಗೆ ಹೆಚ್ಚಿನ ಒತ್ತು ನೀಡುವ ಜತೆಗೆ ಶುಚಿತ್ವ ಕಾಪಾಡಿಕೊಳ್ಳುವಂತೆ ವೆಂಕಟೇಶ್ ಸೂಚಿಸಿದರು. ಮಕ್ಕಳ ಕೊರತೆಯಿಂದ 13 ಸರ್ಕಾರಿ ಶಾಲೆಗಳು ಬಾಗಿಲು ಮುಚ್ಚಿರುವ ಕುರಿತು ಮಾಹಿತಿ ಪಡೆದ ಅವರು, ಮಳೆ ಹಾನಿಯಿಂದ 131 ಶಾಲೆಗಳು ಶಿಥಿಲಗೊಂಡಿದ್ದು, ಅವುಗಳ ದುರಸ್ತಿಗೆ ಕೂಡಲೇ ಕ್ರಮವಹಿಸಬೇಕು. ಅಷ್ಟು ಶಾಲೆಗಳ ಪಟ್ಟಿಯನ್ನು ಆಯೋಗಕ್ಕೆ ಸಲ್ಲಿಸುವಂತೆ ಬಿಇಒ ಸುರೇಶ್‌ಗೆ ಸೂಚಿಸಿದರು.
    ತಾಲೂಕಿನಲ್ಲಿ ಭಿಕ್ಷಾಟನೆಯಲ್ಲಿ ಮಕ್ಕಳು ತೊಡಗಿರುವ ಬಗ್ಗೆ ಸಾಕಷ್ಟು ದೂರುಗಳು ಕೇಳಿ ಬರುತ್ತಿವೆ. ಸಮಾಜ ಕಲ್ಯಾಣಾಧಿಕಾರಿ ಹಾಗೂ ಪುರಸಭೆ ಮುಖ್ಯಾಧಿಕಾರಿಗಳು ಈ ಬಗ್ಗೆ ಕೂಡಲೇ ಕ್ರಮವಹಿಸಿ ಎಂದು ಸೂಚಿಸಿದರು.

    35 ಮಕ್ಕಳು ಶಾಲೆ ಬಿಟ್ಟಿದ್ದಾರೆ
    ತಾಲೂಕಿನಲ್ಲಿ ಒಟ್ಟು 35 ಮಕ್ಕಳು ಶಾಲೆಗೆ ಸೇರದವರು ಹಾಗೂ ಶಾಲೆ ಬಿಟ್ಟವರಿದ್ದಾರೆ. ಈ ಪೈಕಿ 17 ಮಕ್ಕಳು ಬೇರೆ ರಾಜ್ಯ ಹಾಗೂ ಬೇರೆ ಜಿಲ್ಲೆಗಳಿಂದ ಉದ್ಯೋಗ ಅರಸಿ ವಲಸೆ ಬಂದಿರುವ ಕೂಲಿಕಾರ್ಮಿಕರು ಮಕ್ಕಳಾಗಿದ್ದಾರೆ. ಇನ್ನುಳಿದ ಕೆಲವು ಮಕ್ಕಳು ಶಾಲೆಗೆ ಬರಲು ಹಾಗೂ ಕೆಲವು ಪೋಷಕರು ಶಾಲೆಗೆ ಕಳುಹಿಸಲು ನಿರಾಸಕ್ತಿ ತೋರುತ್ತಿದ್ದಾರೆ ಎಂದು ಬಿಇಒ ಸುರೇಶ್ ಮಾಹಿತಿ ನೀಡಿದರು.
    ಅಷ್ಟು ಮಕ್ಕಳ ಸಂಪೂರ್ಣ ಮಾಹಿತಿ ಪಡೆದು ಆ ಮಕ್ಕಳನ್ನು ಕೌನ್ಸೆಲಿಂಗ್ ಮಾಡಬೇಕು. ವಲಸಿಗರ ಮನವೊಲಿಸಿ ಮಕ್ಕಳನ್ನು ಮತ್ತೆ ಶಾಲೆಗೆ ಸೇರಿಸುವ ಕೆಲಸವಾಗಬೇಕು ಎಂದು ಬಿಇಒಗೆ ಆಯೋಗದ ಸದಸ್ಯ ವೆಂಕಟೇಶ್ ಸೂಚಿಸಿದರು. ಸಮಾಜ ಕಲ್ಯಾಣ ಇಲಾಖೆಯ ಹಾಸ್ಟೆಲ್‌ಗಳಲ್ಲಿ ಮಕ್ಕಳಿಗೆ ಸರಿಯಾಗಿ ಊಟದ ವ್ಯವಸ್ಥೆ ಇಲ್ಲ. ಶೌಚಗೃಹಗಳು ಸರಿಯಿಲ್ಲವೆಂಬ ದೂರುಗಳು ಕೇಳಿಬರುತ್ತಿವೆ. ಈ ಬಗ್ಗೆ ಪರಿಶೀಲಿಸಿ ಕೂಡಲೇ ಕ್ರಮವಹಿಸಬೇಕು ಎಂದು ನಿರ್ದೇಸಿಸಿದರು.

    ಸಮಿತಿ ಸಭೆಯೇ ನಡೆದಿಲ್ಲವೇ?
    ಬಾಲ್ಯವಿವಾಹ ತಡೆ ಸಂಬಂಧ ತಹಸೀಲ್ದಾರ್ ನೇತೃತ್ವದಲ್ಲಿ ಸಮಿತಿ ಸಭೆ ನಡೆಸಿರುವ ಬಗ್ಗೆ ಆಯೋಗದ ಸದಸ್ಯ ವೆಂಕಟೇಶ್ ಮಾಹಿತಿ ಕೇಳಿದಾಗ, ಸಭೆಯಲ್ಲಿದ್ದ ಉಪತಹಸೀಲ್ದಾರ್ ಮಲ್ಲಿಕಾರ್ಜುನ್ ಹಾಗೂ ಇತರ ಅಧಿಕಾರಿಗಳು ಮುಖ ಮುಖ ನೋಡಿಕೊಂಡು ಸಭೆ ಮಾಡಿದ್ದೀವಿ ಸರ್ ಎಂದು ತಡಬಡಾಯಿಸುತ್ತ ಉತ್ತರ ನೀಡಿದರು.
    ಇದರಿಂದ ಅನುಮಾನಗೊಂಡ ಆಯೋಗದ ಸದಸ್ಯ, ಯಾವಾಗ ಸಭೆ ನಡೆದಿದೆ? ಆ ಸಭೆಯ ನಿರ್ಣಯಗಳೇನು? ಎಂದು ಮರುಪ್ರಶ್ನಿಸಿದಾಗ ಸಭೆ ನಡೆಸಿಲ್ಲ ಎಂದು ಉತ್ತರಿಸಿದರು. ಇದಕ್ಕೆ ಆಕ್ರೋಶ ವ್ಯಕ್ತಪಡಿಸಿದ ವೆಂಕಟೇಶ್, ಮುಂದಿನ ವಾರದೊಳಗೆ ಸಮಿತಿಯ ಸಭೆ ನಡೆಸಬೇಕು ಎಂದು ಸೂಚಿಸಿದರು.

    ಕಾರ್ಮಿಕ ನಿರೀಕ್ಷಕನಿಗೆ ನೋಟಿಸ್
    ಸಭೆಯಲ್ಲಿ ಕಾರ್ಮಿಕ ಇಲಾಖೆಗೆ ಸಂಬಂಧಿಸಿದಂತೆ ಜೀತ ಪದ್ಧತಿ ಪ್ರಕರಣಗಳು ಹಾಗೂ ಬಾಲಕಾರ್ಮಿಕ ಪದ್ಧತಿಯ ಪ್ರಕರಣಗಳ ಮಾಹಿತಿಯನ್ನು ಕಾರ್ಮಿಕ ನಿರೀಕ್ಷಕ ಶಿವಕುಮಾರ್ ಅವರನ್ನು ಪ್ರಶ್ನಿಸಿದಾಗ, ‘ನಾನು ಈಗ ಹೊಸದಾಗಿ ಬಂದಿದ್ದೇನೆ’ ಎಂದರು.
    ಇದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಆಯೋಗದ ಸದಸ್ಯ, ಕಾರ್ಮಿಕ ನಿರೀಕ್ಷಕನಿಗೆ ನೋಟಿಸ್ ನೀಡುವಂತೆ ಇಒ ಚಂದ್ರಮೌಳಿ ಅವರಿಗೆ ಸೂಚಿಸಿದರು. ಸಭೆಯಲ್ಲಿ ಪೊಲೀಸ್, ಅಬಕಾರಿ, ಪುರಸಭೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸೇರಿದಂತೆ ಮುಂತಾದ ಇಲಾಖೆಗಳಿಂದ ಮಾಹಿತಿ ಪಡೆದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts