More

  ಅಂಚೆ ಇಲಾಖೆ ನೌಕರರನ್ನು ಸರ್ಕಾರ ಕಾಯಂಗೊಳಿಸಲಿ

  ಶಾಸಕ ಗುರ್ಮೆ ಸುರೇಶ್​ ಶೆಟ್ಟಿ ಆಶಯ | ಜಂಟಿ ದ್ವೈವಾರ್ಷಿಕ ಸಮ್ಮೇಳನ ಉದ್ಘಾಟನೆ

  ವಿಜಯವಾಣಿ ಸುದ್ದಿಜಾಲ ಉಡುಪಿ
  ಒಂದು ಸಂಸ್ಥೆ ಹುಟ್ಟಿದರೆ ಸಾಲದು. ಅದನ್ನು ಸಾತ್ವಿಕವಾಗಿ ಪೋಷಿಸಬೇಕು. ಅಂಚೆ ನೌಕರರ ಸಂಘ ಅಂತಹ ಕಾರ್ಯ ಮಾಡುತ್ತಿದ್ದು, ಯಾಂತ್ರಿಕ ಯುಗದಲ್ಲೂ ಇಲಾಖೆಯನ್ನು ಜನಸ್ನೇಹಿಯಾಗಿಸಿದ್ದಾರೆ. ಪ್ರಾಮಾಣಿಕ, ನಿಷ್ಠೆಯ ಸೇವೆ ಸಲ್ಲಿಸುವ ಅಂಚೆ ನೌಕರರನ್ನು ಸರ್ಕಾರಿ ನೌಕರರನ್ನಾಗಿ ಪರಿಗಣಿಸಬೇಕಿದೆ ಎಂದು ಕಾಪು ಶಾಸಕ ಗುರ್ಮೆ ಸುರೇಶ್​ ಶೆಟ್ಟಿ ಅಭಿಪ್ರಾಯ ವ್ಯಕ್ತಪಡಿಸಿದರು.

  ಉಡುಪಿ ಬನ್ನಂಜೆಯ ಶ್ರೀನಾರಾಯಣ ಗುರು ಸಭಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ ರಾಷ್ಟ್ರೀಯ ಅಂಚೆ ನೌಕರರ ಸಂಘ ಗ್ರೂಪ್​ ಸಿ, ಎಂಟಿಎಸ್​ ಮತ್ತು ಪೋಸ್ಟ್​ಮ್ಯಾನ್​ ಹಾಗೂ ಗ್ರಾಮೀಣ ಅಂಚೆ ನೌಕರರ ಸಂಘ ಕರ್ನಾಟಕ ವಲಯದ 3 ದಿನಗಳ 26ನೇ ರಾಜ್ಯ ಮಟ್ಟದ ಜಂಟಿ ದ್ವೈವಾರ್ಷಿಕ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು.

  ಖಾಸಗಿಯವರ ಪೈಪೋಟಿಯ ನಡುವೆಯೂ ಅಂಚೆ ಇಲಾಖೆಗೆ ಜೀವಕಳೆ ನೀಡುತ್ತಿರುವ ನೌಕರರ ಕಾರ್ಯ ಶ್ಲಾಘನೀಯ. ನನ್ನ ವ್ಯಾಪ್ತಿಗೆ ಸಂಬಂಧಿಸಿ ತಮ್ಮ ಸಮಸ್ಯೆಯ ಧ್ವನಿಯನ್ನು ಸರ್ಕಾರದ ಗಮನಕ್ಕೆ ತಂದು, ಪರಿಹರಿಸಲು ಬದ್ಧನಿದ್ದೇನೆ ಎಂದರು.

  ಖಾಸಗೀಕರಣ ಹುನ್ನಾರ

  ಅಂಚೆ ನೌಕರರ ಸಂಘದ ಕರ್ನಾಟಕ ವಲಯದ ಕಾರ್ಯದರ್ಶಿ ಎಸ್​. ಖಂಡೋಜಿ ರಾವ್​ ಪ್ರಾಸ್ತಾವಿಕವಾಗಿ ಮಾತನಾಡಿ, ಇಲಾಖೆ ಖಾಸಗೀಕರಣಗೊಳ್ಳುವ ಹಂತಕ್ಕೆ ಬಂದು ನಿಂತಿದ್ದು ನೌಕರರು ಜಟಿಲ ಪರಿಸ್ಥಿತಿಯಲ್ಲಿ ಇರುವಂತಾಗಿದೆ. ಹೀಗಾಗಿ ನಮ್ಮ ಸಂಘಟನೆಗಳ ಹೋರಾಟ ಮುಂದುವರಿಯಲೇಬೇಕಿದೆ. ಆದರೆ, ಸಂಘಟನೆಯನ್ನು ಮುನ್ನಡೆಸುವ ಸವಾಲೂ ಸಹ ಎದುರಾಗಿದೆ. ಕೇಂದ್ರ ಸರ್ಕಾರದ ಅಧೀನದ ಇಲಾಖೆಯಲ್ಲಿ ನಾವು ನೌಕರಿ ಮಾಡುತ್ತಿದ್ದರೂ ಆಡಳಿತಾತ್ಮಕ ನೌಕರರಿಗೆ ಇರುವ ಸೌಲಭ್ಯ ನಮಗಿಲ್ಲ. ಹೀಗಾಗಿ ಕೇಂದ್ರ ಸರ್ಕಾರ ನಮ್ಮನ್ನೂ ಸರ್ಕಾರಿ ನೌಕರರೆಂದು ಪರಿಗಣಿಸಿ, ಎಲ್ಲ ಸೌಕರ್ಯ ನೀಡುವಂತಾಗಬೇಕು ಎಂದರು.

  ಸರ್ಕಾರಕ್ಕೆ ಕೂಗು ಕೇಳಲಿ

  ಸಂಘಟನೆಯ ಸ್ವಾಗತ ಸಮಿತಿಯ ಗೌರವಾಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ ‘ಸಮಷ್ಟಿ’ ಸ್ಮರಣ ಸಂಚಿಕೆ ಬಿಡುಗಡೆಗೊಳಿಸಿ ಮಾತನಾಡಿ, ಅಂಚೆ ಇಲಾಖೆ ನೌಕರರ ಮೂರು ಸಂಘಟನೆಗಳ ಸಮ್ಮೇಳನ ಇದಾಗಿದೆ. ಜನರ ನಡುವಿನ ಸಂಪರ್ಕ ಕೊಂಡಿಯಾಗಿರುವ ತಮ್ಮ ನೋವಿನ ಕೂಗು ಈ ಸಮ್ಮೇಳನದ ಮೂಲಕ ಕೇಂದ್ರ ಸರ್ಕಾರಕ್ಕೆ ಕೇಳುವಂತಾಗಬೇಕು. ಆ ನಿಟ್ಟಿನಲ್ಲಿ ಠರಾವು ಪಾಸು ಮಾಡಿ ಸರ್ಕಾರಕ್ಕೆ ಸಲ್ಲಿಸಿ ಎಂದು ಸಲಹೆ ನೀಡಿದರು.

  ಎಂಟಿಎಸ್​ ಮತ್ತು ಪೋಸ್ಟ್​ಮ್ಯಾನ್​ ಸಂಘಟನೆಯ ಪ್ರಧಾನ ಕಾರ್ಯದರ್ಶಿ ನಿಸಾರ್​ ಮುಜಾವರ್​, ಎನ್​ಯುಜಿಡಿಎಸ್​ ಪ್ರಧಾನ ಕಾರ್ಯದರ್ಶಿ ಪಿ.ಯು. ಮುರಳೀಧರನ್​, ಮಾಜಿ ಕಾರ್ಯದರ್ಶಿ ಟಿ.ಎನ್​ ರಹಾತೆ, ಅಂಚೆ ಇಲಾಖೆಯ ನಿವೃತ್ತ ಹಿರಿಯ ಅಧೀಕ್ಷಕ ನವೀನ್​ ಚಂದ್ರ, ಉಡುಪಿ ವಿಭಾಗದ ಹಿರಿಯ ಅಧೀಕ್ಷಕ ರಮೇಶ್​ ಪ್ರಭು, ನೌಕರರ ಸಂಘದ ಕರ್ನಾಟಕ ವಲಯದ ಆಧ್ಯಕ್ಷ ಮೋಹನಕುಮಾರ್​ ಕಟ್ಟಿಮನಿ, ಗ್ರಾಮೀಣ ವಲಯದ ಅಧ್ಯಕ್ಷ ಮೋಹನರೆಡ್ಡಿ ದೇಸಾಯಿ, ಎಂಟಿಎಸ್​ ಮತ್ತು ಪೋಸ್ಟ್​ಮ್ಯಾನ್​ ಸಂಘಟನೆಯ ಅಧ್ಯಕ್ಷ ಪಿ.ಸತೀಶ್​ ಇತರರಿದ್ದರು.

  ಅಖಿಲಾ ಹೆಗಡೆ ಹೊನ್ನಾವರ ಪ್ರಾರ್ಥಿಸಿದರು. ಸಂಘಟನೆಯ ಸ್ವಾಗತ ಸಮಿತಿಯ ಸಂಚಾಲಕ ಸುರೇಶ್​ ಕೆ. ಸ್ವಾಗತಿಸಿದರು. ಪ್ರವೀಣ್​ ಜತ್ತನ್​ ಕಾರ್ಯಕ್ರಮ ನಿರೂಪಿಸಿದರು.

  ಇಲಾಖೆಯ ಖಾಸಗೀಕರಣದ ಪ್ರಸ್ತಾಪ ಇಲ್ಲ

  ನವದೆಹಲಿಯ ಎಫ್ಎನ್​ಪಿಒ ಪ್ರಧಾನ ಕಾರ್ಯದರ್ಶಿ ಪಿ.ಶಿವಾಜಿ ವಾಸಿ ರೆಡ್ಡಿ ಮಾತನಾಡಿ, ದೇಶದಲ್ಲಿ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿದೆ. ಹೀಗಾಗಿ ಜೂ.4ರ ನಂತರ ರಚನೆಯಾಗುವ ಹೊಸ ಕೇಂದ್ರ ಸರ್ಕಾರ ತಮ್ಮೆಲ್ಲ ಬೇಡಿಕೆ ಈಡೇರಿಸಲಿದೆ. ಆದರೆ, ತಾವು ಹೇಳುತ್ತಿರುವಂತೆ ಅಂಚೆ ಇಲಾಖೆ ಖಾಸಗೀಕರಣದ ವಿಚಾರ ಅದು ಕೇವಲ ಅರೋಪವಷ್ಟೇ. ಅಂತಹ ಯಾವುದೇ ವಿಚಾರ ಸರ್ಕಾರದ ಮುಂದೆ ಇಲ್ಲ. ಹೊಸ ಪಿಂಚಣಿ ವ್ಯವಸ್ಥೆಯಿಂದ 2004ರಿಂದ ಅನ್ವಯಿಸಿ ನೌಕರರಿಗೆ ಹಳೆಯ ಪಿಂಚಣಿ ಯೋಜನೆ ಲಭಿಸುತ್ತಿಲ್ಲ. ಖಾಸಗಿಯವರು 24×7 ಕೆಲಸ ಮಾಡುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ತಾವುಗಳು ವಾರದಲ್ಲಿ 5 ದಿನ ಮಾತ್ರ ಕೆಲಸ ಮಾಡಲು ಅವಕಾಶದ ಬೇಡಿಕೆ ಇಟ್ಟರೆ ಇಲಾಖೆಗೆ ವರಮಾನ ಇಳಿಕೆಯಾಗಲಿದ್ದು, ಪೋಸ್ಟ್​ ಬಟಾವಡೆಯಲ್ಲೂ ಹಿನ್ನಡೆಯಾಗಲಿದೆ. ಸರ್ಕಾರಿ ನೌಕರರೆಂದು ಪರಿಗಣಿಸುವ ತಮ್ಮ ಬೇಡಿಕೆ ಸೂಕ್ತವಾಗಿದೆ ಎಂದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts