ಬೆಳಗಾವಿ: ಉತ್ತರ ಕರ್ನಾಟಕದ ಸಮಗ್ರ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಬೇಕು ಎಂದು ಆಗ್ರಹಿಸಿ ನಗರದ ಪ್ರವಾಸಿ ಮಂದಿರದಲ್ಲಿ ಉತ್ತರ ಕರ್ನಾಟಕ ಜನ ಸಂಗ್ರಾಮ ಪರಿಷತ್ ಪದಾಧಿಕಾರಿಗಳು ಜಲ ಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ಅವರಿಗೆ ಶನಿವಾರ ಮನವಿ ಸಲ್ಲಿಸಿದರು.
ಉತ್ತರ ಕರ್ನಾಟಕ ಭಾಗದಲ್ಲಿ ನನೆಗುದಿಗೆ ಬಿದ್ದಿರುವ ನೀರಾವರಿ ಯೋಜನೆಗಳನ್ನು ಶೀಘ್ರ ಅನುಷ್ಠಾನಗೊಳಿಸಬೇಕು. ಬೆಳಗಾವಿಯ ಸುವರ್ಣಸೌಧಕ್ಕೆ ಪ್ರಮುಖವಾದ ಕಚೇರಿಗಳನ್ನು ತ್ವರಿತವಾಗಿ ಸ್ಥಳಾಂತರಗೊಳಿಸುವ ಕೆಲಸವಾಗಬೇಕು. ಗಡಿ ಅಭಿವೃದ್ಧಿ ಪ್ರಾಧಿಕಾರ ಮತ್ತು ಕನ್ನಡ ಅಭಿವೃದ್ಧಿ ಪ್ರಾಧಿಕಾರ ಸೇರಿ ಬೆಂಗಳೂರು ಅಧಿಕಾರ ಕೇಂದ್ರೀಕೃತ ಕಚೇರಿಗಳು ಇಲ್ಲಿಯೇ ಕಾರ್ಯನಿರ್ವಹಿಸಬೇಕು ಎಂದು ಒತ್ತಾಯಿಸಿದರು.
ಆರ್‌ಸಿಯು ಸ್ಥಳಾಂತರಿಸಿ: ಕೇಂದ್ರ ಅರಣ್ಯ ಹಾಗೂ ಪರಿಸರ ಇಲಾಖೆಯ ಅಧೀನದಲ್ಲಿರುವ ಭೂತರಾಮನಹಟ್ಟಿಯ ಬಳಿ ಸದ್ಯ ಕಾರ್ಯನಿರ್ವಹಿಸುತ್ತಿರುವ ರಾಣಿ ಚನ್ನಮ್ಮ ವಿಶ್ವ ವಿದ್ಯಾಲಯವನ್ನು ಬೇರೆಡೆಗೆ ಸ್ಥಳಾಂತರಿಸುವುದು ಅನಿವಾರ್ಯವಾಗಿದೆ. ಈ ಹಿನ್ನೆಲೆಯಲ್ಲಿ ಕಂದಾಯ ಇಲಾಖೆಯು ಬೆಳಗಾವಿ ತಾಲೂಕಿನ ಹಿರೇಬಾಗೇವಾಡಿ ಬಳಿ ಇರುವ ಮಲ್ಲಪ್ಪನ ಗುಡ್ಡದ ಬಳಿ ಗಾಯರಾಣ ಜಾಗ ಗುರುತಿಸಿದ್ದು, ಉನ್ನತ ಶಿಕ್ಷಣ ಇಲಾಖೆಗೆ ಹಸ್ತಾಂತರಿಸಲು ಕ್ರಮ ವಹಿಸಬೇಕು ಎಂದು ವಿನಂತಿಸಿದರು. ಬೆಳಗಾವಿ ತಾಲೂಕಿನ ಹಿರೇಬಾಗೇವಾಡಿ ಬಳಿ ಇರುವ ತಿಗಡಿ ಹರಿನಾಲಾದಿಂದ ಹಿರೇಬಾಗೇವಾಡಿಗೆ ಕಾಲುವೆ ನಿರ್ಮಿಸಿ ನೀರು ಹರಿಸಬೇಕು. ಇದರಿಂದ ಸುತ್ತಮುತ್ತಲಿನ ನೂರಾರು ಹಳ್ಳಗಳಿಗೆ ಅನುಕೂಲವಾಗಲಿದೆ. ಜತೆಗೆ ಅಂತರ್ಜಲ ಮಟ್ಟ ವೃದ್ಧಿಯಾಗಲಿದೆ. ಈ ಹಿನ್ನೆಲೆಯಲ್ಲಿ ಸರ್ಕಾರವು ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಬೆಳಗಾವಿಯ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಗೂಳಪ್ಪ ಹೊಸಮನಿ, ರೈತ ಮುಖಂಡ ಬಿ.ಎಸ್. ಗಾಣಗಿ, ಉತ್ತರ ಕರ್ನಾಟಕ ಜನ ಸಂಗ್ರಾಮ ಪರಿಷತ್ ಪ್ರಧಾನ ಕಾರ್ಯದರ್ಶಿ ಮಂಜುನಾಥ ವಸ್ತ್ರದ, ಸಿದ್ಧಾರೂಢ ಹೊನ್ನಣ್ಣವರ, ಪರ್ವೇಜ್ ದೇವಲಾಪುರ, ಪ್ರಭು ಬೂದಯ್ಯನವರಮಠ ಇದ್ದರು.