More

    ದೆಹಲಿ ಗಲಭೆ ನಡುವೆ ಮುಸ್ಲಿಂ ಬಾಂಧವರ ಸಮ್ಮುಖದಲ್ಲಿ ಹಿಂದೂ ಜೋಡಿಯ ಮದುವೆ

    ನವದೆಹಲಿ: ಈಶಾನ್ಯ ದೆಹಲಿಯಲ್ಲಿ ಧರ್ಮೀಯ ಹೋರಾಟದ ಕಿಚ್ಚು ಹೆಚ್ಚಾಗಿ ಹಿಂಸಾಚಾರದ ಹಾದಿ ತುಳಿದಿತ್ತು. ಇಂತಹ ಕಠಿಣ ಸಂದರ್ಭದಲ್ಲಿಯೂ ಹಿಂದೂ ಧರ್ಮದ ನವ ವಧುವರರಿಗೆ ಮುಸ್ಲಿಂ ಬಾಂಧವರೆಲ್ಲ ಸೇರಿ ಮದುವೆ ಮಾಡಿರುವ ಘಟನೆಯೊಂದು ನಡೆದಿದೆ.

    ಬುಧವಾರದಂದು ಹಸೆಮಣೆ ಏರಬೇಕಿದ್ದ ಸಾವಿತ್ರಿ ಪ್ರಸಾದ್​ ಸೋಮವಾರದಂದು ಸಂಜೆ ತನ್ನ ಕೈಗೆ ಮೆಹಂದಿ ಹಾಕಿಸಿಕೊಳ್ಳಲು ಮುಂದಾಗಿದ್ದಳು. ಆ ಸಮಯದಲ್ಲಿ ಹೊರಗಡೆ ಗಲಭೆ ಆರಂಭವಾಗಿದ್ದು ತಿಳಿದ ಆಕೆ, ನಾಳೆ ಎನ್ನುವಷ್ಟರಲ್ಲಿ ಗಲಭೆ ನಿಲ್ಲುತ್ತದೆ ಎನ್ನುವ ನಂಬಿಕೆಯ ಮೇಲೆ ಮೆಹಂದಿಯನ್ನು ಸಂತಸದಿಂದ ಹಾಕಿಸಿಕೊಂಡಿದ್ದಳು. ಆದರೆ ಸೋಮವಾರದಂದು ಆರಂಭವಾದ ಆ ಗಲಭೆ ಬೇರೆಯದ್ದೇ ರೂಪ ಪಡೆದುಕೊಂಡ ಕಾರಣ ಆಕೆಗೆ ಮನೆಯಿಂದ ಹೊರಗೆ ಹೋಗಲೂ ಸಾಧ್ಯವಾಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಆಕೆಯ ತಂದೆ ಮನೆಯ ಟೆರಸ್​ನ ಮೇಲೆ ನಿಂತು ನೋಡಿದಾಗ ಸುತ್ತ ಬೆಂಕಿ, ಗಲಾಟೆಯೇ ಕಾಣಿಸಿದೆ.

    ಪರಿಸ್ಥಿತಿ ಗಂಭೀರವಾಗಿದೆ ಎಂದು ತಿಳಿದ ನಂತರ ಸಾವಿತ್ರಿಯ ತಂದೆ ವರನ ಮನೆಯವರಿಗೆ ಕರೆ ಮಾಡಿ ನೀವು ಇಲ್ಲಿಗೆ ಬರುವುದು ಸುರಕ್ಷಿತವಲ್ಲ ಎಂದು ತಿಳಿಸಿದ್ದಾನೆ. ಆದರೆ ಮದುವೆಯನ್ನು ಮುಂದೂಡಲು ಬಿಡದ ಅಕ್ಕ ಪಕ್ಕದಲ್ಲಿರುವ ಮುಸ್ಲಿಂ ಬಾಂಧವರು ಬುಧವಾರದಂದು ವಧುವಿನ ಮನೆಯಲ್ಲಿ ಹಿಂದೂ ಸಂಪ್ರದಾಯದ ಪ್ರಕಾರ ಮದುವೆಯನ್ನು ಸುರಕ್ಷಿತವಾಗಿ ನೆರವೇರಿಸಿಕೊಟ್ಟಿದ್ದಾರೆ.

    ಹಸೆಮಣೆ ಏರಬೇಕಾದ ಸಾವಿತ್ರಿ ಅಳುತ್ತಾ ಕೂರುವುದನ್ನು ನಮ್ಮ ಕಣ್ಣಲ್ಲಿ ನೋಡಲಾಗುವುದಿಲ್ಲ ಎಂದು ಹೇಳುತ್ತಾರೆ ಆಕೆಯ ಪಕ್ಕದ ಮನೆಯಲ್ಲಿರುವ ಮುಸ್ಲಿಂ ಮಹಿಳೆ. ಬಹುತೇಕ ಮುಸಲ್ಮಾನರೇ ತುಂಬಿರುವ ಆ ಪ್ರದೇಶದಲ್ಲಿ ಹೋರಾಟ ಜೋರಾಗಿಯೇ ನಡೆದಿದೆ. ಆದರೆ ಸದಾ ಸ್ನೇಹದಿಂದ ಇರುವ ಅಲ್ಲಿನ ಜನರು ಯಾರೂ ಹೋರಾಟದಲ್ಲಿ ಭಾಗಿಯಾಗಿಲ್ಲ. ಈ ರೀತಿಯ ಧರ್ಮೀಯ ಹೋರಾಟವನ್ನು ಯಾರು ಮಾಡುತ್ತಿದ್ದಾರೆ ಎನ್ನುವುದು ನಮಗೆ ತಿಳಿದಿಲ್ಲ ಎಂದಿದ್ದಾರೆ ಅಲ್ಲಿನ ಜನ. ಹಿಂದೂ ಮುಸ್ಲಿಂ ಎನ್ನುವ ಭೇದವಿಲ್ಲದೆ ಒಟ್ಟಾಗಿ ಬಾಳುವ ಆಶಯವನ್ನು ಅವರು ವ್ಯಕ್ತಪಡಿಸಿದ್ದಾರೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts