More

    ಗ್ರೀನ್ ಸಿಗ್ನಲ್​ಗೆ ಕಾಯುತ್ತಿರುವ ಪಾಲಿಕೆ

    ಹುಬ್ಬಳ್ಳಿ: ಇಂಡಿಯನ್ ರೋಡ್ ಕಾಂಗ್ರೆಸ್ (ಐಆರ್​ಸಿ) ಸೂಚಿಸಿರುವ ಮಾನದಂಡದಂತೆ ಅವಳಿ ನಗರದ ರಸ್ತೆಗಳಲ್ಲಿ ವೈಜ್ಞಾನಿಕ ಹಂಪ್ಸ್ ನಿರ್ವಣಕ್ಕೆ ಹುಬ್ಬಳ್ಳಿ – ಧಾರವಾಡ ಮಹಾನಗರ ಪಾಲಿಕೆ ಕಳೆದ ಒಂದು ವರ್ಷದಿಂದ ಕಾಯುತ್ತಿದ್ದರೂ ಹು-ಧಾ ಪೊಲೀಸ್ ಕಮಿಷನರೇಟ್ ಇನ್ನೂ ಗ್ರೀನ್ ಸಿಗ್ನಲ್ ತೋರಿಸಿಲ್ಲ.

    ಹಂಪ್ಸ್ ನಿರ್ವಣಕ್ಕೆ ಟೆಂಡರ್ ಕರೆದು ಗುತ್ತಿಗೆದಾರರನ್ನು ಅಂತಿಮಗೊಳಿಸಿರುವ ಪಾಲಿಕೆಯು ಹಂಪ್ಸ್ ನಿರ್ವಿುಸಬೇಕಾದ ಸ್ಥಳ ಸೂಚಿಸುವಂತೆ ಪೊಲೀಸ್ ಕಮಿಷನರೇಟ್​ನ ಸಂಚಾರ ವಿಭಾಗದ ಎಲ್ಲ ಸಹಾಯಕ ಪೊಲೀಸ್ ಆಯುಕ್ತ (ಎಸಿಪಿ)ರಿಗೆ ಕಳೆದ ಒಂದು ವರ್ಷ ಅವಧಿಯಲ್ಲಿ ಎರಡು ಬಾರಿ ಪತ್ರ ಬರೆದಿದೆ. ಈವರೆಗೂ ಸ್ಪಂದಿಸದಿರುವ ಪೊಲೀಸ್ ಕಮಿಷನರೇಟ್​ನ ಮೌನ ಅಚ್ಚರಿ ಮೂಡಿಸುತ್ತಿದೆ.

    ಅವಳಿ ನಗರದಲ್ಲಿ ಅಪಘಾತ ವಲಯಗಳು ಎಲ್ಲಿವೆ ಎಂಬುದು ಪೊಲೀಸ್ ಕಮಿಷನರೇಟ್​ಗೆ ಗೊತ್ತಿರುವಂಥದ್ದು. ಇದಕ್ಕೆ ಅನುಗುಣವಾಗಿ ಹಂಪ್ಸ್ ನಿರ್ವಣಕ್ಕೆ ನಿರ್ದಿಷ್ಟ ಸ್ಥಳ ಗುರುತಿಸಿಕೊಡಬೇಕಿತ್ತು. ಕಂಡ ಕಂಡಲ್ಲಿ ಹಂಪ್ಸ್ ನಿರ್ಮಾಣ ಮಾಡಿ ಮುಂದೆ ಸುಗಮ ಸಂಚಾರಕ್ಕೆ ತೊಂದರೆಯಾದರೆ ಅಥವಾ ಹೆಚ್ಚಿನ ಅಪಘಾತಗಳಿಗೆ ಕಾರಣವಾದರೆ ತಮ್ಮನ್ನೇ ಹೊಣೆಗಾರರನ್ನಾಗಿ ಮಾಡಲಾಗುತ್ತದೆ ಎಂಬುದು ಪಾಲಿಕೆ ಅಧಿಕಾರಿಗಳ ಅಳಲು.

    96.48 ಲಕ್ಷ ರೂ. ವೆಚ್ಚ: ಪಾಲಿಕೆಯು ಅವಳಿ ನಗರದಲ್ಲಿ 96.48 ಲಕ್ಷ ರೂ. ವೆಚ್ಚದಲ್ಲಿ 137 ವೈಜ್ಞಾನಿಕ ಹಂಪ್ಸ್​ಗಳನ್ನು ನಿರ್ವಿುಸುವ ಗುರಿ ಇಟ್ಟುಕೊಂಡಿದೆ. ಪೊಲೀಸ್ ಅಧಿಕಾರಿಗಳ ನಿರ್ಧಾರ ಮೇರೆಗೆ ಈ ಸಂಖ್ಯೆಯಲ್ಲಿ ಹೆಚ್ಚು ಕಡಿಮೆ ಆಗಬಹುದು. ಪಾಲಿಕೆ ವ್ಯಾಪ್ತಿಯ 3 ವಿಭಾಗಗಳಿಗೆ (ಹುಬ್ಬಳ್ಳಿ ಉತ್ತರ, ಹುಬ್ಬಳ್ಳಿ ದಕ್ಷಿಣ ಹಾಗೂ ಧಾರವಾಡ) ಪ್ರತ್ಯೇಕವಾಗಿ ಟೆಂಡರ್ ಕರೆಯಲಾಗಿತ್ತು. ಹುಬ್ಬಳ್ಳಿ ಉತ್ತರ ವಿಭಾಗಕ್ಕೆ ಜೆ.ಬಿ. ವಾಲಿ, ಹುಬ್ಬಳ್ಳಿ ದಕ್ಷಿಣ ವಿಭಾಗಕ್ಕೆ ರವಿ ಜಿ. ತಾಳಿಕೋಟಿ ಹಾಗೂ ಧಾರವಾಡ ವಿಭಾಗಕ್ಕೆ ವಿ.ಎಚ್. ಜಾಧವ ಅವರಿಗೆ ಕಾಮಗಾರಿ ಗುತ್ತಿಗೆ ಕಾರ್ಯಾದೇಶ ನೀಡಲಾಗಿದೆ.

    ಕೋರ್ಟ್ ಆದೇಶದ ನಂತರ ಟೆಂಡರ್

    ‘ಅವಳಿ ನಗರದಲ್ಲಿನ ರಸ್ತೆ ಉಬ್ಬುಗಳು ಅವೈಜ್ಞಾನಿಕವಾಗಿದ್ದು ವಾಹನಗಳಿಗೆ ಹಾಗೂ ಸವಾರರಿಗೆ ತೊಂದರೆದಾಯಕವಾಗಿದೆ. ವೈಜ್ಞಾನಿಕವಾಗಿ ಹಂಪ್ಸ್ ನಿರ್ವಿುಸುವಂತೆ ಪಾಲಿಕೆಗೆ ನಿರ್ದೇಶನ ನೀಡಬೇಕು’ ಎಂದು 2016ರಲ್ಲಿ ಸ್ಥಳೀಯರಾದ ಡಾ. ಕೆ.ಎಚ್. ಜಿತೂರಿ ಎಂಬುವವರು ಹುಬ್ಬಳ್ಳಿ 3ನೇ ಹೆಚ್ಚುವರಿ ಸಿವಿಲ್ ನ್ಯಾಯಾಲಯದಲ್ಲಿ ದಾವೆ ಹೂಡಿದ್ದರು. ನ್ಯಾಯಾಲಯವು 2017ರಲ್ಲಿ ಅವಳಿ ನಗರದಲ್ಲಿನ ಅವೈಜ್ಞಾನಿಕ ಹಂಪ್ಸ್ ತೆರೆವುಗೊಳಿಸುವಂತೆ ಹಾಗೂ ವೈಜ್ಞಾನಿಕವಾಗಿ ಹಂಪ್ಸ್ ಹಾಕುವಂತೆ ತೀರ್ಪು ನೀಡಿತ್ತು. ತೀರ್ಪಿನ ಬಳಿಕ ಹು-ಧಾ ಮಹಾನಗರ ಪಾಲಿಕೆ ಜೆಸಿಬಿ ಬಳಸಿ 192 ಅವೈಜ್ಞಾನಿಕ ಹಂಪ್ಸ್ ಕಿತ್ತು ಹಾಕಿತ್ತು. ಬಳಿಕ 2019ರಲ್ಲಿ ವೈಜ್ಞಾನಿಕ ಹಂಪ್ಸ್ ನಿರ್ವಣಕ್ಕೆ ಟೆಂಡರ್ ಕರೆದಿತ್ತು.

    ಹೀಗಿರಬೇಕು ವೈಜ್ಞಾನಿಕ ಹಂಪ್ಸ್

    ವೈಜ್ಞಾನಿಕ ಹಂಪ್ಸ್​ಗಳು ಹೀಗೆ ಇರಬೇಕು ಎಂಬುದಕ್ಕೆ ಇಂಡಿಯನ್ ರೋಡ್ ಕಾಂಗ್ರೆಸ್ ನಿರ್ದಿಷ್ಟ ಮಾರ್ಗಸೂಚಿ ನೀಡಿದೆ. ಅದರಂತೆ ಹು-ಧಾ ದಲ್ಲಿ ಹಂಪ್ಸ್ ನಿರ್ವಣವಾಗಲಿದೆ. ಹಂಪ್ಸ್​ನ ಅಗಲ ರಸೆ್ತಯ ಅಗಲದಷ್ಟು ಇರಬೇಕು. ಮಧ್ಯದಲ್ಲಿ 10 ಸೇಂಟಿ ಮೀಟರ್ ಎತ್ತರವಾಗಿ ಎಡ ಬಲಕ್ಕೆ ಇಳಿಜಾರಾಗಿ ತಲಾ 1.5 ಮೀಟರ್​ವರೆಗೆ ಹಂಪ್ಸ್ ವಿಸ್ತರಿಸಿಕೊಳ್ಳಬೇಕು. ಇದರಿಂದ ವಾಹನಗಳ ಇಂಜಿನ್, ಬಿಡಿ ಭಾಗಗಳಿಗೆ ಧಕ್ಕೆ ಆಗಲಾರದು. ವಾಹನಗಳ ವೇಗವು ನಿಯಂತ್ರಣಕ್ಕೆ ಬರಲಿದೆ ಎಂದು ಹೇಳಲಾಗಿದೆ.

    ಹಲವು ಸಾವು- ನೋವು

    ಅವಳಿ ನಗರದಲ್ಲಿನ ಅವೈಜ್ಞಾನಿಕ ಹಂಪ್ಸ್​ನಿಂದಾಗಿ ಈ ಹಿಂದೆ ಹಲವಾರು ಸಾವು- ನೋವುಗಳು ಸಂಭವಿಸಿವೆ. ವಿದ್ಯಾನಗರದ ಹುಬ್ಬಳ್ಳಿ- ಧಾರವಾರ ರಸ್ತೆಯಲ್ಲೇ ಎರಡ್ಮೂರು ಕಡೆ ಬೃಹದಾಕಾರದ ಹಂಪ್ಸ್​ಗಳಿದ್ದವು (ಈಚಿನ ವರ್ಷಗಳಲ್ಲಿ ಇವುಗಳನ್ನು ತೆಗೆದುಹಾಕಲಾಗಿದೆ). ಇವುಗಳು ಸವಾರರಿಗೆ ತಕ್ಷಣವೇ ಕಾಣಿಸುತ್ತಿರಲಿಲ್ಲ. ಈ ಹಂಪ್ಸ್​ನಿಂದಾಗಿ ದ್ವಿಚಕ್ರ ವಾಹನಗಳು ಪುಟಿದುಬಿದ್ದು ಅಪಘಾತ ಸಂಭವಿಸಿವೆ. ಈ ವೇಳೆ ಅನೇಕ ಸಾವು- ನೋವು ಉಂಟಾಗಿವೆ.

    ಹು-ಧಾ ಅವಳಿ ನಗರದಲ್ಲಿ ವೈಜ್ಞಾನಿಕ ಹಂಪ್ಸ್ ನಿರ್ವಣಕ್ಕೆ ಸ್ಥಳ ಗುರುತಿಸಿಕೊಡುವಂತೆ ಪೊಲೀಸ್ ಕಮಿಷನರೇಟ್​ನ ಸಂಚಾರ ವಿಭಾಗದ ಎಲ್ಲ ಸಹಾಯಕ ಪೊಲೀಸ್ ಆಯುಕ್ತರಿಗೆ ಪತ್ರ ಬರೆದು ಕೋರಿದ್ದೇವೆ. ಸದ್ಯದಲ್ಲೇ ಮುಖತಃ ಭೇಟಿಯಾಗಿ ವಾರದಲ್ಲಿ ಕಾಮಗಾರಿ ಆರಂಭಿಸಲಾಗುವುದು.
    | ಇ. ತಿಮ್ಮಪ್ಪ, ಅಧೀಕ್ಷಕ ಇಂಜಿನಿಯರ್, ಪಾಲಿಕೆ

    ವೈಜ್ಞಾನಿಕ ಹಂಪ್ಸ್ ನಿರ್ವಣಕ್ಕೆ ಸಂಬಂಧಿಸಿದಂತೆ ಪಾಲಿಕೆ ಅಧಿಕಾರಿಗಳು, ಇಂಜಿನಿಯರ್​ಗಳು ತಮ್ಮನ್ನು ಸಂರ್ಪಸಿದಾಗ ಸಹಕಾರ ನೀಡುವಂತೆ ಆಯಾ ಠಾಣೆಯ ಪೊಲೀಸ್ ಇನ್​ಸ್ಪೆಕ್ಟರ್​ಗಳಿಗೆ ಸೂಚಿಸಲಾಗಿದೆ.
    | ಆರ್.ಬಿ. ಬಸರಗಿ, ಡಿಸಿಪಿ ಹು-ಧಾ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts