More

    ಹುಬ್ಬಳ್ಳಿಯಲ್ಲಿ ಮತ್ತೆ ಹಾಡಹಗಲಲ್ಲಿ ಹರಿದ ನೆತ್ತರು

    ಹುಬ್ಬಳ್ಳಿ: ವಾಣಿಜ್ಯ ನಗರಿ ಹುಬ್ಬಳ್ಳಿಯ ಜನನಿಬಿಡ ಪ್ರದೇಶದಲ್ಲಿ ಆರ್​ಟಿಐ ಕಾರ್ಯಕರ್ತನೊಬ್ಬನನ್ನು ದುಷ್ಕರ್ವಿುಗಳು ಬುಧವಾರ ಹಾಡಹಗಲಲ್ಲಿ ಚಾಕುವಿನಿಂದ ಇರಿದು ಬರ್ಬರವಾಗಿ ಕೊಲೆಗೈದು ಪರಾರಿಯಾಗಿದ್ದು, ಘಟನೆಯಿಂದ ಸಾರ್ವಜನಿಕರು ಹೌಹಾರಿದ್ದಾರೆ.

    ಇಲ್ಲಿಯ ಕಮರಿಪೇಟೆ ನಿವಾಸಿ, ವೃತ್ತಿಯಲ್ಲಿ ದೊಡ್ಡ ರೈತನಾಗಿದ್ದು ಪ್ರವೃತ್ತಿಯಿಂದ ಆರ್​ಟಿಐ ಕಾರ್ಯಕರ್ತ ಹಾಗೂ ಭ್ರಷ್ಟಾಚಾರದ ವಿರುದ್ಧ ಏಕಾಂಗಿ ಹೋರಾಟ ನಡೆಸುತ್ತಿದ್ದ ರಮೇಶ ಮಾಧುಸಾ ಭಾಂಡಗೆ (56) ಹತ್ಯೆಯಾದ ವ್ಯಕ್ತಿ.

    ಬೆಳಗ್ಗೆ ಸಲೂನ್​ಗೆ ಹೋಗಿ ವಾಪಸ್ ಮನೆಗೆ ನಡೆದುಕೊಂಡು ಹೊರಟಿದ್ದ ಅವರ ಮೇಲೆ ಬಾಬಾಸಾನ ಗಲ್ಲಿಯಲ್ಲಿ ದುಷ್ಕರ್ವಿುಗಳು ಎರಗಿ ಚಾಕುವಿನಿಂದ ಮನಬಂದಂತೆ ಇರಿದರು. ಅನಿರೀಕ್ಷಿತ ದಾಳಿಯಿಂದ ಒಮ್ಮೆ ತಪ್ಪಿಸಿಕೊಂಡು ಓಡಿಹೋದ ರಮೇಶ ಭಾಂಡಗೆ, ಒಂದು ಹಂತದಲ್ಲಿ ತಿರುಗಿ ನಿಂತಾಗ ದುಷ್ಕರ್ವಿುಗಳು ಪುನಃ ದಾಳಿ ಮಾಡಿ ಮತ್ತೆ ಚಾಕುವಿನಿಂದ ಇರಿದು ಪರಾರಿಯಾಗಿದ್ದಾರೆ ಎನ್ನಲಾಗಿದೆ.

    ಕುತ್ತಿಗೆಯನ್ನು ಸೀಳುವ ರೀತಿಯಲ್ಲಿ ಚಾಕು ಹಾಕಿದ್ದು ಸೇರಿದಂತೆ ಮೈ ಕೈಗೆ ತೀವ್ರ ಗಾಯವಾಗಿ ರಮೇಶ ಭಾಂಡಗೆ ಕುಸಿದುಬಿದ್ದರು. ಅವರನ್ನು ಕೂಡಲೇ ಕಿಮ್ಸ್​ಗೆ ಕರೆದೊಯ್ಯಲಾಯಿತು. ಆದರೆ ಅತಿಯಾದ ರಕ್ತಸ್ರಾವ ಹಾಗೂ ಆಘಾತದಿಂದ ಅವರು ಮಾರ್ಗಮಧ್ಯದಲ್ಲೇ ಮೃತಪಟ್ಟರು.

    ಶಹರ ಠಾಣೆ ಪೊಲೀಸರು ಸ್ಥಳ ಪರಿಶೀಲನೆ ನಡೆಸಿದ್ದು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಪೊಲೀಸರು ಕೆಲವರನ್ನು ಕರೆಸಿ ವಿಚಾರಣೆ ನಡೆಸಿದ್ದು, ತನಿಖೆ ಮುಂದುವರಿದಿದೆ.

    ಹುಬ್ಬಳ್ಳಿಯಲ್ಲಿ ಕೆಲವು ತಿಂಗಳ ಹಿಂದೆ ಧಾರವಾಡದ ರೌಡಿಶೀಟರ್ ಫ್ರೂಟ್ ಇರ್ಫಾನ್​ನನ್ನು ಆತನ ಮಗನ ಮದುವೆಯ ಆರತಕ್ಷತೆ ಹಮ್ಮಿಕೊಂಡಿದ್ದ ಸಭಾಭವನದ ಹೊರಭಾಗದಲ್ಲಿ ಹಗಲಲ್ಲೇ ಗುಂಡಿಟ್ಟು ಕೊಲೆ ಮಾಡಲಾಗಿತ್ತು. ಇತ್ತೀಚೆಗೆ ಚಾಕು ಇರಿತದ ಕೆಲವು ಪ್ರಕರಣಗಳೂ ನಡೆದಿದ್ದು, ಸಾರ್ವಜನಿಕರಲ್ಲಿ ಉಂಟಾದ ಆತಂಕ ಇನ್ನೂ ಇರುವಾಗಲೇ ಮತ್ತೊಂದು ಬರ್ಬರ ಹತ್ಯೆ ನಡೆದಿದೆ.

    ಬೆದರಿಕೆ ಹಾಕಿದ್ದರಂತೆ: ಗಬ್ಬೂರಿನ ಪಾಲಿಕೆ ಜಮೀನು ಅತಿಕ್ರಮಿಸಿಕೊಂಡವರು ಸೇರಿ ಕೆಲವರು ಇತ್ತೀಚೆಗೆ ರಮೇಶ ಭಾಂಡಗೆಯವರಿಗೆ ಧಮಕಿ ಹಾಕಿದ್ದರು. ತಾನು ಇಂಥ ಗೊಡ್ಡು ಬೆದರಿಕೆಗೆ ಮಣಿಯುವುದಿಲ್ಲ, ಇನ್ನೂ ಮುಂದುವರಿದರೆ ಸುಮ್ಮನಿರುವುದಿಲ್ಲ ಎಂದು ಭಾಂಡಗೆ ತಿರುಗೇಟು ನೀಡಿದ್ದರು ಎನ್ನಲಾಗಿದೆ. ಗಬ್ಬೂರಿನ ಜಮೀನು ವಿಷಯ ಕೈಬಿಡುವಂತೆ ಕೆಲ ರಾಜಕೀಯ ಮುಖಂಡರು ನೀಡಿದ ಸಲಹೆಗೂ ಅವರು ಸೊಪ್ಪು ಹಾಕಿರಲಿಲ್ಲ ಎನ್ನಲಾಗಿದೆ. ಹೀಗಾಗಿ, ಭೂಗಳ್ಳರು ದ್ವೇಷದಿಂದ ಕೃತ್ಯ ಎಸಗಿರುವ ಸಾಧ್ಯತೆಯೂ ಇದೆ.

    ಸಿಸಿಟಿವಿಯಲ್ಲಿ ಸೆರೆ: ಘಟನಾ ಸ್ಥಳದಲ್ಲಿಯ ಸಿಸಿಟಿವಿ ದೃಶ್ಯಾವಳಿಯೊಂದನ್ನು ಪೊಲೀಸರು ಸಂಗ್ರಹಿಸಿದ್ದಾರೆ. ಅದರಲ್ಲಿ ಘಟನೆಯ ಪೂರ್ತಿ ಚಿತ್ರಣ ಸೆರೆಯಾಗಿಲ್ಲವಾದರೂ ರಮೇಶ ಭಾಂಡಗೆ ತಪ್ಪಿಸಿಕೊಳ್ಳಲು ಓಡಿ ಹೋಗುವುದು, ತಿರುಗಿ ದಾಳಿಕೋರರನ್ನೇ ಬೆದರಿಸಲು ಓಡಿ ಬಂದಿದ್ದು, ಮತ್ತೆ ದುಷ್ಕರ್ವಿುಯೊಬ್ಬ ಅಟ್ಟಿಸಿಕೊಂಡು ಹೋಗಿರುವ ದೃಶ್ಯ ಸೆರೆಯಾಗಿದೆ. ಬಾಬಾಸಾನ ಗಲ್ಲಿಯ ಇತರ ಸಿಸಿಟಿವಿ ಫೂಟೇಜ್​ಗಳನ್ನೂ ಪೊಲೀಸರು ಸಂಗ್ರಹಿಸುತ್ತಿದ್ದಾರೆ.

    ಭೂವಿವಾದ ಕಾರಣ?: ಹಲವು ವರ್ಷಗಳ ಹಿಂದೆ ರಮೇಶ ಭಾಂಡಗೆ ವಿರುದ್ಧ ರೌಡಿಶೀಟ್ ಸಹ ತೆರೆಯಲಾಗಿತ್ತು. ಬಹಳ ಧಾಡಸಿ ವ್ಯಕ್ತಿತ್ವದ ರಮೇಶ, ತಮ್ಮ ಸಮಾಜ ಮತ್ತು ಸ್ನೇಹಿತರ ಮಧ್ಯೆ ನೇರ ಮಾತಿಗೂ ಹೆಸರಾಗಿದ್ದರು. ಹುಬ್ಬಳ್ಳಿ ಶಹರ ಮತ್ತು ಗ್ರಾಮಾಂತರದಲ್ಲಿ ಜಮೀನು ಹೊಂದಿದ್ದು, ಹಣಕಾಸಿನ ಅನುಕೂಲತೆ ಮಾಡಿಕೊಂಡಿದ್ದರು. ಯಾರೇ ಬಡ ವಿದ್ಯಾರ್ಥಿಗಳು ಶುಲ್ಕ ಕಟ್ಟಲು ಹಣ ಬೇಕು ಎಂದರೆ ಉದಾರವಾಗಿ ನೆರವಾಗುತ್ತಿದ್ದರು. ಹಲವು ಬಡವರಿಗೂ ದಾನ ನೀಡುತ್ತಿದ್ದರು. ವೈಯಕ್ತಿಕ ಮತ್ತು ಸಾರ್ವಜನಿಕ ಹಿತಾಸಕ್ತಿಗಳಿಗೆ ಸಂಬಂಧಿಸಿ ಯಾರ ವಿರುದ್ಧವೂ ತಿರುಗಿಬೀಳಲು ರಮೇಶ ಭಾಂಡಗೆ ಹಿಂಜರಿಯುತ್ತಿರಲಿಲ್ಲ. ಇದೇ ಕಾರಣಕ್ಕಾಗಿ ಕೆಲವು ವಿವಾದಗಳನ್ನು ಮೈಮೇಲೆ ಎಳೆದುಕೊಂಡಿದ್ದರು. ಆರ್​ಟಿಐ ಅಡಿ ಅವರು ಮಾಹಿತಿ ಸಂಗ್ರಹಿಸಿ ನಗರದ ಹೊರ ವಲಯದ ಗಬ್ಬೂರು ಬಳಿ ಕೆಲವರು ಮಹಾನಗರ ಪಾಲಿಕೆಗೆ ಸೇರಿದ ಕೋಟ್ಯಂತರ ರೂ.ಗಳ ಜಮೀನು ನುಂಗಿಹಾಕಿದ್ದರ ವಿರುದ್ಧ ಹೋರಾಟ ನಡೆಸಿದ್ದರು. ಪಾಲಿಕೆ ಅಧಿಕಾರಿಗಳ ಮೇಲೆ ಒತ್ತಡ ಹಾಕಿದ್ದರಿಂದ ಅಕ್ರಮ ಕುಳಗಳು ಕಂಗೆಟ್ಟಿದ್ದವು ಎನ್ನಲಾಗಿದೆ. ಅದೇ ಖದೀಮರು ಕೊಲೆ ಸಂಚು ನಡೆಸಿದರೆ ಎಂಬ ಪ್ರಶ್ನೆಯನ್ನೂ ಇಟ್ಟುಕೊಂಡು ಪೊಲೀಸರು ತನಿಖೆ ನಡಿಸಿರುವುದಾಗಿ ತಿಳಿದುಬಂದಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts