More

    ಕೈ, ಕಮಲ ಗೊಂದಲದಲ್ಲಿ ಮುನೇನಕೊಪ್ಪ

    ಹುಬ್ಬಳ್ಳಿ : ನವಲಗುಂದ ವಿಧಾನಸಭೆ ಕ್ಷೇತ್ರದ ಮಾಜಿ ಶಾಸಕ ಹಾಗೂ ಮಾಜಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಅವರು ಬಿಜೆಪಿಯಲ್ಲೇ ಮುಂದುವರೆಯಬೇಕೋ? ಅಥವಾ ಕಾಂಗ್ರೆಸ್ ಸೇರಬೇಕೋ ಎನ್ನುವ ಗೊಂದಲದಲ್ಲಿಯೇ ಇದ್ದಂತೆ ಕಾಣುತ್ತಿದೆ. ಜಗದೀಶ ಶೆಟ್ಟರ್ ಅನುಯಾಯಿ ಆಗಿರುವ ಕಾರಣಕ್ಕೆ ಕಾಂಗ್ರೆಸ್ ಸೇರಬಹುದು ಎನ್ನುವ ಮಾತುಗಳು ಬಲವಾಗಿ ಕೇಳಿಬರುತ್ತಿದ್ದರೂ ಯಾವುದೂ ನಿಕ್ಕಿ ಆಗಿಲ್ಲ.

    ಜನವರಿ ಅರ್ಧ ತಿಂಗಳು ಮುಗಿಯುತ್ತ ಬಂದಂತೆಯೇ ಮುನೇನಕೊಪ್ಪ ಅವರ ರಾಜಕೀಯ ನಿರ್ಧಾರದ ಚರ್ಚೆ ಮತ್ತೆ ಮುನ್ನೆಲೆಗೆ ಬಂದಿದೆ. ಮುಂದಿನ ರಾಜಕೀಯ ನಿರ್ಧಾರವನ್ನು ಜನವರಿಗೆ ಪ್ರಕಟಿಸುವುದಾಗಿ ಶಂಕರ ಪಾಟೀಲ ಮುನೇನಕೊಪ್ಪ ಅವರು ಕಳೆದ ಆಗಸ್ಟ್​ನಲ್ಲಿ ಸುದ್ದಿಗೋಷ್ಠಿಯಲ್ಲಿ ಹೇಳಿದ್ದರು.

    ವಿಧಾನಸಭೆ ಚುನಾವಣೆ ಮುಗಿದ ನಂತರ ರಾಜಕೀಯ ಚಟುವಟಿಕೆಯಿಂದ ಅಂತರ ಕಾಯ್ದುಕೊಂಡಿದ್ದಾರೆ. ಇದಕ್ಕೆ ತಮ್ಮ ಕುಟುಂಬದಲ್ಲಿ ನಿರಂತರವಾಗಿ ನಡೆದ ಕೆಲವು ಸಮಸ್ಯೆಗಳೇ ಕಾರಣ ಎಂದೂ ಹೇಳಿದ್ದರು. ನವೆಂಬರ್​ನಲ್ಲಿ ಆಪ್ತರೊಂದಿಗೆ ರ್ಚಚಿಸಿ, ಜನವರಿಯಲ್ಲಿ ಮುಂದಿನ ನಿರ್ಧಾರ ಪ್ರಕಟಿಸುವುದಾಗಿ ಘೋಷಿಸಿದ್ದರು. ಇದೀಗ ಜನವರಿ ಅರ್ಧ ತಿಂಗಳು ಮುಗಿಯುತ್ತ ಬಂದಿದೆ. ಹೀಗಾಗಿ, ಮುನೇನಕೊಪ್ಪ ಅವರ ನಿರ್ಧಾರದ ಬಗ್ಗೆ ಬಿಜೆಪಿ ಹಾಗೂ ಕಾಂಗ್ರೆಸ್ ಕಾರ್ಯಕರ್ತರಷ್ಟೇ ಅಲ್ಲದೇ, ನವಲಗುಂದ ಕ್ಷೇತ್ರದ ಮತದಾರರು ಮತ್ತು ಸಾರ್ವಜನಿಕರಲ್ಲಿಯೂ ಕುತೂಹಲ ಮೂಡಿಸಿದೆ.

    ಮುನೇನಕೊಪ್ಪ ಅವರು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರೊಂದಿಗೂ ಉತ್ತಮ ಬಾಂಧವ್ಯ ಹೊಂದಿದ್ದಾರೆ. 2012ರಲ್ಲಿ ಜಗದೀಶ ಶೆಟ್ಟರ್ ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ಸಿಎಂ ಅವರ ಸಂಸದೀಯ ಕಾರ್ಯದರ್ಶಿ ಆಗಿ ಕಾರ್ಯನಿರ್ವಹಿಸಿದ್ದಾರೆ. 2021ರಲ್ಲಿ ಬಸವರಾಜ ಬೊಮ್ಮಾಯಿ ಸಂಪುಟದಲ್ಲಿ ಕೈಮಗ್ಗ ಮತ್ತು ಜವಳಿ ಖಾತೆ ಸಚಿವರಾಗಿದ್ದರು. ಜಗದೀಶ ಶೆಟ್ಟರ್ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದಕ್ಕೆ ಕಾಂಗ್ರೆಸ್ ಸೇರುತ್ತಾರೆ ಎನ್ನುವ ಮಾತಿದೆ. ಈ ಮಧ್ಯೆ ದುಡುಕಿನ ನಿರ್ಧಾರ ತೆಗೆದುಕೊಳ್ಳದ ಮುನೇನಕೊಪ್ಪ, ಕಾದು ನೋಡುವ ತಂತ್ರ ಅನುಸರಿಸಿದ್ದಾರೆ.

    ಬೇರೆ ವಿಧಾನಸಭೆ ಕ್ಷೇತ್ರ ಆಯ್ಕೆ? :

    ವಿಧಾನಸಭೆ ಚುನಾವಣೆಯಲ್ಲಿ ರಾಜ್ಯದಲ್ಲಿ ಬಿಜೆಪಿ ಸೋಲು ಕಂಡಿತು. ಶಂಕರ ಪಾಟೀಲ ಮುನೇನಕೊಪ್ಪ ಅವರೂ ನವಲಗುಂದ ಕ್ಷೇತ್ರದಿಂದ ಸೋಲನುಭವಿಸಿದರು. ಆ ದಿನಗಳಿಂದಲೇ ಅವರು ಬಿಜೆಪಿಯ ಯಾವುದೇ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಳ್ಳಲಿಲ್ಲ.

    ಇದೀಗ, ಲೋಕಸಭೆ ಚುನಾವಣೆ ಸಮೀಪಿಸುತ್ತಿದ್ದಂತೆಯೇ ಅವರ ರಾಜಕೀಯ ಭವಿಷ್ಯದ ಚರ್ಚೆಗಳು ಕೇಳಿಬರುತ್ತಿವೆ. ನವಲಗುಂದದ ಎನ್.ಎಚ್. ಕೋನರಡ್ಡಿ ಈಗಾಗಲೇ ಜೆಡಿಎಸ್ ತೊರೆದು, ಕಾಂಗ್ರೆಸ್​ನಿಂದ ಅದೇ ಕ್ಷೇತ್ರದಿಂದ ಶಾಸಕರಾಗಿದ್ದಾರೆ. ಇಂತಹ ಸಂದರ್ಭದಲ್ಲಿ ಶಂಕರ ಪಾಟೀಲ ಮುನೇನಕೊಪ್ಪ ಕಾಂಗ್ರೆಸ್ ಸೇರಿದರೆ, ಅವರ ರಾಜಕೀಯ ಜೀವನ ಅನಿಶ್ಚಿತತೆಗೆ ದೂಡಿದಂತಾಗುತ್ತದೆ. ಕಾಂಗ್ರೆಸ್ ಸೇರಿದರೆ ಬೇರೆ ವಿಧಾನಸಭೆ ಕ್ಷೇತ್ರ ಆಯ್ದುಕೊಳ್ಳಬೇಕಾಗುತ್ತದೆ. ಒಂದು ವೇಳೆ, ಧಾರವಾಡ ಲೋಕಸಭೆ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಅನ್ನು ಮುನೇನಕೊಪ್ಪಗೆ ನೀಡಿದರೆ, ಅವರು ಬಿಜೆಪಿ ತೊರೆಯಬಹುದು ಎಂಬ ಲೆಕ್ಕಾಚಾರಗಳು ನಡೆದಿವೆ. ಆದರೆ, ಲೋಕಸಭೆ ಚುನಾವಣೆಯಲ್ಲಿ ಗೆದ್ದರೆ ಮಾತ್ರ ಅವರಿಗೆ ಕಾಂಗ್ರೆಸ್​ನಲ್ಲಿ ಭವಿಷ್ಯ ಇದೆ. ಚುನಾವಣೆಯಲ್ಲಿ ಸೋತರೆ ಕಾಂಗ್ರೆಸ್​ನಲ್ಲಿ ಮೂಲೆಗುಂಪಾಗುವ ಆತಂಕ ತಪ್ಪಿದ್ದಲ್ಲ. ಇದಾವುದರ ಗೊಂದಲ ಬೇಡವೆಂದು ಬಿಜೆಪಿಯಲ್ಲಿಯೇ ಉಳಿದರೆ, ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಮತ್ತೆ ಕೇಸರಿಪಡೆಯಿಂದ ಚುನಾವಣೆ ಕಣಕ್ಕೆ ಇಳಿಯಬಹುದು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts