More

    ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷರಾಯ್ಕೆ ಇಂದು

    ಹಾವೇರಿ: ಅತಂತ್ರ ಫಲಿತಾಂಶ ಬಂದಿರುವ ಹಾವೇರಿ ನಗರಸಭೆಯಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ಅಧಿಕಾರದ ಗದ್ದುಗೆಗೇರಲು ಜಿದ್ದಾಜಿದ್ದಿ ಪೈಪೋಟಿಯ ಬೆನ್ನಲ್ಲೇ ಹೈಡ್ರಾಮಾ ನಡೆದಿದ್ದು, ಕೈ ಪಾಳಯದ ಮೂವರು ಸದಸ್ಯರ ಮೇಲೆ ಜಾತಿ ನಿಂದನೆ ಹಾಗೂ ಕೊಲೆ ಯತ್ನದ ದೂರು ದಾಖಲಾಗಿದೆ.

    ‘ಇಲ್ಲಿನ ನಾಗೇಂದ್ರನಮಟ್ಟಿ 3ನೇ ವಾರ್ಡ್​ನ ಶಾಂತಮ್ಮ ಸುಭಾಸ ಡಂಬರಳ್ಳಿ (58) ಎಂಬುವರ ತಾಯಿಯ ಹೆಸರಿನಲ್ಲಿ ನಾಗೇಂದ್ರನಮಟ್ಟಿಯ ರಿಸನಂ 268/1, 268/2, 269ನ ಪೈಕಿ ಪ್ಲಾಟ್ ನಂ: 84 ಹಾವೇರಿ ಪುರಸಭೆಯಿಂದ ಮಂಜೂರಾಗಿತ್ತು. ಅದರಲ್ಲಿ ನಾನು, ನನ್ನ ಅಕ್ಕ ಹಾಗೂ ಅವಳ ಮಗ ವಾಸವಾಗಿದ್ದೇವು. ಅ. 28ರಂದು ಸಂಜೆ ಹಜರತಲಿ ಹುಳ್ಯಾಳ, ದಿಲಶಾದಬಿ ಹುಳ್ಯಾಳ, ಮರ್ದಾಸಾಬ ಹುಳ್ಯಾಳ ಹಾಗೂ ನಗರಸಭೆ ಕಾಂಗ್ರೆಸ್ ಸದಸ್ಯರಾದ ಐ.ಯು. ಪಠಾಣ, ಮಂಜುನಾಥ ಬಿಷ್ಟಣ್ಣನವರ, ಪೀರಸಾಬ ಚೋಪದಾರ ಹಾಗೂ ಇನ್ನೂ 8ರಿಂದ 10 ಜನರು ಗುಂಪು ಕಟ್ಟಿಕೊಂಡು ಬಂದು ಮನೆಯೊಳಗೆ ನುಗ್ಗಿ ಈ ಮನೆ ನಮ್ಮದು ಎಂದು ಅವಾಚ್ಯವಾಗಿ ಬೈದಾಡಿದ್ದಾರೆ. ಜಾತಿ ನಿಂದನೆ ಮಾಡಿ ಕೊಲೆಗೆ ಯತ್ನಿಸಿ, ಜೀವ ಬೆದರಿಕೆ ಹಾಕಿದ್ದಾರೆ’ ಎಂದು ಶಾಂತಮ್ಮ ಡಂಬರಳ್ಳಿ ಅವರು ಅ. 29ರಂದು ಹಾವೇರಿ ಶಹರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

    ಮುಖಂಡರೊಂದಿಗೆ ಬಿರುಸಿನ ಚರ್ಚೆ: ಚುನಾವಣೆಗೆ ಇನ್ನೊಂದು ದಿನ ಬಾಕಿಯಿರುವ ಸಮಯದಲ್ಲಿ ಮೂವರು ಸದಸ್ಯರ ಮೇಲೆ ದಾಖಲಾಗಿರುವ ದೂರಿನ ಕುರಿತು ಕಾಂಗ್ರೆಸ್ ಮುಖಂಡರು ವಿಧಾನಸಭೆ ಮಾಜಿ ಅಧ್ಯಕ್ಷ ಕೆ.ಬಿ. ಕೋಳಿವಾಡರ ಮನೆಯಲ್ಲಿ ಶುಕ್ರವಾರ ಮಧ್ಯಾಹ್ನ ಸಭೆ ಸೇರಿ ಮುಂದಿನ ಕಾನೂನು ತೊಡಕುಗಳು ಹಾಗೂ ತಾವು ಕೈಗೊಳ್ಳಬೇಕಿರುವ ನಡೆಯ ಕುರಿತು ಗಂಭೀರ ಚರ್ಚೆ ನಡೆಸಿದ್ದಾರೆ. ಅಲ್ಲದೆ, ಕಾಂಗ್ರೆಸ್ ಸದಸ್ಯರ ಮೇಲೆ ದಾಖಲಾಗಿರುವ ದೂರಿನ ಮಾದರಿಯಲ್ಲಿಯೇ ಬಿಜೆಪಿ ಸದಸ್ಯರ ಮೇಲೂ ದೂರು ನೀಡುವ ಕುರಿತು ಚಿಂತನೆ ನಡೆಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

    ಅಧಿಕಾರಕ್ಕಾಗಿ ವಾಮಮಾರ್ಗ ಬಿಜೆಪಿ ವಿರುದ್ಧ ಕೈ ಕಿಡಿ: ನಗರಸಭೆಯಲ್ಲಿ ಅಧಿಕಾರಕ್ಕೇರಲು ಕಾಂಗ್ರೆಸ್​ಗೆ ಇನ್ನಿಬ್ಬರು ಸದಸ್ಯರ ಬೆಂಬಲ ಬೇಕು. ಮೂವರು ಪಕ್ಷೇತರ ಸದಸ್ಯರು ಬೆಂಬಲ ಸೂಚಿಸಿದ್ದಾರೆ. ಇದರಿಂದ ಕಂಗಾಲಾಗಿರುವ ಬಿಜೆಪಿಗರು ವಾಮಮಾರ್ಗದ ಮೂಲಕ ಅಧಿಕಾರಕ್ಕೇರಲು ಕುತಂತ್ರ ನಡೆಸಿ, ಪಕ್ಷದ ಮೂವರು ಸದಸ್ಯರ ಮೇಲೆ ದೂರು ದಾಖಲಾಗುವಂತೆ ಮಾಡಿದ್ದಾರೆ. ಈ ಮೂವರನ್ನು ಚುನಾವಣೆ ಪ್ರಕ್ರಿಯೆಯಿಂದ ಹೊರಗಿಡುವ ಹುನ್ನಾರ ನಡೆಸಿದ್ದಾರೆ. ಚುನಾವಣೆಯಲ್ಲಿ ಸೋತಿರುವ ಬಿಜೆಪಿ ಈಗ ಅಕ್ರಮ ಮಾರ್ಗದ ಮೂಲಕ ಅಧಿಕಾರ ಹಿಡಿಯಲು ಯತ್ನಿಸಿ ಪ್ರಜಾತಂತ್ರ ವ್ಯವಸ್ಥೆಗೆ ಮಸಿ ಬಳಿಯುವ ನೀಚ ಕೃತ್ಯಕ್ಕೆ ಮುಂದಾಗಿದೆ. ಇದರ ವಿರುದ್ಧ ನಾವು ಚುನಾವಣಾಧಿಕಾರಿ, ಡಿಸಿ, ಎಸ್​ಪಿ ಹಾಗೂ ಬೆಳಗಾವಿ ಪ್ರಾದೇಶಿಕ ಆಯುಕ್ತರಿಗೆ ಮನವಿ ಸಲ್ಲಿಸಲಿದ್ದೇವೆ ಎಂದು ಕಾಂಗ್ರೆಸ್ ಪಕ್ಷದ ಮುಖಂಡರು ಆರೋಪಿಸುತ್ತಿದ್ದಾರೆ.

    ಗದ್ದುಗೆಗೇರಲು ಬೇಕು 17 ಸದಸ್ಯರ ಬೆಂಬಲ: ಹಾವೇರಿ ನಗರಸಭೆಯು ಒಟ್ಟು 31 ಸದಸ್ಯ ಬಲ ಹೊಂದಿದೆ. ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನದ ಆಯ್ಕೆ ಚುನಾವಣೆಯಲ್ಲಿ ಸ್ಥಳೀಯ ಶಾಸಕರು, ಸಂಸದರ ಮತವೂ ಲೆಕ್ಕಕ್ಕೆ ಬರುವ ಹಿನ್ನೆಲೆಯಲ್ಲಿ ಒಟ್ಟು ಸದಸ್ಯ ಬಲ 33ಕ್ಕೇರಿಕೆಯಾಗಲಿದೆ. ಅಧಿಕಾರದ ಗದ್ದುಗೇರಲು ಒಟ್ಟು 17 ಸದಸ್ಯರ ಬೆಂಬಲದ ಅವಶ್ಯಕತೆಯಿದೆ. ಕಾಂಗ್ರೆಸ್ 15 ಸದಸ್ಯ ಬಲದೊಂದಿಗೆ ಅತಿದೊಡ್ಡ ಪಕ್ಷವಾಗಿದ್ದರೆ, ಬಿಜೆಪಿ ಕೇವಲ 9 ಸ್ಥಾನಗಳಿಸಿದೆ. ಸ್ಥಳೀಯ ಶಾಸಕರು ಹಾಗೂ ಸಂಸದರು ಬಿಜೆಪಿಯವರೇ ಇರುವುದರಿಂದ ಬಿಜೆಪಿಯ ಬಲ 11ಕ್ಕೇರಿಕೆಯಾಗಿದೆ. ಆದರೂ ಅಧಿಕಾರ ಹಿಡಿಯಲು 6 ಪಕ್ಷೇತರ ಸದಸ್ಯರ ಬೆಂಬಲದ ಅವಶ್ಯಕತೆಯಿದೆ. ಸದ್ಯ ನಗರಸಭೆಯಲ್ಲಿ 7 ಜನ ಪಕ್ಷೇತರ ಸದಸ್ಯರಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts