More

    ಮುರುಘರಾಜೇಂದ್ರ ಪ್ರಸಾದ ನಿಲಯದ ಹಿಂದಿನ ವಿದ್ಯಾರ್ಥಿಗಳ ಸಂಘದ ರಜತ ಮಹೋತ್ಸವ

    ಧಾರವಾಡ: ಮಠಗಳಲ್ಲಿ ಸಿಗುವ ಸಂಸ್ಕಾರ ಬದುಕಿನ ದಿವ್ಯ ಸೂತ್ರ. ಇಲ್ಲಿ ಗುರು ದರ್ಶನವಿದೆ. ಜೀವನಕ್ಕೊಂದು ದಾರಿ ಇದೆ. ಭಾವ ವಿಕಾಸದತ್ತ ಹೆಜ್ಜೆ ಇಡುವಂತೆ ಪ್ರೇರೇಪಿಸುತ್ತದೆ. ಶ್ರೀಮಠದ ಪ್ರಸಾದ ನಿಲಯದಲ್ಲಿ ವಿದ್ಯಾಭ್ಯಾಸ ಮಾಡಿದವರು ಖಂಡಿತವಾಗಿ ಪರಿವರ್ತಿತರಾಗುತ್ತಾರೆ ಎಂದು ಸುತ್ತೂರು ಸಂಸ್ಥಾನ ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಹೇಳಿದರು.

    ನಗರದ ಮುರುಘಾಮಠದ ಶ್ರೀ ಜಗದ್ಗುರು ಮುರುಘರಾಜೇಂದ್ರ ಪ್ರಸಾದ ನಿಲಯದ ಹಿಂದಿನ ವಿದ್ಯಾರ್ಥಿಗಳ ಸಂಘದ ರಜತ ಮಹೋತ್ಸವ ಕಾರ್ಯಕ್ರಮವನ್ನು ಗುರುವಾರ ಉದ್ಘಾಟಿಸಿ ಅವರು ಮಾತನಾಡಿದರು.

    1997ರಲ್ಲಿ ಆರಂಭಗೊಂಡ ಈ ಸಂಘವು ಈಗ 25 ವರ್ಷಗಳನ್ನು ಪೂರ್ಣಗೊಳಿಸಿದೆ. ಉತ್ತರ ಕರ್ನಾಟಕದ ಪ್ರತಿಷ್ಠಿತ ಮಠಗಳಲ್ಲಿ ಒಂದಾದ ಮುರುಘಾಮಠದ ಶ್ರೀ ಮುರುಘರಾಜೇಂದ್ರ ಉಚಿತ ಪ್ರಸಾದ ನಿಲಯದಲ್ಲಿ ಲಕ್ಷಾಂತರ ವಿದ್ಯಾರ್ಥಿಗಳು ಕಲಿತು, ದೇಶ- ವಿದೇಶಗಳಲ್ಲಿ ವಿವಿಧ ಉನ್ನತ ಹುದ್ದೆಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಮಠದ ಸಂಸ್ಕಾರ ಪಡೆದವರು ನಿತ್ಯ ಬದುಕಿನಲ್ಲಿ ಸಾತ್ವಿಕತೆ, ಜ್ಞಾನ ಭಂಡಾರ ತುಂಬಿಕೊಂಡು ಅತ್ಯುತ್ತಮ ಜೀವನ ಸಾಗಿಸಬೇಕು. ವಿದ್ಯಾರ್ಥಿಗಳು ಚಿಂತನ- ಮಂಥನದಲ್ಲಿ ಪರಿಶುದ್ಧಗೊಂಡು ಗುರುವಿನ ಮಾರ್ಗದರ್ಶನದಂತೆ ನಡೆದರೆ ಆತನ ದಾರಿದೀಪ ದೈವತ್ವದ ಬೆಳಕಿನಡೆ ಸಾಗುತ್ತದೆ ಎಂದರು.

    ಅಧ್ಯಕ್ಷತೆ ವಹಿಸಿದ್ದ ಮುರುಘಾಮಠದ ಡಾ. ಮಲ್ಲಿಕಾರ್ಜುನ ಸ್ವಾಮೀಜಿ ಮಾತನಾಡಿ, ತಾಯಿ ಋಣ ಹಾಗೂ ಗುರುವಿನ ಋಣ ತೀರಿಸಲಾಗುವುದಿಲ್ಲ. ತಾಯಿಯಂತೆ ಮತ್ತೊಬ್ಬರು ಆಗಲು ಸಾಧ್ಯವಿಲ್ಲ. ತಾಯಿ ಮೊದಲ ಗುರುವಾದರೆ, ಶಿಕ್ಷಕರು ಜ್ಞಾನ, ಮಠಾಧೀಶರು ಸಂಸ್ಕೃತಿ ಹಾಗೂ ಅಧ್ಯಾತ್ಮದ ಸವಿ ಉಣಬಡಿಸುತ್ತಾರೆ. ಹೀಗಾಗಿ ಮಠದ ಸಂಸ್ಕೃತಿಯಲ್ಲಿ ಬೆಳೆದ ವಿದ್ಯಾರ್ಥಿ ಅತ್ಯುತ್ತಮ ಪ್ರಜೆಯಾಗುತ್ತಾನೆ ಎಂದರು.

    ಶ್ರೀ ಸದಾಶಿವ ಸ್ವಾಮೀಜಿ, ಡಾ. ಮಹೇಶ್ವರ ಸ್ವಾಮೀಜಿ, ಶ್ರೀ ಸಿದ್ಧಲಿಂಗ ಸ್ವಾಮೀಜಿ ಸಮ್ಮುಖ ವಹಿಸಿದ್ದರು. ಸಂಶೋಧಕ ಡಾ. ಎಸ್.ಆರ್. ಗುಂಜಾಳ ಸ್ಮರಣ ಸಂಚಿಕೆ ಬಿಡುಗಡೆ ಮಾಡಿದರು. ಶಿವಲೀಲಾ ವಿನಯ ಕುಲಕರ್ಣಿ, ಕುಲಪತಿ ಟಿ.ಸಿ. ತಾರಾನಾಥ, ನಿವೃತ್ತ ಕುಲಪತಿ ಡಾ. ಎಂ.ಎನ್. ಶೀಲವಂತರ, ಡಾ. ಸಂಗಮನಾಥ ಲೋಕಾಪುರ, ಎಂ.ಎಸ್. ಪಾಟೀಲ, ಡಾ. ಡಿ.ಎಂ. ಹಿರೇಮಠ, ಎ.ಸಿ. ಚಾಕಲಬ್ಬಿ, ನಾಗರಾಜ ಪಟ್ಟಣಶೆಟ್ಟಿ, ಡಿ.ಬಿ. ಲಕಮನಹಳ್ಳಿ, ಇತರರಿದ್ದರು.

    ಸಿ.ಕೆ. ಹೆರಕಲ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ. ಕೆ.ಎ. ಸುರಪುರಮಠ ನಿರೂಪಿಸಿದರು. ಪ್ರೊ. ಎನ್.ಆರ್. ಬಾಳಿಕಾಯಿ ಸ್ವಾಗತಿಸಿದರು. ಡಿ.ಬಿ. ಪಾಟೀಲ ವಂದಿಸಿದರು. ಹಿರಿಯ ವಿದ್ಯಾರ್ಥಿ, ಪ್ರತಿಭಾವಂತ ವಿದ್ಯಾರ್ಥಿ, ನಿವೃತ್ತ ನೌಕರರನ್ನು ಸನ್ಮಾನಿಸಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts