More

    ನಿರಂತರ ಮಳೆ, ಕೊಳೆಯುತ್ತಿದೆ ಬೆಳೆ

    ರಾಣೆಬೆನ್ನೂರ: ತಾಲೂಕಿನಲ್ಲಿ ಕಳೆದ 10-12 ದಿನಗಳಿಂದ ಹಗಲು ರಾತ್ರಿ ಎನ್ನದೆ ಮಳೆ ಸುರಿಯುತ್ತಿದೆ. ಮೆಕ್ಕೆಜೋಳ, ಶೇಂಗಾ, ಹತ್ತಿ ಬೆಳೆಗಳು ಜಲಾವೃತವಾಗಿದ್ದು, ಕೊಳೆಯುವ ಭೀತಿ ಎದುರಾಗಿದೆ.
    ಜೂನ್​ನಲ್ಲಿ ರೈತರು ಬಿತ್ತನೆ ಮಾಡಿದ ಮೆಕ್ಕೆಜೋಳ, ಹತ್ತಿ, ಶೇಂಗಾ ಬೆಳೆ ಸದ್ಯ ಬೆಳವಣಿಗೆ ಹಂತದಲ್ಲಿವೆ. ಈ ಸಮಯದಲ್ಲಿ ಬೆಳೆಗಳಿಗೆ ಕೊಂಚ ಮಳೆ ಹಾಗೂ ಬಿಸಿಲಿನ ಅವಶ್ಯಕತೆ ಇದೆ. ಆದರೆ, 10-12 ದಿನದಿಂದ ಮಳೆ ನಿರಂತರವಾಗಿ ಸುರಿಯುತ್ತಿದೆ. ಮೋಡ ಕವಿದ ವಾತಾವರಣದ ನಡುವೆ ಬೆಳೆಗಳಿಗೆ ಬಿಸಿಲಿನ ದರ್ಶನವೂ ಆಗಿಲ್ಲ. ಆದ್ದರಿಂದ ಮಳೆ ಇದೇ ರೀತಿ ನಿರಂತರವಾಗಿ ಸುರಿದರೆ, ಮುಂದಿನ ದಿನದಲ್ಲಿ ಸಂಪೂರ್ಣ ಕೊಳೆತು ಹೋಗುವ ಸಾಧ್ಯತೆಯಿದೆ.
    ಪ್ರಸಕ್ತ ತಿಂಗಳಲ್ಲಿ 97 ಮೀ.ಮೀ. ವಾಡಿಕೆ ಮಳೆಯಿದ್ದರೆ, ಜು. 21ರವರೆಗೆ ಒಟ್ಟು 97.18 ಮೀ.ಮೀ.ನಷ್ಟು ಮಳೆಯಾಗಿದೆ. ಅದರಲ್ಲೂ ಜು. 14ರಿಂದ 21ರವರೆಗೆ ಅಂದರೆ ಕೇವಲ 8 ದಿನದಲ್ಲಿ 91 ಮಿ.ಮೀ. ಮಳೆಯಾಗಿದೆ. ಕಳೆದ ಏಳೆಂಟು ದಿನದಲ್ಲಿ ತಾಲೂಕಿನಲ್ಲಿ ವಾಡಿಕೆಗಿಂತ ಹೆಚ್ಚಿನ ಮಳೆಯಾಗಿದೆ. ಇದೇ ರೀತಿ ಮಳೆ ಮುಂದುವರಿದರೆ ಬೆಳೆ ರಕ್ಷಣೆ ಮಾಡುವುದು ಕಷ್ಟವಾಗಲಿದೆ. ಸದ್ಯದ ಮಳೆಯಿಂದಾಗಿ ಯೂರಿಯಾ ಗೊಬ್ಬರಕ್ಕೆ ಬೇಡಿಕೆ ಹೆಚ್ಚಾಗಿದೆ ಎಂದು ಕೃಷಿ ಅಧಿಕಾರಿ ಶಿವಾನಂದ ಹಾವೇರಿ ‘ವಿಜಯವಾಣಿ’ಗೆ ತಿಳಿಸಿದ್ದಾರೆ.
    ಕಳೆದ ಎರಡು ವಾರದ ಹಿಂದೆ ರೈತರ ಬೆಳೆಗಳು ಮಳೆ ಕೊರತೆಯಿಂದ ಬಾಡಲಾರಂಭಿಸಿದ್ದವು. ಆದರೀಗ, ಅಗತ್ಯಕ್ಕಿಂತ ಹೆಚ್ಚಿನ ಮಳೆ ಸುರಿಯಲಾರಂಭಿಸಿದೆ. ಮಳೆ ಬೇಕು ಎಂದು ದೇವರಲ್ಲಿ ಪ್ರಾರ್ಥಿಸಿದ್ದ ರೈತರು ಇದೀಗ ಮಳೆ ನಿಲ್ಲಿಸು ಎಂದು ಬೇಡಿಕೊಳ್ಳುವ ಸ್ಥಿತಿ ಎದುರಾಗಿದೆ.
    ನೀರಲ್ಲಿ ನಿಂತ ಬೆಳೆಗಳು:ತಾಲೂಕಿನ ಮೇಡ್ಲೇರಿ, ಬೇಲೂರು, ಐರಣಿ, ಹಿರೇಬಿದರಿ, ಕುದರಿಹಾಳ, ಮುದೇನೂರ ಸೇರಿ ತುಂಗಭದ್ರಾ ನದಿಪಾತ್ರದ ವಿವಿಧ ಗ್ರಾಮಗಳ ರೈತರ ಭತ್ತದ ಗದ್ದೆಗಳು ಸಂಪೂರ್ಣ ನೀರಿನಲ್ಲಿ ಮುಳಗಿವೆ. ಕೆಲವೆಡೆ ಮೆಕ್ಕೆಜೋಳ, ಶೇಂಗಾ ಹಾಗೂ ಹತ್ತಿ ಬೆಳೆದ ಜಮೀನುಗಳಲ್ಲಿಯೂ ನೀರು ನಿಂತಿದೆ.
    ನಿರಂತರ ಮಳೆಯಿಂದಾಗಿ ಬೆಳೆಗಳನ್ನು ರಕ್ಷಿಸಿಕೊಳ್ಳಲು ಯೂರಿಯಾ ಗೊಬ್ಬರ ಹಾಕುವುದು ಅನಿವಾರ್ಯವಾಗಿದೆ. ಆದರೆ, ತಾಲೂಕಿನಲ್ಲಿ ಎಲ್ಲಿಯೂ ಯೂರಿಯಾ ಗೊಬ್ಬರ ಸಿಗುತ್ತಿಲ್ಲ. ಕೃಷಿ ಅಧಿಕಾರಿಗಳು ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಕೂಡಲೆ ನೀರು ನಿಂತಿರುವ ಜಮೀನುಗಳಿಗೆ ಭೇಟಿ ನೀಡಬೇಕು. ಹಾನಿಯಾದ ಬೆಳೆಗಳಿಗೆ ಸೂಕ್ತ ಪರಿಹಾರ ನೀಡಬೇಕು. ಬೆಳೆಗಳಿಗೆ ಹಾಕಲು ಯೂರಿಯಾ ಗೊಬ್ಬರದ ವ್ಯವಸ್ಥೆ ಮಾಡಬೇಕು ಎಂದು ರೈತರು ಒತ್ತಾಯಿಸಿದ್ದಾರೆ.

    ನಿರಂತರ ಮಳೆಯಿಂದ ತಾಲೂಕಿನ ಕುಪ್ಪೇಲೂರ, ಚಿಕ್ಕಕುರುವತ್ತಿ, ಕೂನಬೇವು, ಮೇಡ್ಲೇರಿ ಸೇರಿ ವಿವಿಧ ಗ್ರಾಮಗಳಲ್ಲಿ 30 ಮನೆಗಳು ಬಿದ್ದಿವೆ. ಅವರಿಗೆ ಪರಿಹಾರ ನೀಡಲು ದಾಖಲಾತಿ ಸಿದ್ಧಪಡಿಸಲಾಗುತ್ತಿದೆ. ಕೆಲ ರೈತರ ಜಮೀನುಗಳಲ್ಲಿ ಈಗಾಗಲೇ ನೀರು ನಿಂತಿವೆ. ಆದರೆ, ಬೆಳೆ ಹಾನಿ ಇನ್ನೂ ಆಗಿಲ್ಲ. ಮಳೆ ಇದೇ ರೀತಿ ಮುಂದುವರಿದರೆ, ಬೆಳೆ ಹಾನಿ ಆಗಲಿದೆ. ನಂತರದಲ್ಲಿ ಬೆಳೆ ಹಾನಿ ಸಮೀಕ್ಷೆ ಮಾಡಲಾಗುವುದು.
    | ಶಂಕರ ಜಿ.ಎಸ್., ತಹಸೀಲ್ದಾರ್ ರಾಣೆಬೆನ್ನೂರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts