More

    ಮುಂಡ್ಕೂರು ಗ್ರಾಮದ ನೀರಿನ ಸಮಸ್ಯೆಗೆ ಮುಕ್ತಿ

    ಹರಿಪ್ರಸಾದ್ ನಂದಳಿಕೆ

    ಸ್ವಜಲಧಾರ ಯೋಜನೆಯ ಮೂಲಕ ಗ್ರಾಮದ ಬಹುತೇಕ ಪರಿಸರಕ್ಕೆ ನೀರು ಪೂರೈಕೆಯನ್ನು ಮಾಡುತ್ತಿರುವ ಮುಂಡ್ಕೂರು ಗ್ರಾಮ ಪಂಚಾಯಿತಿ ಶಾಂಭವಿ ನದಿ ತಟದಲ್ಲಿ ಮತ್ತೊಂದು ಬೃಹತ್ ಬಾವಿಯೊಂದನ್ನು ನಿರ್ಮಿಸುವ ಮೂಲಕ ಇಡೀ ಗ್ರಾಮದ ಜನರ ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಮುಕ್ತಿ ನೀಡಲು ಮುಂದಾಗಿದೆ.
    ಮಾರ್ಚ್, ಏಪ್ರಿಲ್ ಬಂತೆಂದರೆ ಗ್ರಾಮೀಣ ಭಾಗದಲ್ಲಿ ನೀರಿನ ಸಮಸ್ಯೆಗಳು ಕಂಡು ಬರುತ್ತವೆ. ಹೀಗಾಗಿ ಅಲ್ಲಲ್ಲಿ ಕೊಳವೆ ಬಾವಿಗಳ ನಿರ್ಮಾಣ ಕಾರ್ಯಗಳು ನಡೆಯುತ್ತವೆ. ಆದರೆ ಮುಂಡ್ಕೂರು ಗ್ರಾಮ ಪಂಚಾಯಿತಿ ಕೊಳವೆ ಬಾವಿಗಳ ನಿರ್ಮಾಣವನ್ನು ಕಡಿಮೆ ಮಾಡುವ ಉದ್ದೇಶದಿಂದ ಇಡೀ ಗ್ರಾಮಕ್ಕೆ ಶುದ್ಧ ಕುಡಿಯುವ ನೀರನ್ನು ನೀಡಬೇಕೆಂಬ ಯೋಚನೆಯಲ್ಲಿ ಪೊಸ್ರಾಲು ಶಾಂಭವಿ ನದಿ ತಟದಲ್ಲಿ ಬಾವಿ ನಿರ್ಮಿಸುವ ಮೂಲಕ ನೀರಿನ ಸಮಸ್ಯೆಯನ್ನು ದೂರಮಾಡಲು ಮುಂದಾಗಿದೆ.

    ಸುಮಾರು 12.5 ಲಕ್ಷ ರೂ. ವೆಚ್ಚದಲ್ಲಿ ಬಾವಿ ನಿರ್ಮಾಣಗೊಳ್ಳುತ್ತಿದ್ದು. ಪಂಚಾಯಿತಿಯ ಹದಿನಾಲ್ಕನೇಯ ಹಣಕಾಸು ಯೋಜನೆಯಲ್ಲಿ ಸುಮಾರು 7.5 ಲಕ್ಷ ರೂ. ಅನುದಾನ ಹಾಗೂ ಉಳಿದ ಮೊತ್ತವನ್ನು ಪಂಚಾಯಿತಿ ನಿಧಿಯಿಂದ ಬಳಕೆ ಮಾಡಲಕಾಗುತ್ತಿದೆ. ಕಾಮಗಾರಿ ಪೂರ್ಣಗೊಂಡ ಬಳಿಕ ಗ್ರಾಮಸ್ಥರಿಗೆ ಶುದ್ಧಕುಡಿಯುವ ನೀರನ್ನು ಪಂಚಾಯಿತಿ ಮನೆ ಮನೆಗೆ ಪೂರೈಸಲಿದೆ.

    17 ಅಡಿ ಆಳ ತೋಡಲಾಗಿದ್ದು ಬಾವಿಯಲ್ಲಿ ನೀರಿನ ಒರತೆ ತುಂಬಿ ತುಳುಕುತ್ತಿದೆ. ಇನ್ನೂ ಆಳಗೊಳಿಸಿದಲ್ಲಿ ಸುಮಾರು 4 ಪಂಪ್ ಸೆಟ್ ಇಟ್ಟು ಇಡೀ ಗ್ರಾಮಕ್ಕೆ ನೀರು ನೀಡಬಹುದು ಎನ್ನುವುದು ಇಲ್ಲಿನ ಸ್ಥಳೀಯರ ಮಾತು. ಈ ಬಾವಿಯಿಂದ ಅಲಂಗಾರು ಗುಡ್ಡೆ, ಪೊಸ್ರಾಲು, ಸನಿಲ್ ನಗರ, ಆಳಗುಂಡಿ, ಸಚ್ಚೇರಿಪೇಟೆ, ಬೆರ್ನೊಟ್ಟು, ಕುದ್ರಬೆಟ್ಟು, ಪೊಣ್ಣೆದು ಹಾಗೂ ಕಜೆ ಮಾರಿಗುಡಿ ಪರಿಸರಕ್ಕೆ ಪೂರೈಕೆಯಾಗಲಿದೆ.

    ಬಾವಿಯಿಂದ ಶುದ್ಧ ನೀರು
    ಬಹುತೇಕ ಗ್ರಾಮಗಳಲ್ಲಿ ಗ್ರಾಮದ ಜನರಿಗೆ ಕೊಳವೆ=ಾವಿಯ ನೀರನ್ನು ಮನೆ ಮನೆಗೆ ಒದಗಿಸುವ ಯೋಜನೆಗಳು ನಡೆಯುತ್ತಿದ್ದರೆ ಮುಂಡ್ಕೂರು ಗ್ರಾಮ ಪಂಚಾಯಿತಿ ಮಾತ್ರ ಕೊಳವೆ ಬಾವಿ ರಹಿತ ಪಂಚಾಯಿತಿ ಆಗಬೇಕು ಎನ್ನುವ ನಿಟ್ಟಿನಲ್ಲಿ ಬಾವಿಯನ್ನು ನಿರ್ಮಿಸಿ ಶುದ್ಧ ಕುಡಿಯುವ ಬಾವಿ ನೀರನ್ನು ಇಡೀ ಗ್ರಾಮಕ್ಕೆ ಪೂರೈಕೆ ಮಾಡಲು ಮುಂದಾಗಿದೆ. ಮುಂದಿನ ದಿನಗಳಲ್ಲಿ ಮತ್ತೊಂದು ಕಡೆ ನದಿ ತಟದಲ್ಲಿ ಬೃಹತ್ ಬಾವಿ ನಿರ್ಮಾಣ ಮಾಡುವ ಯೋಜನೆ ಯೋಚನೆ ಮುಂಡ್ಕೂರು ಪಂಚಾಯಿತಿಗಿದೆ.

    ಜಾಗಕೊಟ್ಟ ಕೃಷಿಕ
    ಪೊಸ್ರಾಲು ಶಾಂಭವಿ ನದಿಯ ತಟದಲ್ಲಿ ಬಾವಿ ನಿರ್ಮಿಸಲು ಇಲ್ಲಿನ ಪ್ರಗತಿಪರ ಕೃಷಿಕ ಸಮಾಜಸೇವಕ ಕಡಪುಕರಿಯ ಜಯರಾಮ್ ಶೆಟ್ಟಿ ಎಂಬುವರು ತಮ್ಮ ಜಮೀನಿನಲ್ಲಿ ಜಾಗವನ್ನು ಕೊಟ್ಟು ಪ್ರಶಂಸೆಗೆ ಪಾತ್ರರಾಗಿದ್ದಾರೆ. ಊರಿನ ಜನತೆಯ ಉಪಯೋಗಕ್ಕೆ ಬರುವ ಈ ಬೃಹತ್ ಯೋಜನೆಗೆ ಪಂಚಾಯಿತಿಯ ಆಡಳಿತದೊಂದಿಗೆ ಜಯ ಶೆಟ್ಟಿಯವರು ಕೈ ಜೋಡಿಸಿದ್ದಾರೆ.

    ಇಡೀ ಊರಿನ ಜನರಿಗೆ ಉಪಯೋಗವಾಗುವ ಯೋಜನೆಯಾದ್ದರಿಂದ ನಮ್ಮ ಸ್ವಂತ ಜಾಗದಲ್ಲಿ ಬಾವಿ ನಿರ್ಮಾಣಕ್ಕೆ ಅವಕಾಶ ಮಾಡಿಕೊಟ್ಟಿದ್ದೇವೆ. ಪಂಚಾಯಿತಿಯ ಈ ಒಳ್ಳೆಯ ಯೋಜನೆಗೆ ನಾವು ಕೈ ಜೋಡಿಸಿದ್ದೇವೆ.
    ಜಯರಾಮ್ ಶೆಟ್ಟಿ, ಬಾವಿ ನಿರ್ಮಾಣಕ್ಕೆ ಜಾಗ ಕೊಟ್ಟವರು

    ಕೊಳವೆ ಬಾವಿರಹಿತ ಗ್ರಾಮ ಪಂಚಾಯಿತಿ ಮಾಡಬೇಕೆಂಬ ಉದ್ದೇಶವಿದೆ. ಹೀಗಾಗಿ ನಾವು ಬಾವಿಗಳ ನಿರ್ಮಿಸುವ ಮೂಲಕ ಇಡೀ ಗ್ರಾಮಕ್ಕೆ ನೀರು ಪೂರೈಸುತ್ತಿದ್ದೇವೆ. ಪೊಸ್ರಾಲಿನಲ್ಲಿ ನಿರ್ಮಾಣಗೊಳ್ಳುತ್ತಿರುವ ಈ ಬಾವಿಯಿಂದ ಸಾಕಷ್ಟು ಭಾಗದ ನೀರಿನ ಸಮಸ್ಯೆಗೆ ಶಾಶ್ವತ ಮುಕ್ತಿ ದೊರಕಲಿದೆ.
    ಸತ್ಯ ಶಂಕರ್ ಶೆಟ್ಟಿ, ಪಂಚಾಯಿತಿ ಸದಸ್ಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts