More

    ಬೆಳ್ಳಂಬೆಳಗ್ಗೆ ಬೈಕ್ ಸವಾರರ ಜೇಬಿಗೆ ಕತ್ತರಿ!

    ಚಿಕ್ಕಮಗಳೂರು: ಹಾಲು ಮಾರುವವರು, ಮಕ್ಕಳನ್ನು ಶಾಲೆಗೆ ಬಿಡಲು ಧಾವಂತದಲ್ಲಿದ್ದ ಪಾಲಕರು, ಪಡ್ಡೆಹುಡುಗರು, ವ್ಯಾಪಾರಸ್ಥರು ಎಲ್ಲರಿಗೂ ಗುರುವಾರ ಬೆಳ್ಳಂಬೆಳಗ್ಗೆ ಜೇಬಿಗೆ ಕತ್ತರಿ ಬಿದ್ದಿದೆ.

    ಹೌದು, ಇವರಲ್ಲಿ ಕೆಲವರು ಮಾಸ್ಕ್ ಧರಿಸದೆ ಹೊರಬಂದಿದ್ದರೆ, ಇನ್ನೂ ಕೆಲವರು ಬಾಯಿಯಿಂದ ಕೆಳಭಾಗಕ್ಕೆ ಮಾಸ್ಕ್ ಧರಿಸಿದ್ದ ಬೈಕ್ ಸವಾರರನ್ನು ಅಡ್ಡಗಟ್ಟಿ ನಗರಸಭೆ ಸಿಬ್ಬಂದಿ ದಂಡ ವಿಧಿಸಿದ್ದಾರೆ.

    ಕರೊನಾ ಸೋಂಕು ಹರಡುವ ಭೀತಿ ಹಿನ್ನೆಲೆ ಜಿಲ್ಲಾಡಳಿತ ಹಲವು ಕ್ರಮ ಕೈಗೊಂಡಿದೆ. ನಗರಸಭೆ ಸಿಬ್ಬಂದಿ ನಗರದ ಎಂ.ಜಿ.ರಸ್ತೆ, ಕೆಎಸ್​ಆರ್​ಟಿಸಿ ಬಸ್ ನಿಲ್ದಾಣ, ಬಸವನಹಳ್ಳಿ ಕೆರೆ ಏರಿ, ರಾಮನಹಳ್ಳಿ ಜಾಲಿ ಫ್ರೆಂಡ್ಸ್ ವೃತ್ತ , ಬೇಲೂರು ರಸ್ತೆ ಸೇರಿ ನಾಲ್ಕು ದಿಕ್ಕುಗಳಲ್ಲೂ ಬೆಳಗ್ಗೆ 6ರಿಂದಲೇ ಕಾರ್ಯಾಚರಣೆಗೆ ಮುಂದಾಗಿದ್ದರು.

    ಬೆಳಗ್ಗೆ ಮಕ್ಕಳನ್ನು ಶಾಲೆಗೆ ಬಿಡುವ ಆತುರದಲ್ಲಿ ಬಹಳಷ್ಟು ಪಾಲಕರು ಎಂಜಿ ರಸ್ತೆಯಲ್ಲಿ ಮಾಸ್ಕ್ ಧರಿಸದೆ ದ್ವಿಚಕ್ರ ಹಾಗೂ ನಾಲ್ಕುಚಕ್ರ ವಾಹನಗಳಲ್ಲಿ ಸಾಗುವಾಗ ಅಡ್ಡಗಟ್ಟಿದ ಸಿಬ್ಬಂದಿ 100 ರೂ. ದಂಡ ಹಾಕಿದರು. ಕೆಲವು ಯುವಕರಂತೂ ಸರಿಯಾಗಿ ಮಾಸ್ಕ್ ಧರಿಸದೆ ನಿರ್ಲಕ್ಷ್ಯಹಿಸಿದ ಕಾರಣ ದಂಡ ತೆರಬೇಕಾಯಿತು. ಈ ನಡುವೆ ಕೆಲವರು ವಾಗ್ವಾದಕ್ಕಿಳಿದರೂ ನಗರಸಭೆ ಸಿಬ್ಬಂದಿ ಮಾತ್ರ ಕ್ಯಾರೆ ಎನ್ನದೆ ನಿರ್ದಾಕ್ಷಿಣ್ಯವಾಗಿ ದಂಡ ವಸೂಲಿ ಮಾಡಿ ರಶೀದಿ ನೀಡಿದರು. ನಗರದ ಅಂಗಡಿಗಳ ಮುಂದೆ ಗುಂಪುಕಟ್ಟಿಕೊಂಡು ವ್ಯಾಪಾರ ಮಾಡುತ್ತಿದ್ದ ಮಾಲೀಕರು, ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧರಿಸದೆ ಹರಟೆ ಹೊಡೆಯುತ್ತಿದ್ದವರೂ ದಂಡ ಕಟ್ಟಿದರು.

    ನಗರಸಭೆ ಆರೋಗ್ಯ ನಿರೀಕ್ಷಕ ಶಶಿರಾಜ ಅರಸ್ ಮಾತನಾಡಿ, ಕರೊನಾ ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿ ಮತ್ತು ಪೌರಾಯುಕ್ತರ ಸೂಚನೆಯಂತೆ ನಗರಸಭೆಯಿಂದ ಹಲವು ಕ್ರಮ ಕೈಗೊಳ್ಳಲಾಗಿದೆ. ಸಾರ್ವಜನಿಕ ಸ್ಥಳಗಳಲ್ಲಿ ಅಂತರ ಕಾಯ್ದುಕೊಳ್ಳಲು, ಮಾಸ್ಕ್ ಧರಿಸುವಂತೆ ನಿರಂತರವಾಗಿ ಜಾಗೃತಿ ಮೂಡಿಸಿದರೂ ನಿರ್ಲಕ್ಷ್ಯ ತೋರುತ್ತಿದ್ದಾರೆ. ಕರೊನಾ ರೂಪಾಂತರವೂ ದಾಳಿ ಮಾಡುತ್ತಿದೆ. ಈ ಸಂದರ್ಭ ಎಚ್ಚರಿಕೆ ಅಗತ್ಯ. ಜನರ ಜೀವ ರಕ್ಷಣೆಗೆ ಜವಾಬ್ದಾರಿ ಮುಖ್ಯ. ಹಾಗಾಗಿ 300ಕ್ಕೂ ಹೆಚ್ಚು ವಾಹನ ಸವಾರರಿಗೆ ದಂಡ ವಿಧಿಸಿ ಎಚ್ಚರಿಕೆ ನೀಡಲಾಗಿದೆ ಎಂದರು.

    ಐದು ತಂಡ ರಚನೆ: ಮಾಸ್ಕ್ ಧರಿಸದೆ ನಗರದಲ್ಲಿ ವಾಹನ ಚಲಾಯಿಸುವುದು, ಸಾರ್ವಜನಿಕ ಸ್ಥಳಗಳಲ್ಲಿ ಗುಂಪು ಗೂಡುತ್ತಿದ್ದವರಿಗೆ ದಂಡ ವಿಧಿಸಲು ನಗರಸಭೆಯಿಂದ ಪ್ರತ್ಯೇಕವಾಗಿ 5 ತಂಡ ರಚಿಸಲಾಗಿದೆ. 4500 ರೂ.ಗೂ ಹೆಚ್ಚು ದಂಡ ಸಂಗ್ರಹಿಸಲಾಗಿದೆ. ನಗರದ ನಾಲ್ಕು ದಿಕ್ಕುಗಳಲ್ಲೂ ಬೆಳಗ್ಗೆ 6ರಿಂದ ತಂಡ ಕಾರ್ಯಾಚರಣೆ ನಡೆಸುತ್ತದೆ. ಗುಂಪುಗೂಡಿ ವ್ಯಾಪಾರ ಮಾಡುತ್ತಿದ್ದ 20ಕ್ಕೂ ಹೆಚ್ಚು ಅಂಗಡಿಗಳಿಗೆ ದಂಡ ವಿಧಿಸಲಾಗಿದೆ ಎಂದರು. ನಗರಸಭೆ ಅಧಿಕಾರಿ ಶ್ರೀನಿವಾಸ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts