More

    ಭಾರೀ ಮಳೆಗೆ ಕೆರೆಯಂತಾದ ಮೈಸೂರು ರಸ್ತೆ: ಗಂಟೆಗಟ್ಟಲೇ ಮಳೆನೀರಿನಲ್ಲೇ ಸಾಗಿದ ವಾಹನಗಳು

    ಬೆಂಗಳೂರು: ನಗರದಲ್ಲಿ ಬುಧವಾರ ಸಂಜೆ ಸುರಿದ ಭಾರೀ ಮಳೆಯಿಂದ ಮೈಸೂರು ರಸ್ತೆಯ 3-4 ಸ್ಥಳಗಳಲ್ಲಿ ಹೆಚ್ಚಿನ ಪ್ರಮಾಣದ ನೀರು ನಿಂತು ವಾಹನ ಸಂಚಾರಕ್ಕೆ ತೀವ್ರ ಅಡ್ಡಿಯಾಯಿತು. ಎರಡು-ಮೂರು ಅಡಿ ಎತ್ತರದಷ್ಟು ಹರಿದ ನೀರಿನಿಂದಾಗಿ ವಾಹನಗಳು ಸರಾಗವಾಗಿ ಚಲಿಸದೆ ಟ್ರಾಫಿಕ್ ಜಾಮ್‌ನಲ್ಲಿ ಸಿಲುಕುವಂತಾಯಿತು. ಇದರಿಂದ ಗಂಟೆಗಟ್ಟಲೇ ವಾಹನ ಸಂಚಾರಕ್ಕೆ ಅಡ್ಡಿ ಉಂಟಾಗಿ ಸವಾರರು ಪರದಾಡಿದರು.

    ಆರ್.ಆರ್.ನಗರ ಪ್ರವೇಶ ದ್ವಾರ, ಜ್ಞಾನಭಾರತಿ ಕ್ಯಾಂಪಸ್ ಪ್ರವೇಶ ದ್ವಾರ, ನಾಯಂಡಹಳ್ಳಿ ಹಾಗೂ ಆರ್.ವಿ. ಕಾಲೇಜ್ ಸಮೀಪದ ಸ್ಥಳಗಳಲ್ಲಿ ಮಳೆನೀರು ಹೆಚ್ಚು ಪ್ರಮಾಣದಲ್ಲಿ ಸಂಗ್ರಹಗೊಂಡು ಸಮಸ್ಯೆಯಾಯಿತು. ಆ ಭಾಗದ ಬಡಾವಣೆಗಳು ಹಾಗೂ ಅಡ್ಡರಸ್ತೆಗಳಲ್ಲಿ ಬಿದ್ದ ಮಳೆನೀರು ನೇರವಾಗಿ ಮೈಸೂರು ರಸ್ತೆ ಮೇಲೆ ಹರಿದು ಹೊಳೆಯಂತಾಯಿತು. ಸಂಜೆ ವೇಳೆ ಟ್ರಾಫಿಕ್ ಹೆಚ್ಚಿದ ಕಾರಣ ವಾಹನಗಳ ಸಾಲು ಕಿ.ಮೀ. ದೂರಕ್ಕೂ ನಿಲ್ಲುವಂತಾಯಿತು. ದ್ವಿಚಕ್ರ ವಾಹನಗಳಲ್ಲಿ ಸಾಗುತ್ತಿದ್ದ ಸವಾರರು ಅಕ್ಷರಶ: ಮಳೆಯಲ್ಲಿ ತೋಯ್ದುಹೋದರು. ಕೆಲವರ ವಾಹನದ ಸೈಲೆನ್ಸರ್‌ಗೆ ನೀರು ಸೇರಿದ ಕಾರಣ ಅಂತಹವರು ತಮ್ಮ ವೆಹಿಕಲ್‌ಗಳನ್ನು ಮಳೆಯಲ್ಲೇ ತಳ್ಳಿಕೊಂಡು ಹೋಗಲು ಹರಸಾಹಸ ನಡೆಸಿದರು.

    ಸಂಜೆ ವೇಳೆ ಬ್ಯಾಟರಾಯನಪುರದ ಸ್ಯಾಟಲೈಟ್ ಬಸ್ ನಿಲ್ದಾಣದಿಂದ ಮೈಸೂರಿನತ್ತ ಹೆಚ್ಚಿನ ಬಸ್‌ಗಳು ತೆರಳುತ್ತವೆ. ಇದೇ ವೇಳೆ ಮಳೆ ಬಂದ ಕಾರಣ ಕೆಂಗೇರಿವರೆಗೂ ನೂರಾರು ಬಸ್‌ಗಳು, ಭಾರೀ ವಾಹನಗಳು ಸಿಲುಕಿದ್ದವು. ಇವುಗಳ ಮಧ್ಯೆ ಕಾರುಗಳು ಕೂಡ ಸಿಲುಕಿ ಬೇಗನೆ ಗಮ್ಯ ತಲುಪಲು ಸಾಧ್ಯವಾಗದೆ ಗೊಣಗುತ್ತಲೇ ವಾಹನ ಚಲಾಯಿಸಿದರು.

    ಮಳೆ ಬಿದ್ದ ಬಳಿಕ ರಸ್ತೆಯುದ್ದಕ್ಕೂ ನಿಂತಿದ್ದ ನೀರಿನಲ್ಲೇ ಸಂಚಾರ ಪೊಲೀಸರು ಟ್ರಾಫಿಕ್‌ಅನ್ನು ತಹಬಂದಿಗೆ ತರಲು ಭಾರೀ ಕಸರತ್ತು ನಡೆಸಿದರು. ಮಳೆನೀರಿನಿಂದ ಕೆಟ್ಟುನಿಂತ ಕೆಲ ವಾಹನಗಳನ್ನು ಪೊಲೀಸ್ ಪೇದೆಗಳು ರಸ್ತೆಯಿಂದ ಹೊರಸಾಗಿಸಲು ನೆರವಾದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts