More

    ತೋಡುಗಳ ಪುನಶ್ಚೇತನಕ್ಕೆ ನಬಾರ್ಡ್ ಅನುದಾನ

    ಉಡುಪಿ: ಸರ್ಕಾರ ಕೃಷಿಗೆ ವಿದ್ಯುತ್ ಹೊರತು ಉಳಿದ ಪೂರಕ ಮತ್ತು ಪೋಷಕ ಕ್ರಮ ಕೈಗೊಳ್ಳುತ್ತಿಲ್ಲ. ಹೀಗಾಗಿ ಕೃಷಿಯಲ್ಲಿ ಸುಸ್ಥಿರ ಅಭಿವೃದ್ಧಿ ಮರೀಚಿಕೆಯಾಗಿದೆ. ತೋಡು ಮತ್ತು ಕೆರೆಗಳಲ್ಲಿ ಹೂಳು ತುಂಬಿದರೆ ವೈಯಕ್ತಿಕವಾಗಿ ರೈತನಿಗೆ ಕಷ್ಟ. ಆದ್ದರಿಂದ ಮುಂದಿನ ವರ್ಷದಿಂದ ಗದ್ದೆಗೆ ನೀರು ಹರಿಸಲು ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ತೋಡುಗಳ ಪುನಶ್ಚೇತನಕ್ಕೆ ನಬಾರ್ಡ್‌ನಿಂದ ಅನುದಾನ ನೀಡಲಾಗುವುದು ಎಂದು ಸಣ್ಣ ನೀರಾವರಿ ಸಚಿವ ಜೆ.ಸಿ. ಮಾಧುಸ್ವಾಮಿ ಹೇಳಿದರು.

    ಕೇದಾರೋತ್ಥಾನ ಟ್ರಸ್ಟ್ ವತಿಯಿಂದ ಭಾನುವಾರ ಕಕ್ಕುಂಜೆ ವಾರ್ಡ್‌ನಲ್ಲಿ 60 ಎಕರೆ ಹಡಿಲು ಗದ್ದೆ ನೇಜಿ ನಾಟಿ ಕಾರ್ಯಕ್ಕೆ ಚಾಲನೆ ನೀಡಿದ ಅವರು, ದೇಶದಲ್ಲಿ ಜನಸಂಖ್ಯೆ ಮಾತ್ರ ವೃದ್ಧಿಯಾಗುತ್ತಿದೆ. ಆದರೆ ಭೂಮಿ ಮತ್ತು ನೀರು ಹೆಚ್ಚಾಗುತ್ತಿಲ್ಲ. ಆಹಾರೋತ್ಪಾದನೆ ಹೆಚ್ಚು ಮಾಡದಿದ್ದರೆ ಸಮಸ್ಯೆ ಎದುರಾಗಲಿದೆ. ವೈಯಕ್ತಿಕ ಬದುಕಿಗೆ ಒತ್ತು ನೀಡಿ ಕೃಷಿ ಭೂಮಿಗಳನ್ನು ಪಾಳು ಬಿಡುತ್ತಿದ್ದು, ಬೆಳೆಗಳನ್ನು ಬೆಳೆಯುವಲ್ಲಿ ಹಿಂದೆ ಬೀಳುತ್ತಿದ್ದೇವೆ ಎಂದರು.

    ಎತ್ತಿನಹೊಳೆ ಯೋಜನೆ 2 ವರ್ಷದಲ್ಲಿ ಪೂರ್ಣ: ಎತ್ತಿನಹೊಳೆ ಯೋಜನೆ 2 ವರ್ಷದಲ್ಲಿ ಪೂರ್ಣಗೊಳ್ಳಲಿದೆ. ಚಿಕ್ಕಬಳ್ಳಾಪುರ ಮತ್ತು ತುಮಕೂರಿನಲ್ಲಿ ಭೂ ಸಂಸತ್ರಸ್ತರಿಗೆ ಪರಿಹಾರ ನೀಡುವಲ್ಲಿ ತಾರತಮ್ಯವಾಗಿದೆ ಎಂದು ಆರೋಪಿಸಿ ಸ್ಥಳೀಯರು ಭೂಸ್ವಾಧೀನಕ್ಕೆ ಅಡ್ಡಿಪಡಿಸುತ್ತಿರುವುದರಿಂದ ಯೋಜನೆಗೆ ಹಿನ್ನಡೆಯಾಗಿದೆ. ಹೀಗಾಗಿ ರಾಜ್ಯ ಸರ್ಕಾರ ಯಾವುದಾದರೂ ಒಂದು ಜಿಲ್ಲೆಯಲ್ಲಿ ನೀರು ಸಂಗ್ರಹಿಸಿಡಲು ತೀರ್ಮಾನಿಸಿದೆ ಎಂದು ಮಾಧುಸ್ವಾಮಿ ಹೇಳಿದರು.

    ಡಿಕೆಶಿ ಲಸಿಕೆ ಹೇಳಿಕೆ ಪಾಪದ ಮಾತು:
    ದೇಶದ 80 ಕೋಟಿ ಜನರಿಗೆ ಉಚಿತ ಲಸಿಕೆ ನೀಡುವುದು ಸಾಮಾನ್ಯ ಮಾತಲ್ಲ. ಕೇಂದ್ರ ಸರ್ಕಾರದ ಈ ನಿರ್ಧಾರಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಲಸಿಕೆ ವಿತರಣೆ ಬೋಗಸ್ ಎಂಬ ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಪಾಪದ ಮಾತು ಒಳ್ಳೆಯದಲ್ಲ. ನೈಸರ್ಗಿಕ ಆಪತ್ತನ್ನು ಎಲ್ಲರೂ ಒಟ್ಟಾಗಿ ಎದುರಿಸಬೇಕು. ಲಸಿಕೆ ಉತ್ಪಾದಿಸಲು ಕಂಪನಿಗಳಿಗೆ ಸಮಯಾವಕಾಶ ಬೇಕಾಗುತ್ತದೆ ಎಂಬುದನ್ನು ಕಾಂಗ್ರೆಸ್ ಅರ್ಥಮಾಡಿಕೊಳ್ಳಬೇಕು. ವಿರೋಧಕ್ಕಾಗಿ ವಿರೋಧ ಮಾಡುವುದು ಸರಿಯಲ್ಲ ಎಂದು ಸಚಿವ ಮಾಧುಸ್ವಾಮಿ ಹೇಳಿದರು.

    ಜಾರಕಿಹೊಳಿ ರಾಜೀನಾಮೆ ಅಗತ್ಯವಿಲ್ಲ: ಮಾಜಿ ಸಚಿವ ರಮೇಶ ಜಾರಕಿಹೊಳಿ ಅವರಿಗೆ ಸರ್ಕಾರ ಮತ್ತು ಪಕ್ಷದ ಕಡೆಯಿಂದ ಏನೂ ತೊಂದರೆಯಾಗಿಲ್ಲ ಎಂದು ಸಚಿವ ಮಾಧುಸ್ವಾಮಿ ಹೇಳಿದರು. ಆಕಸ್ಮಿಕವಾದ ಘಟನೆಗೆ ಅವರು ಬಲಿಯಾಗಿದ್ದಾರೆ. ನಾವೆಲ್ಲ ಅವರ ಬಗ್ಗೆ ಅನುಕಂಪ ಇಟ್ಟುಕೊಂಡಿದ್ದೇವೆ. ಸಮ್ಮತಿಯಿಂದ ನಡೆದ ದೈಹಿಕ ಸಂಪರ್ಕ ಅಪರಾಧ ಅಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಆ ಹೆಣ್ಣುಮಗಳ ವರ್ತನೆ ನೋಡಿದರೆ ಇಚ್ಛೆ ಪಟ್ಟು ಹೋಗಿದ್ದಾರೆ ಅನ್ನೋ ಭಾವನೆ ಬರುತ್ತದೆ. ಹಾಗಾಗಿ ಜಾರಕಿಹೊಳಿಗೆ ಶಿಕ್ಷೆ ಆಗಲಾರದು. ಕೋರ್ಟ್‌ನಲ್ಲಿ ಕೇಸ್ ಇರುವಾಗ ಎಲ್ಲವನ್ನೂ ಎದುರಿಸಲೇಬೇಕು, ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡಬೇಕಾಗಿಲ್ಲ ಎಂದರು.

    ಎಲ್ಲ ಪಕ್ಷಗಳಿಗೂ ತಮ್ಮ ಪಕ್ಷವನ್ನು ವಿಸ್ತರಿಸುವ ಉದ್ದೇಶವಿರುತ್ತದೆ. ಬಿಜೆಪಿ ಪಕ್ಷಕ್ಕೂ ಯಾರು ಬೇಕಾದರೂ ಬರಬಹುದು. ಬೇರೆ ಪಕ್ಷದವರು ಬಿಜೆಪಿಗೆ ಬಂದರೂ ಸ್ವಾಗತ ಮಾಡುತ್ತೇವೆ ಎಂದು ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts