More

    ಮೈಮುಲ್ ಆಯ್ಕೆ ಪ್ರಕ್ರಿಯೆಗೆ ನ್ಯಾಯಾಲಯ ತಡೆ

    ಮೈಸೂರು: ಮೈಮುಲ್ ನೇಮಕಾತಿ ಆಯ್ಕೆ ಪ್ರಕ್ರಿಯೆಗೆ ನ್ಯಾಯಾಲಯ ತಡೆ ನೀಡಿದ್ದು, ಮಾಹಿತಿ ಕೇಳಿ ಸರ್ಕಾರಕ್ಕೆ ನೋಟಿಸ್ ಜಾರಿಗೊಳಿಸಿದೆ ಎಂದು ಶಾಸಕ ಸಾ.ರಾ.ಮಹೇಶ್ ತಿಳಿಸಿದರು.
    ಮೈಮುಲ್‌ಗೆ ಯಾವುದೇ ಆಯ್ಕೆ ಪ್ರಕ್ರಿಯೆ ಮಾಡುವಾಗ ನ್ಯಾಯಾಲಯದ ಗಮನಕ್ಕೆ ತರುವಂತೆ ಸೂಚನೆ ನೀಡಿದೆ.ಆ ಮೂಲಕ ನಮ್ಮ ಹೋರಾಟಕ್ಕೆ ಜಯ ಸಿಕ್ಕಂತಾಗಿದೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
    ಸರ್ಕಾರ ಈಗಲಾದರೂ ಆಯ್ಕೆ ಪ್ರಕ್ರಿಯೆ ಮಾಡಿದ್ದ ಸಂಸ್ಥೆ ವಿರುದ್ಧ ಪ್ರಕರಣ ದಾಖಲಿಸಿ ಕಪ್ಪುಪಟ್ಟಿಗೆ ಸೇರಿಸಬೇಕು. ಪರೀಕ್ಷೆ ನಡೆಸಿ ಮೌಲ್ಯಮಾಪನ ನಡೆಸಿದವರ ವಿರುದ್ಧ ಕ್ರಮ ಕೈಗೊಳ್ಳಬೇಕು. ನಮ್ಮ ಹೋರಾಟ ಮೈಸೂರಿನ ಮಟ್ಟಕ್ಕೆ ಮಾತ್ರವಲ್ಲ. ಇಡೀ ರಾಜ್ಯದ ಸಹಕಾರಿ ಕ್ಷೇತ್ರದಲ್ಲಿ ನಡೆಯುತ್ತಿರುವ ಅವ್ಯವಹಾರದ ವಿರುದ್ಧವಾಗಿದೆ ಎಂದು ಗುಡುಗಿದರು.
    ವಿಶ್ವನಾಥ್ ಸೂಕ್ಷ್ಮಸಮುದಾಯದವರೇ?
    ಕಾಂಗ್ರೆಸ್‌ನಲ್ಲಿದ್ದಾಗ ಸೂಕ್ಷ್ಮಾತಿಸೂಕ್ಷ್ಮ ಸಮಾಜದವರಿಗೆ ಪರಿಷತ್ ಸ್ಥಾನ ನೀಡಿ ಮನ್ನಣೆ ನೀಡಬೇಕು ಎಂದು ಎಚ್.ವಿಶ್ವನಾಥ್ ಅವರೇ ಸೋನಿಯಾ ಗಾಂಧಿ ಅವರಿಗೆ ಪತ್ರ ಬರೆದಿದ್ದರು. ಆದರೀಗ ಬಿಜೆಪಿಯಲ್ಲಿರುವ ತಾವು ಪರಿಷತ್‌ಗೆ ಹೋಗಲು ಅವಣಿಸುತ್ತಿದ್ದೀರಿ. ಹಾಗಾದರೆ ನಿಮ್ಮದು ಸೂಕ್ಷ್ಮಾತಿ ಸೂಕ್ಷ್ಮ ಸಮಾಜವೇ? ಹಿಂದೆ ಹೇಳಿದ್ದ ಮಾತು ಈಗ ಮರೆತು ಹೋಗಿದೆಯೇ? ಇದೇನಾ ನಿಮ್ಮ ಸಾಮಾಜಿಕ ನ್ಯಾಯ? ಎಂದು ಪ್ರಶ್ನಿಸಿದರು.
    ತಮ್ಮ ಮಗ ಜಿಲ್ಲಾ ಪಂಚಾಯಿತಿ ಸದಸ್ಯರಾಗಿದ್ದು, ಯಾವ ಪಕ್ಷದಿಂದ ಎನ್ನುವುದು ತಿಳಿದಿದೆಯೇ? ಅವಕಾಶಕ್ಕಾಗಿ ಹೋಗುತ್ತಿರುವ ಯಾರ ಮನಸ್ಸು, ದೇಹ ಕೊಳಕು, ಕೊಚ್ಚೆ ಎನ್ನುವುದು ತಿಳಿಸಿದೆ ಎಂದು ತಮ್ಮನ್ನು ಕೊಚ್ಚೆಗೆ ಕಲ್ಲು ಹೊಡೆದು ನಾನೇಕೆ ಕೊಚ್ಚೆ ಹಾರಿಸಿಕೊಳ್ಳಲಿ ಎನ್ನುವ ವಿಶ್ವನಾಥ್ ಹೇಳಿಕೆಗೆ ತಿರುಗೇಟು ನೀಡಿದರು.
    ಜೆಡಿಎಸ್‌ಗೆ ಯಾರ ಋಣವೂ ಇಲ್ಲ. ಕಾಂಗ್ರೆಸ್ ಮತ್ತು ಬಿಜೆಪಿಯಲ್ಲಿ ತುಂಬಾ ಜನ ದೇವೇಗೌಡರ ಋಣ ತೀರಿಸಬೇಕಿದೆ. ಈಗ ಯಾರು, ಯಾರು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರನ್ನು ಹಿಯ್ಯಳಿಸುತ್ತಿದ್ದಾರೆ, ಅವರೆಲ್ಲ ದೇವೇಗೌಡರ ಗರಡಿಯಲ್ಲಿ ಪಳಗಿದವರೇ ಎಂದರು.
    ಎಸ್‌ಎಸ್‌ಎಲ್‌ಸಿ ಪರೀಕ್ಷೆ ವಿಚಾರದಲ್ಲಿ ರಾಜಕೀಯ ಮಾಡಬಾರದು. ಸಚಿವ ಸುರೇಶ್ ಕುಮಾರ್ ಅನುಭವ ಇರುವ ರಾಜಕಾರಣಿಯಾಗಿದ್ದು, ಅವರು ತಜ್ಞರೊಂದಿಗೆ ಚರ್ಚೆ ನಡೆಸಿದ್ದಾರೆ. ಪರೀಕ್ಷೆ ನಡೆದಲ್ಲಿ ಸಾ.ರಾ ಸ್ನೇಹ ಬಳಗದಿಂದ ಮೈಸೂರಿನ ಮಕ್ಕಳಿಗೆ ಎನ್-95 ಮಾಸ್ಕ್ ವಿತರಿಸಲಾಗುವುದು ಎಂದು ಹೇಳಿದರು.
    ಜಿಪಂ ಅಧ್ಯಕ್ಷೆ ಪರಿಮಳಾ ಶ್ಯಾಂ, ನಗರ ಪಾಲಿಕೆ ಸದಸ್ಯ ಎಸ್.ಬಿ.ಎಂ.ಮಂಜು, ಮುಖಂಡರಾದ ನರಸಿಂಹಮೂರ್ತಿ, ನಾಗರಾಜ್, ವಿವೇಕಾನಂದ, ಬೀರಿಹುಂಡಿ ಬಸವಣ್ಣ, ನಾಗರಾಜ್, ರವಿಚಂದ್ರೇಗೌಡ, ಅಭಿಷೇಕ್ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts