More

    ವೃದ್ಧನನ್ನು ಕಾರಿನಲ್ಲಿ ಜೀವಂತ ಸುಟ್ಟ ಹಂತಕರು: ಮಹಿಳೆ ಸಹಿತ ನಾಲ್ವರ ಸೆರೆ

    ವಿಜಯವಾಣಿ ಸುದ್ದಿಜಾಲ ಕುಂದಾಪುರ

    ಬೈಂದೂರು ಹೇನಬೇರು ಬಳಿ ಸುಟ್ಟ ಸ್ಥಿತಿಯಲ್ಲಿ ಕಾರು ಹಾಗೂ ಪುರುಷನ ಮೃತದೇಹ ಬುಧವಾರ ಬೆಳಗ್ಗೆ ಪತ್ತೆಯಾಗಿದ್ದ ಪ್ರಕರಣ ಮರುದಿನ ತಿರುವು ಪಡೆದುಕೊಂಡಿದೆ. ತಾನು ಆತ್ಮಹತ್ಯೆ ಮಾಡಿಕೊಂಡಿದ್ದೇನೆಂದು ಬಿಂಬಿಸುವ ಸಲುವಾಗಿ ಆರೋಪಿ ತನ್ನನ್ನೇ ಹೋಲುವ ಬೇರೊಬ್ಬನನ್ನು ಕಾರಿನಲ್ಲಿ ಕೂರಿಸಿ ಬೆಂಕಿ ಹಚ್ಚಿ ಕೊಲೆಗೈಯುವ ಸಂಚು ರೂಪಿಸಿರುವುದು ಬೆಳಕಿಗೆ ಬಂದಿದೆ. ಈ ಮೂಲಕ ಇದೊಂದು ವ್ಯವಸ್ಥಿತ ಕೊಲೆ ಪ್ರಕರಣ ಎಂದು ಪೊಲೀಸರು ತಿಳಿಸಿದ್ದಾರೆ.

    ಕಾರು ಮಾಲೀಕ ಕಾರ್ಕಳ ತಾಲೂಕು ಮಾಳ ಗ್ರಾಮದ ನಿವಾಸಿ ಸದಾನಂದ ಶೇರೆಗಾರ್(54) ಹಾಗೂ ಶಿಲ್ಪಾ ಸಾಲ್ಯಾನ್(30), ಕೃತ್ಯಕ್ಕೆ ಸಹಕರಿಸಿದ ಕಾರ್ಕಳ ಪಚ್ಚಲಾಡಿ ಸೂಡ ನಿವಾಸಿಗಳಾದ ನಿತಿನ್ ದೇವಾಡಿಗ(40) ಮತ್ತು ಸತೀಶ್ ದೇವಾಡಿಗ(49) ಎಂಬುವರನ್ನು ಗುರುವಾರ ಬಂಧಿಸಲಾಗಿದೆ. ಕಾರ್ಕಳ ಕಾಬೆಟ್ಟು ಭಾರತ್ ಬೀಡಿ ಕಾಲನಿ ನಿವಾಸಿ, ಮೇಸ್ತ್ರಿ ಆನಂದ ದೇವಾಡಿಗ(62) ಕೊಲೆಯಾದವರು.

    ಸುಟ್ಟು ಹೋದ ಕಾರಿನ ಚಾಸಿಸ್ ನಂಬರನ್ನು ಫಾರೆನ್ಸಿಕ್ ತಜ್ಞರ ಸಹಾಯದಿಂದ ಪರಿಶೀಲಿಸಿ, ಮಾಲೀಕನ ವಿವರಗಳನ್ನು ಪತ್ತೆ ಹಚ್ಚಲಾಗಿತ್ತು. ಕಾರು ಮಾಲೀಕ ಮಾಳ ಗ್ರಾಮದ ನಿವಾಸಿ ಸದಾನಂದ ಶೇರೆಗಾರ್ ಎಂಬುದು ತಿಳಿದು ಬಂದಿತ್ತು. ಕಾರ್ಕಳದಲ್ಲಿ ಖಾಸಗಿ ಸರ್ವೇಯರ್ ಆಗಿದ್ದ ಸದಾನಂದ ಶೇರೆಗಾರ್ ಜಾಗ ಹಾಗೂ ಹಣದ ವಿಚಾರದಲ್ಲಿ ಅವ್ಯವಹಾರ ಎಸಗಿದ್ದು, ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿತ್ತು. ಆತನಿಗೆ ನ್ಯಾಯಾಲದಿಂದ ಸಮನ್ಸ್ ಜಾರಿಗೊಂಡಿದ್ದು ಬಂಧನ ಭೀತಿ ಎದುರಿಸುತ್ತಿದ್ದ. ಈ ಪ್ರಕರಣವನ್ನು ಮುಚ್ಚಿಹಾಕಲು ತಾನು ಆತ್ಮಹತ್ಯೆ ಮಾಡಿಕೊಂಡಿದ್ದೇನೆಂದು ಬಿಂಬಿಸುವ ಸಲುವಾಗಿ ತನ್ನನ್ನೇ ಹೋಲುವ ಬೇರೊಬ್ಬನನ್ನು ತನ್ನ ಕಾರಿನಲ್ಲಿ ಕೂರಿಸಿ ಬೆಂಕಿ ಹಚ್ಚಿ ಕೊಲೆಗೈಯುವ ಸಂಚು ರೂಪಿಸಿದ್ದ.

    ತನಗೆ ಆಪ್ತವಾಗಿದ್ದ ಕಾರ್ಕಳದ ಹಿರ್ಗಾನದ ಶಿಲ್ಪಾ ಎಂಬಾಕೆಯ ಸಹಕಾರ ಪಡೆದು, ಆಕೆಯ ಸ್ನೇಹಿತ ಕಾರ್ಕಳದಲ್ಲಿ ಮೇಸ್ತ್ರಿ ಕೆಲಸ ಮಾಡಿಕೊಂಡಿದ್ದ ಆನಂದ ದೇವಾಡಿಗ ಎಂಬುವರನ್ನು ತನ್ನ ಸಂಚಿಗೆ ಬಳಸಿಕೊಂಡಿದ್ದ. ಆನಂದ ದೇವಾಡಿಗ ಅವರ ಪತ್ನಿ ಬೆಂಗಳೂರಿನ ಪುತ್ರಿಯ ಮನೆಗೆ ಹೋಗಿದ್ದ ಸಂದರ್ಭ ಅವರ ಮನೆಗೆ ಹೋಗಿದ್ದ ಆರೋಪಿಗಳು ಮಂಗಳವಾರ ಮಧ್ಯಾಹ್ನ ಅವರನ್ನು ಕಾರ್ಕಳಕ್ಕೆ ಕರೆದುಕೊಂಡು ಬಂದು ಬಾರೊಂದರಲ್ಲಿ ಕುಡಿಸಿದ್ದರು. ರಾತ್ರಿಯಾಗುತ್ತಿದ್ದಂತೆ ಅವರನ್ನು ಪುಸಲಾಯಿಸಿ ನಿದ್ರೆ ಮಾತ್ರೆ ನುಂಗಿಸಿ ಬೈಂದೂರು ಕಡೆಗೆ ಕಾರಿನಲ್ಲಿ ಕರೆದುಕೊಂಡು ಬಂದಿದ್ದರು. ಅಲ್ಲಿಂದ ಬೈಂದೂರು ಒತ್ತಿನೆಣೆ ಸಮೀಪ ಹೇನಬೇರು ನಿರ್ಜನ ಪ್ರದೇಶದಲ್ಲಿ ಕಾರು ತಂದು ನಿಲ್ಲಿಸಿ ನಿದ್ರೆ ಮಂಪರಿನಲ್ಲಿದ್ದ ಆನಂದ ದೇವಾಡಿಗ ಕಾರಿನ ಒಳಗಿರುವಾಗಲೇ ಕಾರಿಗೆ ಬೆಂಕಿ ಹಚ್ಚಿ ಅಲ್ಲಿಂದ ಪರಾರಿಯಾಗಿದ್ದರು.

    ಬಸ್ ಹಾಳಾದ್ದರಿಂದ ವಾಪಸಾದರು: ತಲೆಮರೆಸಿಕೊಳ್ಳುವ ಸಲುವಾಗಿ ಬೆಂಗಳೂರಿಗೆ ಬಸ್‌ನಲ್ಲಿ ಹೊರಟಿದ್ದ ಸದಾನಂದ ಮತ್ತು ಶಿಲ್ಪಾ ಬಸ್ ಹಾಳಾಗಿದ್ದರಿಂದ ಮತ್ತೆ ಮೂಡುಬಿದಿರೆಗೆ ವಾಪಾಸಾಗಿದ್ದರು. ಅಲ್ಲಿಂದ ಬೆಳಗ್ಗೆ ಬಸ್‌ನಲ್ಲಿ ಕಾರ್ಕಳಕ್ಕೆ ಬರುತ್ತಿದ್ದ ಸಂದರ್ಭ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಆರೋಪಿಗಳನ್ನು ನಾಲ್ಕು ದಿನ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ.

    ಬೈಂದೂರು ಪೊಲೀಸರು ಒಂದೇ ದಿನದಲ್ಲಿ ಪ್ರಕರಣವನ್ನು ಭೇದಿಸಿದ್ದು, ಉಡುಪಿ ಎಸ್‌ಪಿ ವಿಷ್ಣುವರ್ಧನ್ ಮಾರ್ಗದರ್ಶನದಲ್ಲಿ ಎಎಸ್‌ಪಿ ಸಿದ್ದಲಿಂಗಯ್ಯ, ಡಿವೈಎಸ್‌ಪಿ ಶ್ರೀಕಾಂತ್ ಕೆ., ಬೈಂದೂರು ವೃತ್ತ ನಿರೀಕ್ಷಕ ಸಂತೋಷ್ ಕಾಯ್ಕಿಣಿ ನೇತೃತ್ವದಲ್ಲಿ ಬೈಂದೂರು ಪಿಎಸ್‌ಐ ಪವನ್ ನಾಯಕ್ ಗಂಗೊಳ್ಳಿ, ಪಿಎಸ್‌ಐ ವಿನಯ ಕೊರ್ಲಹಳ್ಳಿ, ಕಾನ್‌ಸ್ಟೆಬಲ್‌ಗಳಾದ ನಾಗೇಂದ್ರ, ಮೋಹನ, ಕೃಷ್ಣ, ಶ್ರೀಧರ, ಪ್ರಿನ್ಸ್, ಚಂದ್ರ ಗಂಗೊಳ್ಳಿ, ಚಾಲಕ ಚಂದ್ರಶೇಖರ್, ಸುಜಿತ್, ಶ್ರೀನಿವಾಸ್, ಶಾಂತಾರಾಮ ಶೆಟ್ಟಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

    ಸುಳಿವು ನೀಡಿದ ಖಾಲಿ ಕ್ಯಾನ್: ಆರೋಪಿಗಳು ಮಂಗಳವಾರ ರಾತ್ರಿ 12.30ರ ಸುಮಾರಿಗೆ ಕಾರಿನಲ್ಲಿ ಸಾಸ್ತಾನ ಟೋಲ್ಗೇಟ್‌ನಲ್ಲಿ ಬೈಂದೂರು ಕಡೆಗೆ ತೆರಳಿರುವುದು ಹಾಗೂ ಟೋಲ್‌ಗೇಟ್‌ನಲ್ಲಿ ಮಹಿಳೆಯೊಬ್ಬರು ಕಾರಿನಿಂದ ಇಳಿದು ಟೋಲ್ ನೀಡಿರುವ ದೃಶ್ಯ ಅಲ್ಲಿನ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿತ್ತು. ಹೇನಬೇರು ಬಳಿ ಕಾರಿನ ಒಳಗಡೆ ಹಿಂಬದಿ ಸೀಟ್‌ನಲ್ಲಿ ಸುಟ್ಟು ಕರಕಲಾದ ಸ್ಥಿತಿಯಲ್ಲಿ ಮೃತದೇಹ ಕಂಡು ಬಂದಿದ್ದು, ಹೊರಗಡೆ ಪೆಟ್ರೋಲ್ ತಂದಿದ್ದ ಖಾಲಿ ಕ್ಯಾನ್ ಪತ್ತೆಯಾಗಿತ್ತು. ಹೊರಗಿನಿಂದ ಪೆಟ್ರೋಲ್ ಸುರಿದು ಬೆಂಕಿ ಹಚ್ಚಲಾಗಿದ್ದು, ಕೃತ್ಯದಲ್ಲಿ ಬೇರೆಯವರು ಶಾಮೀಲಾಗಿರುವ ಬಗ್ಗೆ ಪೊಲೀಸರಿಗೆ ಶಂಕೆ ಉಂಟಾಗಿತ್ತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts