More

    ಕಿಕ್ಕೇರಿಸುವ ‘ದಸರಾ ಪಂಜ’ ಕುಸ್ತಿ

    ಅಂಗವಿಕಲ ಮಹಿಳೆಯರಿಗೂ ಅವಕಾಶ

    ತೆರೆಮರೆಗೆ ಸರಿದಿದ್ದ ಆಟಕ್ಕೆ ಮರುಜೀವ

    ಅವಿನಾಶ್ ಜೈನಹಳ್ಳಿ ಮೈಸೂರು
    ಜಟ್ಟಿಗಳು, ಪೈಲ್ವಾನರು, ಬಾಡಿ ಬಿಲ್ಡರ್‌ಗಳು ತೋಳ್ಬಲ ಪ್ರದರ್ಶಿಸುವುದು, ಮಟ್ಟಿ ಮೇಲೆ ಜಟ್ಟಿತನ ಮೆರೆಯುವುದು, ಮದಗಜಗಳ ರೀತಿ ಹೋರಾಡುವುದು ಸಾಮಾನ್ಯ. ಆದರೆ, ವಿಶ್ವವಿಖ್ಯಾತ ನಾಡಹಬ್ಬ ದಸರಾ ಮಹೋತ್ಸವದ ‘ದಸರಾ ಪಂಜ ಕುಸ್ತಿ’ಯಲ್ಲಿ (ಆರ್ಮ್ ರಸ್ಲಿಂಗ್) ಅಂಗವಿಕಲ ಮಹಿಳೆಯರು ತೋಳ್ಬಲ ಪ್ರದರ್ಶಿಸಲಿದ್ದಾರೆ…!
    ತೆರೆಮರೆಗೆ ಸರಿದಿದ್ದ ಪಂಜ ಕುಸ್ತಿಗೆ ಉತ್ತೇಜನ ನೀಡುವ ಉದ್ದೇಶದಿಂದ 7 ವರ್ಷಗಳಿಂದ ದಸರಾ ಕುಸ್ತಿ ಪಂದ್ಯಾವಳಿಯೊಂದಿಗೆ ಪಂಜ ಕುಸ್ತಿ ಆಟಕ್ಕೆ ಅವಕಾಶ ಕಲ್ಪಿಸಲಾಗಿದೆ. ಡಿ.ದೇವರಾಜ ಅರಸು ವಿವಿಧೋದ್ದೇಶ ಕ್ರೀಡಾಂಗಣದಲ್ಲಿ ಆಯೋಜಿಸಲಾಗುವ ದಸರಾ ಕುಸ್ತಿ ಪಂದ್ಯಾವಳಿಗಳ ಜತೆಗೆ, ಪಂಜ ಕುಸ್ತಿಪಟುಗಳು ತಮ್ಮ ತೋಳ್ಬಲ ಪ್ರದರ್ಶಿಸುವ ಮೂಲಕ ಕ್ರೀಡಾಸಕ್ತರಿಗೆ ಮತ್ತಷ್ಟು ಮನರಂಜನೆ ನೀಡುತ್ತ ಬಂದಿದ್ದಾರೆ. ಪುರುಷರು ಮತ್ತು ಮಹಿಳೆಯರಿಗೆ ತೂಕದ ಆಧಾರದ ಮೇಲೆ ತಲಾ 5ರಿಂದ 10 ವಿಭಾಗದಲ್ಲಿ ಪಂಜ ಕುಸ್ತಿ ನಡೆಯುತ್ತಿದೆ. ಈ ಬಾರಿಯೂ ವಿವಿಧ ವಿಭಾಗದಲ್ಲಿ ರಾಜ್ಯ ಮಟ್ಟದ ಪಂಜ ಕುಸ್ತಿ ಆಯೋಜಿಸಲು ಚಿಂತಿಸಲಾಗಿದೆ.


    ಮಹಾಮಾರಿ ಕರೊನಾದಿಂದಾಗಿ ಎರಡು ವರ್ಷಗಳಿಂದ ಕಳೆಗುಂದಿದ್ದ ದಸರಾ ಮಹೋತ್ಸವಕ್ಕೆ ಈ ಬಾರಿ ಜೀವಕಳೆ ಬಂದಿದೆ. ದಸರಾದ ಪ್ರಮುಖ ಆಕರ್ಷಣೆಗಳಲ್ಲಿ ಒಂದಾದ ನಾಡಕುಸ್ತಿ, ಪಾಯಿಂಟ್ ಕುಸ್ತಿ ಹಾಗೂ ಪಂಜ ಕುಸ್ತಿಗಳನ್ನು ಈ ಬಾರಿ ವಿಭಿನ್ನ ರೀತಿಯಲ್ಲಿ ಆಯೋಜಿಸಲು ಕುಸ್ತಿ ಉಪ ಸಮಿತಿ ಮುಂದಾಗಿದೆ. ಈ ಸಂಬಂಧ ಮುಖ್ಯವಾಗಿ ಈ ಬಾರಿ ಪಂಜ ಕುಸ್ತಿಯನ್ನು ಉತ್ತೇಜಿಸುವ ದೃಷ್ಟಿಯಿಂದಲೂ ನಾನಾ ವಿಭಾಗದಲ್ಲಿ ಪಂಜ ಕುಸ್ತಿ ಆಯೋಜಿಸಲು ತೀರ್ಮಾನಿಸಲಾಗಿದೆ. 2018ರಲ್ಲಿ ಅಂಗವಿಕಲ ಪುರುಷರಿಗೆ ಪಂಜ ಕುಸ್ತಿ ಆಯೋಜಿಸಿ ಯಶಸ್ವಿಯಾಗಿದ್ದ ದಸರಾ ಕುಸ್ತಿ ಉಪಸಮಿತಿ ಈಗ ಅಂಗವಿಕಲ ಮಹಿಳೆಯರಿಗೂ ಪಂಜ ಕುಸ್ತಿಯಲ್ಲಿ ಭಾಗವಹಿಸಲು ಅವಕಾಶ ನೀಡುತ್ತಿದೆ.


    ಆದ್ದರಿಂದ ಈ ಬಾರಿ ವಿವಿಧ ವಿಭಾಗದಲ್ಲಿ ಪುರುಷರು, ಮಹಿಳೆಯರು ಹಾಗೂ ಅಂಗವಿಕಲ ಪುರುಷರು ಮತ್ತು ಮಹಿಳೆಯರು ತೋಳ್ಬಲ ಪ್ರದರ್ಶಿಸಲಿದ್ದಾರೆ.
    ಇಲ್ಲಿ ಗೆದ್ದ ಪುರುಷರಿಗೆ ‘ಮೈಸೂರು ದಸರಾ ಶ್ರೀ’ ಹಾಗೂ ಮಹಿಳೆಯರಿಗೆ ‘ದಸರಾ ಕುಮಾರಿ’ ಪ್ರಶಸ್ತಿ ನೀಡಲಾಗುತ್ತದೆ. ಇನ್ನು ಅಂಗವಿಕಲ ಪುರುಷರಿಗೆ ‘ಶ್ರೀ ದಸರಾ ವಿಶೇಷ ಚೇತನ’ ಹಾಗೂ ಅಂಗವಿಕಲ ಮಹಿಳೆಯರಿಗೆ ‘ಶ್ರೀ ದಸರಾ ನವಚೇತನ ತಾರೆ’ ಪ್ರಶಸ್ತಿ ನೀಡಲು ನಿರ್ಧರಿಸಲಾಗಿದೆ.

    ಏನಿದು ಪಂಜ ಕುಸ್ತಿ?: ಸಾಮಾನ್ಯವಾಗಿ ಬಹುತೇಕ ಜನರು ಪಂಜ ಕುಸ್ತಿಯನ್ನು ಸಿನಿಮಾ ಅಥವಾ ಇನ್ನಿತರ ಕಾರ್ಯಕ್ರಮಗಳಲ್ಲಿ ಮಾತ್ರ ನೋಡಿರುತ್ತಾರೆ. ಕುಸ್ತಿಯಷ್ಟೇ ಆಕರ್ಷಕವಾಗಿರುವ ಪಂಜ ಕುಸ್ತಿಯಲ್ಲಿ ಇಬ್ಬರು ಸ್ಪರ್ಧಿಗಳು ಎದುರುಬದುರಾಗಿ ಕುಳಿತು ಅಥವಾ ನಿಂತು ಪರಸ್ಪರರು ಒಂದು ಕೈ ಬಳಸಿ ಬಲಪ್ರಯೋಗಕ್ಕೆ ಇಳಿಯಲಿದ್ದು, ಇದರಲ್ಲಿ ಯಾರು ಮೊದಲಿಗೆ ಎದುರಾಳಿಯ ಕೈ ಭಾಗಿಸುತ್ತಾರೋ ಅವರು ಪಂದ್ಯದ ವಿಜೇತರು. ಪಂದ್ಯದಲ್ಲಿ ಒಬ್ಬರಿಗೆ ಎರಡು ಅವಕಾಶ ನೀಡಲಿದ್ದು, ಒಂದು ಅವಕಾಶದಲ್ಲಿ ಗೆದ್ದು ಮತ್ತೊಂದರಲ್ಲಿ ಸೋತರೆ ಆತ ಆಟದಲ್ಲಿ ಮುಂದುವರಿಯಲು ಸಾಧ್ಯವಿದೆ. ಒಟ್ಟಿನಲ್ಲಿ ಪೈಲ್ವಾರ ತೋಳ್ಬಲ ಪ್ರದರ್ಶಿಸುವುದೇ ಪಂಜ ಕುಸ್ತಿಯ ವಿಶೇಷ.


    ಕೆಲ ಜಿಲ್ಲೆಗೆ ಮಾತ್ರ ಸೀಮಿತ: ರಾಜ್ಯದಲ್ಲಿ ಈವರೆಗೂ ಪಂಜ ಕುಸ್ತಿಪಟು ಹೆಸರು ಪಡೆದವರು ಬೆರಳೆಣಿಕೆಯಷ್ಟು ಮಾತ್ರ. ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ಆರ್ಮ್ ರಸ್ಲರ್‌ಗಳಿದ್ದರೂ ಬೆಂಗಳೂರು, ದಾವಣಗೆರೆ ಜಿಲ್ಲೆಯಲ್ಲಿ ಹೆಚ್ಚಿನ ಆಟಗಾರರಿದ್ದಾರೆ. ಕಳೆದ ನಾಲ್ಕು ವರ್ಷಗಳಿಂದ ಮೈಸೂರಿನಲ್ಲೂ ಪಂಜ ಕುಸ್ತಿ ಅಭ್ಯಾಸ ಮಾಡುತ್ತಿದ್ದಾರೆ. ಹೀಗಾಗಿ, ಈ ವರ್ಷ ದಸರಾ ಪಂಜ ಕುಸ್ತಿಯಲ್ಲಿ ರಾಜ್ಯಾದ್ಯಂತ ಇರುವ ಪಂಜ ಕುಸ್ತಿಪಟುಗಳು ಭಾಗವಹಿಸಲಿದ್ದಾರೆ. ವಿಶೇಷ ಎಂದರೆ, ದಸರಾ ಕುಸ್ತಿಯಲ್ಲಿ ಭಾಗವಹಿಸುವ ಬಹುತೇಕ ಕುಸ್ತಿಪಟುಗಳೂ ಪಂಜ ಕುಸ್ತಿಯಲ್ಲಿ ಭಾಗವಹಿಸುತ್ತಾರೆ.


    ತೆರೆಮರೆಗೆ ಸರಿದಿದ್ದ ಪಂಜ ಕುಸ್ತಿಗೆ ಉತ್ತೇಜನ ನೀಡುವ ಉದ್ದೇಶದಿಂದ ದಸರಾ ಕುಸ್ತಿ ಪಂದ್ಯಾವಳಿಯಲ್ಲಿ ಪಂಜ ಕುಸ್ತಿಯನ್ನು ಆಯೋಜಿಸುತ್ತ ಬರಲಾಗುತ್ತಿದೆ. ಈ ವರ್ಷವೂ ವಿಶೇಷವಾಗಿ ಪಂಜ ಕುಸ್ತಿ ಆಯೋಜಿಸಲಾಗುತ್ತದೆ. ವಿವಿಧ ವಿಭಾಗದಲ್ಲಿ ಪುರುಷರು, ಮಹಿಳೆಯರು ಹಾಗೂ ಅಂಗವಿಕಲ ಪುರುಷರು ಹಾಗೂ ಮಹಿಳೆಯರು ತೋಳ್ಬಲ ಪ್ರದರ್ಶಿಸಲು ಅವಕಾಶ ನೀಡಲಾಗುತ್ತದೆ.
    ಹರ್ಷವರ್ಧನ್, ಕಾರ್ಯದರ್ಶಿ, ದಸರಾ ಕುಸ್ತಿ ಉಪ ಸಮಿತಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts