More

    ಮನೆ ಮನೆಯಲ್ಲೇ ಯೋಗ

    ಕರೊನಾ ಸಂಕಷ್ಟದಲ್ಲೂ ಯೋಗ ನಗರಿಯಲ್ಲಿ ಕಳೆಗಟ್ಟಲಿದೆ ಯೋಗ ದಿನಾಚರಣೆ, ವೇದಿಕೆಯಾಗಲಿದೆ ಮನೆಗಳ ತಾರಸಿ

    ಮೈಸೂರು: ಯೋಗ ನಗರಿ ಮೈಸೂರಿನಲ್ಲಿ ಕರೊನಾ ಸಂಕಷ್ಟ ಕಾಲದಲ್ಲೂ ಜೂ.21ರಂದು ನಡೆಯುವ ವಿಶ್ವ ಯೋಗ ದಿನಾಚರಣೆ ಕಳೆಗಟ್ಟಲಿದೆ.
    ‘ಮನೆ ಮನೆಯಲ್ಲೇ ಯೋಗ’ ಪರಿಕಲ್ಪನೆ ಮೂಲಕ ಅಂದಾಜು 2 ಲಕ್ಷ ಯೋಗಾಸಕ್ತರನ್ನು ಸೇರಿಸುವ ಉದ್ದೇಶವನ್ನು ಹಾಕಿಕೊಳ್ಳ ಲಾಗಿದ್ದು ಇದಕ್ಕೆ ಮನೆಗಳ ತಾರಸಿ ವೇದಿಕೆಯಾಗಲಿದೆ. ಇಂತಹವೊಂದು ವಿಭಿನ್ನ ಪ್ರಯೋಗಕ್ಕಾಗಿ ಸಿದ್ಧತೆಗಳು ನಡೆದಿವೆ.
    ಜಿಲ್ಲಾಡಳಿತ, ಪ್ರವಾಸೋದ್ಯಮ, ಆಯುಷ್ ಇಲಾಖೆ ಮತ್ತು ಯೋಗ ಫೆಡರೇಷನ್ ಆಫ್ ಮೈಸೂರು ಸಹಯೋಗದಲ್ಲಿ ಕಳೆದ ಐದಾರು ವರ್ಷದಿಂದ ಯೋಗ ದಿನವನ್ನು ವಿಶಿಷ್ಟವಾಗಿ ಆಚರಣೆ ಮಾಡುವ ಮೂಲಕ ದೇಶ-ವಿದೇಶಗಳ ಗಮನ ಸೆಳೆಯಲಾಗಿದೆ. ಇದರಿಂದ ಮೈಸೂರಿನ ಹಿರಿಮೆ ಎಲ್ಲೆಡೆ ಪಸರಿಸಿದೆ. ಇದನ್ನು ಮುಂದುವರಿಸುವ ಪ್ರಯತ್ನ ಇದಾಗಿದೆ.
    ಒಂದು ಲಕ್ಷ ಜನರು ಸೇರಿ ಬೃಹತ್ ಯೋಗ ಸಮಾರಂಭ ಮಾಡಲು ಮೊದಲು ನಿರ್ಧರಿಸಲಾಗಿತ್ತು. ಆದರೆ, ಕರೊನಾ ಕಾರಣಕ್ಕೆ ಈ ಯೋಜನೆಯನ್ನು ಕೈಬಿಡಲಾಯಿತು. ನಗರದಲ್ಲಿರುವ ಉದ್ಯಾನಗಳಲ್ಲಿ ಯೋಗ ಪ್ರದರ್ಶನ ಆಯೋಜಿಸಲು ಚಿಂತಿಸಲಾಗಿತ್ತು. ಅದಕ್ಕೂ ಲಾಕ್‌ಡೌನ್ ಮಾರ್ಗಸೂಚಿ ಅಡ್ಡಿಯಾಯಿತು. ಹೀಗಾಗಿ, ‘ಮನೆ ಮನೆಯಲ್ಲೇ ಯೋಗ’ ಕಾರ್ಯಕ್ರಮ ಆಯೋಜನೆಗೆ ಕ್ರಮ ವಹಿಸಲಾಗಿದೆ.
    ಕರೊನಾ ತಡೆಯಲ್ಲಿ ‘ಮನೆಯಲ್ಲೇ ಇರಿ’ ಎಂಬ ಜಾಗೃತಿ ಸಂದೇಶವನ್ನು ಮೂಡಿಸಲಾಗುತ್ತಿದೆ. ಅದಕ್ಕೆ ಪೂರಕವಾಗಿ ಮನೆಯಲ್ಲೇ ಉಳಿದುಕೊಂಡು ಯೋಗಾಚರಣೆ ಮಾಡಲು ಜನರನ್ನು ಉತ್ತೇಜಿಸಲಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಅವರು ‘ಘರ್ ಘರ್ ಮೇ ಯೋಗ (ಮನೆ ಮನೆಯಲ್ಲಿ ಯೋಗ)’ ಎಂದು ಘೋಷಣೆಯೊಂದಿಗೆ ವಿಶ್ವ ಯೋಗ ದಿನವನ್ನು ಆಚರಣೆಗೆ ಕರೆಕೊಟ್ಟಿದ್ದಾರೆ. ಅದಕ್ಕೆ ‘ಮನೆ ಮನೆಯಲ್ಲಿ ಯೋಗ’ ಪೂರಕ ಅಲೆಯಾಗಿದೆ. ಇಷ್ಟು ದಿನ ನಗರಕ್ಕೆ ಸೀಮಿತವಾಗಿದ್ದ ಯೋಗ ಉತ್ಸವವನ್ನು ಜಿಲ್ಲಾದ್ಯಂತ ವಿಸ್ತರಣೆ ಮಾಡಲಾಗುತ್ತಿದೆ.
    ಯೋಗಾಸನ ಕುರಿತು 45 ನಿಮಿಷದ ವಿಡಿಯೋ ಚಿತ್ರೀಕರಣ ಮಾಡಲಾಗಿದೆ. ಅದನ್ನು ಜಿಲ್ಲೆಯಲ್ಲಿರುವ ಪ್ರತಿಯೊಂದು ಸ್ಮಾರ್ಟ್‌ಫೋನ್‌ಗೆ ಕಳುಹಿಸಲು ಯೋಜಿಸಲಾಗಿದ್ದು, ಇದನ್ನು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್, ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ಬಿಡುಗಡೆ ಮಾಡಲಿದ್ದಾರೆ. ಬಳಿಕ ಪ್ರತಿಯೊಬ್ಬರ ಮೊಬೈಲ್‌ಗೆ ಕಳುಹಿಸಿಕೊಡಲಾಗುತ್ತದೆ.
    ವಿಡಿಯೋದಲ್ಲಿ ಏನು ಇದೆ:
    ಯೋಗ ದಿನದ ಅಂಗವಾಗಿ ಎಲ್ಲೆಡೆ ಒಂದೇ ಪ್ರಕಾರದ ಯೋಗವನ್ನು ಅನುಸರಿಸಲು ಶಿಷ್ಟಾಚಾರ ರೂಪಿಸಲಾಗಿದೆ. ಆ ಪ್ರಕಾರವೇ ಅಂದು ಯೋಗಾಭ್ಯಾಸಗಳು ನಡೆಯಲಿವೆ. ಅದನ್ನು ವಿಡಿಯೋದಲ್ಲಿ ದಾಖಲೀಕರಿಸಲಾಗಿದೆ. ಪ್ರಾರ್ಥನೆಯೊಂದಿಗೆ ಆರಂಭವಾಗುವ ಯೋಗಾಭ್ಯಾಸದ 45 ನಿಮಿಷ ಕಾಲಗಳ ದೃಶ್ಯಾವಳಿ ಇದರಲ್ಲಿ ಇದೆ. ತಾಡಾಸನ, ವೃಕ್ಷಾಸನ, ಪಾದಹಸ್ತಾಸನ1, ಪಾದಹಸ್ತಾಸನ 2, ಅರ್ಧ ಚಕ್ರಾಸನ, ತ್ರಿಕೋನಾಸನ, ಸಮದಂಡಾಸನ ವಿವಿಧ ಬಗೆಯ ಆಸನ ಪ್ರದರ್ಶನ. ಶವಾಸನದ ಬಳಿಕ ಪ್ರಾಣಾಯಾಮ, ಧ್ಯಾನ ಮತ್ತು ಸಂಕಲ್ಪ ಚಿತ್ರಣವೂ ವಿಡಿಯೋದಲ್ಲಿ ಇರಲಿದೆ.
    ಯೋಗ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಯೋಗಪಟುಗಳ ನೋಂದಣಿ ಮಾಡಿಕೊಳ್ಳಲಾಗುತ್ತದೆ. ಇದಕ್ಕಾಗಿ ಸಾಫ್ಟ್‌ವೇರ್ ಅಭಿವೃದ್ಧಿಪಡಿಸಲಾಗಿದೆ. ಜನರು ತಮ್ಮ ಫೋಟೋ ಕಳುಹಿಸಿದರೆ ಅವರ ಹೆಸರನ್ನು ನೋಂದಣಿ ಮಾಡಿಕೊಳ್ಳಲಾಗುತ್ತದೆ. ಬಳಿಕ ಅವರಿಗೆ ಪ್ರಮಾಣಪತ್ರ ವಿತರಣೆ ಮಾಡಲಾಗುತ್ತದೆ.
    ಮನೆ ಮನೆಯಲ್ಲಿ ಯೋಗಾಚರಣೆಯಿಂದ ಈ ಹಿಂದಿನ ವರ್ಷದಂತೆ ದೊಡ್ಡ ಮಟ್ಟ ಜನಸಂದಣಿ ಸೇರುವ ಅವಕಾಶ ಈ ಸಲ ಇಲ್ಲ. ಹೀಗಾಗಿ, ಜನಸಮೂಹ ನಿಯಂತ್ರಣ ಮಾಡುವ ತೊಂದರೆ ಪೊಲೀಸರಿಗಿಲ್ಲ. ಸಂಚಾರ ನಿರ್ವಹಣೆ ಮಾಡುವ ಕಷ್ಟವೂ ಇಲ್ಲ. ವೇದಿಕೆ ಹಾಕುವ ಅಗತ್ಯವೂ ಇಲ್ಲ. ಖರ್ಚು ಕೂಡ ಇಲ್ಲವಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts