More

    ಗೋ ಸಂರಕ್ಷಣೆಯಿಂದ ನಾಡು ಸುಭಿಕ್ಷ

    ಶಿರಹಟ್ಟಿ: ದೇಸಿ ಹಸುಗಳು ದೇಶದ ಸಂಪತ್ತು ಮತ್ತು ಮನುಷ್ಯನ ಉತ್ತಮ ಆರೋಗ್ಯಕ್ಕೆ ಅಮೂಲ್ಯ ಕೊಡುಗೆಯಾಗಿದ್ದು, ಅವುಗಳ ಸಂತತಿ ಸಂರಕ್ಷಣೆಯಿಂದ ನಾಡು ಸುಭಿಕ್ಷೆಯಾಗಲಿದೆ ಎಂದು ಚಾಮರಾಜನಗರದ ಶ್ರೀಮಹದೇವ ಸ್ವಾಮಿಗಳು ಹೇಳಿದರು.

    ತಾಲೂಕಿನ ಕಡಕೋಳ ಗ್ರಾಮದಲ್ಲಿ ಗೋವಿಂದರಡ್ಡಿ ಸೋಮರಡ್ಡಿ ಅಗಸನಕೊಪ್ಪ ಸ್ಮರಣಾರ್ಥ ಆರಂಭಿಸಿದ ದೇಸಿ ಹಸುಗಳ ಸಂರಕ್ಷಣೆಯ ತುರುಗಾಯಿ ರಾಮಣ್ಣ ಗೋಶಾಲೆಗೆ ಪೂಜೆ ನೆರವೇರಿಸಿ ಅವರು ಮಾತನಾಡಿದರು.

    ಹಿಂದುಗಳ ಪಾಲಿಗೆ ಹಸು ಕಾಮಧೇನುವಾಗಿದ್ದು, ಗೋಮಾತೆ ಎಂದು ಪೂಜಿಸಲಾಗುತ್ತದೆ. ಕಳೆದ 20 ವರ್ಷಗಳಿಂದ ತಮ್ಮ ಭಾಗದಲ್ಲಿ ದೇಸಿ ಹಸುಗಳ ಸಂರಕ್ಷಣೆ ಮಾಡಲಾಗುತ್ತಿದೆ. ಕಡಕೋಳ ಗ್ರಾಮದಲ್ಲಿ 40 ಹಸುಗಳ ಸಂರಕ್ಷಣೆಗಾಗಿ ಗೋಶಾಲೆ ತೆರೆಯುವುದಕ್ಕೆ ದೇವರಡ್ಡಿ ಅಗಸನಕೊಪ್ಪ ಇಚ್ಛಾಶಕ್ತಿ ತೋರಿ ತಮ್ಮ ಭೂಮಿಯಲ್ಲಿ ವಿಶಾಲವಾದ ಜಾಗ ನೀಡಿದ್ದಾರೆ. ಕಪ್ಪತ್ತಗುಡ್ಡದ ಸೆರಗಿನಂಚಿನ ಈ ಸ್ಥಳ ಗೋರಕ್ಷಣೆಗೆ ಅತ್ಯಂತ ಪ್ರಶಸ್ತವಾಗಿದೆ. ಇದರಿಂದ ಮುಂದಿನ ದಿನಗಳಲ್ಲಿ ಗೋ ಉತ್ಪನ್ನಗಳ ತಯಾರಿಕೆ ಮತ್ತು ಹೈನುಗಾರಿಕೆಗೂ ಉತ್ತೇಜನ ನೀಡಲಿದ್ದು, ಅದಕ್ಕೆ ಸಾರ್ವಜನಿಕರ ಸಹಕಾರದ ಅಗತ್ಯವಿದೆ ಎಂದು ಕೋರಿದರು.

    ಭೂದಾನಿ ದೇವರಡ್ಡಿ ಅಗಸನಕೊಪ್ಪ ಮಾತನಾಡಿ, ತಮ್ಮ ತಂದೆ ಗೋವಿಂದರಡ್ಡಿ ಅವರ ಕಾಲದಿಂದಲೂ ಜಮೀನು ಸಾಗವಳಿ ಜೊತೆಗೆ ದೇಸಿ ಹಸುಗಳನ್ನು ಸಾಕಲಾಗಿತ್ತು. ಆದರೆ, ಆಳುಗಳ ಕೊರತೆಯಿಂದ ಅವುಗಳ ಸಂರಕ್ಷಣೆ ಕಷ್ಟಕರವಾಗಿ ಬೇರೆಡೆ ಸಾಗಿಸಲು ಇಚ್ಛೆ ತೋರಿದಾಗ ಕಪೋತಗಿರಿ ಪತಂಜಲಿ ಯೋಗಾಶ್ರಮದ ವೀರೇಶ ಗುರೂಜಿ ಅವರ ಸಂಕಲ್ಪ ತೋರಿದ ಪರಿಣಾಮ ಶ್ರೀ ಮಹದೇವ ಸ್ವಾಮಿಗಳು ಗ್ರಾಮಕ್ಕಾಗಮಿಸಿ 40 ಹಸುಗಳ ಸಂರಕ್ಷಣೆ ಜವಾಬ್ದಾರಿ ಹೊತ್ತು ಗೋಶಾಲೆ ಆರಂಭಕ್ಕೆ ಮುಂದಾಗಿ ಇತರರಿಗೂ ಮಾದರಿಯಾಗಿರುವುದು ಸ್ಮರಣೀಯ ಎಂದರು.

    ಕಪೋತಗಿರಿ ಪತಂಜಲಿ ಯೋಗಾಶ್ರಮದ ವೀರೇಶ ಗುರೂಜಿ ಸಾವಯವ ಕೃಷಿ ಉತ್ಪನ್ನ ಹಾಗೂ ಸಿರಿಧಾನ್ಯ, ಗೋಮೂತ್ರದ ಮಹತ್ವ ಕುರಿತು ಮಾತನಾಡಿದರು.

    ಈ ವೇಳೆ ಸರೋಜಿನಿದೇವಿ ಅಗಸನಕೊಪ್ಪ, ಓಂಕಾರೇಶ್ವರಿ ಮಾತಾಜೀ, ತಾಪಂ ಸದಸ್ಯ ತಿಪ್ಪಣ್ಣ ಕೊಂಚಿಗೇರಿ, ಪ್ರಗತಿಪರ ರೈತ ಪರಪ್ಪ ಕೋಳಿವಾಡ, ಎಂ.ವಿ. ಅಂಗಡಿ, ಶರಣಪ್ಪ ಹರ್ಲಾಪೂರ, ದೇವಪ್ಪ ಹೊಂಬಳ, ತೋಟಪ್ಪ ಸೊನ್ನದ ಇತರರಿದ್ದರು.



    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts