More

    ಹೊಸತನದ ಚಿತ್ರಗಳಿಗೆ ಮೊದಲ ಆದ್ಯತೆ … ‘ಗುಳ್ಟು’ ನವೀನ್ ಸ್ಪೀಕಿಂಗ್​

    ಬೆಂಗಳೂರು: ‘ಗುಳ್ಟು’ ನಂತರ ನವೀನ್​ ಇನ್ನಷ್ಟು ಚಿತ್ರಗಳಲ್ಲಿ ಕಾಣಿಸಿಕೊಳ್ಳಬಹುದು ಎಂಬ ನಿರೀಕ್ಷೆ ಇತ್ತು. ಆದರೆ, ಅದ್ಯಾಕೋ ಅವರ ಸುದ್ದಿಯೇ ಇರಲಿಲ್ಲ. ಈಗ ಅವರು ಒಂದಿಷ್ಟು ಚಿತ್ರಗಳಲ್ಲಿ ನಟಿಸಿದ್ದು, ಈ ಪೈಕಿ ‘ಧರಣಿ ಮಂಡಲ ಮಧ್ಯದೊಳಗೆ’ ಮೊದಲು ಬಿಡುಗಡೆಯಾಗಿದೆ. ಮುಂದಿನ ದಿನಗಳಲ್ಲಿ, ‘ಕ್ಷೇತ್ರಪತಿ’, ‘ಹೊಂದಿಸಿ ಬರೆಯಿರಿ’, ‘ಹೊಯ್ಸಳ’, ‘ಮೂಲತಃ ನಮ್ಮವರೇ’ ಮುಂತಾದ ಚಿತ್ರಗಳು ಬಿಡುಗಡೆಯಾಗಲಿಕ್ಕಿವೆ.

    ಇದನ್ನೂ ಓದಿ: ಪ್ರಭಾಸ್​ ಹೊಸ ಚಿತ್ರದಲ್ಲಿ ಸಂಜಯ್​ ದತ್​ … ಇನ್ನೊಂದು ನೆಗೆಟಿವ್​ ಪಾತ್ರದಲ್ಲಿ ‘ಅಧೀರ’?

    ಇಷ್ಟಕ್ಕೂ ‘ಗುಳ್ಟು’ ನಂತರ ನವೀನ್​ ಅಭಿನಯದ ಸಿನಿಮಾ ಯಾಕೆ ಬಿಡುಗಡೆಯಾಗಲಿಲ್ಲ ಮತ್ತು ಈಗ್ಯಾಕೆ ಒಂದರ ಹಿಂದೊಂದು ಚಿತ್ರಗಳು ಬಿಡುಗಡೆಯಾಗುತ್ತಿವೆ ಎಂಬ ಪ್ರಶ್ನೆ ಸಹಜ. ಈ ಪ್ರಶ್ನೆಯನ್ನು ಅವರು ಮುಂದಿಟ್ಟರೆ, ‘ನಾನು ‘ಗುಳ್ಟು’ ನಂತರ ಒಂದು ಪೊಲಿಟಿಕಲ್​ ಥ್ರಿಲ್ಲರ್​ ಚಿತ್ರವೊಂದನ್ನು ಒಪ್ಪಿಕೊಂಡಿದ್ದೆ. ಅದಕ್ಕಾಗಿ ಸಾಕಷ್ಟು ತೂಕ ಹೆಚ್ಚಿಸಿಕೊಳ್ಳುವುದರ ಜತೆಗೆ, ಉದ್ದ ಕೂದಲು ಬೆಳೆಸಿದ್ದೆ. ಹಾಗಾಗಿ, ಬೇರೆ ಚಿತ್ರಗಳಲ್ಲಿ ನಟಿಸುವುದಕ್ಕೆ ಸಾಧ್ಯವಾಗಲಿಲ್ಲ. ಆದರೆ, ಕಾರಣಾಂತರಗಳಿಂದ ಆ ಚಿತ್ರ ಶುರುವಾಗಲಿಲ್ಲ. ಯಾವಾಗ ಆ ಚಿತ್ರ ಶುರುವಾಗುವುದಿಲ್ಲ ಎಂದು ಗೊತ್ತಾಯಿತೋ, ಆ ನಂತರ ಬೇರೆ ಚಿತ್ರಗಳನ್ನು ಒಪ್ಪಿದೆ. ಆದರೆ, ಕರೊನಾ ಲಾಕ್​ಡೌನ್​ನಿಂದ ಎಲ್ಲವೂ ತಡವಾಗಿ, ಈಗ ಆ ಚಿತ್ರಗಳೆಲ್ಲ ಬಿಡುಗಡೆಯಾಗುತ್ತಿವೆ ಅಷ್ಟೇ’ ಎನ್ನುತ್ತಾರೆ.

    ನವೀನ್​ ಹಲವು ಕಥೆಗಳನ್ನು ಕೇಳುತ್ತಿದ್ದಾರಂತೆ. ಹಾಗೆ ಕೇಳಿದ ಕಥೆಗಳ ಪೈಕಿ ಹೊಸತನವಿರುವ ಮತ್ತು ಇದುವರೆಗೂ ಮಾಡದಿರುವ ಪಾತ್ರಕ್ಕೆ ಅವರ ಮೊದಲ ಆದ್ಯತೆಯಂತೆ. ‘ನಾನು ಮಾಡುತ್ತಿರುವ ಒಂದೊಂದು ಚಿತ್ರಗಳು ಒಂದೊಂದು ರೀತಿಯದ್ದು. ಮೂರ್ನಾಲ್ಕು ಚಿತ್ರಗಳಲ್ಲಿ ನಟಿಸಿದ್ದರೂ, ಯಾವ ಚಿತ್ರದಲ್ಲೂ ನನಗೆ ಪೂರ್ಣಪ್ರಮಾಣವಾಗಿ ಹಾಡು ಮತ್ತು ಫೈಟ್​ ಸಿಕ್ಕಿರಲಿಲ್ಲ. ಈಗ ‘ಮೂಲತಃ ನಮ್ಮವರೇ’ ಚಿತ್ರದಲ್ಲಿ ಹಾಡು, ಫೈಟುಗಳೆಲ್ಲ ಇವೆ. ಅದೇ ರೀತಿ ಒಂದೊಂದು ಪಾತ್ರಕ್ಕೆ ಒಂದೊಂದು ವಿಶೇಷತೆ ಇದೆ. ಇನ್ನು, ನನ್ನ ಜತೆಗೆ ಚಿತ್ರ ಮಾಡುವುದಕ್ಕೆ ಬರುವವರು ಸಹ ಭುಜದ ಮೇಲೆ ಸಿನಿಮಾ ಹೊರುವವರನ್ನು ನೋಡುತ್ತಿದ್ದಾರೆ. ಎಷ್ಟೋ ಜನ ದೊಡ್ಡ ಹೀರೋಗಳ ಜತೆಗೆ ಚಿತ್ರ ಮಾಡುವುದಕ್ಕೆ ಹೋಗಿ, ಅದು ಸಾಧ್ಯವಾಗದೆ ನನ್ನ ಬಳಿ ಬಂದವರೂ ಇದ್ದಾರೆ. ಅವರಿಗೆ ಹಸಿವಿರುತ್ತದೆ, ಪ್ರಾಮಾಣಿಕತೆ ಇರುತ್ತದೆ. ಅಂಥವರ ಜತೆಗೆ ಕೆಲಸ ಮಾಡೋದು ನನಗೆ ಖುಷಿ ಕೊಡುತ್ತದೆ’ ಎಂಬುದು ನವೀನ್​ ಅಭಿಪ್ರಾಯ.

    ಒಂದಿಷ್ಟು ಚಿತ್ರಗಳಲ್ಲಿ ಹೀರೋ ಆಗಿ ನಟಿಸಿರುವ ನವೀನ್​, ಈಗ ಧನಂಜಯ್​ ಅಭಿನಯದ ‘ಹೊಯ್ಸಳ’ ಚಿತ್ರದಲ್ಲಿ ವಿಲನ್​ ಆಗಿಯೂ ಕಾಣಿಸಿಕೊಳ್ಳುತ್ತಿದ್ದಾರೆ. ‘ಮಗ, ಒಂದು ನೆಗೆಟಿವ್​ ಪಾತ್ರವಿದೆ. ನಿನಗೆ ಸೂಟ್​ ಆಗುತ್ತೆ ಅನಿಸುತ್ತೆ, ನೋಡು …’ ಎಂದು ಧನಂಜಯ್ ಹೇಳಿದ್ದರಂತೆ. ಕಥೆ ಕೇಳಿದಾಗ ನವೀನ್​ಗೂ ಇಷ್ಟವಾಗಿದೆ. ‘ಅದೊಂದು ಕೋಲ್ಡ್ ಆದಂತಹ ಪಾತ್ರ. ಮೃಗದ ತರಹ ಇರುತ್ತಾನೆ. ಆ ಪಾತ್ರಕ್ಕೊಂದು ಎಥಿಕ್ಸ್​ ಇದೆ ಅಂತನಿಸಿತು. ಹಾಗಾಗಿ, ಒಪ್ಪಿಕೊಂಡೆ’ ಎನ್ನುತ್ತಾರೆ ನವೀನ್​. ಮುಂದೆಯೂ ನೆಗೆಟಿವ್​ ಪಾತ್ರಗಳಲ್ಲಿ ನಟಿಸುವುದನ್ನು ಅವರು ಮುಂದುವರೆಸುತ್ತಾರಾ? ‘ಅಂಥದ್ದೇ ಪಾತ್ರಗಳನ್ನು ಮಾಡಬೇಕು ಎನ್ನುವ ಹಪಹಪಿ ಇಲ್ಲ. ನಾನು ಇಲ್ಲಿಯವರೆಗೂ ಮಾಡಿರದ ಅಥವಾ ಮಾಡಿರುವ ಪಾತ್ರಕ್ಕಿಂತ ಉತ್ತಮವಾಗಿದೆ ಅನಿಸಿದರೆ ಮಾಡುತ್ತೀನಿ’ ಎಂಬ ಉತ್ತರ ಅವರಿಂದ ಬರುತ್ತದೆ.

    ಇದನ್ನೂ ಓದಿ: ವಿಜಯಾನಂದ ಸ್ಫೂರ್ತಿಯ ಸೆಲೆ ಎಂದ ಕೇಂದ್ರ ಸಚಿವ ಜೋಶಿ; ಹೊಸ ಸೃಷ್ಟಿಗೆ ಸಾಕ್ಷಿ

    ಕನ್ನಡದ ಹಲವು ನಟರು ಇದೀಗ ಬೇರೆ ಭಾಷೆಯ ಚಿತ್ರಗಳಲ್ಲೂ ಹೆಚ್ಚು ಹೆಚ್ಚಾಗಿ ನಟಿಸುತ್ತಿದ್ದಾರೆ. ನವೀನ್​ಗೂ ಅಂಥದ್ದೇನಾದರೂ ಆಫರ್​ಗಳಿವೆಯಾ? ಎಂದರೆ, ‘ಮೊದಲು ನನ್ನ ಚಿತ್ರಗಳನ್ನು ಇಲ್ಲಿಯವರಿಗೆ ತಲುಪಿಸಬೇಕು. ಹೀಗಾಗಿ ಬೇರೆ ಭಾಷೆ ನನ್ನ ಸದ್ಯದ ಪ್ರಯಾರಿಟಿ ಅಲ್ಲ’ ಎಂದು ಮಾತು ಮುಗಿಸುತ್ತಾರೆ ನವೀನ್​ ಶಂಕರ್​.

    ಇನ್ನೆರಡು ಹೊಸ ದಾಖಲೆಗಳನ್ನು ಮಾಡಿದ ‘ಕೆಜಿಎಫ್​ 2’ …

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts