More

    ಹ್ಯಾಟ್ರಿಕ್ ಗೆಲುವಿನ ನಿರೀಕ್ಷೆಯಲ್ಲಿರುವ ಪ್ರತಾಪ್ ಸಿಂಹಗೆ ಮುಳುವಾಗುತ್ತಾ ಸಂಸತ್‌ಗೆ ದಾಳಿ ಮಾಡಿದ ಯುವಕರಿಗೆ ಪಾಸ್‌ ಕೊಟ್ಟ ವಿಷಯ?

    ಮೈಸೂರು: ಸಂಸತ್ ಒಳಗೆ ಅಕ್ರಮವಾಗಿ ನುಗ್ಗಿದ ಯುವಕರಿಗೆ ಪಾಸ್ ನೀಡಿ ವ್ಯಾಪಕ ಟೀಕೆ ಹಾಗೂ ಮುಜುಗರಕ್ಕೀಡಾಗಿರುವ ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹಗೆ ಮೂರನೇ ಬಾರಿ ಸಂಸತ್ ಪ್ರವೇಶ ಕಠಿಣವಾಗುವ ಸಾಧ್ಯತೆಯಿದೆ. 

    ತಮ್ಮ ಬಲಪಂಥೀಯ ವಿಚಾರಧಾರೆಗಳಿಂದ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಹೊಂದಿದ್ದಾರೆ ಪ್ರತಾಪ ಸಿಂಹ. ಒಂಬತ್ತು ವರ್ಷಗಳ ಹಿಂದೆ ಲೋಕಸಭೆಗೆ ಪ್ರವೇಶಿಸಿದ ಕನ್ನಡದ ಈ ಅಂಕಣಕಾರ, ನಿನ್ನೆ ಭಾರತದ ಸಂಸತ್​​ ಭವನದ ಒಳಗೆ ಕಲಾಪ ನಡೆಯುತ್ತಿರುವಾಗ ನುಗ್ಗಿ ಆತಂಕ ಸೃಷ್ಟಿಸಿದ ಆಗತುಂಕರಿಬ್ಬರಿಗೆ ತಮ್ಮ ಕಚೇರಿಯಿಂದ ಪ್ರೇಕ್ಷಕರ ಪಾಸ್​​​ ನೀಡಲಾಗಿದ್ದ ವಿಚಾರವಾಗಿ ಸುದ್ದಿಯಲ್ಲಿದ್ದಾರೆ.

    47 ವರ್ಷದ ಮೈಸೂರು ಸಂಸದ ಪ್ರತಾಪ್ ಸಿಂಹ, ಮೂಲತಃ ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನಿಂದ ಬಂದವರು. ಜಾತಿಯಲ್ಲಿ ಒಕ್ಕಲಿಗರು. ಪತ್ರಿಕೋದ್ಯಮ ಮೂಲಕ ಹೆಸರು ಮಾಡಿ, ರಾಜಕಾರಣಕ್ಕೆ ಎಂಟ್ರಿ ಕೊಟ್ಟವರು. 2014ರ ಲೋಕಸಭೆ ಚುನಾವಣೆಗೆ ಬಿಜೆಪಿಯಿಂದ ಅನಿರೀಕ್ಷಿತವಾಗಿ ಟೆಕೆಟ್ ಪಡೆದು ಕಾಂಗ್ರೆಸ್‌ನ ಎ.ಎಚ್.ವಿಶ್ವನಾಥ್ ವಿರುದ್ಧ ಗೆದ್ದಿದ್ದರು. 

    ಒಕ್ಕಲಿಗರ ಬಾಹುಳ್ಯ ಈ ಕ್ಷೇತ್ರದಲ್ಲಿ 30 ಸಾವಿರಕ್ಕೂ ಹೆಚ್ಚು ಒಕ್ಕಲಿಗ ಜಾತಿಯ ಮತಗಳು ಅವರ ಪರವಾಗಿ ಕಾರ್ಯನಿರ್ವಹಿಸುತ್ತಿವೆ. 2019 ರ ಲೋಕಸಭಾ ಚುನಾವಣೆಯಲ್ಲಿ 5 ಲಕ್ಷಕ್ಕೂ ಹೆಚ್ಚು ಮತಗಳನ್ನು ಗಳಿಸಿದ ಏಕೈಕ ಅಭ್ಯರ್ಥಿಯಾಗಿದ್ದಾರೆ. ಈ ಚುನಾವಣೆಯಲ್ಲಿ ಕಮಲ ಪಾಳಯದ ಪ್ರತಾಪ್ ಸಿಂಹ, ವಿಜಯ್ ಶಂಕರ್ ಅವರಿಂದ ಲಕ್ಷ ಮತಗಳ ಅಂತರದಿಂದ ಗೆಲುವಿನ ನಗೆ ಬೀರಿದ್ದಾರೆ. 1989ರಿಂದ ಅಂದರೆ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ನಂತರ ಮೈಸೂರು ಕ್ಷೇತ್ರದಲ್ಲಿ ಯಾರೂ ಸತತವಾಗಿ ಎರಡನೇ ಬಾರಿ ಆಯ್ಕೆಯಾಗಿಲ್ಲ. ಆದರೆ ಆ ರೆಕಾರ್ಡ್ ಅನ್ನು ಸಂಸದ ಪ್ರತಾಪ್ ಸಿಂಹ ದಾಖಲಿಸಿದ್ದಾರೆ. 

    ಇದೀಗ 2024 ರ ಚುನಾವಣೆಯಲ್ಲಿ ಪಿಎಂ ಮೋದಿ ಅವರ ಬೆಂಬಲದೊಂದಿಗೆ ಹ್ಯಾಟ್ರಿಕ್ ಸಾಧಿಸುವ ಹುಮ್ಮಸ್ಸಿನಲ್ಲಿರುವ ಪ್ರತಾಪ್​​ ಸಿಂಹ ಅವರಿಗೆ ಬುಧವಾರ (13) ಸಂಸತ್ತಿನಲ್ಲಿ ನಡೆದ ಭದ್ರತಾ ವೈಫಲ್ಯದ ಘಟನೆ ಮುಳುವಾಗಬಹುದಾ? ಎಂಬ ಚರ್ಚೆ ಶುರುವಾಗಿದೆ. ಅಷ್ಟೇ ಅಲ್ಲ, ಇದು ಸತತ ಮೂರನೇ ಬಾರಿಗೆ ಲೋಕ ಚುನಾವಣೆಗೆ ಸುಲಭವಾಗಿ ಟಿಕೆಟ್ ಗಿಟ್ಟಿಸಿಕೊಳ್ಳುವ ಸಾಧ್ಯತೆಗಳ ಮೇಲೆ ಪರಿಣಾಮ ಬೀರಬಹುದು ಎಂದು ರಾಜಕೀಯ ಪಡಸಾಲೆಯಲ್ಲಿ ವಿಶ್ಲೇಷಿಸಲಾಗುತ್ತಿದೆ. 

    2008ರಲ್ಲಿ ಬರೆದ ಮೋದಿ ಕುರಿತ ಜೀವನಚರಿತ್ರೆ (‘ನರೇಂದ್ರ ಮೋದಿ ಯಾರೂ ತುಳಿಯದ ಹಾದಿ’) ಕೃತಿ ಬರೆದವರಲ್ಲಿ ಮೊದಲಿಗರು ಎಂದು ಸಿಂಹ ಹೇಳಿಕೊಂಡಿದ್ದಾರೆ. ಇದನ್ನು ಅರುಣ್ ಜೇಟ್ಲಿ ಅವರು ಬಿಡುಗಡೆ ಮಾಡಿದರು. ಮೋದಿ ಅವರು ಈ ಪುಸ್ತಕವನ್ನು ತುಂಬಾ ಇಷ್ಟಪಟ್ಟಿದ್ದಾರೆ ಎಂದು ಸಿಂಹ ಹೇಳಿದ್ದಾರೆ. ಇದು ಗುಜರಾತಿ ಭಾಷೆಗೆ ಕೂಡ ಅನುವಾದವಾಗಿದೆ. 

    ಇತ್ತೀಚಿನ ವರ್ಷಗಳಲ್ಲಿ ಕ್ಷೇತ್ರದ ಬಿಜೆಪಿಯ ಹಿರಿಯ ನಾಯಕರಾದ ಎಸ್.ಎ.ರಾಮದಾಸ್, ಈ ಹಿಂದೆ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ವಿ ಸೋಮಣ್ಣ ಸೇರಿ ಹಲವಾರು ಸ್ಥಳೀಯ ಮುಖಂಡರೊಂದಿಗೆ ಸಂಬಂಧ ಸರಿಯಾಗಿಲ್ಲ. ಜೊತೆಗೆ ಈ ಬಾರಿ ಮೈಸೂರಿನವರೇ ಆದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಶತಾಯಗತಾಯ ಮೈಸೂರು ಲೇಕಸಭಾ ಕ್ಷೇತ್ರ ಗೆಲ್ಲುವ ಅನಿವಾರ್ಯತೆ ಇದೆ. ಅದಕ್ಕಾಗೇ ಘಟನೆ ನಡೆಯುತ್ತಲೇ ಸಿಂಹ ಅವರನ್ನು ಕೂಡಲೇ ವಿಚಾರಣೆಗೆ ಒಳಪಡಿಸಬೇಕು ಎಂದು ಅವರು ಟ್ವೀಟ್ ಮಾಡಿದ್ದಾರೆ. ಅಲ್ಲದೆ, ಈ ವಿಷಯವನ್ನು ಚುನಾವನಾ ಲಾಭಕ್ಕಾಗಿ ಬಳಸಿಕೊಳ್ಳಲು ಸ್ಥಳೀಯ ಕಾಂಗ್ರೆಸ್ ಮುಖಂಡರು ಸಿದ್ಧರಾಗಿದ್ದಾರೆ. ಹೀಗಾಗಿ, ಈ ಘಟನೆ ಪ್ರತಾಪ್ ಸಿಂಹ ಅವರ ಮೇಲೆ ಹೆಚ್ಚು ಒತ್ತಡ ತಂದಿದೆ. ಇತ್ತೀಚೆಗೆ ತಮ್ಮ ಇಂಗ್ಲಿಷ್‌ ಹೆಸರಿನಲ್ಲಿ ಸಂಖ್ಯಾಶಾಸ್ತ್ರದ ಅನ್ವಯ ಸಣ್ಣ ಬದಲಾವಣೆ ಮಾಡಿಕೊಂಡಿದ್ದರು. Prathap simha ಎಂಬ ಹೆಸರನ್ನು ಅವರು Pratap simmha ಎಂದು ಬದಲಿಸಿಕೊಂಡಿರುವುದಾಗಿ ಅಫಿಡೆವಿಟ್‌ ಮೂಲಕ ಘೋಷಿಸಿಕೊಂಡಿದ್ದರು. ಆದರೆ, ಇದು ಅವರಿಗೆ ಅದೃಷ್ಟ ತರುವ ಬದಲು ಅದೃಷ್ಟ ಕೈಕೊಡುವಂತೆ ಮಾಡಿದಂತೆ ಕಾಣುತ್ತಿದೆ. 

    ಆದರೆ ಲೋಕಸಭಾ ಚುನಾವಣೆಗೆ ತಯಾರಿ ನಡೆಸುತ್ತಿರುವ ಹೊತ್ತಿನಲ್ಲಿ ಟಿಪ್ಪು ಜಯಂತಿ ಆಚರಣೆ ಸೇರಿದಂತೆ ಟಿಪ್ಪು ಸುಲ್ತಾನ್​​​ ವಿರುದ್ಧ ಮಾತನಾಡುತ್ತಾ ಪದೇ ಪದೇ ಟೀಕೆಗಳಿಗೆ ಹೆಸರುವಾಸಿಯಾಗಿರುವುದು, ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ಮಹಿಷ ದಸರಾ ಆಚರಣೆ ವಿರುದ್ಧ ಆಕ್ಷೇಪ ವ್ಯಕಪಡಿಸುವುದು ಮಾಡುತ್ತಾ ವಿವಾದಕ್ಕೆ ಗುರಿಯಾಗುತ್ತಿದ್ದಾರೆ. ಅಷ್ಟೇ ಅಲ್ಲ, ವಿ ಸೋಮಣ್ಣ ಪರ ಭರ್ಜರಿಯಾಗಿ ಪ್ರಚಾರ ಮಾಡಿ ಬಿಜೆಪಿ ಹಿರಿಯ ನಾಯಕರ ಕೆಂಗಣ್ಣಿಗೆ ಗುರಿಯಾಗಿದ್ದರು. ಹೀಗೆ ಹತ್ತು ಹಲವು ವಿವಾದಗಳನ್ನು ತಮ್ಮ ಮೈ ಮೇಲೆ ಎಳೆದುಕೊಳ್ಳುತ್ತಿರುವ ಸಿಂಹ ಅವರು, ಇದೀಗ ವಿಶೇಷವಾಗಿ ಮುಂದಿನ ವರ್ಷ ಚುನಾವಣೆಗೆ ಸಿದ್ಧತೆ ನಡೆಸುತ್ತಿರುವಾಗ ಲೋಕಸಭೆಯ ಮೇಲೆ ದಾಳಿ ನಡೆಸಿದ್ದ ಮೈಸೂರು ಮೂಲದ ಮನೋರಂಜನ್‌ ಮೂರು ಬಾರಿ ಸಂಸದ ಪ್ರತಾಪ್ ಸಿಂಹ ಕಚೇರಿಯಿಂದ ಪಾಸ್ ಪಡೆದಿದ್ದ ವಿಚಾರ ಬೆಳಕಿಗೆ ಬಂದಿರುವುದು ಮುಂದಿನ ದಿನಗಳಲ್ಲಿ ಯಾವ ರೀತಿ ತಿರುವು ಪಡೆದುಕೊಳ್ಳಲಿದೆ ಎಂಬುದನ್ನು ಕಾದು ನೋಡಬೇಕಿದೆ.  

    ಸಂಸತ್​ನಲ್ಲಿ ಭದ್ರತಾ ಲೋಪಕ್ಕೆ ಕ್ರಮ; ಸದನದ ಗದ್ದಲದ ನಡುವೆಯೇ 8 ಸಿಬ್ಬಂದಿ ಅಮಾನತು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts