More

    ರಸ್ತೆ ಹಾಳುಗೆಡವಲು ಅಧಿಕಾರ ಕೊಟ್ಟವರು ಯಾರು ?

    ಕೊಪ್ಪ: ಹರಿಹರಪುರ ಸಮೀಪದ ನಾಗಲಾಪುರದಲ್ಲಿ ಕೊಪ್ಪ-ಶೃಂಗೇರಿ ಮುಖ್ಯ ರಸ್ತೆಯಲ್ಲಿ ಪಪಂನಿಂದ ರಸ್ತೆ ಆಗೆದು ಪೈಪ್​ಲೈನ್ ದುರಸ್ತಿ ಪಡಿಸಲು ಮುಂದಾದಾಗ ಸ್ಥಳೀಯರು ವಿರೋಧ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿ ಪಪಂ ಅಧ್ಯಕ್ಷೆ, ಉಪಾಧ್ಯಕ್ಷೆ ಹಾಗೂ ಮುಖ್ಯಾಧಿಕಾರಿಯನ್ನು ಸ್ಥಳಕ್ಕೆ ಕರೆಸಿ ತರಾಟೆಗೆ ತೆಗೆದುಕೊಂಡರು.

    ರಾಷ್ಟ್ರೀಯ ಹೆದ್ದಾರಿ 169ರಲ್ಲಿ ಎರಡು ವರ್ಷದ ಹಿಂದೆ ಗುಣಮಟ್ಟದ ರಸ್ತೆ ನಿರ್ಮಾಣ ಮಾಡಲಾಗಿದೆ. ರಸ್ತೆ ಮಧ್ಯ ಪೈಪ್ ದುರಸ್ತಿಗೆಂದು ಪಪಂ ಆಗಾಗ ಗುಂಡಿ ತೋಡಿ ರಸ್ತೆ ಹಾಳುಗೆಡುವುದು ಸ್ಥಳೀಯರ ಕೆಂಗಣ್ಣಿಗೆ ಗುರಿಯಾಗಿತ್ತು. ಶನಿವಾರ ಸ್ಥಳೀಯರು ಪ್ರತಿಭಟನೆ ನಡೆಸಿದಾಗ ಸ್ಥಳಕ್ಕೆ ಬಂದ ಪಪಂ ಅಧ್ಯಕ್ಷೆ ಸುಜಾತಾ ವಸಂತ್, ಉಪಾಧ್ಯಕ್ಷೆ ಗಾಯತ್ರಿ ಶೆಟ್ಟಿ ಹಾಗೂ ಮುಖ್ಯಾಧಿಕಾರಿ ಬಸವರಾಜ್ ಟಾಕಪ್ಪ ಶಿಗ್ಗಾವಿ ಅವರನ್ನು ಸ್ಥಳೀಯರು ತರಾಟೆಗೆ ತೆಗೆದುಕೊಂಡರು. ರಸ್ತೆ ಹಾಳುಗೆಡವಲು ನಿಮಗೆ ಅಧಿಕಾರ ಕೊಟ್ಟವರು ಯಾರು? ರಸ್ತೆ ಕಾಮಗಾರಿ ವೇಳೆ ಪೈಪ್ ಲೈನ್​ನನ್ನು ರಸ್ತೆಯಿಂದ ಹೊರಭಾಗಕ್ಕೆ ಅಳವಡಿಸಬೇಕಿತ್ತು. ಆಗ ಬೇಜವಾಬ್ದಾರಿಯಿಂದ ಕಾಮಗಾರಿ ನಡೆಸಿ ನಂತರ ಉತ್ತಮ ರಸ್ತೆಯನ್ನು ಹಾಳುಗೆಡುವುತ್ತಿದ್ದೀರಾ ಎಂದು ಹರಿಹಾಯ್ದರು.

    ಕೊಪ್ಪ ಗ್ರಾಮಾಂತರ ಗ್ರಾಪಂ ಮಾಜಿ ಸದಸ್ಯ ಸತೀಶ್​ಚಂದ್ರ ಶೆಟ್ಟಿ ಮಾತನಾಡಿ, ರಸ್ತೆ ಕಾಮಗಾರಿ ನಡೆಯುವ ಸಮಯದಲ್ಲಿ ಪಪಂಗೆ ಪೈಪ್​ಲೈನ್ ರಸ್ತೆಯ ಒಳಭಾಗದಿಂದ ತೆಗೆದು ಹೊರಭಾಗಕ್ಕೆ ಹಾಕುವಂತೆ ತಿಳಿಸಲಾಗಿತ್ತು. ಅಂದಿನ ಪಪಂ ಮುಖ್ಯಾಧಿಕಾರಿ ಹೊರ ಭಾಗದಲ್ಲಿ ಹಾಕುತ್ತೇವೆ. ಸರ್ಕಾರದಿಂದ ಅನುದಾನ ಬರುತ್ತದೆ ಎಂದು ಹೇಳಿಯೂ, ರಸ್ತೆಯಿಂದ ಹೊರಗೆ ಹಾಕುವ ಪ್ರಯತ್ನ ಮಾಡಿಲ್ಲ ಎಂದು ಆರೋಪಿಸಿದರು.

    ಈ ಹಿಂದೆ ಪೈಪ್ ಹಾಳಾದ ಕಾರಣ ಪಪಂ ಸಿಬ್ಬಂದಿ ರಸ್ತೆಯಲ್ಲಿ ಗುಂಡಿ ತೆಗೆದು ಪೈಪ್ ಲೈನ್ ಸರಿಪಡಿಸಿದ್ದಾರೆ. ಆದರೆ ಅಂದು ತೆಗೆದ ಗುಂಡಿ ಈಗಲೂ ಹಾಗೇ ಇದೆ. ಅದೇ ಗುಂಡಿಗೆ ರಾತ್ರಿ ವೇಳೆ ಬೈಕ್ ಚಾಲಕರು ಬಿದ್ದಿದ್ದಾರೆ. ಇಷ್ಟಾದರೂ ಪಪಂ ಮತ್ತೊಂದು ಭಾಗದಲ್ಲಿ ಪೈಪ್ ಲೈನ್ ದುರಸ್ತಿಪಡಿಸಲೆಂದು ಗುಂಡಿ ತೆಗೆಸಿದೆ. ಇಲ್ಲೂ ಅದೇ ಸಮಸ್ಯೆ ಆಗುತ್ತದೆ. ಆದ್ದರಿಂದ ಪಪಂ ಹೊಸ ಪೈಪ್ ಲೈನ್ ಮಾಡಿಕೊಳ್ಳಬೇಕು. ಇಲ್ಲವಾದರೆ ರಸ್ತೆ ಹಾಳು ಮಾಡಬಾರದು ಎಂದು ಒತ್ತಾಯಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts