More

    ಭೂ ಸುಧಾರಣೆ ಕಾಯ್ದೆ ತಿದ್ದುಪಡಿಗೆ ವಿರೋಧ

    ದಲಿತ ಸಂಘರ್ಷ ಸಮಿತಿ ಒಕ್ಕೂಟದಿಂದ ಪ್ರತಿಭಟನೆ

    ಮೈಸೂರು: ಭೂ ಸುಧಾರಣೆ ಕಾಯ್ದೆಗೆ ತಿದ್ದುಪಡಿ ಮಾಡಲು ಹೊರಟಿರುವ ರಾಜ್ಯ ಸರ್ಕಾರದ ಕ್ರಮವನ್ನು ಖಂಡಿಸಿ ದಲಿತ ಸಂಘರ್ಷ ಸಮಿತಿ ಒಕ್ಕೂಟ (ದಸಂಸ ಸಂಘಟನೆಗಳ ಜಂಟಿ ವೇದಿಕೆ) ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಶುಕ್ರವಾರ ಪ್ರತಿಭಟನೆ ನಡೆಯಿತು.
    ಡಿ.ದೇವರಾಜ ಅರಸು ಅವರು ಜಾರಿಗೆ ತಂದ ಕೃಷಿ ಮತ್ತು ರೈತರ, ಬಡವರ ಪರವಾದ ಭೂಸುಧಾರಣಾ ಕಾಯ್ದೆಗೆ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಸರ್ಕಾರ ಸುಗ್ರೀವಾಜ್ಞೆ ಮೂಲಕ ತಿದ್ದುಪಡಿಗೆ ಮುಂದಾಗಿದೆ. ಕೃಷಿಕರಲ್ಲದವರ ಕೈಗೆ ಕೃಷಿಭೂಮಿ ಒಪ್ಪಿಸಲಾಗುತ್ತಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.
    ಹಿಂದಿನ ಸರ್ಕಾರಗಳು ಖಾಸಗಿ ಸಂಘ-ಸಂಸ್ಥೆಗಳಿಗೆ ದೀರ್ಘಕಾಲದವರೆಗೆ ಗುತ್ತಿಗೆಗೆ ನೀಡಲಾಗಿದ್ದ ಜಮೀನನ್ನೂ ಗುತ್ತಿಗೆದಾರರಿಗೆ ಪರಭಾರೆ ಮಾಡಲು ನಿರ್ಧರಿಸಿರುವುದು ಆಘಾತಕಾರಿ. ಇದು ಪ್ರಜಾಸತ್ತಾತ್ಮಕ ಕ್ರಮವಲ್ಲ. ನೈಸರ್ಗಿಕ ಸಂಪನ್ಮೂಲವಾದ ಭೂಮಿಯನ್ನು ಉಳ್ಳವರ ಒಡೆತನಕ್ಕೆ ಒಪ್ಪಿಸುವುದು ಸಂವಿಧಾನದ ಆಶಯವಾಗಿರುವ ಸಮಾನತೆ ತತ್ವಕ್ಕೆ ವಿರುದ್ಧವಾಗಿದೆ ಎಂದರು.
    ಈ ನಿರ್ಧಾರವನ್ನು ಕೈಬಿಡಬೇಕು. ಇಲ್ಲವಾದಲ್ಲಿ ಹೋರಾಟ ಮುಂದುವರಿಯಲಿದೆ ಎಂದು ಎಚ್ಚರಿಸಿದರು. ಡಿಸಿ ಕಚೇರಿ ಅಧಿಕಾರಿಗೆ ಮನವಿ ಸಲ್ಲಿಸಿ ಪ್ರತಿಭಟನೆಯನ್ನು ಕೈಬಿಡಲಾಯಿತು. ಮುಖಂಡರಾದ ಬೆಟ್ಟಯ್ಯ ಕೋಟೆ, ಆಲಗೂಡು ಶಿವಕುಮಾರ್, ಚುಂಚನಹಳ್ಳಿ ಮಲ್ಲೇಶ್, ರಾಜಶೇಖರ್ ಕೋಟೆ, ಕಾರ್ಯ ಬಸವಣ್ಣ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts